ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಶಾಲೆಗಳು ಕಳೆಗಟ್ಟಬಹುದು, ಕಲರವ ಕೇಳಬಹುದು

Published 31 ಮೇ 2023, 19:46 IST
Last Updated 31 ಮೇ 2023, 19:46 IST
ಅಕ್ಷರ ಗಾತ್ರ

ಶಾಲೆಗಳು ಕಳೆಗಟ್ಟಬಹುದು, ಕಲರವ ಕೇಳಬಹುದು

ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭವಾದ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪ್ರಿಯ ಮಕ್ಕಳೇ, ಜ್ಞಾನ ದೇಗುಲಕ್ಕೆ ಬನ್ನಿ...’ ಎಂದು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದಿರುವುದು (ಪ್ರ.ವಾ., ಮೇ 31) ಸಂತೋಷದ ಸಂಗತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಸರ್ಕಾರಿ ಶಾಲೆ ಬಿಟ್ಟು, ಖಾಸಗಿ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕರು ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುವುದು ಪ್ರತಿಷ್ಠೆ ಎಂದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಶಾಲಾ ಕಟ್ಟಡಗಳು ಅನಾಥ ಸ್ಥಿತಿಯಲ್ಲಿವೆ.

ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಏಳನೆಯ ತರಗತಿಯವರೆಗೆ ವ್ಯಾಸಂಗ ಮಾಡಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತರಲು ಸರ್ಕಾರ ಮುಂದಾಗಲಿ. ಆಗ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಾಗಿ ಶಾಲೆಗಳು ಕಳೆಗಟ್ಟಬಹುದು, ಅಲ್ಲಿ ಮತ್ತೆ ಮಕ್ಕಳ ಕಲರವವನ್ನು ಕೇಳುವಂತೆ ಆಗಬಹುದು.

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ನಿಯಮದ ನಡುವೆಯೂ ಇರಲಿ ಮಾನವೀಯತೆ

ಸಾಗರಕ್ಕೆ ಬರಲು ಇತ್ತೀಚೆಗೆ ಸ್ನೇಹಿತರೊಬ್ಬರೊಂದಿಗೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಜೆ ಹಾಸನ- ಯಲ್ಲಾಪುರ ಬಸ್ ಹತ್ತಿದೆ. ನಿರ್ವಾಹಕರು ಬಂದು ಟಿಕೆಟ್ ಕೇಳಿದಾಗ ‘ಎರಡು ಸೀನಿಯರ್ ಸಿಟಿಜನ್ ಟಿಕೆಟ್‌ ಸಾಗರಕ್ಕೆ ಕೊಡಿ. ಆದರೆ ನಾನು ಸಾಗರಕ್ಕಿಂತ 15 ಕಿ.ಮೀ. ಹಿಂದೆ ಕಾಸ್ಪಾಡಿ ಎಂಬಲ್ಲಿ ಇಳಿಯುತ್ತೇನೆ. ನನಗೆ ಈಗ 82 ವರ್ಷ. ಸಾಗರದಿಂದ ಮತ್ತೆ ವಾಪಸ್‌ ಬರಲು ತೊಂದರೆಯಾಗುತ್ತದೆ’ ಎಂದು ಹೇಳಿದೆ. ಅದಕ್ಕೆ ನಿರ್ವಾಹಕರು ಚಾಲಕನನ್ನು ಕೇಳುವಂತೆ ತಿಳಿಸಿದರು. ಬಸ್‍ನಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ ನಾನು ಚಾಲಕನ ಬಳಿ ಹೋಗಿ ಅದೇ ರೀತಿ ಮನವಿ ಮಾಡಿದೆ. ಆದರೆ ಚಾಲಕ ಸ್ವಲ್ಪವೂ ಸ್ಪಂದಿಸದೆ ‘ಇಲ್ಲ, ಎಲ್ಲೂ ನಿಲ್ಲಿಸುವುದಿಲ್ಲ. ನೀವು ಸಾಗರದಲ್ಲೇ ಇಳಿದುಕೊಳ್ಳಿ’ ಎಂದು ಬಸ್ಸನ್ನು ಸಾಗರದಲ್ಲೇ ತಂದು ನಿಲ್ಲಿಸಿದರು.

ಕಾನೂನು ಜನರಿಗಾಗಿಯೇ ಇರುತ್ತದೆ. ಆದರೆ ನಿಯಮದ ನೆಪ ಹೇಳಿ ಮಾನವೀಯತೆಯನ್ನು ಮರೆಯಬಾರದು. ಅಂದು ನಾನು ಸಾಗರಕ್ಕೆ ಬರುವಾಗಲೇ ಕತ್ತಲಾಗುತ್ತಾ ಬಂದಿತ್ತು. ಪುನಃ 15 ಕಿ.ಮೀ. ವಾಪಸ್‌ ಹೋಗಬೇಕು. ಸ್ಥಳೀಯ ಬಸ್ ಆ ಸಮಯಕ್ಕೆ ಸಿಗುವುದೋ ಇಲ್ಲವೋ ಎಂಬ ಆತಂಕ ನನಗೆ. ಆಟೊ ಮಾಡಿಕೊಂಡು ಹೋಗೋಣವೆಂದರೆ ₹ 300 ಕೇಳುತ್ತಾರೆ. ಅಂತೂ ಯಾರೋ ಪರಿಚಿತರು ಸಿಕ್ಕ ಮೇಲೆ ಮನೆ ತಲುಪಿದೆ ಎನ್ನಿ. ಎಕ್ಸ್‌ಪ್ರೆಸ್ ಬಸ್ಸನ್ನು ಮಧ್ಯದಲ್ಲಿ ನಿಲ್ಲಿಸಬಾರದೆಂಬ ನಿಯಮವಿದೆ ಸರಿ. ಆದರೆ ನಿಯಮ ಅನುಸರಿಸುವಾಗ ಹಿರಿಯ ನಾಗರಿಕರು, ಮಹಿಳೆಯರ ಬಗ್ಗೆ ತುಸು ಮಾನವೀಯತೆ ಇರಲಿ. ಸಾರಿಗೆ ಅಧಿಕಾರಿಗಳು ತಮ್ಮ ನೌಕರರಿಗೆ ಈ ಬಗ್ಗೆ ಸೂಚನೆ ನೀಡಲಿ ಎಂಬ ಆಶಯ ನನ್ನದು.

-ಎಚ್.ವಿ.ರಾಮಚಂದ್ರರಾವ್, ಸಾಗರ


ಕಳೆದುಹೋಗುತ್ತಿದೆ ಪುಸ್ತಕ ಓದುವ ಕೌಶಲ

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಮೊದಲನೇ ಹಂತದ ಓದಿಗಾಗಿ 6ರಿಂದ 12ನೇ ತರಗತಿಯವರೆಗಿನ ಪುಸ್ತಕಗಳನ್ನು ಓದುವುದು ಕಡ್ಡಾಯ. ಕಾರಣ ಇಷ್ಟೇ, ಈ ಪುಸ್ತಕಗಳು ಸಾಮಾನ್ಯ ಜ್ಞಾನಕ್ಕೆ ಬುನಾದಿಯಿದ್ದಂತೆ. ಇವುಗಳನ್ನು ತಿರುವಿ ಹಾಕಿದ ನಂತರ ಎರಡನೇ ಹಂತದಲ್ಲಿ, ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಓದಿ ಪರೀಕ್ಷೆಗೆ ತಯಾರಾಗಬೇಕು. ಆದರೆ ಈಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವ ಬಹುತೇಕ ಪ್ರಶ್ನೆಗಳು ಪ್ರಮುಖ ಪರೀಕ್ಷಾ ಸಂಬಂಧಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಆಧರಿಸಿರುತ್ತವೆ. ಇದರಿಂದ ಸ್ಪರ್ಧಾರ್ಥಿಗಳು ಪುಸ್ತಕಗಳನ್ನು ಮರೆತು ಜಾಲತಾಣದಲ್ಲಿ ಸಂಶೋಧನೆಗೆ ಜೋತು ಬೀಳುತ್ತಿದ್ದಾರೆ.

ಇದೆಲ್ಲದರ ಮಧ್ಯೆ, ಸರ್ಕಾರಗಳು ಬದಲಾದಾಗ ಪಾಠಗಳನ್ನು ಬದಲಿಸುವ, ಹೊಸ ಪಾಠ ಸೇರ್ಪಡೆ ಮಾಡುವ ಓಲೈಕೆಯ ‘ಪಠ್ಯಸಹಿತ’ ರಾಜಕೀಯ ನಡೆಯುತ್ತಿರುವುದು ಶೋಚನೀಯ ಸಂಗತಿ. ಇದರಿಂದ ಬಹುತೇಕ ಸ್ಪರ್ಧಾರ್ಥಿಗಳು ಪುಸ್ತಕಗಳನ್ನು ಓದಬೇಕೋ ಬೇಡವೋ ಎನ್ನುವ ಗೊಂದಲದಿಂದ ಜಾಲತಾಣಕ್ಕೆ ಮತ್ತಷ್ಟು ದಾಸರಾಗುತ್ತಿದ್ದಾರೆ. ಪುಸ್ತಕ ಓದುವ ಕೌಶಲವನ್ನು ಕಳೆದುಕೊಳ್ಳುತ್ತಿದ್ದಾರೆ.

-ಬಸನಗೌಡ ಮಂಜುನಾಥಗೌಡ ಪಾಟೀಲ, ಯರಗುಪ್ಪಿ

ಇದು ಗಿಡ ನೆಡುವ ಸಮಯ...

ರಾಜ್ಯದಾದ್ಯಂತ ವ್ಯಾಪಕವಾಗಿ ಮಳೆ ಸುರಿಯಲಾರಂಭಿಸಿದೆ. ಈ ಸಂದರ್ಭದಲ್ಲಿ, ಖಾಲಿ ಇರುವ ಸರ್ಕಾರಿ ಭೂಮಿ, ಕಚೇರಿಗಳ ಆವರಣ, ನಾಶವಾದ ಕಾಡು, ಕಾಯ್ದಿಟ್ಟ ಅರಣ್ಯ ಪ್ರದೇಶ, ರಸ್ತೆ ಬದಿ, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವ ಹಾಗೂ ಅರಣ್ಯಗಳು, ರೈತರ ಜಮೀನಿನಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಕುರಿತು ಜನಜಾಗೃತಿ ಮೂಡಿಸಬೇಕು. ಕಾಡಿನಲ್ಲಿ ನಿರ್ಮಿಸಿದ ಚೆಕ್‌ಡ್ಯಾಂ ಕಾಡುಪ್ರಾಣಿ, ಪಕ್ಷಿಗಳ ದಾಹ ತಣಿಸುತ್ತದೆ. ರೈತರ ಭೂಮಿ, ಊರಿನ ಅಕ್ಕಪಕ್ಕ ಚೆಕ್‌ಡ್ಯಾಂ ನಿರ್ಮಿಸಿದರೆ ಅಂತರ್ಜಲ ಹೆಚ್ಚಾಗಿ ನೀರಿನ ಬವಣೆ ತಪ್ಪುತ್ತದೆ.

ಈಗಾಗಲೇ ವಾಯುಮಂಡಲದ ತಾಪಮಾನ ದಿನೇದಿನೇ ಏರುವ ಮೂಲಕ ಎಂತಹವರೂ ಭಯಂಕರ ಬಿಸಿಲಿನಿಂದ ಬಳಲುವಂತೆ ಆಗಿದೆ. ಹಳ್ಳಿಗಳನ್ನು ಪ್ರವೇಶಿಸುವ ಸ್ಥಳಗಳಲ್ಲಿ, ಊರಿನ ಮಧ್ಯಭಾಗದಲ್ಲಿ ಅರಳಿ ಮತ್ತು ಬೇವಿನ ಮರಗಳನ್ನು ಬೆಳೆಸುವುದು ಹಿಂದಿನಿಂದ ನಡೆದುಬಂದ ಪರಂಪರೆಯಾಗಿದೆ. ದೇವರಕಾಡು, ಮರಗಳ ತೋಪು ಎಂದೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಭಾರತೀಯರಾದ ನಾವು ಪ್ರಕೃತಿಯಲ್ಲಿಯೂ ದೈವವನ್ನು ಕಾಣುವ ಬಗೆ ವಿಶಿಷ್ಟವಾದುದು. ಈ ಮೂಲಕ ಪ್ರಕೃತಿಯ ಆರಾಧನೆಯನ್ನು ಮಾಡುವುದರಿಂದ ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಬರಗಾಲ ಬಂದಾಗ, ನೀರಿಗೆ ಹಾಹಾಕಾರ ಆದಾಗ ಬೊಬ್ಬೆ ಹೊಡೆಯುವ ಬದಲು, ಈಗ ಬೀಳುವ ಮಳೆ, ಹರಿಯುವ ನೀರಿಗೆ ಕಟ್ಟೆ ಹಾಕಿ ನಿಲ್ಲುವಂತೆ, ಭೂಮಿಯಲ್ಲಿ ಇಂಗುವಂತೆ ಮಾಡಿದರೆ ಭವಿಷ್ಯದಲ್ಲಿ ತಾಪಮಾನದಿಂದ, ನೀರಿನ ಬವಣೆಯಿಂದ ಮುಕ್ತಿ ಪಡೆಯಬಹುದು.

-ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು

ಹಳೆಯ ಪಠ್ಯಪುಸ್ತಕ ಜಾರಿಗೆ ಬರಲಿ

ಇತಿಹಾಸವನ್ನು ತಿರುಚಿ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವಂತಹ ಪರಿಷ್ಕೃತ ಪಠ್ಯಪುಸ್ತಕವನ್ನು ಜಾರಿಗೆ ತಂದಿದ್ದ ಬಿಜೆಪಿ ನೇತೃತ್ವದ ಸರ್ಕಾರವು ಸಾಹಿತಿಗಳು ಮತ್ತು ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಎದುರಿಸಿತ್ತು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ಸೂಕ್ತ ನಡೆಯೇ. ಆದರೆ ಈಗಾಗಲೇ ಮುದ್ರಣಗೊಂಡ ಪಠ್ಯಪುಸ್ತಕಗಳನ್ನೇ ಮುಂದುವರಿಸುವಂತೆ ಆಂಜನೇಯ ಎನ್. ಅವರು ಹೇಳಿರುವುದು (ಪ್ರ.ವಾ., ಮೇ 31) ಸೂಕ್ತವಲ್ಲ.

ದೇಶದ ಇತಿಹಾಸವನ್ನು ತಿರುಚಿ ಪರಿಷ್ಕರಿಸಿರುವ ಪಠ್ಯಪುಸ್ತಕ ಬದಲಾದಾಗ ಮಾತ್ರ ಇಂದಿನ ಯುವಪೀಳಿಗೆಯು ದೇಶದ ವಾಸ್ತವ ಇತಿಹಾಸವನ್ನು ಅರಿಯಲು ಸಾಧ್ಯ. ಈಗಾಗಲೇ ಮುದ್ರಣಗೊಂಡ ಪಠ್ಯಪುಸ್ತಕಗಳನ್ನು ಮುಂದುವರಿಸುವಂತೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದು ಶಾಶ್ವತ ಪಠ್ಯಪುಸ್ತಕ ಆಯೋಗವನ್ನು ರಚಿಸುವಂತೆ ಅವರು ಹೇಳಿರುವುದು ಕಾರ್ಯಗತಗೊಂಡರೆ, ಎರಡೂ ಸರ್ಕಾರಗಳ ನಡುವೆ ವ್ಯತ್ಯಾಸವೇ ಇಲ್ಲದಂತೆ ಆಗುತ್ತದೆ. ಅಂದರೆ, ಸರ್ಕಾರಗಳು ಪರಸ್ಪರ ಆಯೋಗಗಳನ್ನು ರಚಿಸಿಕೊಂಡು ತಮ್ಮ ಕಾರ್ಯ ಸಾಧಿಸಿಕೊಂಡಂತೆ ಆಗುತ್ತದೆ. ಆದ್ದರಿಂದ ಹಳೆಯ ಪಠ್ಯಪುಸ್ತಕವನ್ನೇ ಜಾರಿಗೆ ತರಲಿ, ಹೊಸ ಆಯೋಗ ರಚನೆಯ ಅಗತ್ಯವಿಲ್ಲ.

-ಎಲ್.ಚಿನ್ನಪ್ಪ, ಬೆಂಗಳೂರು‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT