ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ನಮ್ಮ ಕ್ಲಿನಿಕ್‌’: ಸೇವಾವಧಿ ವಿಸ್ತರಿಸಿ

Last Updated 8 ಫೆಬ್ರುವರಿ 2023, 19:32 IST
ಅಕ್ಷರ ಗಾತ್ರ

‘ನಮ್ಮ ಕ್ಲಿನಿಕ್‌’: ಸೇವಾವಧಿ ವಿಸ್ತರಿಸಿ

ಬೆಂಗಳೂರಿನಲ್ಲಿ 108 ಕಡೆ ‘ನಮ್ಮ ಕ್ಲಿನಿಕ್’ಗಳು ಏಕಕಾಲಕ್ಕೆ ಶುರುವಾಗಿರುವುದು ಶ್ಲಾಘನೀಯ ವಿಚಾರ. ಅಸಂಘಟಿತ ವಲಯದ ಕಾರ್ಮಿಕರು ಅನಾರೋಗ್ಯವಿದ್ದರೂ ಕೆಲವೊಮ್ಮೆ ರಜೆ ಸಿಗದ ಕಾರಣಕ್ಕೆ ಅಥವಾ ವೇತನ ಕಡಿತದ ಭೀತಿಯಿಂದ ಕೆಲಸಕ್ಕೆ ತೆರಳಿ, ಸಂಜೆ ವಾಪಸ್‌ ಬಂದ ನಂತರ ಆರೋಗ್ಯ ತಪಾಸಣೆಗೆ ಹೋಗುವುದಿದೆ. ಹೀಗಿರುವಾಗ ‘ನಮ್ಮ ಕ್ಲಿನಿಕ್’ಗಳು ಈಗ ನಿಗದಿಯಾಗಿರುವಂತೆ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗಷ್ಟೇ
ಕಾರ್ಯನಿರ್ವಹಿಸಿದರೆ, ಈ ವರ್ಗದ ಜನರು ಈ ಯೋಜನೆಯಿಂದ ವಂಚಿತರಾಗುತ್ತಾರೆ. ಮತ್ತೆ ಅವರು ಹೆಚ್ಚು ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾಗುತ್ತದೆ ಅಥವಾ ಹಣವಿಲ್ಲದಿದ್ದರೆ ಅನಾರೋಗ್ಯದಿಂದ
ನರಳಬೇಕಾಗುತ್ತದೆ. ಹೀಗಾಗಿ, ನಮ್ಮ ಕ್ಲಿನಿಕ್‌ನ ಸಮಗ್ರ ಸೇವೆಯನ್ನು ರಾತ್ರಿ 8ರವರೆಗೆ ವಿಸ್ತರಿಸಬೇಕು. ಇದಕ್ಕಾಗಿ ಪಾಳಿ ವ್ಯವಸ್ಥೆ ಅಳವಡಿಸಿಕೊಳ್ಳಬಹುದು.⇒ಆರ್.ಕುಮಾರ್, ಬೆಂಗಳೂರು

ನಾನು ಸಿಕ್ಕಿಬೀಳುವುದಿಲ್ಲ!

ಮಹಾಭಾರತದ ‘ಯಕ್ಷ ಪ್ರಶ್ನೆ’ ಪ್ರಸಂಗದಲ್ಲಿ ‘ಈ ಜಗತ್ತಿನ ಅತಿ ದೊಡ್ಡ ವಿಸ್ಮಯ ಯಾವುದು?’ ಅನ್ನುವ ಯಕ್ಷನ ಪ್ರಶ್ನೆಗೆ ಯುಧಿಷ್ಠಿರ, ‘ನಿತ್ಯ ನಮ್ಮ ಕಣ್ಣೆದುರೇ ಜನ ಸತ್ತು ಯಮಲೋಕಕ್ಕೆ ಹೋಗುತ್ತಿರುವುದನ್ನು ನೋಡುತ್ತಾ ಇದ್ದರೂ ‘ನಾನು ಸಾಯುವುದಿಲ್ಲ’ ಎಂದು ಮನುಷ್ಯ ಭ್ರಮಾಧೀನನಾಗಿರುವುದೇ ಈ ಜಗತ್ತಿನ ಅತಿ ದೊಡ್ಡ ವಿಸ್ಮಯ’ ಎಂದು ಉತ್ತರಿಸುತ್ತಾನೆ. ಲಂಚ ತೆಗೆದುಕೊಳ್ಳುವಾಗ ‌ಸಿಕ್ಕಿಬಿದ್ದು ಸರ್ಕಾರಿ ನೌಕರರು, ಅಧಿಕಾರಿಗಳು ಜೈಲು ಸೇರುತ್ತಿರುವ ಹಲವಾರು ಪ್ರಕರಣಗಳು ನಿತ್ಯ ದಿನಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದ್ದರೂ ‘ನಾನು ಸಿಕ್ಕಿಬೀಳುವುದಿಲ್ಲ’ ಎಂಬ ಭಂಡ ಧೈರ್ಯದಿಂದ ಅದೇ ಕೃತ್ಯದಲ್ಲಿ ತೊಡಗಿ ಜೈಲು ಸೇರುತ್ತಿರುವ ಪ್ರಕರಣಗಳು ಪುನರಾವರ್ತನೆ ಆಗುತ್ತಿರುವುದು ನಿಜವಾಗಿಯೂ ನಮ್ಮ ಕಾಲಮಾನದ ದೊಡ್ಡ ವಿಸ್ಮಯವೇ ಸರಿ.

ಶಿವರಾಮ್ ಎಚ್.ಎಸ್., ಮೈಸೂರು

ದಂತ ಯೋಜನೆ: ಕಾಗದದ ಮೇಲಷ್ಟೇ ಉಳಿಯದಿರಲಿ

ವಯಸ್ಸಾದ ಬಡವರಿಗಾಗಿ ಹಲ್ಲಿನ ಸೆಟ್ ನೀಡುವ ‘ದಂತಭಾಗ್ಯ ಯೋಜನೆ’ಯ ಸೌಲಭ್ಯ ಜಿಲ್ಲಾ ಆಸ್ಪತ್ರೆಗಳಲ್ಲಿ ಸರಿಯಾಗಿ ದೊರೆಯದಿರುವ ಬಗ್ಗೆ ಸುಭಾಸ ಯಾದವಾಡ ಅವರು ಪ್ರಸ್ತಾಪಿಸಿರುವುದು (ವಾ.ವಾ., ಫೆ. 8) ನಿಜವೇ ಹೌದು. ದಂತಭಾಗ್ಯ ಯೋಜನೆ ಕುರಿತಂತೆ ಕವಿ ಡುಂಡಿರಾಜರ ‘ಸರ್ಕಾರದಿಂದ ಹಿರಿಯ ನಾಗರಿಕರಿಗೆ ಉಚಿತ ದಂತಭಾಗ್ಯ ಯೋಜನೆ, ಅದನ್ನೇ ಅಚ್ಚಕನ್ನಡದಲ್ಲಿ ಹೇಳುವುದಾದರೆ ಹಲ್‌ಕಟ್ ಯೋಜನೆ’ ಎಂಬ ಹನಿಗವನ ನೆನಪಾಗುತ್ತದೆ. ಜನಪರ ಯೋಜನೆಗಳು ಕಾಗದದಲ್ಲಿ ಮಾತ್ರವೇ ಇರದೆ ಕಾರ್ಯರೂಪಕ್ಕೂ ಬರಲಿ ಎಂಬ ಆಶಯ ಮತ್ತು ನಿರೀಕ್ಷೆ ನಾಗರಿಕರದು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪೂರ್ವಸಿದ್ಧತಾ ಪರೀಕ್ಷೆ ಮುಂದೂಡಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೇಳಾಪಟ್ಟಿಯಂತೆ, ಇದೇ 23ರಿಂದ ಮಾರ್ಚ್‌ 1ರವರೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಯನ್ನು ನಿಗದಿಗೊಳಿಸಲಾಗಿದೆ. ಆದರೆ ಇದೇ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಿದ್ದು, ಇದು ಬಹುತೇಕ ನಡೆಯುವುದು ಶಾಲೆಗಳಲ್ಲಿ. ಹೀಗಿರುವಾಗ ಅಂದು ಪರೀಕ್ಷೆಯನ್ನು ಇಟ್ಟುಕೊಂಡರೆ ಅದರಿಂದ ದಿನಾಚರಣೆಯನ್ನು ಸಂಘಟಿಸಲು ಅಡ್ಡಿಯಾಗುತ್ತದೆ. ಈ ಕಾರಣದಿಂದ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಂದೂಡುವುದು ಅಪೇಕ್ಷಣೀಯ.

ಈ.ಬಸವರಾಜು, ಬೆಂಗಳೂರು

ನಾಡದೇವತೆಯ ಚಿತ್ರ: ಅವರವರ ಭಾವಕ್ಕಿರಲಿ

ರಾಜ್ಯ ಸರ್ಕಾರವು ನಾಡದೇವತೆಯ ಅಧಿಕೃತ ಹಾಗೂ ಪ್ರಮಾಣಿತ ಚಿತ್ರವನ್ನು ಘೋಷಿಸಿ ಆದೇಶ ಹೊರಡಿಸಿದೆ. ವಾಸ್ತವವಾಗಿ ‘ಅವರವರ ಭಾವಕ್ಕೆ ಅವರವರ ಭಕುತಿಗೆ’ ಅನ್ನುವಂತೆ ನಾಡದೇವಿಯ ಕಲ್ಪನೆ ಇದೆಯೇ ವಿನಾ ಸಾರ್ವತ್ರಿಕವಲ್ಲ. ಈ ಕಲ್ಪನೆಯನ್ನು ಅಧಿಕೃತಗೊಳಿಸುವುದು ಎಂದರೆ ಏನು? ಕನ್ನಡ ಸಾಹಿತ್ಯ ಪರಿಷತ್ತು ಬಿ.ಕೆ.ಎಸ್.ವರ್ಮ ಅವರ ಚಿತ್ರವನ್ನು ಒಪ್ಪಿ, ಈಗ ಅದರ ಪ್ರತಿಮೆಯನ್ನೇ ಸ್ಥಾಪಿಸಿದೆ. ಹೆಚ್ಚಿನ ಕನ್ನಡಿಗರು ಅದನ್ನು ಒಪ್ಪಿದ್ದಾರೆ. ಹೀಗಿರುವಾಗ, ಸರ್ಕಾರ ರೂಪಿಸಲಿರುವ ಚಿತ್ರವನ್ನೇ ಬಳಸಬೇಕು ಎಂದು ಕಡ್ಡಾಯ ಮಾಡಲು ಸಾಧ್ಯವೇ? ನಮ್ಮಲ್ಲಿ ಒಂದೇ ದೇವರಿಗೆ ಹಲವಾರು ದೇವಸ್ಥಾನಗಳಿವೆ. ಅಲ್ಲಿರುವ ವಿಗ್ರಹಗಳು ಒಂದೇ ರೀತಿ ಇಲ್ಲ, ವಿಭಿನ್ನವಾಗಿವೆ. ಹಾಗೇ ತಮಗೆ ಇಷ್ಟವಾದ ಕನ್ನಡ ಮಾತೆಯ ಚಿತ್ರವನ್ನು ಬಳಸುವ ಸ್ವಾತಂತ್ರ್ಯವನ್ನು ಕಸಿಯಲಾದೀತೆ?

ಎಷ್ಟೋ ಕನ್ನಡ ಕಾರ್ಯಕ್ರಮಗಳಲ್ಲಿ ನಾಡದೇವಿಯ ಚಿತ್ರವನ್ನು ಇಡುವುದಿಲ್ಲ, ಪೂಜೆಯನ್ನು ಮಾಡುವುದಿಲ್ಲ. ಇಷ್ಟಕ್ಕೂ ಕನ್ನಡಿಗರು ಎಂದೂ ಕೇಳದ ಕನ್ನಡಾಂಬೆಯ ಅಧಿಕೃತ ಚಿತ್ರವನ್ನು ರೂಪಿಸುವ ಅಗತ್ಯವಾದರೂ ಏನಿತ್ತು? ಇದರಿಂದ ಕನ್ನಡಿಗರಿಗಾಗಲಿ, ಕನ್ನಡಕ್ಕಾಗಲಿ ಏನೂ ಉಪಯೋಗವಾಗುವುದಿಲ್ಲ. ಈ ಆದೇಶವನ್ನು ಹೊರಡಿಸುವ ಬದಲು ಪರಿಷ್ಕೃತ ಮಹಿಷಿ ವರದಿಗೆ ಕಾನೂನು ಬಲ ನೀಡಿದ್ದರೆ, ಕನ್ನಡಿಗರಿಗೆ ಕೆಲಸ ಸಿಗುವ ಸಾಧ್ಯತೆಯಾದರೂ ಹೆಚ್ಚುತ್ತಿತ್ತು. ಈ ದಿಸೆಯಲ್ಲಿ ಸರ್ಕಾರವು ಕನ್ನಡ ಭಾಷಾ ಕಾಯ್ದೆ ಮತ್ತು ಪರಿಷ್ಕೃತ ಮಹಿಷಿ ವರದಿಯನ್ನು ಈ ಬಜೆಟ್ ಅಧಿವೇಶನದಲ್ಲಿ ಮಂಡಿಸಿ ಅವುಗಳಿಗೆ ಕಾನೂನು ಬಲ ನೀಡುವ ಕೆಲಸವನ್ನು ಮಾಡಲಿ.

ರಾ.ನಂ.ಚಂದ್ರಶೇಖರ, ಬೆಂಗಳೂರು

ಯಾರ ಮೇಲೆ ನಂಬಿಕೆ ಇಡಬೇಕು?

ಸ್ವತಃ ಅಜ್ಜನೇ ಮೊಮ್ಮಗಳ ಮೇಲೆ ವರ್ಷಾನುಗಟ್ಟಲೆಯಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಾ ಬಂದ ಸುದ್ದಿ ತಿಳಿದು (ಪ್ರ.ವಾ., ಫೆ. 8) ಆಘಾತವಾಯಿತು. ಎಲ್ಲಾ ತಿಳಿವಳಿಕೆ ಇರುವ ಅಜ್ಜನೇ ಮಾನವೀಯತೆ ಮರೆತು ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡುವುದಾದರೆ ಹೆಣ್ಣುಮಕ್ಕಳು ಇನ್ನು ಯಾರ ಮೇಲೆ ನಂಬಿಕೆ ಇಡಬೇಕು?

ಮನೆ, ಕೆಲಸ ಮಾಡುವ ಸ್ಥಳ, ಸಾರ್ವಜನಿಕ ಸ್ಥಳ, ಎಲ್ಲಿ ಹೋದರೂ ಅವಳಿಗೆ ಲೈಂಗಿಕ ಕಿರುಕುಳ ತಪ್ಪಿದ್ದಲ್ಲ. ಇಂತಹ ದೌರ್ಜನ್ಯವನ್ನು ನಿಗ್ರಹಿಸಲು ಸರ್ಕಾರ ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು. ಅವಳನ್ನು ಸದೃಢ ಮಾಡುವ ಕಾರ್ಯಯೋಜನೆ ಜಾರಿಗೊಳಿಸಬೇಕು.

-ನೇಹಾ ಸಜ್ಜನ, ಮಾಲಗತ್ತಿ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT