ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಂದಿ ಮುದ್ರಿಕೆಯೇ ಸೂಕ್ತ

Published 29 ಮೇ 2023, 22:18 IST
Last Updated 29 ಮೇ 2023, 22:18 IST
ಅಕ್ಷರ ಗಾತ್ರ

ನಂದಿ ಮುದ್ರಿಕೆಯೇ ಸೂಕ್ತ

ಹೊಸ ಸಂಸತ್‌ ಭವನದಲ್ಲಿ ಸ್ಥಾಪನೆಯಾಗಿರುವ ರಾಜದಂಡ ‘ಸೆಂಗೋಲ್‌’ನ ನೆತ್ತಿಯಲ್ಲಿ ನಂದಿ ವಿಗ್ರಹದ ಬದಲು ರಾಷ್ಟ್ರಲಾಂಛನವಾದ ನಾಲ್ಕು ಸಿಂಹಗಳ ಮುದ್ರಿಕೆಯನ್ನು ಅಳವಡಿಸುವುದು ಅರ್ಥಪೂರ್ಣ ಎಂದು ಡಾ. ಟಿ.ಗೋವಿಂದರಾಜು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಮೇ 27). ಸೆಂಗೋಲ್‌ನಲ್ಲಿ ಈಗಾಗಲೇ ನಂದಿ ವಿಗ್ರಹವನ್ನು ಅಳವಡಿಸಿರುವುದು ಅತ್ಯಂತ ಸೂಕ್ತವಾಗಿದೆ. ನಂದಿ ಮುದ್ರಿಕೆ ಭಾರತದ ಪ್ರಾಚೀನ ನಾಗರಿಕತೆ, ಸಂಸ್ಕೃತಿಯ ಪ್ರತೀಕ ಎನ್ನಬಹುದು. ಸಿಂಧೂ ನದಿಯ ನಾಗರಿಕರು ‘ನಂದಿ’ಯನ್ನು ಪವಿತ್ರ ಪಶು ಎಂದು ನಂಬಿದ್ದರು. ಅಷ್ಟೇ ಅಲ್ಲದೆ ಭಾರತ ದೇಶವು ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ಸಂಸ್ಕೃತಿಯನ್ನು ಹೊಂದಿದೆ. ರೈತರು ನಂದಿಯನ್ನು ಕೃಷಿಯ ಸಹಾಯಕ್ಕೆ ಬಳಸಿಕೊಂಡು ಬಂದಿದ್ದಾರೆ. ನಂದಿಗೆ ಪ್ರಮುಖ ಸ್ಥಾನ ನೀಡಿದ್ದಾರೆ. ರೈತರ ಪ್ರತೀಕವಾದ ನಂದಿಯು ದೇಶದ ಪ್ರತೀಕ ಆಗುವುದಾದರೆ ತಪ್ಪೇನು? ರಾಷ್ಟ್ರಲಾಂಛನವಾಗಿ ಸಿಂಹ ಇದ್ದೇ ಇದೆ.

–ಸಿ.ಸಿದ್ದರಾಜು ಆಲಕೆರೆ, ಮಂಡ್ಯ

***

ಇದೇ ನಿಜವಾದ ಸಮಾಜಶಾಸ್ತ್ರ...

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ದೇಶದ ಮೊದಲ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಇರುವುದನ್ನು ಅಕ್ಷಮ್ಯ ನಡೆ ಎಂದೇ ಪರಿಗಣಿಸಬೇಕಿದೆ. ಶ್ರೇಷ್ಠತೆಯ ಹುನ್ನಾರದ ಮನಸ್ಸುಗಳು ಇಲ್ಲಿ ಅಂತರ್ಗತವಾಗಿ ಕೆಲಸ ಮಾಡಿವೆ ಎಂದೇ ನಾವು ಭಾವಿಸಬೇಕಿದೆ. ಅಸ್ಪೃಶ್ಯತಾ ಮನೋಭಾವದ ಮನಸ್ಸುಗಳು ಸಮಾಜದಿಂದ ತೊಲಗದ ವಿನಾ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಬರಲಾರದು. ಈ ದಿಸೆಯಲ್ಲಿ ಪ್ರಜ್ಞಾವಂತ ಮನಸ್ಸುಗಳು ಚೌಕಾಸಿಯಿಲ್ಲದೆ ಸಮಾಜದ ತರತಮ ತೊಡೆದುಹಾಕಲು ಮುಂದಾಗಬೇಕಿದೆ. ಇದೇ ನಿಜವಾದ ಸಮಾಜಶಾಸ್ತ್ರವೆಂದು ಪರಿಗಣಿಸಬೇಕಿದೆ.

–ಹೊರೆಯಾಲ ದೊರೆಸ್ವಾಮಿ, ಮೈಸೂರು

***

ಸಂಸತ್‌ ಭವನ: ದಕ್ಷಿಣಕ್ಕೆ ಬೇಕಿತ್ತು ಆದ್ಯತೆ

ಈಗಾಗಲೇ ಸಂಸತ್ ಭವನ ಇರುವ ದೆಹಲಿಯಲ್ಲಿಯೇ ಮತ್ತೊಂದು ಸಂಸತ್ ಭವನ ನಿರ್ಮಿಸುವ ಅವಶ್ಯಕತೆ ಇರಲಿಲ್ಲ. ಹೊಸ ಭವನವನ್ನು ದಕ್ಷಿಣ ಭಾರತದ ಯಾವುದಾದರೂ ಒಂದು ಸ್ಥಳದಲ್ಲಿ ನಿರ್ಮಿಸಿದ್ದರೆ ದಕ್ಷಿಣದ ರಾಜ್ಯಗಳ ಸಮಸ್ಯೆಗಳನ್ನು ಚರ್ಚಿಸಲು ಸೂಕ್ತವಾಗುತ್ತಿತ್ತು. ಭಾರತಕ್ಕೆ ಮುಂಗಾರು ಬರುವುದು ಮೊದಲು ದಕ್ಷಿಣ ಭಾರತದ ರಾಜ್ಯಗಳಲ್ಲಿ. ಆದ್ದರಿಂದ ಮುಂಗಾರು ಅಧಿವೇಶನವನ್ನು ದಕ್ಷಿಣದ ಸಂಸತ್‌ ಭವನದಲ್ಲಿ ಮತ್ತು ಚಳಿಗಾಲದ
ಅಧಿವೇಶನವನ್ನು ದೆಹಲಿಯಲ್ಲಿ ನಡೆಸುವ ಮೂಲಕ ಋತುಮಾನ ಆಧಾರಿತವಾಗಿ, ಜೀವನೋಪಾಯದ ಸಮಸ್ಯೆಗಳಿಗೆ ಪರಿಹಾರ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧ್ಯವಾಗಿಸಬಹುದಿತ್ತು.

–ಕಲ್ಮೇಶ್ ಬಿರಾದಾರ, ವಿಜಯಪುರ

***

ಕ್ರಮ ಕೈಗೊಳ್ಳದಿರುವುದೇಕೆ?

ದೆಹಲಿಯ ನೂತನ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲು ಮುಂದಾದ ಕುಸ್ತಿಪಟುಗಳನ್ನು ಪೊಲೀಸರು ಬಲಪ್ರಯೋಗ ನಡೆಸಿ ತಡೆದದ್ದು ಖಂಡನೀಯ. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಒಳಗೆ ಭಾಷಣ ಮಾಡುತ್ತಾ, ಪುರೋಹಿತರ ಜೊತೆಯಲ್ಲಿದ್ದರೆ, ಹೊರಗೆ, ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಪಾಡಿದ ಕುಸ್ತಿಪಟುಗಳು ಮತ್ತು ಪೊಲೀಸರ ನಡುವೆ ‘ಕುಸ್ತಿ’ ನಡೆಯುತ್ತಿತ್ತು. 

ಪೈಲ್ವಾನರಿಗೆ ನ್ಯಾಯ ಕೊಡಿಸಲು ಆಗದೇ ಇರುವುದು ಯಾಕೆಂಬ ಪ್ರಶ್ನೆ ಮೂಡುತ್ತಿದೆ‌. ಪ್ರಧಾನಿಗೆ ಇದು ಕಾಣುತ್ತಿಲ್ಲವೇ? ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರು ಬಿಜೆಪಿ ಸಂಸದ ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೇ? ಆದಷ್ಟು ಬೇಗ ಕುಸ್ತಿಪಟುಗಳಿಗೆ ನ್ಯಾಯ ದೊರಕಲಿ, ಪ್ರಜಾಪ್ರಭುತ್ವ ಗೆಲ್ಲಲಿ.

–ಪ್ರದೀಪ್ ಕೊಲ್ಪೆದಬೈಲ್, ಬೆಳ್ತಂಗಡಿ

***

ಮನೆ ಕಟ್ಟೋಕೆ ಮುಂಚೇನೆ...

ಬಿಜೆಪಿ ಶಾಸಕ ಆರ್.ಅಶೋಕ ಅವರು, ‘ನಾನು ಸಹ 200 ಯೂನಿಟ್‌ವರೆಗಿನ ವಿದ್ಯುತ್ ಬಿಲ್ ಕಟ್ಟುವುದಿಲ್ಲ. ನೀವೂ ಕಟ್ಟಬೇಡಿ. ಯಾರು ಫ್ಯೂಸ್ ತೆಗೆಯಲು ಬರುತ್ತಾರೊ ನೋಡೋಣ’ ಎಂದು ಪ್ರಚೋದನಾತ್ಮಕ ಕರೆ ಕೊಟ್ಟಿರುವುದು (ಪ್ರ.ವಾ., ಮೇ 27) ಅರಾಜಕತೆಗೆ ಕಾರಣವಾಗುತ್ತದೆ.

‘ಮನೆ ಕಟ್ಟೋಕೆ ಮುಂಚೇನೆ ಇಲಿಗಳ ಅವಾಂತರ’ ಎನ್ನುವ ಹಾಗೆ ಆಗಿದೆ ಇದು. ಯಾವ ದಿನಾಂಕದಿಂದ ಈ ಹೊಸ ಗ್ಯಾರಂಟಿ ನಿಯಮ ಅನ್ವಯವಾಗುತ್ತದೆ ಎಂದಾದರೂ ಪ್ರಕಟಣೆ ಆಗಬೇಕಲ್ಲವೆ? ಅಲ್ಲಿಂದಾಚೆಗಿನ ವಿದ್ಯುತ್ ಶುಲ್ಕ ಕಟ್ಟುವುದರ ಅಗತ್ಯ ಇಲ್ಲ ಎಂಬ ಅಂಶ ಎಂತಹ ಸಾಮಾನ್ಯನಿಗೂ ಅರ್ಥವಾಗುವಂತಹುದು. ಈಗಲೇ ಕಟ್ಟಬೇಡಿ ಎಂದು ಚಿತಾವಣೆ ಮಾಡುವುದು ರಾಜಕಾರಣದಲ್ಲಿನ ಪರಿಪಕ್ವತೆಯ ಲೋಪದ ಸೂಚಕವಾಗುತ್ತದೆ.

‘ಒಂದುವೇಳೆ ವಿದ್ಯುತ್ ಬಿಲ್ ಕಟ್ಟಿದರೆ, ಬಸ್ ಟಿಕೆಟ್ ತೆಗೆದುಕೊಂಡರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಅವಮಾನ ಮಾಡಿದಂತಾಗುತ್ತದೆ’ ಎಂಬ ವ್ಯಂಗ್ಯದ ಮೂಲಕ ಮಾಡುವ ಪುಸಲಾವಣೆಯು ವಿರೋಧ ಪಕ್ಷದ ಶಕ್ತಿ, ಘನತೆಯನ್ನೇ ಕಳೆದುಬಿಡುತ್ತದೆ.

ಇವರು, ಒಬ್ಬೊಬ್ಬರ ಖಾತೆಗೆ ₹ 15 ಲಕ್ಷ ಹಾಕದಿದ್ದುದನ್ನು, ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗ ಕೊಡುವಲ್ಲಿ ವಿಫಲವಾದದ್ದನ್ನು, ಭ್ರಷ್ಟಾಚಾರವನ್ನು ನಾಲ್ಮಡಿಗೊಳಿಸಿದ್ದನ್ನು, ಕಪ್ಪುಹಣ ಹೊರತೆಗೆಯುವಲ್ಲಿ
ಸೋತದ್ದನ್ನು, ಒಂದು ಸಮುದಾಯದ ಜನ ಬದುಕಲಾಗದಂತೆ ಸತಾಯಿಸಿದ್ದನ್ನು, ಕೃಷಿ ಕಾಯ್ದೆ ಮತ್ತು ಗೋಹತ್ಯಾ ನಿಷೇಧದಿಂದ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದನ್ನು, ಬೆಲೆಯೇರಿಕೆಯಿಂದ ಬಡವರು ನರಳುವಂತೆ ಮಾಡಿದ್ದನ್ನು, ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಸಗಿದ ಹಲವು ಕೇಸರೀಕರಣದ ಹುಚ್ಚಾಟಗಳನ್ನು, ಮೀಸಲಾತಿಯ ಎಡವಟ್ಟುಗಳನ್ನು, ಉರಿಗೌಡ ಮತ್ತು ನಂಜೇಗೌಡರ ಕಪೋಲಕಲ್ಪನೆಗಳನ್ನು, ಶಾಸಕರ ಸಾಮೂಹಿಕ ಪಕ್ಷಾಂತರದಿಂದ ಗದ್ದುಗೆ ಗಟ್ಟಿಗೊಳಿಸಿಕೊಂಡದ್ದನ್ನು ಜನ ಇನ್ನೂ ಮರೆತಿಲ್ಲ! ಆದ್ದರಿಂದ ಹೀಗೆ ಗೊತ್ತು ಗುರಿಯಿಲ್ಲದೆ ಕಲ್ಲೆಸೆಯುವ ಬದಲು, ಸರ್ಕಾರದ ಮೇಲೆ ಹದ್ದುಗಣ್ಣಿಟ್ಟು ಅವರ ಗಂಭೀರವಾದ ಲೋಪಗಳನ್ನು ಎತ್ತಿ ತೋರಿಸಿ ಕಾಂಗ್ರೆಸ್ಸಿಗರ ಜಂಘಾಬಲವೇ ಉಡುಗುವ ಹಾಗೆ ಮಾಡಬಹುದು. ಆಗ ಸರ್ಕಾರವೂ ವಿರೋಧ ಪಕ್ಷಕ್ಕೆ ಹೆದರಿ ಹೆಜ್ಜೆ ಹಾಕುವುದರಿಂದ ಕರ್ನಾಟಕಕ್ಕೆ ಮಾದರಿ ಆಡಳಿತ ಲಭ್ಯವಾದೀತು!

–ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT