ಶುಕ್ರವಾರ, ಜುಲೈ 30, 2021
28 °C

ಕೃಷಿ ಕೋಟಾ ದುರುಪಯೋಗ ತಡೆಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಎಸ್ಸಿ ಕೃಷಿ ಪದವಿಗೆ ಕೃಷಿ ಕೋಟಾದಡಿ ಅಕ್ರಮವಾಗಿ ಪ್ರವೇಶ ಪಡೆದು ಎಂ.ಎಸ್ಸಿ ಮತ್ತು ಪಿಎಚ್‌.ಡಿ ಪದವಿಗಳನ್ನು ಸಹ ಪಡೆದಿರುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯವರ ಪುತ್ರ ಡಾ. ವಿನಯ್ ಪಾಟೀಲ ಅವರ ಪದವಿ ಪತ್ರಗಳನ್ನು ರದ್ದುಪಡಿಸಲಾಗಿದ್ದು, ಕೂಡಲೇ ಪದವಿ ಪ್ರಮಾಣಪತ್ರಗಳನ್ನು ಹಿಂದಿರುಗಿಸುವುದಲ್ಲದೆ ₹ 10 ಲಕ್ಷ ದಂಡ ಸಹ ಕಟ್ಟಬೇಕೆಂದು ವಿಶ್ವವಿದ್ಯಾಲಯ ಸೂಚಿಸಿದೆ. ಇದು ರಾಜ್ಯದಲ್ಲಿ ಕೃಷಿ ಕೋಟಾ ದುರುಪಯೋಗವಾಗಿರುವ ಕೇವಲ ಒಂದು ಪ್ರಮುಖ ಉದಾಹರಣೆಯಷ್ಟೆ.

‘ಕೃಷಿ ಕೋಟಾ’ ಎಂಬುದು ಕೃಷಿಯೇ ಪ್ರಾಥಮಿಕ ಆದಾಯ ಮೂಲವಾಗಿರುವ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ವಿಜ್ಞಾನದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಲು, ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ನೀಡಿರುವ ಮೀಸಲಾತಿ. ಈ ನಿಟ್ಟಿನಲ್ಲಿ ಸರ್ಕಾರವು ಶೇ 40ರಷ್ಟು ಸೀಟುಗಳನ್ನು ‘ಕೃಷಿ ಕೋಟಾ’ ಎಂದು ಮೀಸಲಿರಿಸಿದೆ. ಆದರೆ ಪ್ರತಿವರ್ಷವೂ ರಾಜ್ಯದಲ್ಲಿ ನೂರಾರು ಸರ್ಕಾರಿ ನೌಕರರು, ಕೃಷಿ ಭೂಮಿ ಇಲ್ಲದವರು ಮತ್ತು ಪ್ರಭಾವಿ ಶ್ರೀಮಂತರು ‘ನಕಲಿ ಕೃಷಿ ಪ್ರಮಾಣ ಪತ್ರ’ಗಳನ್ನು ಸಲ್ಲಿಸಿ ಈ ಕೋಟಾದಡಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಇದು ನಿಜವಾದ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಅವಕಾಶ ವಂಚಿತರನ್ನಾಗಿಸುತ್ತಿದೆ.

ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳು ದೈನಂದಿನ ಕೃಷಿಯಲ್ಲಿ ತೊಡಗಿ, ಕಷ್ಟಪಟ್ಟಿರುತ್ತಾರೆ. ಇಂತಹವರಿಗೆ ಉನ್ನತ ಮಟ್ಟದ ಕೃಷಿ ಶಿಕ್ಷಣ ದೊರೆತರೆ, ಅವರು ವೈಜ್ಞಾನಿಕ ಕೃಷಿಗೆ ಉತ್ತೇಜನ ನೀಡುತ್ತಾರೆ. ಇದರಿಂದ ನಿರುದ್ಯೋಗ, ನಗರೀಕರಣವನ್ನು ತಡೆಯಬಹುದು. ಆ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು. ಆದ್ದರಿಂದ ಸರ್ಕಾರ ಎಚ್ಚೆತ್ತು, ಪ್ರಸ್ತುತ ವರ್ಷದಿಂದಲೇ ನಿಜವಾದ ಕೃಷಿ ಕಾರ್ಮಿಕರು ಮತ್ತು ರೈತರ ಮಕ್ಕಳಿಗೆ ಮಾತ್ರ ಕೃಷಿ ಕೋಟಾ ಲಭ್ಯವಾಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

-ರಮೇಶ ವಿ., ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು