ರಾಜ್ಯದ ಹಲವು ಹಳ್ಳಿಗಳಲ್ಲಿ ಈಗಲೂ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಕುಡಿಯುವ ನೀರಿಗೆ ಪಡಿಪಾಟಲು ಪಡಬೇಕಾಗಿರುವುದು ಶೋಚನೀಯ. ಮಳೆಗಾಲದಲ್ಲಿ ರೈತರು ಹೊಲದಲ್ಲಿ ಬಿದ್ದ ಮಳೆ ನೀರನ್ನು ಇಂಗುಗುಂಡಿ, ಕೃಷಿಹೊಂಡದಲ್ಲಿ ಸಂಗ್ರಹಿಸಬೇಕು ಮತ್ತು ಕೆರೆಗಳಲ್ಲಿ ಹೂಳು ತೆಗೆದು ಅವು ತುಂಬುವಂತೆ ನೋಡಿಕೊಳ್ಳಬೇಕು. ಇದರಿಂದ, ಮುಂದೆ ಬರಬಹುದಾದ ನೀರಿನ ಕೊರತೆಯನ್ನು ನೀಗಿಸಬಹುದು.
ಡಾ. ಎಚ್.ಆರ್.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ
ತರಕಾರಿ ದರ ಗಗನಕ್ಕೇರುತ್ತಿದ್ದು, ಗ್ರಾಹಕರ ಕೈಸುಡುತ್ತಿದೆ. ಜೂನ್ ಅಂತ್ಯ ಸಮೀಪಿಸಿದರೂ ವಾಡಿಕೆಯಂತೆ ಮುಂಗಾರು ಮಳೆ ಆಗದಿರುವುದು ಇದಕ್ಕೆ ಪ್ರಮುಖ ಕಾರಣ. 15 ಕೆ.ಜಿ ಟೊಮ್ಯಾಟೊ ದರ ₹ 1,000ದ ಗಡಿ ದಾಟಿದ್ದು, ಮುಂದೆ ಇನ್ನೂ ಹೆಚ್ಚಾಗುವ ಸಂಭವವಿದೆ. ನಮ್ಮ ರಾಜ್ಯದ ಟೊಮ್ಯಾಟೊಗೆ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆಯಿದ್ದು, ಅಲ್ಲಿಗೆ ಕಳುಹಿಸಲಾಗುತ್ತಿದೆ ಹಾಗೂ ವಿಶೇಷವಾಗಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶಕ್ಕೂ ರಫ್ತು ಮಾಡಲಾಗುತ್ತಿದೆ. ಟೊಮ್ಯಾಟೊ ದರ ಏರಲು ಇದು ಕೂಡ ಪ್ರಮುಖ ಕಾರಣ ಎನ್ನಲಾಗಿದೆ. ಇತರ ತರಕಾರಿಗಳ ಬೆಲೆಯೂ ಗ್ರಾಹಕರನ್ನು ಕಂಗಾಲಾಗಿಸಿದೆ. ಮಾರುಕಟ್ಟೆಗೆ ತರಕಾರಿ ಪೂರೈಕೆಯನ್ನು ಹೆಚ್ಚಿಸಲು ಮತ್ತು ದರ ನಿಯಂತ್ರಿಸಲು ಸಾಧ್ಯವಿರುವ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು.
ರಾಸುಮ ಭಟ್, ಚಿಕ್ಕಮಗಳೂರು
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯು ಇದೀಗ ಅದರ ಪರಾಮರ್ಶೆಗೆ ಹೊರಟಾಗ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ (ಪ್ರ.ವಾ., ಜೂನ್ 27). ಇದೇ ಸಂದರ್ಭದಲ್ಲಿ ‘ಕಾಂಗ್ರೆಸ್‌ನವರನ್ನು ನಾವೇ ಪಕ್ಷಕ್ಕೆ ಕರೆತಂದಿದ್ದು ಅವರ ಗಾಳಿ ಬೀಸಿದೆ. ಅದಕ್ಕೇ ಈಗ ಅನುಭವಿಸುತ್ತಿದ್ದೇವೆ’ ಎಂದು ಮಾರ್ಮಿಕ ಸತ್ಯವನ್ನೇ ನುಡಿದಿದ್ದಾರೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ. ನಿಜ, ತಮ್ಮದು ಶಿಸ್ತು ಮತ್ತು ಸೈದ್ಧಾಂತಿಕ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ, ಅಧಿಕಾರದ ಆಸೆಗೆ ಬಿದ್ದಾಗ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ... ಹೀಗೆ ಯಾರು ಸಿಗುತ್ತಾರೋ ಅವರನ್ನೆಲ್ಲ ಪಕ್ಷಾಂತರ ಮಾಡಿಸಿ, ಅನೈತಿಕ ರಾಜಕೀಯಕ್ಕೆ ಮುನ್ನುಡಿ ಬರೆಯಿತು. ಇದಕ್ಕೆ ಆಪರೇಷನ್ ಕಮಲ ಎಂದು ಹೆಸರಿಟ್ಟು ಜನತಾಂತ್ರಿಕ ಮೌಲ್ಯವನ್ನೇ ಅಣಕಿಸಿತು. ಮತದಾರರು ಬಿಜೆಪಿಯ ಈ ಕ್ರಿಯೆಯನ್ನು ನಮ್ಮ ಪ್ರಜಾಪ್ರಭುತ್ವದ ಬಹುದೊಡ್ಡ ಮೌಲ್ಯಕ್ಕೆ ನೀಡಿದ ಕೊಡಲಿ ಪೆಟ್ಟು ಎಂದೇ ಪರಿಭಾವಿಸಿದರು.
ಹೀಗೆ ಏನಕೇನ ಪ್ರಕಾರೇಣ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ ನಂತರವೂ ಜನಪರ ಆಡಳಿತ ನೀಡದೆ, ಬರೀ ಪಠ್ಯ ಪರಿಷ್ಕರಣೆ ಅವಾಂತರ, ಪಡಿತರ ವಿತರಣೆಯಲ್ಲಿ ಅಕ್ಕಿ ಕಡಿತ, ಗುತ್ತಿಗೆಯಲ್ಲಿ ಭಷ್ಟಾಚಾರ... ಹೀಗೆ ಸಾಲು ಸಾಲು ಜನವಿರೋಧಿ ಹಗರಣಗಳಲ್ಲಿ ಮುಳುಗಿಹೋಯಿತು. ಹೀಗಾಗಿ ಮತದಾರರ ಪ್ರತಿಕ್ರಿಯೆಯಾಗಿ ಚುನಾವಣೆಯಲ್ಲಿ ಸೋತುಹೋಯಿತು. ಮಾಡಿದ್ದುಣ್ಣೋ ಮಾರಾಯ ಎಂಬ ಗಾದೆ ಮಾತೇ ಇದೆಯಲ್ಲ...!
ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ಬೆಂಗಳೂರು– ಧಾರವಾಡದ ನಡುವೆ ಸಂಚಾರ ಆರಂಭಿಸಿರುವ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿನ ವಿವರಗಳು ಪ್ರಕಟಗೊಂಡಿವೆ. ಸದರಿ ರೈಲುಯಾನದ ಪ್ರಯಾಣದರ ವಿಪರೀತ ಎನಿಸುತ್ತದೆ. ವಿಚಿತ್ರವೆಂದರೆ, ಬೆಂಗಳೂರಿನಿಂದ ಧಾರವಾಡಕ್ಕೆ ಎಸಿ ಚೇರ್ ಕಾರ್ ₹ 1,165 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ₹ 2,010 ಇದೆ. ಅದೇ ವಾಪಸ್ ಬರುವಾಗ ಕ್ರಮವಾಗಿ ₹ 2,110 ಮತ್ತು ₹ 2,440 ಇದೆ. ಈ ರೀತಿ ದರದ ತಾರತಮ್ಯ ಏಕೆ? ಎರಡೂ ದಿಕ್ಕಿನ ಪ್ರಯಾಣದರ ಒಂದೇ ಇರುವುದು ಒಳಿತು. ಜೊತೆಗೆ, ಬೆಂಗಳೂರು ನಿಲ್ದಾಣದಿಂದ ಬರೀ ಏಳೆಂಟು ಕಿ.ಮೀ. ದೂರದ ಪ್ರಯಾಣಕ್ಕೆ ₹ 410 ದರವಿದೆ. ಅದೇ ಧಾರವಾಡದಿಂದ ಹುಬ್ಬಳ್ಳಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರವಿದ್ದು, ಅದರ ಪ್ರಯಾಣದರವೂ ₹ 410 ಆಗಿದೆ. ಯಾವ ಲೆಕ್ಕಾಚಾರ ಮತ್ತು ಆಧಾರದ ಮೇಲೆ ಈ ರೀತಿ ದರಗಳನ್ನು ನಿಗದಿ ಮಾಡಲಾಗುತ್ತದೆ? ಒಟ್ಟಾರೆ ದರವು ಪ್ರಯಾಣಿಕರು ‘ಹಿಂದೆ’ ಸರಿಯುವಂತೆ ಇರದೆ ‘ಮುಂದೆ’ ಬರುವಂತೆ ಇರಲಿ.
ಪತ್ತಂಗಿ ಎಸ್. ಮುರಳಿ, ಬೆಂಗಳೂರು
ನಾನು ಪತ್ನಿ ಸಮೇತ ಮಂಡ್ಯದಿಂದ ಕೊಪ್ಪಳಕ್ಕೆ ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಬರಬೇಕಿತ್ತು. ನಮ್ಮದು ಬಿ3 ಎ.ಸಿ ಬೋಗಿಯಾಗಿದ್ದು ನಾವು 3ನೇ ಅಂಕಣದಲ್ಲಿ ಕಾಯುತ್ತಿದ್ದೆವು. ನಾನು ಬೋಗಿಯ ಸ್ಥಳ ನಿಲುಗಡೆಯ ಮಾಹಿತಿ ಇರಬೇಕಿದ್ದ ಡಿಸ್‌ಪ್ಲೇ ಫಲಕದತ್ತ ನೋಡುತ್ತಿದ್ದೆ. ಅದು ಬರೀ ಎಂವೈಎ ಎಂದುಮಾತ್ರ ತೋರಿಸುತ್ತಿತ್ತು! ನಾನು ಗೊಂದಲಕ್ಕೆ ಒಳಗಾಗುವಷ್ಟರಲ್ಲಿ ರೈಲು ಬಂದೇಬಿಟ್ಟಿತು. ಇಬ್ಬರೂ ಓಡಿ ನಮ್ಮ ಬೋಗಿಯನ್ನು ಹುಡುಕುತ್ತಾ ಹೊರಟೆವು. ನಂತರ ರೈಲು ಬಿಡುವ ಸೂಚನೆ ಸಿಕ್ಕ ಕೂಡಲೇ ಸಿಕ್ಕ ಬೋಗಿಯನ್ನು ಅಂಥ ರಷ್‌ನಲ್ಲೇ ಜಾಗ ಮಾಡಿಕೊಂಡು ಹತ್ತಿದೆವು. ಲಗೇಜ್ ಹಿಡಿದುಕೊಂಡು ಬೋಗಿ ಹುಡುಕುತ್ತಾ ಮುಂದೆ ಮುಂದೆ ಹೊರಟೆವು. ಕಷ್ಟಪಟ್ಟು 5ನೇ ನಂಬರಿನ ಬೋಗಿಗೆ ಬಂದ ನಂತರ ತಿಳಿಯಿತು, ನಮ್ಮ ಬೋಗಿ ಹಿಂದೆ ಇದೆ ಎಂದು! ಸರಿ ಮತ್ತೆ ಹಿಂದಕ್ಕೆ ನೂಕು ನುಗ್ಗಲಿನಲ್ಲಿ ನುಗ್ಗುತ್ತಾ ಹತ್ತು ಬೋಗಿಗಳಷ್ಟು ಹಿಂದೆ ಬಂದರೂ ನಮ್ಮ ಬೋಗಿ ಸಿಕ್ಕಲೇ ಇಲ್ಲ. ಅಷ್ಟರಲ್ಲಿ ಮದ್ದೂರು ನಿಲ್ದಾಣ ಬಂತು. ಇಳಿದು ಮತ್ತೆ ಎರಡು ಬೋಗಿಗಳನ್ನು ದಾಟಿದ ನಂತರ ನಮ್ಮ ಬೋಗಿ ಸಿಕ್ಕಿತು. ಆದರೆ ಅಲ್ಲಿನ ಪ್ರಯಾಣಿಕರೋ ಒಳಗೆ ಬಾಗಿಲು ಹಾಕಿಕೊಂಡು ಅಡ್ಡಡ್ಡ ಮಲಗಿಬಿಟ್ಟಿದ್ದರು! ಬಾಗಿಲನ್ನು ಬಡಿದು ಬಡಿದು ತೆರೆಸುವಷ್ಟರಲ್ಲಿ ರೈಲು ಹೊರಟಿತು. ಓಡುವ ರೈಲನ್ನೇ ಲಗೇಜು ಸಮೇತ ಹತ್ತುವಷ್ಟರಲ್ಲಿ ಸಾಕು ಸಾಕಾಯಿತು.
ರೈಲ್ವೆ ಇಲಾಖೆ ಡಿಸ್‌ಪ್ಲೇ ಫಲಕದಲ್ಲಿ ಬೋಗಿಯ ನಿಲುಗಡೆ ಮಾಹಿತಿಯನ್ನು ಸರಿಯಾಗಿ ತೋರಿಸದೇ ಇದ್ದುದು ಎಷ್ಟು ಸರಿ? ಮಂಡ್ಯ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಡಿಸ್‌ಪ್ಲೇ ಫಲಕ ಸರಿಪಡಿಸಲಿ.
ವೀರೇಶ ಬಂಗಾರಶೆಟ್ಟರ, ಕುಷ್ಟಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.