ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 4 ಜೂನ್ 2024, 23:54 IST
Last Updated 4 ಜೂನ್ 2024, 23:54 IST
ಅಕ್ಷರ ಗಾತ್ರ

ನಡೆಯದ ಲೆಕ್ಕಾಚಾರ, ಬೇಕು ಎಚ್ಚರದ ನಡೆ

ಸಮೀಕ್ಷೆ, ಟ್ರೆಂಡ್, ಲೀಡ್ಸ್ ಇವುಗಳನ್ನೆಲ್ಲ ದಾಟಿ ಘೋಷಿತ ಪರಿಣಾಮಗಳೆಲ್ಲ ಸೇರಿದಾಗ ಹೊಸ ಲೋಕಸಭೆ, ಸರ್ಕಾರದ ಸ್ವರೂಪ ತಿಳಿಯುತ್ತದೆ. ಇಷ್ಟಂತೂ ನಿಜ: ‘ಚಾರ್ ಸೌ ಪಾರ್’ ಸಾಧಿತವಾಗಿಲ್ಲ. ಉತ್ತರಪ್ರದೇಶದಲ್ಲಿ ಬಿಜೆಪಿಯ ಲೆಕ್ಕಾಚಾರ ವರ್ಕ್‌ಔಟ್ ಆಗಿಲ್ಲ, ತಮಿಳುನಾಡಿನ ಬಗೆಗಿನ ಆಶಾಭಾವವೂ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿ ಆಗಬಹುದು, ಆದರೆ ಹಿಂದಿನಷ್ಟು ಮುಕ್ತವಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾರರು. ಎಪ್ಪತ್ತೈದು ವರ್ಷದ ನಿಯಮಕ್ಕೆ ಒಳಪಟ್ಟರೆ, ಪ್ರಧಾನಿಯಾಗಬಲ್ಲ ಒಬ್ಬರನ್ನು ಮಧ್ಯದಲ್ಲೇ ಗುರುತಿಸಬೇಕಾಗುತ್ತದೆ. ಸಾಮರ್ಥ್ಯಕ್ಕಿಂತ ‘ವಿಶ್ವಾಸಾರ್ಹತೆ’ ಒರೆಗಲ್ಲಾದರೆ? 

‘ಇಂಡಿಯಾ’ ಮೈತ್ರಿಕೂಟಕ್ಕೂ ಈ ಫಲಿತಾಂಶದಿಂದ ಕಲಿಯುವುದು ಬಹಳಷ್ಟಿದೆ. ಪ್ರಾದೇಶಿಕ ನಾಯಕರಾಗಿಯೂ ಬೇರೆ ರಾಜ್ಯದ ಸಮಸ್ಯೆಗಳನ್ನು ಅರಿತುಕೊಳ್ಳಬೇಕಾದುದು ಅದರಲ್ಲಿ ಒಂದು. ಸ್ಟಾಲಿನ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ರಾಜಕಾರಣದಲ್ಲಿ ಹಳಬರೇ. ಮತದಾರನ‌ ದೃಷ್ಟಿಯಿಂದ ಒಂದು ಸಂವೇದನಾಶೀಲ, ನಿಷ್ಪಕ್ಷಪಾತಿ ಸರ್ಕಾರ ರಚನೆಯಾಗಿ, ಬೇಗ ಪೂರ್ಣಗಾತ್ರದ ಬಜೆಟ್ ಮಂಡಿಸಬೇಕು. ಸಂಖ್ಯೆಯಲ್ಲಿ ವೃದ್ಧಿ ಕಂಡಿರುವ ವಿರೋಧಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತನ್ನ ನಿರ್ಧಾರಗಳು ಅತಿ‌‌ ಎನಿಸದಂತೆ ಎಚ್ಚರ ವಹಿಸಬೇಕು. ‘ಸಬ್ ಕಾ ಸಾಥ್’ ಸಾಕಾರವಾಗುವುದು ಆಗಲೇ.⇒

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಕಚ್ಚಾ ರಸ್ತೆಯಲ್ಲಿ ಸಾಗಿದರೂ ಟೋಲ್‌!

ವೈಯಕ್ತಿಕ ಕೆಲಸದ ನಿಮಿತ್ತ, ವಾರದ ಹಿಂದೆ ಬೆಂಗಳೂರಿನಿಂದ ರಾಣೆಬೆನ್ನೂರಿಗೆ ಕಾರಿನಲ್ಲಿ ಪ್ರಯಾಣಿಸಿದೆ. ಈ ಮಾರ್ಗದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಒಂದಿಲ್ಲೊಂದು ರಸ್ತೆ ಕಾಮಗಾರಿಗಳು ನಡೆಯುತ್ತಲೇ ಇವೆ. ಇದರಿಂದ ಕಚ್ಚಾ ರಸ್ತೆಯಲ್ಲಿ ಸಾಗಬೇಕಾದ ಅನಿವಾರ್ಯ ಸ್ಥಿತಿ ವಾಹನ ಸವಾರರದ್ದಾಗಿದೆ. ಕಾಮಗಾರಿ ನಡೆಯುತ್ತಿರುವ ಈ ಸಂದರ್ಭದಲ್ಲೂ ವಾಹನಗಳಿಗೆ ಟೋಲ್ ಸಂಗ್ರಹ ಮಾಡುತ್ತಿರುವುದರ ಔಚಿತ್ಯ ಸರಿ ಕಾಣುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇತ್ತ ಗಮನಹರಿಸಿ, ನಮ್ಮಂತಹ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲಿ.

⇒ಎಂ.ಜೆ.ಅಭಿಷೇಕ್, ಬೆಂಗಳೂರು

ಜನಪ್ರತಿನಿಧಿಗಳ ಅಗತ್ಯದ ಅರಿವಾಯಿತೇ?

‘ಕಾರ್ಪೊರೇಟರ್‌ಗಳು ಏನು ಮಾಡುತ್ತಾರೆ? ಅಧಿಕಾರ ಇರಲಿ, ಇಲ್ಲದಿರಲಿ ಜನರಿಗಾಗಿ ಅವರು ಯಾವಾಗಲೂ ಕೆಲಸ ಮಾಡಬೇಕು. ಪಂಚಾಯಿತಿಯಿಂದ ಪಾರ್ಲಿಮೆಂಟ್‌ತನಕ ಜನಪ್ರತಿನಿಧಿಗಳು ಇರಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಾರ್ಡ್‌ಗಳಲ್ಲಿ ಸಮಸ್ಯೆ ನಿವಾರಣೆಗೆ ಕಾರ್ಪೊರೇಟರ್‌ಗಳು ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆಯೇ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಅಧಿಕಾರ ಇದ್ದಾಗಲೇ ಕಾರ್ಪೊರೇಟರ್‌ಗಳು ಜನರ ಕೆಲಸ ಮಾಡುವುದು ಕಡಿಮೆ. ಇನ್ನು, ಅಧಿಕಾರ ಇಲ್ಲದಾಗ ಕೆಲಸ ಮಾಡುವರೇ? ನೊಣಗಳು ಸಿಹಿತಿಂಡಿ ಇದ್ದಾಗ ಮುತ್ತುತ್ತವೆಯೇ ವಿನಾ ಖಾಲಿ ತಟ್ಟೆಗೆ ಮುತ್ತುತ್ತವೆಯೇ? ಈ ಮಧ್ಯೆ ಕೆಲವು ಮಾಜಿ ಕಾರ್ಪೊರೇಟರ್‌ಗಳು ಮಳೆ ಹಾನಿಗೆ ತಕ್ಷಣ ಸ್ಪಂದಿಸಿ ಕೆಲಸ ಮಾಡಿಸಿದ್ದು ಮಾನವೀಯತೆಯ ದ್ಯೋತಕ.

ಸಾರ್ವಜನಿಕ ಕಾರ್ಯಗಳಿಗೆ ಸ್ಪಂದಿಸುವಲ್ಲಿ ಜನಪ್ರತಿನಿಧಿಗಳ ಅಗತ್ಯದ ಅರಿವಿರುವ ಉಪಮುಖ್ಯಮಂತ್ರಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕೂಡಲೇ ಆದ್ಯತೆಯ ಮೇರೆಗೆ ಚುನಾವಣೆ ನಡೆಸಿ, ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇರುವಂತೆ ಮಾಡಲಿ. ಈ ವಿಚಾರದಲ್ಲಿ ನ್ಯಾಯಾಲಯವೇ ಹಲವು ಬಾರಿ ಆದೇಶ ನೀಡಿದೆಯಾದರೂ ಸರ್ಕಾರ ಕುಂಟುನೆಪಗಳನ್ನು ಹೇಳಿ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ. ಇನ್ನಾದರೂ ಪಾಲಿಕೆಗೆ ಸರ್ಕಾರ ಚುನಾವಣೆ ನಡೆಸಲಿ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಬುದ್ಧ ಮತದಾರನ ಗೋಪ್ಯ ನಡೆ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಎರಡು ದಿನಗಳ ಮೊದಲೇ ಮಾಧ್ಯಮಗಳಲ್ಲಿ ಒಂದೇ ಸಮನೆ ಹರಿದಾಡಿದ ಚುನಾವಣಾ ಸಮೀಕ್ಷೆಗಳ ಮಹಾಪೂರ, ಪರಿಣತರ ವಿಶ್ಲೇಷಣೆ, ವಿವಿಧ ಪಕ್ಷಗಳ ಅಭ್ಯರ್ಥಿಗಳ ಸೋಲು, ಗೆಲುವಿನ ಸಂಖ್ಯೆಯ ಅಂದಾಜು ಎಲ್ಲವೂ ಮಂಗಳವಾರದ ನಿಜದ ಫಲಿತಾಂಶದಲ್ಲಿ ಕೊಚ್ಚಿಹೋಗಿವೆ. ದೇಶದ ಮತದಾರ ಇತ್ತೀಚೆಗೆ ಜಾಣ್ಮೆ ಪ್ರದರ್ಶಿಸುತ್ತಿದ್ದಾನೆ. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಮಯೋಚಿತವಾಗಿ ಸಿದ್ಧ ಉತ್ತರ ನೀಡಿ, ಮತದಾನದ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತಿರುವ ಮತದಾರ ಅಭಿನಂದನಾರ್ಹ. ಒಂದು ರೀತಿಯಲ್ಲಿ ಮತದಾರನು ಮಾಧ್ಯಮಗಳನ್ನೇ ಪೇಚಿಗೆ ಸಿಲುಕಿಸಿ ಹಾದಿ ತಪ್ಪುವಂತೆ ಮಾಡುತ್ತಿದ್ದಾನೆ ಎನ್ನಬಹುದು. ಚುನಾವಣಾ ಆಯೋಗವು ಮತಗಟ್ಟೆ ಸಮೀಕ್ಷೆಗಳನ್ನು ನಿಷೇಧಿಸಿದರೆ ದೇಶದ ನಾಗರಿಕರು ನಿಜಕ್ಕೂ ನೆಮ್ಮದಿಯಿಂದ ಇರುತ್ತಾರೆ.

⇒ಶಾಂತಕುಮಾರ್, ಸರ್ಜಾಪುರ 

ಸಾರಿಗೆ ಬಸ್‌: ಅನಗತ್ಯ ಮೀಸಲಾತಿ

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಅಂಗವಿಕಲರು, ಅಂಧರು, ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ನಾಗರಿಕರು, ವಿಧಾನಸಭಾ ಸದಸ್ಯರಿಗಾಗಿ ಕೆಲವು ಸೀಟುಗಳನ್ನು ಮೀಸಲಿರಿಸಲಾಗಿರುತ್ತದೆ. ಆಯಾ ವರ್ಗದ ಪ್ರಯಾಣಿಕರ ಮೀಸಲಾತಿಯನ್ನು ಕಿಟಕಿಯ ಮೇಲ್ಭಾಗದಲ್ಲಿ ನಮೂದಿಸಲಾಗಿರುತ್ತದೆ. ಸಮಯಾಭಾವ ಅಥವಾ ಸುರಕ್ಷತೆಯ ದೃಷ್ಟಿಯಿಂದ ಶಾಸಕರು ಸ್ವಂತ ವಾಹನದಲ್ಲಿ ಅಥವಾ ಸರ್ಕಾರಿ ವಾಹನದಲ್ಲಿ ಪ್ರಯಾಣಿಸುತ್ತಾರೆ. ಅದೇರೀತಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿರುವುದರಿಂದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದವರು ಬದುಕುಳಿದಿರುವ ಸಾಧ್ಯತೆ ಕಡಿಮೆ. ಒಂದುವೇಳೆ ಬದುಕಿದ್ದರೂ ವಯೋಸಹಜ ಅನಾರೋಗ್ಯದಂತಹ ಕಾರಣದಿಂದ ಬಸ್‌ನಲ್ಲಿ ಪ್ರಯಾಣಿಸಲು ಶಕ್ತರಾಗಿರುವುದಿಲ್ಲ. ಆದ್ದರಿಂದ ಈ ಎರಡೂ ವರ್ಗಗಳ ಪ್ರಯಾಣಿಕರಿಗೆ ಸೀಟುಗಳನ್ನು ಮೀಸಲಿರಿಸಿರುವುದು ಅರ್ಥಹೀನ ಎನಿಸುತ್ತದೆ.

‘ಶಕ್ತಿ’ ಯೋಜನೆಯ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪುರುಷರಿಗಾಗಿ ಶೇ 50ರಷ್ಟು ಸೀಟುಗಳನ್ನು ಮೀಸಲಿರಿಸಲು ಸರ್ಕಾರ ಮುಂದಾಗಿಲ್ಲ. ಇದರಿಂದ ಪುರುಷ ಅಂಗವಿಕಲರು, ಅಂಧರು, ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಈ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಅರ್ಹರು ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ.

⇒ಜಿ.ನಾಗೇಂದ್ರ ಕಾವೂರು, ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT