ಕೇಂದ್ರ ಬಜೆಟ್ ಮತ್ತು ರಾಜ್ಯದ ಹಣೆಬರಹ

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲವೆಂಬ ಮಾತು ಕೇಂದ್ರ ಬಜೆಟ್ನಿಂದ ಮತ್ತೆ ಸಾಬೀತಾಗಿದೆ. ಕರ್ನಾಟಕದಲ್ಲಿ ಈಗಿರುವುದು ಸಿಂಗಲ್ ಎಂಜಿನ್ ಸರ್ಕಾರ; ಹಾಗಾಗಿ, ಏನೂ ಸಿಕ್ಕಿಲ್ಲವೆಂದು ತಿಳಿಯುವುದು ತಪ್ಪು. ಡಬಲ್ ಎಂಜಿನ್ ಸರ್ಕಾರ ಇದ್ದಾಗಲೂ ಸಿಗುತ್ತಿದ್ದ ಅನುದಾನ ಅಷ್ಟಕ್ಕಷ್ಟೆ. ಒಟ್ಟಿನಲ್ಲಿ ಕನ್ನಡಿಗರು, ಕರ್ನಾಟಕದ ಹಣೆಬರಹ ಚೆನ್ನಾಗಿಲ್ಲ.

ಕನ್ನಡಿಗರು ಅಮಾಯಕರು; ನೆರೆಹೊರೆಯ ರಾಜ್ಯದವರಂತೆ ಸಿಡಿದೇಳುವುದು ಗೊತ್ತಿಲ್ಲ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಖ್ಯಾತ ಜ್ಯೋತಿಷಿಗಳ ಮೊರೆಹೋಗುವುದು. ಕರ್ನಾಟಕದ ಗ್ರಹಗತಿಯನ್ನು ನೆಟ್ಟಗಾಗಿಸಲು ಯಾವ ಪೂಜೆ, ಹೋಮಹವನ ಮಾಡಿಸಿದರೆ ಒಳ್ಳೆಯದೆಂದು ತಿಳಿದುಕೊಳ್ಳುವುದು. ಅದರಂತೆ ನಡೆದುಕೊಳ್ಳುವುದು ಅಥವಾ ಕೇಂದ್ರದ ಮನಸ್ಸನ್ನು ವಶೀಕರಿಸಿಕೊಳ್ಳಲು ಮತ್ತು ಪ್ರೀತಿ ಗಳಿಸಲು ಮಂತ್ರ ವಿದ್ಯೆಯೇನಾದರೂ ಸಹಾಯಕ್ಕೆ ಬರಬಹುದೆ ಎಂಬ ಸಾಧ್ಯತೆಯನ್ನು ಪರಿಶೀಲಿಸಬಹುದಾಗಿದೆ.

– ಜಗದೀಶ್ ಎಚ್.ಬಿ., ಬೆಂಗಳೂರು

ಎತ್ತಿನಗಾಡಿ ಖಯಾಲಿ: ಜೋಪಾನ ಇರಲಿ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಅಂತರಘಟ್ಟೆ ದುರ್ಗಾಂಬಾ ಜಾತ್ರೆಯಲ್ಲಿ ಎತ್ತು ಹಾಗೂ ಗಾಡಿಗಳನ್ನು ನೋಡುವುದೇ ಚೆಂದ. ಆದರೆ, ಅತಿಯಾದ ಜನಜಂಗುಳಿ ನಿಯಂತ್ರಿಸುವಾಗ ಪೊಲೀಸ್ ಅಧಿಕಾರಿಗಳಿಗೆ ಅಪಘಾತವಾಗಿರುವುದು ಶೋಚನೀಯ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಪಾನಕ, ಹೋಳಿಗೆ, ಮೊಸರು ಬುತ್ತಿ ಕಟ್ಟಿಕೊಂಡು ಎತ್ತಿನಗಾಡಿಯಲ್ಲಿ ಹೋಗಿ ದೇವಿಗೆ ಕೋಳಿ, ಕುರಿ ಬಲಿ ನೀಡುವುದು ವಾಡಿಕೆ. ಕೆಲವು ಸಂದರ್ಭಗಳಲ್ಲಿ ಗಾಡಿ ನೋಡಲು ಬಂದವರ ಮೇಲೂ ಎತ್ತುಗಳು ಗಾಬರಿಯಿಂದ ಹಾರಿ ಅವಘಡ ಸಂಭವಿಸಿರುವುದೂ ಇದೆ. ಎತ್ತಿನಗಾಡಿ ಓಡಿಸುವ ಖಯಾಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದಕ್ಕೆ ಅನುಗುಣವಾಗಿ ಮುನ್ನೆಚ್ಚರಿಕೆ ಕೂಡ ಅಗತ್ಯ.

– ಲಾವಣ್ಯ ಬೀರೇಶ್, ಮುಗುಳಿ

ಕಾಲದೊಳಗಿದ್ದು ಕಾಲ ಮೀರುವ ಪಂಪ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ, ಆದಿಕವಿ ಪಂಪನ ಕಲ್ಪಿತ ಜೀವನಾಧಾರಿತ ‘ಮಹಾಕವಿ’ ಸಿನಿಮಾದ ಪ್ರದರ್ಶನವಿತ್ತು. ಈ ಚಿತ್ರದಲ್ಲಿ ಪಂಪನ ಕಾವ್ಯಕ್ಕೆ ರಸಸಾರ ಒದಗಿಸಿರಬಹುದಾದ 10ನೇ ಶತಮಾನದ ಸಾಮಾಜಿಕ ನೆಲೆಗಟ್ಟನ್ನು ತಮ್ಮದೇ ಆದ ತಾತ್ತ್ವಿಕ ದೃಷ್ಟಿಕೋನದಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಪಂಪನ ಕಾವ್ಯಪ್ರಪಂಚ ಹೇಗೆ ಅವನ ಕಾಲದೊಳಗಿದ್ದೂ ಕಾಲವನ್ನು ಮೀರುತ್ತದೆ ಎನ್ನುವುದು ನೋಡುಗರನ್ನು ತಟ್ಟುತ್ತದೆ. ಪಂಪನ ಮೂಲಕ ಸಮಕಾಲೀನ ಸಂದರ್ಭದಲ್ಲಿ ಲೇಖಕರಿಗೂ ಆಡಳಿತ–ಅಧಿಕಾರಕ್ಕೂ ಇರಲೇಬೇಕಾದ ಆರೋಗ್ಯಕರ ಅಂತರದ ಬಗ್ಗೆಯೂ ಚಿತ್ರವು ಶಕ್ತಿಯುತವಾಗಿ ಮಾತಾಡುತ್ತದೆ. ಪಂಪನ ಪಾತ್ರದಲ್ಲಿ ಕಿಶೋರ್ ಅವರ ನಟನೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ರಾಜ್ಯದ ಎಲ್ಲರೂ ಕನ್ನಡದ ಆದಿಕವಿಯ ಕುರಿತಾದ ಈ ಚಿತ್ರ ನೋಡುವಂತಾಗಲಿ.

– ಶ್ರೀಕಂಠ, ಬೆಂಗಳೂರು

ಮಹನೀಯರ ಬಗ್ಗೆ ಮತೀಯ ಸ್ಪರ್ಶ ಬೇಡ

ನಂಜನಗೂಡು ತಾಲ್ಲೂಕಿನ ಹಗಿನವಾಳುವಿನಲ್ಲಿ ಬಸವೇಶ್ವರ ಚಿತ್ರವಿದ್ದ ಬಾವುಟ ಹಾಕಿರುವ ಕಾರಣಕ್ಕೆ ಗ್ರಾಮದೇವತೆಯ ಜಾತ್ರೆ ಸ್ಥಗಿತಗೊಂಡಿದೆ. ಈ ಸುದ್ದಿ ಓದಿದಾಗ, ‘ಸ್ವಾರ್ಥಿಗಳು ಹುಟ್ಟಿಸಿದ ಕುಲಾಭಿಮಾನದ ಹೊಟ್ಟೆ ಬೆಳೆ ಬೆಳೆದು ಡೊಳ್ಳಾಗಿ ಕಡೆಗೆ ಬಿರಿದೊಡಿದು ಸಿಡಿದು ಬೀಳುವವು ದ್ವೇಷಾಗ್ನಿಯ ಕಿಡಿಗಳು. ರುದ್ರಜ್ವಾಲೆಗಳಾಗಿ ಹೊತ್ತುವವು ನಾಡಿನ ತುಂಬೆಲ್ಲ. ಆಗ ನಾಡತಾಯಿಯ ಒಂದು ಕಣ್ಣಲ್ಲಿ ನೀರು; ಮತ್ತೊಂದು ಕಣ್ಣಲ್ಲಿ ನೆತ್ತರು!’ ಎಂದು ಕಂದಗಲ್ ಹನುಮಂತರಾಯರ ‘ರಕ್ತರಾತ್ರಿ’ ನಾಟಕದಲ್ಲಿ ಅಶ್ವತ್ಥಾಮ ಹೇಳುವ ಮಾತು ನೆನಪಾಯಿತು.

ಬುದ್ಧ, ಬಸವ, ಅಂಬೇಡ್ಕರ್ ಅವರು ವೈಚಾರಿಕ ಪ್ರಜ್ಞೆಯ ದೀವಟಿಗೆಗಳಾಗಿದ್ದಾರೆ. ಅವರ ಚಿಂತನೆಗಳ ಬಗ್ಗೆ ಅರಿಯದೆ ಸಮುದಾಯಗಳ ಅಸ್ಮಿತೆಯಂತೆ ಸಂಕುಚಿತಗೊಳಿಸುವುದು ಬೌದ್ಧಿಕ ದಿವಾಳಿತನದ ನಡೆಯಾಗಿದೆ.

– ನಾಗರಾಜ ಮಗ್ಗದ, ಕೊಟ್ಟೂರು

ನೆಲಕಚ್ಚಿದ ಕಲ್ಪತರು: ಸಂಕಷ್ಟದಲ್ಲಿ ರೈತರು

ರೈತರ ಆದಾಯ ಹೆಚ್ಚಿಸಲು ಸರ್ಕಾರದ ಕಸರತ್ತು ನಿಜಕ್ಕೂ ಮೆಚ್ಚುವಂತಹದ್ದು. ತೆಂಗನ್ನು ಕಲ್ಪವೃಕ್ಷವೆಂದು ಕರೆಯುತ್ತೇವೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಭಾಗವಾಗಿ ತೆಂಗು ಬೆಳೆಗೆ ಉತ್ತೇಜನ ನೀಡಬೇಕಿದೆ. ಬೆಳೆಗಾರರಿಗೆ ಅದು ಸಮರ್ಪಕವಾಗಿ ಮುಟ್ಟಿದರೆ ಯೋಜನೆಯು ಸಾರ್ಥಕವಾಗುತ್ತದೆ. ತೆಂಗು ಬೆಳೆಗಾರರು ಈಗಾಗಲೇ ಸಾಕಷ್ಟು ನೊಂದಿದ್ದಾರೆ.

ತೆಂಗಿಗೆ ನುಸಿರೋಗ, ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡು ಗರಿಗಳು ಒಣಗಿದಂತೆ ಕಾಣುತ್ತವೆ. ಮರಗಳಲ್ಲಿ ಇನ್ನೂ ಕಾಯಿ ಹಿಡಿಯುವುದಾದರೂ ಹೇಗೆ? ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಆದರೆ, ರೈತರ ತೋಟಗಳಲ್ಲಿ ಕಾಯಿಗಳಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ತೆಂಗಿನ ಬೆಳೆಗಾರರ ನೋವಿಗೆ ಸ್ಪಂದಿಸಬೇಕಿದೆ. ಅವರಿಗೆ ಆತ್ಮಸ್ಥೈರ್ಯ ತುಂಬಿ ಹಿತ ಕಾಪಾಡಲು ಮುಂದಾಗಬೇಕು.

– ಕುಂದೂರು ಮಂಜಪ್ಪ, ಹೊಳೆ ಸಿರಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.