ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಅಧಿಕಾರ ಕೇಂದ್ರದ ಸುತ್ತ ತಿರುಗುವವರು...

‘ಯಾವುದೇ ಪಕ್ಷ ಅಥವಾ ಯಾವುದೇ ವ್ಯವಸ್ಥೆಯ ಪ್ರಭುತ್ವ ಇರಲಿ ಅದು ಬಯಸುವುದು ವಿಧೇಯತೆಯನ್ನು ಮಾತ್ರ. ಪ್ರಶ್ನಿಸುವ, ಪ್ರತಿಭಟಿಸುವ, ಸ್ವತಂತ್ರ ವಿಚಾರಧಾರೆಯನ್ನು ಪ್ರಭುತ್ವ ಸಹಿಸದು’ ಎಂದಿದ್ದಾರೆ ವೆಂಕಟೇಶ ಮಾಚಕನೂರ (ವಾ.ವಾ., ಜೂನ್ 20). ಅಷ್ಟೇ ಅಲ್ಲ, ಯಾವುದೇ ವ್ಯವಸ್ಥೆಯ ಪ್ರಭುತ್ವಗಳು ತಮ್ಮ ಆಡಳಿತದ ಅನುಕೂಲಗಳು, ಸುಗಮ ಆಡಳಿತ ಹಾಗೂ ಭದ್ರ ವ್ಯವಸ್ಥೆಯನ್ನು ಮಾತ್ರ ಅಂತಿಮ ಗುರಿಯಾಗಿ ಇರಿಸಿಕೊಳ್ಳುತ್ತವೆ. ಆದರೆ ಪ್ರಜಾಪ್ರಭುತ್ವದ ಸೊಗಸು ಮತ್ತು ಅದಕ್ಕೆ ಇರುವ ಅನುಕೂಲ ಎಂದರೆ, ಪ್ರಭುತ್ವವು ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಅವಕಾಶ ಪ್ರಜೆಗಳಿಗೆ ಇರುವುದು. ಆದ್ದರಿಂದಲೇ ಸ್ವತಂತ್ರ ಭಾರತದಲ್ಲಿ ಅದೆಷ್ಟೋ ಬಾರಿ ಪ್ರಭುತ್ವ ದಾರಿ ತಪ್ಪಿದೆ ಎನ್ನಿಸಿದಾಗ ಪ್ರಜೆಗಳು, ಸಾಮಾಜಿಕ ಸಂಘಟನೆಗಳು, ಸಮಾಜದ ಪ್ರಾಜ್ಞರು ಎಚ್ಚರಿಸಿ, ಕೇಳದಿದ್ದಾಗ ಚುನಾವಣೆಗಳಲ್ಲಿ ಅದಕ್ಕೆ ತಕ್ಕ ಉತ್ತರ ನೀಡಿರುವುದಿದೆ. ಸಾಹಿತಿಗಳು, ಸಾಮಾಜಿಕ ಸಂಘಟನೆಗಳು ನಿರಂತರವಾಗಿ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಾಹಿತಿ ಪಿ.ಲಂಕೇಶ್ ಹೇಳುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳಲ್ಲಿ ಕೆಲವರು ‘ಆ’ ಪಕ್ಷದಲ್ಲಿ ಇಲ್ಲವೇ ‘ಈ’ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಕಂಡುಬರುತ್ತಿದೆ. ಹಾಗಾಗಿ, ತಾವು ಬಯಸುವ ಪಕ್ಷದ ನೇತೃತ್ವದ ಸರ್ಕಾರ ಬಂದಾಗ ಅಕಾಡೆಮಿಗಳಲ್ಲಿ ಸ್ಥಾನಕ್ಕಾಗಿ ಹೋರಾಟ ನಡೆಸುವುದು, ಹಲವು ಸಾಮಾಜಿಕ ಸಂಘಟನೆಗಳು ಸರ್ಕಾರದ ಭಾಗವಾಗಲು ಹಾತೊರೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದೆ ಜಿ.ಎಸ್.ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗರಂಥವರ ಕಾಲದಲ್ಲಿ ಅಕಾಡೆಮಿಗಳ ಅಧ್ಯಕ್ಷ ಪದವಿ ಪಡೆದವರು ಆನಂತರ ತಮ್ಮ ಸಾಹಿತ್ಯ ಕೃಷಿಯನ್ನು, ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಈಗ ಹಾಗಲ್ಲ, ಒಂದು ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಕ್ಕಿಬಿಟ್ಟರೆ ಆ ನಂತರ ತಮಗೆ ಅವಕಾಶ ಮಾಡಿಕೊಟ್ಟ ಪಕ್ಷದ ವಕ್ತಾರರಾಗಿಬಿಡುತ್ತಾರೆ. ಅಧಿಕಾರ ಕೇಂದ್ರದ ಸುತ್ತ ತಿರುಗಾಡಲು ತೊಡಗುತ್ತಾರೆ. ಹಾಗಿದ್ದಾಗ ಅಂತಹವರು ಪಕ್ಷದ ಕಚೇರಿಗಲ್ಲ, ಸರ್ಕಾರದ ಮುಖ್ಯಸ್ಥರು ಕರೆದರೆ ಎಲ್ಲಿಗೆ ಹೋಗಲೂ ಸಿದ್ಧರಿರುತ್ತಾರೆ. ಇವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

-ಹೊಸಮನೆ ವೆಂಕಟೇಶ, ಟಿ.ನರಸೀಪುರ

**

ಪರೀಕ್ಷಾ ಅಕ್ರಮಕ್ಕೆ ಬೀಳಲಿ ಕಡಿವಾಣ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ರಾಜ್ಯದಲ್ಲಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ (ಸಿಇಟಿ) ‘ಕೃತಕ ಬುದ್ಧಿಮತ್ತೆ’ (ಎಐ) ತಂತ್ರಜ್ಞಾನ ಅಳವಡಿಸಿಕೊಂಡು ಪರೀಕ್ಷಾ ಅಕ್ರಮಕ್ಕೆ ಅಂತ್ಯ ಹಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿರುವುದು ಸ್ವಾಗತಾರ್ಹ. ನೀಟ್‌ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿರುವುದು ಆತಂಕಕಾರಿ ಬೆಳವಣಿಗೆ. ಪರೀಕ್ಷೆ ಅಕ್ರಮದಲ್ಲಿ ಕೆಲವು ಅಭ್ಯರ್ಥಿಗಳು, ಪ್ರಾಧಿಕಾರದ ಕೆಲ ವ್ಯಕ್ತಿಗಳು, ಕೆಲವು ಕೋಚಿಂಗ್ ಕೇಂದ್ರಗಳು, ಪ್ರಾಧ್ಯಾಪಕರು ಹಾಗೂ ಪ್ರಶ್ನೆಪತ್ರಿಕೆ ಮುದ್ರಿಸುವ ಮುದ್ರಣಾಲಯಗಳ ಮಾಲೀಕರು, ಸಿಬ್ಬಂದಿ ಸಹ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ.

ಯಾವುದೇ ತಂತ್ರಜ್ಞಾನ ಬಂದರೂ ಹೊಲಸು ವಿಧಾನದ ಮೂಲಕ ಹಣ ಮಾಡುವ ದುರುಳರು ಅಕ್ರಮಕ್ಕೆ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಾರೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಇರುವುದು ಒಂದೇ ದಾರಿ. ಅದು, ಇಂತಹವರ ವಿರುದ್ಧ ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿ ಕಠಿಣಾತಿ ಕಠಿಣ ಶಿಕ್ಷೆ ವಿಧಿಸುವುದು. ಹಾಗಾದರೆ ಮಾತ್ರ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ.

-ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

**

ಟೋಲ್‌ ಪಾವತಿ: ದೋಷಕ್ಕೆ ಯಾರು ಹೊಣೆ?

ಟೋಲ್ ನಾಕಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಹಾದು ಹೋಗುವ ವಾಹನ ಸವಾರರಿಗೆ ಯಾವ ಟೋಲ್ ನಾಕದಿಂದ ಎಷ್ಟು ಗಂಟೆಗೆ ಅವರ ವಾಹನ ಸಾಗಿಹೋಗಿದೆ ಮತ್ತು ಅದಕ್ಕಾಗಿ ಅವರ ಖಾತೆಯಿಂದ ಎಷ್ಟು ಹಣ ಕಡಿತಗೊಂಡಿದೆ ಎಂಬ ಮಾಹಿತಿಯುಳ್ಳ ಸಂದೇಶವು ನೋಂದಾಯಿಸಿದ ಮೊಬೈಲ್‌ ನಂಬರಿಗೆ ತತ್‌ಕ್ಷಣವೇ ಬರುವ ವ್ಯವಸ್ಥೆ ಮಾಡಲಾಗಿರುವುದು ಅತ್ಯಂತ ಪ್ರಶಂಸಾರ್ಹ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ವಾಹನಗಳು ಟೋಲ್ ನಾಕವನ್ನು ಪ್ರವೇಶಿಸದ ಹೊರತಾಗಿಯೂ ಅವುಗಳ ಮಾಲೀಕರ ಖಾತೆಯಿಂದ ಹಣ ಕಡಿತಗೊಂಡ ಸಂದೇಶ ಫೋನ್‌ಗಳಿಗೆ ಬರುತ್ತಿದೆ. 

ಇಂತಹದ್ದೊಂದು ಖುದ್ದು ಅನುಭವ ಇತ್ತೀಚೆಗೆ ನನಗೂ ಆಯಿತು. ನಮ್ಮ ವಾಹನವು ಮಂಗಳೂರಿನಲ್ಲಿ ನಿಂತಿದ್ದಾಗ, ಬೆಂಗಳೂರಿನ ಅತ್ತಿಬೆಲೆ ಟೋಲ್ ನಾಕದಲ್ಲಿ ಚಲಿಸಿದ್ದು, ಖಾತೆಯಿಂದ ₹ 35 ಕಡಿತಗೊಳಿಸಲಾಗಿದೆ ಎಂಬ ಫೋನ್‌ ಸಂದೇಶ ಬಂದಿತು. ಇದರಲ್ಲಿ ಫಾಸ್ಟ್‌ಟ್ಯಾಗ್‌ಗೆ ಸಂಬಂಧಪಟ್ಟ ಬ್ಯಾಂಕ್‌ಗಳ ನಿರ್ಲಕ್ಷ್ಯವೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ದೋಷವೋ ತಿಳಿಯದಾಗಿದೆ. ಬ್ಯಾಂಕ್‌ಗಳಿಗೆ ಕರೆ ಮಾಡಿದರೆ, ದೂರು ದಾಖಲಿಸಿದ 15ರಿಂದ 18 ದಿನಗಳ ಒಳಗಾಗಿ ಹಣ ಹಿಂದಿರುಗಿಸಲಾಗುವುದು ಎಂದು ಸಮಜಾಯಿಷಿ ನೀಡುತ್ತಾರೆ. ಒಂದು ವಾಹನಕ್ಕೆ ಒಂದೇ ಫಾಸ್ಟ್‌ಟ್ಯಾಗ್ ನಿಯಮ ಜಾರಿಯಾದ ನಂತರವೂ ಈ ಗೊಂದಲ ಉಂಟಾಗುತ್ತಿರುವುದು ಆಶ್ಚರ್ಯ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಪ್ರಾಧಿಕಾರ ಇತ್ತ ಗಮನಹರಿಸಬೇಕಿದೆ.

-ಮಹೇಶ್ ಸಿ.ಎಚ್., ಶಿವಮೊಗ್ಗ 

**

ಮೊದಲು ಕನ್ನಡವನ್ನು ಗಟ್ಟಿಗೊಳಿಸೋಣ

‘ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದವರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಹೇಳಿದ್ದಾರೆ (ಪ್ರ.ವಾ., ಜೂನ್ 21). ಕರ್ನಾಟಕದಪ್ರಸ್ತುತ ಪರಿಸ್ಥಿತಿಯು ಹೊರಗಿನವರು ಕನ್ನಡ ಕಲಿಯುವುದಕ್ಕಿಂತ ಮುಖ್ಯವಾಗಿ ನಮ್ಮ ಜನರು ಕನ್ನಡದಲ್ಲಿ ಮಾತನಾಡಲು ಕಲಿಯಬೇಕು ಎಂಬಂತೆ ಇದೆ. ಮಾತೃಭಾಷೆ ಕನ್ನಡ ಆಗಿದ್ದರೂ ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡಬೇಕೆಂದು ಬಯಸುತ್ತಾರೆ ಮತ್ತು ಅವರೊಂದಿಗೆ ಇಂಗ್ಲಿಷ್‌ನಲ್ಲೇ ಸಂಭಾಷಣೆ ನಡೆಸುತ್ತಾರೆ. ಹೆಚ್ಚಿನ ಮಕ್ಕಳಿಗೆ ಮಾತೃಭಾಷೆ ಕನ್ನಡದಲ್ಲಿ ಓದಲು ಮತ್ತು ಬರೆಯಲು ತಿಳಿದೇ ಇರುವುದಿಲ್ಲ. ದಿನನಿತ್ಯದ ಕೆಲಸಕಾರ್ಯಗಳಿಗೆ ಮತ್ತು ನಿರ್ದಿಷ್ಟ ಉದ್ದೇಶಗಳಿಗೆ ಇಂಗ್ಲಿಷ್  ಅಗತ್ಯವಾಗಬಹುದು. ಈ ಪರಿಸ್ಥಿತಿಯಲ್ಲಿ ಹೊರಗಿನ ಜನರು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಅವರ ಭಾಷೆ ಅಥವಾ ಇಂಗ್ಲಿಷ್ ಅನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. 

ನಮ್ಮ ಭಾಷೆಯನ್ನು ಪ್ರೀತಿಸುವ ಉತ್ಕಟ ಆಕಾಂಕ್ಷೆ ನಮ್ಮಲ್ಲಿ ಅಂತರ್ಗತವಾಗಿ ಇರಬೇಕು ಮತ್ತು ಪೋಷಕರು ಸಹ ಅದಕ್ಕೆ ಪ್ರೋ‌ತ್ಸಾಹ ಕೊಡಬೇಕು. ಮೊದಲು ಕರ್ನಾಟಕದಲ್ಲಿ ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ನಾವು ಯಶಸ್ವಿಯಾದರೆ ಹೊರಗಿನವರು ಕನ್ನಡವನ್ನು ಕಲಿಯುವಂತೆ ಮಾಡಲು ಸಾಧ್ಯವಾಗಬಹುದು. ⇒

-ಕಡೂರು ಫಣಿಶಂಕರ್, ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT