ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರೈಲು ಯೋಜನೆ ಮತ್ತು ನಿಸರ್ಗ ಸಂಪತ್ತು

Last Updated 25 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ರೈಲ್ವೆ ಎಂದಾಗ ಜನಸಾಮಾನ್ಯರ ಮನಸ್ಸಿನಲ್ಲಿ ಕಡಿಮೆ ದರದಲ್ಲಿ ಸುಖಕರ ಪ್ರಯಾಣವೆಂಬ ಭಾವನೆ ಬರುತ್ತದೆ. ಆದರೆ ರೈಲು ಮಾರ್ಗದ ಅಳವಡಿಕೆ ಹಾಗೂ ನಿರ್ವಹಣೆಗೆ ತಗಲುವ ವೆಚ್ಚ, ಆ ಮಾರ್ಗದ ಬಳಕೆಯಂತಹ ವಿಚಾರಗಳು ಜನಸಾಮಾನ್ಯರ ಕಲ್ಪನೆಗೆ ಮೀರಿದ್ದು. ಇದರ ಜೊತೆಗೆ ಈ ಸೌಲಭ್ಯಕ್ಕಾಗಿ ಪ್ರಕೃತಿಯನ್ನು ಎಷ್ಟರಮಟ್ಟಿಗೆ ಗಾಸಿಗೊಳಿಸುತ್ತೇವೆ, ರೈತರ ಬಾಳಿನ ಮೇಲೆ, ಪಶು-ಪಕ್ಷಿಗಳ ಮೇಲೆ ಅದರಿಂದ ಆಗಬಹುದಾದ ಪರಿಣಾಮಗಳೇನು ಎಂಬುದನ್ನೆಲ್ಲಾ ತುಲನೆ ಮಾಡಿದಾಗ, ಸತ್ಯದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.

ರಸ್ತೆಯಾದರೆ ಬಹೂಪಯೋಗಿ. ಆದರೆ ಬಂಡವಾಳ ಹೂಡಿಕೆಯಲ್ಲಿ ರಸ್ತೆ ನಿರ್ಮಾಣಕ್ಕೂ ರೈಲು ಮಾರ್ಗ ನಿರ್ಮಾಣಕ್ಕೂ ಅಜಗಜಾಂತರ. ರೈಲು ಯೋಜನೆಗೆ ಭೂಮಿ, ಹಳಿ ಹಾಕುವುದು, ಕಟ್ಟಡ, ರೈಲು ಗಾಡಿ, ನೌಕರರ ನಿರ್ವಹಣೆಯಂತಹ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಇದರ ಹೊರೆಯು ರೈಲಿನ ಸುಖವನ್ನು ಕಂಡು ಕೇಳರಿಯದ ಸಾಮಾನ್ಯರ ಮೇಲೂ ಬೀಳುತ್ತದೆ. ಹಾಗಾಗಿ ವ್ಯಾವಹಾರಿಕ ಸಾಧ್ಯತೆ, ಸಮುದಾಯದ ಅನಿವಾರ್ಯವನ್ನು ಪರಿಗಣಿಸಿದರೆ, ದೊಡ್ಡ ದೊಡ್ಡ ನಗರಗಳನ್ನು ಸಂಪರ್ಕಿಸಿದಾಗ ಮಾತ್ರ ರೈಲ್ವೆಯ ಗರಿಷ್ಠ ಉಪಯೋಗ ಸಾಧ್ಯ. ಇಲ್ಲದಿದ್ದಲ್ಲಿ ಕಡೂರು- ಚಿಕ್ಕಮಗಳೂರು, ಹರಿಹರ- ಹೊಸಪೇಟೆ ಮಾರ್ಗದಂತೆ ಹೆಬ್ಬಾವಿನ ತರಹ ಹಳಿ ಹಾಸಿರುತ್ತದೆ, ರೈಲು ಓಡಿಸಿದರೆ ನಷ್ಟದ ಹೊರೆ ಹೆಚ್ಚುತ್ತಲೇ ಹೋಗುತ್ತದೆ.

ಸಮೀಪದ ಪ್ರಯಾಣಕ್ಕೆ ರಸ್ತೆ ಬಹಳಷ್ಟು ಜನರ ಆಯ್ಕೆ. ಇಲ್ಲಿ ವಾಹನ ದಟ್ಟಣೆ ಇರದಿದ್ದರೆ ರೈಲಿನ ಬಳಕೆ ತೀರಾ ಕಡಿಮೆ. ಉದಾಹರಣೆಗೆ, ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗವಾಗಿ 15ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿರುವಾಗಲೇ ರಸ್ತೆ ಅಷ್ಟಪಥವಾಗುತ್ತಿದೆ! ದೂರದ ಪ್ರಯಾಣಕ್ಕೆ ರೈಲಿನ ಬಳಕೆ ಜಾಸ್ತಿ ಇದ್ದು ಬೇಡಿಕೆಯೂ ಇದೆ. ಆದರೆ ಎಲ್ಲಾ ಮಾರ್ಗದಲ್ಲಿ ಬೇಡಿಕೆ ಒಂದೇ ತೆರನಾಗಿ ಇಲ್ಲ. ಇದರೊಂದಿಗೆ ಆಧುನಿಕ ರಸ್ತೆ ವಾಹನಗಳು ಹಾಗೂ ವಿಸ್ತಾರವಾಗುತ್ತಿರುವ ವಿಮಾನ ಸೌಕರ್ಯಗಳು ರೈಲ್ವೆ ಆದಾಯಕ್ಕೆ ಕತ್ತರಿ ಹಾಕುತ್ತಿವೆ. ಮೆಟ್ರೊ ರೈಲಿನಿಂದ ನಷ್ಟವಾಗುತ್ತಿದ್ದರೂ ನಗರಗಳಲ್ಲಿ ರಸ್ತೆ ಮೇಲೆ ಒತ್ತಡ ಕಡಿಮೆ ಮಾಡಲು ಇದು ಅನಿವಾರ್ಯ. ಆದರೆ ಇದೇ ಸೂತ್ರವನ್ನು ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಧಾರವಾಡ- ಬೆಳಗಾವಿ, ಚಿತ್ರದುರ್ಗ ರೈಲು ಮಾರ್ಗಗಳಲ್ಲಿ ನಿರೀಕ್ಷೆ ಮಾಡಲಾಗದು. ಹರಿಹರ- ಕೊಟ್ಟೂರು ರೈಲು ಮಾರ್ಗವನ್ನು ಅವಲೋಕಿಸಿದರೆ, ಹಾಳಾದ ಅಮೂಲ್ಯ ನೀರಾವರಿ ಭೂಮಿಯ ಮೌಲ್ಯದ ಮುಂದೆ ರೈಲು ಸೌಲಭ್ಯ ಗೌಣ ಎನಿಸುತ್ತದೆ. ಹಾಗೆಯೇ ಈಗ ಸರ್ವೆ ನಡೆದಿರುವ ಶಿವಮೊಗ್ಗ- ಹರಿಹರ, ಶಿವಮೊಗ್ಗ- ರಾಣೆಬೆನ್ನೂರು, ಹುಬ್ಬಳ್ಳಿ- ಬೆಳಗಾವಿ ರೈಲು ಯೋಜನೆಗಳೆಲ್ಲವೂ ಬಿಳಿಯಾನೆಗಳು.

–ಬಿ.ಕೆ.ಮಾಧವ ರಾವ್, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT