ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 4 ಆಗಸ್ಟ್ 2024, 23:32 IST
Last Updated : 4 ಆಗಸ್ಟ್ 2024, 23:32 IST
ಫಾಲೋ ಮಾಡಿ
Comments

ಪಾದಯಾತ್ರೆಯ ಗೌರವ ಕಳೆಯುವಿರೇಕೆ?

ವಿರೋಧ ಪಕ್ಷಗಳ ಮುಖಂಡರು ರಾಜ್ಯದ ಜನರ ಹಿತದೃಷ್ಟಿಯಿಂದ ಯೋಚಿಸುವುದರ ಬದಲು, ಬರೀ ತಮ್ಮ ಕೇಂದ್ರ ನಾಯಕರ ಮನವೊಲಿಸುವಿಕೆ ಹಾಗೂ ಚುನಾಯಿತ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲೇ ಕಾಲ ಕಳೆಯುತ್ತಿದ್ದಾರೆ. ವಿಧಾನಸಭಾ ಕಲಾಪವನ್ನು ಸದ್ದುಗದ್ದಲದ ಮೂಲಕ ಹಾಳು ಮಾಡಿ, ಈಗ ಮತ್ತೆ ಸ್ವ ಹಿತಾಸಕ್ತಿಗಾಗಿ ಪಾದಯಾತ್ರೆ ನಾಟಕವಾಡುವ ಬದಲಾಗಿ, ಪ್ರತಿಪಕ್ಷದ ನಿಜವಾದ ಜವಾಬ್ದಾರಿಯನ್ನು ಅರಿತು ನಡೆಯುವುದು ಒಳ್ಳೆಯದು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿಪಕ್ಷದಲ್ಲಿದ್ದಾಗ ನಡೆದುಕೊಂಡ ರೀತಿಯನ್ನು ನೋಡಿ ನಮ್ಮ ನಾಯಕರು ಕಲಿಯಬೇಕು. ಪಾದಯಾತ್ರೆಗಳು ಗಾಂಧೀಜಿಯ ಹಾಗೇ ದೇಶಪರ, ಜನಪರ ಆಗಿರಬೇಕು. ರಾಜ್ಯದಲ್ಲಿ ಪ್ರಸ್ತುತ ಎದುರಾಗಿರುವ ನೆರೆ-ಪ್ರವಾಹದ ಹಿನ್ನೆಲೆಯಲ್ಲಿ ಜನರ ಸಂಕಷ್ಟ ಅರಿಯಲು ಅವರ ಬಳಿ ತೆರಳುವುದನ್ನು ಬಿಟ್ಟು ಕುರ್ಚಿಗಾಗಿ ಪಾದಯಾತ್ರೆ ಮಾಡುವುದು ಸರಿಯಲ್ಲ. 

–ಸುರೇಂದ್ರ ಪೈ, ಭಟ್ಕಳ

ಕಾಡಿದ ನೆನಪು... ಮಹಾತ್ಮನ ಶಕ್ತಿ...

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಭಾರತೀಯರು ಮತ್ತು ಇತರರ ಹಕ್ಕುಗಳಿಗಾಗಿ ಹೋರಾಡುವಾಗ, ತಮ್ಮನ್ನು ಹಲವು ಬಾರಿ ಬಂಧಿಸಿದ್ದ ಬ್ರಿಟಿಷ್ ಆಡಳಿತಾಧಿಕಾರಿಗೆ ಚಪ್ಪಲಿ ಹೊಲಿದುಕೊಟ್ಟಿದ್ದನ್ನು ನೆನಪಿಸುವ ವೆಂಕಟೇಶ ಮಾಚಕನೂರ ಅವರ ಪತ್ರ (ವಾ.ವಾ., ಆ. 3) ನಿಜಕ್ಕೂ ನನ್ನನ್ನು ಅಲ್ಲಾಡಿಸಿಬಿಟ್ಟಿತು. ಕಣ್ಣುಗಳು ಹನಿಗೂಡಿದವು. ದುರದೃಷ್ಟವಶಾತ್, ಈ ಪ್ರಕರಣವನ್ನು ಇದುವರೆಗೂ ನಾನು ಎಲ್ಲೂ ಓದಿರಲಿಲ್ಲ ಮತ್ತು ಕೇಳಿರಲಿಲ್ಲ. ನಸುಕಿನಲ್ಲಿ ಓದಿದ ಈ ಪತ್ರ, ಗೋದೂಳಿ ಕಾಲಕ್ಕೂ ಕಾಡಿತು. ಇದಲ್ಲವೇ, ಮಹಾತ್ಮ ಎನಿಸಿಕೊಂಡ ಆ ಪುಣ್ಯಾತ್ಮನ ಶಕ್ತಿ? ನಮ್ಮ ಹುಚ್ಚಾಟಗಳು ಆ ದಿವ್ಯ ಚೇತನವನ್ನು ಎಂದೂ ಬಾಧಿಸದಿರಲಿ. 

–ಎಸ್.ಕೆ.ಕುಮಾರ್, ಬೆಂಗಳೂರು

ಕನ್ನಡ ಬಾರದ ಆರೋಗ್ಯ ಕಾರ್ಯಕರ್ತರು

ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿರುವ ಡೆಂಗಿ ಜ್ವರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಕೆಲವು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿರುವುದು ಒಳ್ಳೆಯ ಕ್ರಮ. ಆದರೆ ಇವರು ಮಾಹಿತಿ ಪಡೆಯಲು ಮನೆಯ ಸದಸ್ಯರಿಗೆ ಪ್ರಶ್ನೆ ಕೇಳುವುದು ಇಂಗ್ಲಿಷ್‍ನಲ್ಲಿ. ಆಡಳಿತದಲ್ಲಿ ಕನ್ನಡ ಜಾರಿಯಾಗಿ ಇಷ್ಟು ವರ್ಷಗಳಾದರೂ ಬಿಬಿಎಂಪಿ ಇನ್ನೂ ಆಡಳಿತದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳದಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ.

ಅದಲ್ಲದೆ, ಕಾಯಕರ್ತರು ಇಂಗ್ಲಿಷ್‍ನಲ್ಲಿ ಪ್ರಶ್ನೆ ಕೇಳಿದಾಗ ಮನೆಯ ಸದಸ್ಯರು ಕಷ್ಟಪಟ್ಟಾದರೂ ಇಂಗ್ಲಿಷ್‍ನಲ್ಲಿ ಉತ್ತರಿಸುತ್ತಾರೆಯೇ ವಿನಾ ಕನ್ನಡದಲ್ಲಿ ಉತ್ತರಿಸುವುದಿಲ್ಲ, ಕಾರ್ಯಕರ್ತರು ಕನ್ನಡದಲ್ಲಿ ಪ್ರಶ್ನೆ ಕೇಳಲಿ ಎಂದು ನಿರೀಕ್ಷಿಸುವುದೂ ಇಲ್ಲ. ಇಂಥ ಸನ್ನಿವೇಶ ಇರುವಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಯನ್ನು ಹಾಕಿಕೊಂಡಿರುವುದಕ್ಕೆ ಏನಾದರೂ ಅರ್ಥ ಇದೆಯೇ? ಈ ವಿಷಯದಲ್ಲಿ ಪಾಲಿಕೆ, ಪ್ರಾಧಿಕಾರ ಮತ್ತು ಪ್ರಜೆಗಳು ಆತ್ಮಾವಲೋಕನ ಮಾಡಿಕೊಳ್ಳಲಿ. 

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಇವರೂ ಕೇಂದ್ರದ ಕೈಗೊಂಬೆಯೇ?

ವಿವಾದಗಳಿಗೆ ಗುರಿಯಾಗುತ್ತಿರುವ ರಾಜ್ಯಪಾಲರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ನಮ್ಮ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಯಾವ ವಿವಾದವನ್ನೂ ಮೈಮೇಲೆ ಎಳೆದುಕೊಳ್ಳದೆ, ಪಕ್ಷಪಾತರಹಿತ ರಾಜ್ಯಪಾಲರೆಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಿದ್ದರು. ಇದೀಗ, ಮುಖ್ಯಮಂತ್ರಿಗೆ ಅವಸರದಲ್ಲಿ ಮತ್ತು ವಿವಾದಾತ್ಮಕವಾಗಿ ಷೋಕಾಸ್ ನೋಟಿಸ್ ನೀಡುವ ಮೂಲಕ ಜನರ ಆ ನಂಬಿಕೆಗೆ ಒಂದು ಮಟ್ಟದಲ್ಲಿ ಪೆಟ್ಟು ಕೊಟ್ಟಿದ್ದಾರೆ. ‘ಇವರೂ ಕೇಂದ್ರದ ಕೈಗೊಂಬೆಯೇ?’ ಎಂದು ಅನುಮಾನಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಆತ್ಮಸಾಕ್ಷಿ, ಕಾನೂನು-ಸಂವಿಧಾನದ ಸೂಕ್ಷ್ಮ, ಸಂಪ್ರದಾಯ, ಮುಖ್ಯ ಕಾರ್ಯದರ್ಶಿಯ ವರದಿ, ಘೋಷಿತ ನ್ಯಾಯಾಂಗ ತನಿಖೆಯಂತಹ ಎಲ್ಲ ಸಂಗತಿಗಳನ್ನೂ ಪುನರ್‌ ಅವಲೋಕಿಸದಷ್ಟು ಅವಸರದ ಅಗತ್ಯವೇನಿರಲಿಲ್ಲ.
ಜಯಚಾಮರಾಜೇಂದ್ರ ಒಡೆಯರ್, ಜನರಲ್ ಶ್ರೀನಾಗೇಶ್, ಧರ್ಮವೀರ ಅವರಂತಹ, ನಿಜಕ್ಕೂ ‘ಘನತೆವೆತ್ತ’
ರಾಜ್ಯಪಾಲರನ್ನು ಕಂಡವನು ನಾನು. ಆ ಪದವಿಯು ಬರಬರುತ್ತ, ದೇಶದ ಜನಮಾನಸದಲ್ಲಿ ತನ್ನ ಘನತೆಯನ್ನು ಕುಗ್ಗಿಸಿಕೊಳ್ಳುತ್ತಿದೆ. ದಶಕದಿಂದೀಚೆಗೆ ಜನಮಾನಸದಲ್ಲಿ ಅದು ಒಟ್ಟು ಹೋಲಿಕೆಯಲ್ಲಿ ಕನಿಷ್ಠ ಮಟ್ಟವನ್ನು ತಲುಪಿದೆ ಅನ್ನಿಸುತ್ತದೆ.  

–ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಪರಿಸರ ಸಂರಕ್ಷಣೆ: ಸಮನ್ವಯದ ಕೊರತೆ?

ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವಿಸ್ತೀರ್ಣದ ಬಗೆಗೆ ಕರ್ನಾಟಕ ಸರ್ಕಾರ ಈಗಲೂ ಸೂಕ್ತ ನಿಲುವು ತಳೆಯುತ್ತಿಲ್ಲ. ಆರನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟವಾಗಿರುವಾಗ (ಪ್ರ.ವಾ., ಆ. 3) ‘ಕಸ್ತೂರಿರಂಗನ್ ಸಮಿತಿ ವರದಿ ರದ್ದು ಮಾಡುವಂತೆ ಕೇಳುವುದನ್ನೂ ಪರಿಶೀಲಿಸುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿರುವುದು ಅತಾರ್ಕಿಕ. ಮೊದಲಿಗೆ ಅಧಿಸೂಚಿತ ಪ್ರದೇಶದಲ್ಲಿನ ಗ್ರಾಮಗಳ ಸಮಗ್ರ ಸರ್ವೇಕ್ಷಣೆ ನಡೆಸಿರುವುದೇ ಸಂದೇಹಾಸ್ಪದ.

ಇದೇ ವೇಳೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಡಿಪಿಆರ್‌ಗೆ ಸ್ವೀಕೃತಿ ದೊರೆತು, ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇವೆರಡೂ ಪರಸ್ಪರ ಸಂಬಂಧ ಇರುವ ವಿಷಯಗಳು ಎಂಬುದನ್ನು ಗಮನಿಸಬೇಕು. ಒಂದೆಡೆ, ಅರಣ್ಯ ಸಚಿವರು ಪರಿಸರ ರಕ್ಷಿಸುವ ಕ್ರಮಗಳನ್ನು ಘೋಷಿಸುತ್ತಾರೆ, ಇನ್ನೊಂದೆಡೆ, ಬೇರೆ ಸಚಿವರು ‘ಅಭಿವೃದ್ಧಿ’ ಯೋಜನೆಗಳನ್ನು ಪ್ರಕಟಿಸುತ್ತಾರೆ. ಸಮನ್ವಯ, ಸಂತುಲನದ ಜವಾಬ್ದಾರಿ ಮುಖ್ಯಮಂತ್ರಿಯವರದೋ ಉಪಮುಖ್ಯಮಂತ್ರಿಯವರದೋ ತಿಳಿಯುತ್ತಿಲ್ಲ. ಕ್ಯಾಬಿನೆಟ್‌ನ ಸಾಮೂಹಿಕ ಉತ್ತರದಾಯಿತ್ವ ಕಾಣುತ್ತಿಲ್ಲ. ಇದಕ್ಕೇನು ಪರಿಹಾರ? 

–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT