ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಎಲ್‍ಇಡಿ ಹೆಡ್‍ಲೈಟ್: ಬೇಕು ಸ್ಪಷ್ಟನೆ

ಕೇಂದ್ರ ಮೋಟಾರು ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡಕ್ಕೆ ಹೊರತಾಗಿ ಪ್ರಖರ ಬೆಳಕು ಬೀರುವ ಎಲ್‍ಇಡಿ ಹೆಡ್‍ಲೈಟ್ ಅಳವಡಿಸಿರುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್‌ ಕುಮಾರ್‌ ಅವರು ಸೂಚಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್‌ 19). ಇದರಿಂದ, ಪ್ರಖರ ಬೆಳಕಿನ ವಾಹನಗಳಿಂದ ತೊಂದರೆಗೆ ಒಳಗಾಗುತ್ತಿರುವ ಇತರ ವಾಹನ ಚಾಲಕರ ಹಲವಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ವಾಹನಗಳಿಗೆ ಎಲ್‍ಇಡಿ ದೀಪಗಳನ್ನೇ ಅಳವಡಿಸದಂತೆ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಕೆಲವು ಮಾಧ್ಯಮಗಳಲ್ಲಿ ಇದೆ. ಆದೇಶದಲ್ಲಿ ಭಾರಿ ಗಾತ್ರದ ವಾಹನಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು, ಅಗತ್ಯ ಕಾನೂನುಕ್ರಮದ ಬಗ್ಗೆ ಸೂಚಿಸಿರುವಂತೆ ಇದೆ. ಇತ್ತೀಚಿನ ವರ್ಷಗಳಲ್ಲಿ ದ್ವಿಚಕ್ರ ವಾಹನ ಸೇರಿ ಬಹುಬಗೆಯ ವಾಹನಗಳಿಗೆ ತಯಾರಕರೇ ಎಲ್‍ಇಡಿ ಹೆಡ್‍ಲೈಟ್ ಅಳವಡಿಸಿರುತ್ತಾರೆ. ಅದರಲ್ಲೂ ವಿಶೇಷವಾಗಿ, ಐಷಾರಾಮಿ ವಾಹನಗಳಲ್ಲಿ ಅತ್ಯಂತ ಪ್ರಖರವಾದ, ಕಣ್ಣು ಕೋರೈಸುವ ಎಲ್‍ಇಡಿ ಹೆಡ್‍ಲೈಟ್‍ಗಳನ್ನೇ ಅಳವಡಿಸಲಾಗಿರುತ್ತದೆ. ಹೀಗೆ ತಯಾರಕರಿಂದಲೇ ಅಳವಡಿಕೆಯಾಗಿರುವ ಹೆಡ್‍ಲೈಟ್‍ಗಳು ಸಾಮಾನ್ಯವಾಗಿ ನಿಯಮಾನುಸಾರ ಇರುತ್ತವೆ ಎಂಬ ಭಾವನೆ ವಾಹನ ಸವಾರರಲ್ಲಿ ಇರುತ್ತದೆ. ಹೀಗಾಗಿ, ಈಗ ಎಲ್ಲ ರೀತಿಯ ಎಲ್‍ಇಡಿ ಹೆಡ್‍ಲೈಟ್‍ಗಳನ್ನೂ ತೆಗೆಯಬೇಕೊ, ಹೆಚ್ಚುವರಿಯಾಗಿ ಅಳವಡಿಸಿರುವಂತಹವುಗಳನ್ನು ಮಾತ್ರ ತೆಗೆಯಬೇಕೊ ಎಂಬ ಗೊಂದಲವಿದೆ. ಈ ಕುರಿತು ಪೊಲೀಸ್‌ ಇಲಾಖೆ ಈಗಲೇ ಸ್ಪಷ್ಟನೆ ನೀಡಿದಲ್ಲಿ, ಜನಸಾಮಾನ್ಯರು ಸಂಚಾರ ಪೊಲೀಸರ ಕೈಯಲ್ಲಿ ಸಿಲುಕಿ, ಅನಗತ್ಯವಾಗಿ ಒದ್ದಾಡುವುದು ತಪ್ಪುತ್ತದೆ.

-ಚನ್ನು ಅ. ಹಿರೇಮಠ, ರಾಣೆಬೆನ್ನೂರು

**

ಬಿತ್ತನೆ ಬೀಜ: ಸಕಾಲಕ್ಕೆ ತಲುಪಲಿ

ಬಿತ್ತನೆ ಬೀಜಗಳನ್ನು ಅಂಚೆ ಕಚೇರಿ ಸಿಬ್ಬಂದಿಯು ರೈತರ ಮನೆ ಬಾಗಿಲಿಗೇ ತಲುಪಿಸುವ ಸರ್ಕಾರದ ಯೋಜನೆ (ಪ್ರ.ವಾ., ಜೂನ್ 20) ಸ್ವಾಗತಾರ್ಹ. ಆದರೆ ಯೋಜನೆ ಅನುಷ್ಠಾನ ಆಗುವಾಗ ಕೆಳಮಟ್ಟದಲ್ಲಿ ಯಾವುದೇ ರೀತಿಯ ಲೋಪ ಆಗದ ಹಾಗೆ ಸರ್ಕಾರ ಜಾಗ್ರತೆ ವಹಿಸಬೇಕಾಗಿದೆ. ಅಂಚೆ ಇಲಾಖೆಯಿಂದ ಕಾಗದಪತ್ರಗಳು, ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಜನರಿಗೆ ಸಕಾಲದಲ್ಲಿ ತಲುಪಿಸುವಲ್ಲಿ ಲೋಪ ಆಗುತ್ತಿರುವ ಬಗ್ಗೆ ಹಲವಾರು ಕಡೆ ದೂರುಗಳಿವೆ.

ಮಲೆನಾಡಿನ ಕೆಲವು ಕಡೆ ಭತ್ತದ ಸಸಿ ಹಾಕುವ ಕಾರ್ಯ ಹದ ಮಳೆ ಬಿದ್ದ ಕೂಡಲೇ ಜೂನ್ ಮೊದಲ ವಾರದಲ್ಲಿಯೇ ಆರಂಭವಾಗುವ ಪದ್ಧತಿ ಇದೆ. ಹಾಗಾಗಿ, ಪ್ರತಿವರ್ಷ ಮೇ ತಿಂಗಳ ಕೊನೆಯ ವಾರದಲ್ಲಿಯೇ ಬಿತ್ತನೆ ಬೀಜಗಳನ್ನು ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ.

-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

**

ಸಾಹಿತ್ಯದಲ್ಲಿ ರಾಜಕಾರಣ ಸಲ್ಲ

ಸಾಹಿತಿಗಳ ಬಗೆಗಿನ ಡಿ.ಕೆ.ಶಿವಕುಮಾರ್‌ ಅವರ ಹಗುರವಾದ ಹೇಳಿಕೆ ಈಗಿನ ಸರ್ಕಾರದ ಬಗ್ಗೆ ಕೆಲ ಬರಹಗಾರರು ಹೊಂದಿರುವ ಮೃದು ಧೋರಣೆಯ ಫಲವಾಗಿದೆ. ಇದೇ ಥರದ ಧೋರಣೆಯಿಂದ ಉಪಮುಖ್ಯಮಂತ್ರಿಯವರು ತಮ್ಮ ವ್ಯಾಪ್ತಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಆದರೂ ಅವರು ತಿದ್ದಿಕೊಂಡಂತೆ ಕಾಣುವುದಿಲ್ಲ. ರಾಜಕಾರಣದಲ್ಲಿ ಸಾಹಿತ್ಯ ಇರಲಿ, ಸಾಹಿತ್ಯದಲ್ಲಿ ರಾಜಕಾರಣ ಸಲ್ಲದು.

-ಗುರು ಜಗಳೂರು, ಹರಿಹರ

**

ಸ್ಪರ್ಧಾತ್ಮಕ ಪರೀಕ್ಷೆ: ಪಾರದರ್ಶಕ ನಡೆಯಿರಲಿ

ವೃತ್ತಿಯಲ್ಲಿ ಉಪನ್ಯಾಸಕನಾಗಿರುವ ನಾನು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ನನ್ನ ವಿದ್ಯಾರ್ಥಿ
ಗಳಿಗೆ ಸುಮಾರು 15 ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾ ಬರುತ್ತಿದ್ದೇನೆ‌. ಆದರೆ ಇತ್ತೀಚೆಗೆ ಈ ರೀತಿ ಸಲಹೆ ನೀಡಲು ಹೋದರೆ, ಕೆಲವರು ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯ ಬಗೆಗೆ ಅಸಹನೆ ಹೊರಹಾಕುವುದನ್ನು, ಇನ್ನು ಕೆಲವರು ಪರೀಕ್ಷಾ ತಯಾರಿಯಿಂದಲೇ ವಿಮುಖರಾಗುತ್ತಿರುವುದನ್ನು ನೋಡಿ ಬೇಸರವಾಗುತ್ತದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಬಳಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವ, ಅಭ್ಯರ್ಥಿಗಳ ಮೇಲೆ ನಿಗಾ ಇಡಲು ತ್ರಿಸೂತ್ರ ನಿಯಮ ರೂಪಿಸಲು ಮುಂದಾಗಿರುವುದನ್ನು ತಿಳಿದು (ಪ್ರ.ವಾ., ಜೂನ್‌ 20) ಸಂತಸವಾಯಿತು. ಈ ರೀತಿಯ ಪಾರದರ್ಶಕ ನಡೆಯನ್ನು ದೇಶದ ಬೇರೆ ಬೇರೆ ಪರೀಕ್ಷಾ ಪ್ರಾಧಿಕಾರಗಳೂ ಕೈಗೊಳ್ಳುವಂತಾದರೆ ಎಷ್ಟೋ ಬಡ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಸಿಗುವಂತಾಗುತ್ತದೆ.

ಹಾಗೆಯೇ ಬಡ ಮತ್ತು ಮಧ್ಯಮ ವರ್ಗದ ಎಷ್ಟೋ ಪೋಷಕರ ಆಸೆ ನವೋದಯ ವಿದ್ಯಾಲಯದಲ್ಲಿ ತಮ್ಮ ಮಕ್ಕಳಿಗೆ ಸೀಟು ಪಡೆಯುವುದಾಗಿದೆ. ಆದರೆ ನವೋದಯ ಪರೀಕ್ಷೆಗಳಲ್ಲಿ ಮೇಲ್ವಿಚಾರಕರು ಉತ್ತರಗಳನ್ನು ಹೇಳಿಕೊಡುವ, ಉತ್ತರಗಳನ್ನು ತಿದ್ದುವಂತಹ ಅಕ್ರಮ ನಡೆಯುವ ಆರೋಪಗಳು ಪ್ರತಿವರ್ಷ ಕೇಳಿಬರುತ್ತವೆ. ಈ ಪರೀಕ್ಷೆಯಲ್ಲಿ ಒಎಂಆರ್ (ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್) ನಕಲು ಪ್ರತಿಯನ್ನು ಕೊಡದಿರುವುದು, ಕಟ್ ಆಫ್ ಅಂಕಗಳನ್ನು ವರ್ಗವಾರು ಪ್ರಕಟಿಸದಿರುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿ, ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಮುಂದಿನ ನವೋದಯ ಪರೀಕ್ಷೆಗಳು ಪಾರದರ್ಶಕವಾಗಿ ಜರುಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

-ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

**

ವ್ಯತ್ಯಾಸ...

ಹಿಂದೆ, ಸಾಹಿತಿಗಳು
ರಾಜಾಶ್ರಯದಲ್ಲಿದ್ದರು, 
ರಾಜಕಾರಣಿಗಳಾಗಿರಲಿಲ್ಲ. 
ಇಂದು, ‘ಚಕ್ರವರ್ತಿ’ಯ
ಆಶ್ರಯದಲ್ಲಿದ್ದಾರೆ, 
‘ರಾಜಕಾರಣಿಗಳಾಗಿದ್ದಾರೆ’! 
ಇಂಥವರಿರುವ

ಅಕಾಡೆಮಿ, ಪ್ರಾಧಿಕಾರ
ಕನ್ನಡಕ್ಕೆ ಹೊರೆ,
ಕಾರಣ, ಇಂದಿನ ರಾಜಕಾರಣವು
ಸಾಹಿತ್ಯ-ಸಂಸ್ಕೃತಿಯ ಶುಭ್ರಜಲವಲ್ಲ, 
ಮಾಲಿನ್ಯ ತುಂಬಿರುವ ಕೊಳಕು ಕೆರೆ!

-ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT