ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಗ್ರಹದ ಮನಸ್ಸು

Last Updated 10 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನಗರ ನಕ್ಸಲರೆಂದು ಹಣೆಪಟ್ಟಿ ಹಚ್ಚಿ ತೆಲುಗು ಕವಿ ವರವರರಾವ್ ಮುಂತಾದ ಐದು ಜನ ಪ್ರಗತಿಪರ ಚಿಂತಕರನ್ನು ಪ್ರಧಾನಿಯ ಕೊಲೆಗೆ ಸಂಚು ಹೂಡಿದ ಮಾವೊವಾದಿಗಳೆಂದು ಗೃಹ ಬಂಧನದಲ್ಲಿಟ್ಟಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಪ್ರಸನ್ನ (ಸಂಗತ, ಆ.31) ಹಾಗೂ ಕೆ.ಎನ್‌. ಭಗವಾನ್‌ ಅವರ ಅಭಿಪ್ರಾಯಗಳನ್ನು ಖಂಡಿಸಿ ‘ಇವರಿಗೇಕೆ ಬೆಂಬಲ?’ (ಪ್ರ.ವಾ., ಸೆ.10) ಎಂದು ಜಿ.ವಿ. ಆನಂದ್ ಎಂಬುವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಕ್ಸಲ್ ಸಿದ್ಧಾಂತ ಎಂದರೇನು? ಅದರ ಉಗಮಕ್ಕೆ ಕಾರಣಗಳೇನು? ಎಂಬುದರ ತಳಬುಡ ತಿಳಿಯದ ಪೂರ್ವಗ್ರಹಪೀಡಿತ ಖಂಡನೆ ಇದಾಗಿದೆ. ಬಂಗಾಳದ ನಕ್ಸಲ್‍ಬರಿ ಪ್ರದೇಶದಲ್ಲಿ ಹುಟ್ಟಿದ ಚಳವಳಿ ಇದು. ಚಹಾ ತೋಟದ ಕಾರ್ಮಿಕರ ಮೇಲೆ ಜಮೀನ್ದಾರಿ ಕುಳಗಳು ನಡೆಸುತ್ತಿದ್ದ ನಿರ್ದಯ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಚಾರು ಮಜುಂದಾರ್ ಅವರ ನಾಯಕತ್ವದಲ್ಲಿ ಈ ಚಳವಳಿ ಹುಟ್ಟಿಕೊಂಡಿತ್ತು.

ಜಡಗಟ್ಟಿದ್ದ ವ್ಯವಸ್ಥೆ, ಮೂಢನಂಬಿಕೆ, ಸ್ವಜನ ಹಿತಾಸಕ್ತಿಯ ಪಟ್ಟಭದ್ರ ವ್ಯವಸ್ಥೆಯನ್ನು ಅಲುಗಾಡಿಸಿ ಸಾಮಾಜಿಕ ನ್ಯಾಯವನ್ನು, ಸಮಸಮಾಜದ ಮೌಲ್ಯವನ್ನು ಬಿತ್ತಲು ಹೊರಟಿದ್ದು ನಕ್ಸಲ್ ಚಳವಳಿ. ಶೋಷಿತ ಬುಡಕಟ್ಟುಗಳ ಅನೇಕ ಯುವಜನರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ ಪ್ರಭುತ್ವಅವರನ್ನು ಕರೆದು ಸಹಾನುಭೂತಿಯಿಂದ ಮಾತುಕತೆ ನಡೆಸುವುದಕ್ಕೆ ಬದಲಾಗಿ, ‘ನೆಗಡಿ ಆದರೆ ಮೂಗನ್ನೇ ಕತ್ತರಿಸಿ ಹಾಕಿದರು’ ಎಂಬಂತೆ, ಚಳವಳಿಗಾರರನ್ನೇ ‘ಎನ್‍ಕೌಂಟರ್’ ಮೂಲಕ ಮುಗಿಸುತ್ತ ಬಂದಿತು. ಅದಿನ್ನೂ ಮುಂದುವರೆಯುತ್ತಲೇ ಇದೆ. ಒಟ್ಟಾರೆ, ಜನರ ಸಮಸ್ಯೆಯನ್ನು ಬಗೆಹರಿಸಲಾಗದ ಸರ್ಕಾರವು ವ್ಯವಸ್ಥೆಯ ವಿರುದ್ಧ ದನಿ ಎತ್ತಿದವರನ್ನೆಲ್ಲ ನಕ್ಸಲರೆಂದೇ ಬಿಂಬಿಸಿ ದಮನ ಮಾಡುತ್ತಿದೆ ಈಗ. ಅದನ್ನು ವಿರೋಧಿಸುವ ಪ್ರಗತಿಪರ ಚಿಂತಕರು ‘ನಾವೂ ನಕ್ಸಲರು’ ಎಂದು ಸರ್ಕಾರದ ಕ್ರಮವನ್ನು ವಿರೋಧಿಸುತ್ತಿದ್ದಾರೆ.

ಇದನ್ನು ತಪ್ಪಾಗಿ ಗ್ರಹಿಸುತ್ತಿರುವ ಆನಂದ್ ಅಂಥವರು ಪೂರ್ವಗ್ರಹಪೀಡಿತ ಮನಸ್ಸಿನಿಂದ, ಒಂದು ದಿನ ನಕ್ಸಲರೇ ಆಳ್ವಿಕೆಗೆ ಬರುತ್ತಾರೆಂದೂ ಆಗ ವರವರರಾವ್ ಅಂಥವರು ಮಂತ್ರಿಯೋ ಗುರುಗಳೋ ಆಗಿ ನಮ್ಮೆಲ್ಲರ ಸ್ವಾತಂತ್ರ್ಯವನ್ನು ಕಸಿದುಕೊಂಡು ಅಂಬೇಡ್ಕರ್ ಸಂವಿಧಾನವನ್ನು ತಿರಸ್ಕರಿಸಿ ನಕ್ಸಲ್ ಸಾಮ್ರಾಜ್ಯವನ್ನು ಸಂಸ್ಥಾಪನೆ ಮಾಡುತ್ತಾರೆಂದೂ ವೃಥಾ ಸಂಶಯ ಪಡುತ್ತಿದ್ದಾರೆ. ಆದರಿದು ಅಸಂಭವ. ಯಾಕೆಂದರೆ ಇವರು ಯಾವ ಸಂವಿಧಾನವನ್ನು ಬದಲಿಸಿ ನಕ್ಸಲ್ ರಾಜ್ಯ ಸ್ಥಾಪನೆಯಾಗುತ್ತದೆಂದು ಹೇಳುತ್ತಿರುವರೋ, ಅಂಥ ಸಂದರ್ಭ ಬಂದರೆ, ಈ ನಮ್ಮ ಸಂವಿಧಾನವೇ ನಮಗೆ ರಕ್ಷೆಯಾಗಿ ನಿಲ್ಲುತ್ತದೆ.

ಪ್ರೊ.ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT