ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 4 ಮಾರ್ಚ್ 2024, 22:46 IST
Last Updated 4 ಮಾರ್ಚ್ 2024, 22:46 IST
ಅಕ್ಷರ ಗಾತ್ರ

ಔಷಧ ದರ: ಕಡಿವಾಣ ಬೇಕು

ರಾಜ್ಯದಾದ್ಯಂತ ಇರುವ ಎಲ್ಲ ಖಾಸಗಿ ವ್ಯೆದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರಪಟ್ಟಿ ಪ್ರದರ್ಶಿಸಿರುವ ಬಗ್ಗೆ ಮಾರ್ಚ್ 20ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಆಯುಕ್ತರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ಇದು, ಸ್ವಾಗತಾರ್ಹ.

ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಔಷಧಾಲಯಗಳು ಅತ್ಯಂತ ದುಬಾರಿ ಬೆಲೆಗೆ ಔಷಧಿ ಹಾಗೂ ಇತರ ಪರಿಕರಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕಾಗಿದೆ. ಈ ಬಗ್ಗೆ ಆಸ್ಪತ್ರೆಗಳಲ್ಲಿ ಪ್ರಶ್ನಿಸಿದರೆ, ಫಾರ್ಮಸಿಯನ್ನು ನಡೆಸಲು ಬೇರೆ ಸಂಸ್ಥೆಯವರಿಗೆ ಹೊರಗುತ್ತಿಗೆ ನೀಡಿರುವುದರಿಂದ ಅದರ ಮೇಲೆ ತಮಗೆ ನಿಯಂತ್ರಣ ಇಲ್ಲ ಎಂದು ಕೈಚೆಲ್ಲುತ್ತಾರೆ. ಬಹಳಷ್ಟು ಸಲ ವೈದ್ಯರು ಸೂಚಿಸಿದ ಔಷಧ ಅಥವಾ ಪರಿಕರಕ್ಕೆ ಬದಲಾಗಿ ಬೇರೊಂದು ಔಷಧ, ಪರಿಕರ ನೀಡುತ್ತಾರೆ. ರೋಗಿಗಳ ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಪರಿಪಾಟಕ್ಕೆ ಲಗಾಮು ಹಾಕಬೇಕು.

⇒ಟಿ. ಜಯರಾಂ, ಕೋಲಾರ

ಧ್ವನಿ ಕಳೆದುಕೊಂಡವರು...

ನಮ್ಮ ಶಾಸನಸಭೆಗಳು ಧ್ವನಿ ಕಳೆದುಕೊಂಡಿವೆ. ವಿರೋಧ ಪಕ್ಷಗಳು ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿವೆ. ಕಾಂಗ್ರೆಸ್‌ ಪಕ್ಷ ಸೋತು ಸುಣ್ಣವಾಗಿದೆ. ರಾಜಕಾರಣಿಗಳು ಮೂರನ್ನೂ ಬಿಟ್ಟಿದ್ದಾರೆ. ಚುನಾವಣಾ ಆಯೋಗ
ನಿಶ್ಶಕ್ತವಾಗಿದೆ. ಜನ ಮೂಕರಾಗಿದ್ದಾರೆ. ಕಂಡು–ಕೇಳಿ ಅರಿಯದ ಪ್ರಪಾತ ನಮ್ಮ ಕಾಲಿನ ಬುಡದಲ್ಲೇ ಇದೆಯೇನೊ ಎಂಬ ಅನುಮಾನ ಕಾಡತೊಡಗಿದೆ.

⇒ಗೋಪಾಲರಾವ್‌, ಬೆಂಗಳೂರು

ಕಿರುಚಾಟ: ಕಡೆಗಣಿಸಲಷ್ಟೇ ಯೋಗ್ಯ

ವಿಧಾನ ಪರಿಷತ್ತಿನಲ್ಲಿ ಪ್ರಜ್ಞಾವಂತರ ‘ಪ್ರಜ್ಞೆ’ ಎಲ್ಲಿಹೋಯಿತು ಎಂದು ಮಲ್ಲತ್ತಹಳ್ಳಿ ಎಚ್. ತುಕಾರಾಂ
(ವಾ.ವಾ., ಮಾರ್ಚ್‌ 1) ಪ್ರಶ್ನಿಸಿದ್ದಾರೆ. ಪ್ರಜ್ಞಾವಂತರು ಇದ್ದರೆ ‘ಪ್ರಜ್ಞೆ’ ಎಲ್ಲಿಯೂ ಹೋಗುವುದಿಲ್ಲ ಅಲ್ಲವೇ?
ಜನಪ್ರತಿನಿಧಿಗಳು ರೌಡಿಗಳಂತೆ ವರ್ತಿಸುವುದು, ಪರಸ್ಪರ ಏಕವಚನ ಪ್ರಯೋಗ ಮಾಡುವುದು, ತೊಡೆ ತಟ್ಟುವುದು, ಕಿರುಚಾಡಿ ಆರ್ಭಟ ಮಾಡುವಂತಹ ವರ್ತನೆಗಳು ನಾಯಕತ್ವದ ಗುಣಸೂಚಕವಲ್ಲ. ಇಂಥ ಕನಿಷ್ಠ ಮಟ್ಟದ ವರ್ತನೆಯ ದೃಶ್ಯಗಳನ್ನು ನಮ್ಮ ದೃಶ್ಯಮಾಧ್ಯಮಗಳು ಪ್ರಸಾರ ಮಾಡುವುದನ್ನು ನಿಲ್ಲಿಸುವುದು ಸೂಕ್ತ. ಇಲ್ಲದಿದ್ದರೆ ಯುವ ಮತದಾರರು ಹಾಗೂ ರಾಜಕೀಯ ಪ್ರವೇಶಾಕಾಂಕ್ಷಿಗಳಿಗೆ ಕನಿಷ್ಠ ಮಟ್ಟದ ರಾಜಕೀಯ ಪರಿಸರವನ್ನು ಪರಿಚಯಿಸಿದಂತೆ ಆಗುತ್ತದೆ.

ಉಪಯುಕ್ತ ಮತ್ತು ಆರೋಗ್ಯಕರ ಚರ್ಚೆ, ಹೇಳಿಕೆಗಳಿಗೆ ಮಾತ್ರ ಮಾಧ್ಯಮಗಳು ಮನ್ನಣೆ ನೀಡಿದಲ್ಲಿ ನಮ್ಮ ಸಾರ್ವಜನಿಕ ಸಂವಾದದ ಸ್ವರೂಪ ತಾನಾಗಿಯೇ ಬದಲಾಗುತ್ತದೆ.

⇒ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ದಾರಿದ್ರ್ಯಕ್ಕೆ ಕೊನೆ ಇಲ್ಲವೇ?

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ತಮ್ಮ ಮೈತ್ರಿಕೂಟದ ಬಾಗಿಲು ಸದಾ ತೆರೆದಿರುತ್ತದೆ ಎಂಬರ್ಥದಲ್ಲಿ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಕೆಲವು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದಾರೆ. ಅದನ್ನು ಓದಿದಾಗ ಹೀಗೆ ಅನ್ನಿಸಿತು: ‘ಆಹಾ! ನಿತೀಶ್‌ರ ಭಾಗ್ಯವೇ! ಇಂತಹ ಪರಮ ಅದೃಷ್ಟವಂತ ರಾಜಕಾರಣಿ ಇಡೀ ವಿಶ್ವದ
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಎಲ್ಲಿಯೂ ಇರಲಾರರು! ಇರಲೂಬಾರದು!’ ಈ ದರಿದ್ರ ರಾಜಕಾರಣಿಗಳ ದಾರಿದ್ರ್ಯಕ್ಕೆ ಅಂತ್ಯವೇ ಇಲ್ಲವೆ? ನಾಚಿಕೆಗೇಡು!

⇒ಎಸ್‌.ಕೆ. ಕುಮಾರ್‌, ಬೆಂಗಳೂರು

ಪ್ರಚೋದನೆಗೆ ಮರುಳಾಗಬೇಡಿ

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದೆ. ಜನಸಮೂಹ ಅದರಲ್ಲೂ ಯುವಕರು ಎಚ್ಚರದಿಂದ ಇರುವುದು ಒಳ್ಳೆಯದು. ಚುನಾವಣೆ ಸಮೀಪಿಸಿದಾಗ ರಾಜಕೀಯ ಪಕ್ಷಗಳು ಗಲಭೆ– ಘರ್ಷಣೆಗಳಿಗೆ ಪ್ರಚೋದಿಸುವುದು ಮಾಮೂಲಿ. ಬಿಸಿರಕ್ತದ ಯುವಕರು ಇಂತಹ ಪ್ರಚೋದನೆಗಳಿಗೆ ಮರುಳಾಗಬಾರದು. ಯಾವುದೇ ಅಹಿತಕರ ಕೃತ್ಯ ಜರುಗಿದರೂ ಅದಕ್ಕೆ ಬಲಿಪಶು ಆಗುವುದು ಬಡವರ ಮಕ್ಕಳೇ. ಇದನ್ನು ಮರೆಯಬಾರದು.

ಎಲ್ಲ ರಾಜಕೀಯ ಪಕ್ಷಗಳ ಆಡಳಿತವನ್ನೂ ನೋಡಿ ಆಗಿದೆ. ದುಡಿಯುವ ಮಂದಿಯ ಬವಣೆ ನಿವಾರಣೆಯಾಗುವ ಯಾವ ಭರವಸೆಯೂ ಇಲ್ಲ. ನಿಮ್ಮ ದುಡಿಮೆಯಿಂದ ಮಾತ್ರ ಕುಟುಂಬದ ರಥ ಮುಂದೆ ಸಾಗುತ್ತದೆ ಎಂಬುದು ಸದಾ ನೆನಪಿನಲ್ಲಿ ಇರಲಿ. ನಿಮಗೆ ಯಾರು ಹಿತ ಅನ್ನಿಸುವರೋ ಅವರಿಗೆ ಮತ ನೀಡಿ. ಪ್ರಚೋದನೆಗಳಿಗೆ ಮಾತ್ರ ಈಡಾಗಬೇಡಿ.⇒ಅಶ್ವತ್ಥನಾರಾಯಣ ಆರ್‌., ಬೆಂಗಳೂರು

ಜೈಲುಪಾಲಾದವರ ಕಥನ ಬಿಡುಗಡೆ ಮಾಡುತ್ತಿರಬೇಕು 

ದಿ ರಾಮೇಶ್ವರಂ ಕೆಫೆಯ ಸ್ಫೋಟದಂಥ ‘ಕೃತ್ಯ ಮಾಡಲು ಬೇರೆಯವರೂ ಭಯಪಡುವಂತೆ ಆರೋಪಿಗೆ (ಅಪರಾಧಿಗೆ) ಶಿಕ್ಷೆ ವಿಧಿಸಬೇಕಿದೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ (ಕಿಡಿನುಡಿ, ಪ್ರ.ವಾ., ಮಾರ್ಚ್‌ 4). ಒಪ್ಪತಕ್ಕ ಮಾತೇನೊ ಹೌದು. ಆದರೆ, ನಮ್ಮ ನ್ಯಾಯತೀರ್ಮಾನ ವ್ಯವಸ್ಥೆ ಅದೆಷ್ಟು ನಿಧಾನವೆಂದರೆ ಅಪರಾಧಿಯ ಕತೆ ಏನಾಯ್ತು ಎಂಬುದು ನೆನಪೇ ಇರುವುದಿಲ್ಲ. ತೀರ ಕುಖ್ಯಾತ ಅಪರಾಧಿಗಳು ಈಗ ಜೈಲಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ಆಗಾಗ ನೆನಪಿಸುವಂಥ ವ್ಯವಸ್ಥೆ ನಮ್ಮಲ್ಲಿ ಬರಬೇಕು. ಜೈಲಿನ ಅಧಿಕಾರಿಗಳು ತಮ್ಮ ಆತಿಥ್ಯದಲ್ಲಿ ಕ್ರೂರ ಶಿಕ್ಷೆ ಅನುಭವಿಸುತ್ತಿರುವವರ ಈಗಿನ ಸ್ಥಿತಿಗತಿಯನ್ನು (ಅವರು ರಾಗಿ ಬೀಸುತ್ತಿದ್ದಾರೆಯೆ, ಹೊಸ ವಿದ್ಯೆ–ವೃತ್ತಿ ಕಲಿತರೆ, ಯೋಗಾಭ್ಯಾಸ ಮಾಡುತ್ತಿದ್ದಾರೆಯೆ, ಏನು ಕತೆ ಎಂಬುದನ್ನು) ಪ್ರತಿ ಆರು ತಿಂಗಳಿಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿರಬೇಕು. ಅಂಥ ಪಾರದರ್ಶಕತೆ ಇಲ್ಲದಿದ್ದರೆ ಭಾವಿ ಅಪರಾಧಿಗಳು ಪಾಠ ಕಲಿಯಲು ಹೇಗೆ ಸಾಧ್ಯ?⇒ಗುರುಪ್ರಸಾದ ಕೆ., ಹೂವಿನಹಡಗಲಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT