ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 1 ಅಕ್ಟೋಬರ್ 2023, 23:40 IST
Last Updated 1 ಅಕ್ಟೋಬರ್ 2023, 23:40 IST
ಅಕ್ಷರ ಗಾತ್ರ

ಕವನ: ಮೂರ್ತಿ– ಕೀರ್ತಿ

ಇಂದು, ಗಾಂಧೀಜಿ, ಶಾಸ್ತ್ರೀಜಿ
ಇಬ್ಬರದೂ ಜಯಂತಿ,
ಗಾಂಧಿ ಮಹಾತ್ಮ
ಸರಳತೆಯ 
ಸಾಕಾರಮೂರ್ತಿ,
ಲಾಲ್ ಬಹದ್ದೂರ್ ಶಾಸ್ತ್ರಿ
ಪ್ರಾಮಾಣಿಕತೆಗೇ 
ತಂದರು ಕೀರ್ತಿ.

ಮ.ಗು.ಬಸವಣ್ಣ, ನಂಜನಗೂಡು

***

ಉಪಪಂಗಡಗಳ ಬಗ್ಗೆ ಕಾಳಜಿ ವಹಿಸಿ

‘ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳ ಸ್ಥಿತಿ ಈಗ ನಾಯಿಪಾಡಾಗಿದೆ. ತಮ್ಮ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾಗ ಅವರಿಗೆ ಆಯಕಟ್ಟಿನ ಸ್ಥಾನ ಸಿಗುತ್ತಿತ್ತು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ (ಪ್ರ.ವಾ., ಸೆ. 30). ಆಯಕಟ್ಟಿನ ಸ್ಥಾನ ಎಂದರೆ ಏನು? ಅವು ದಿನನಿತ್ಯ ನೋಟುಗಳನ್ನು ಎಣಿಸುವ ಗಲ್ಲಾಪೆಟ್ಟಿಗೆಗಳು ಇದ್ದಂತೆಯೇ? ಅಂದರೆ, ಇವರು ಭ್ರಷ್ಟ ಅಧಿಕಾರಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದರ್ಥವೇ?

ಯಾವ ಜಾತಿಯವರು ಅಧಿಕಾರಕ್ಕೆ ಬಂದರೂ ಅವರನ್ನು ಸುತ್ತುವರಿಯುವುದು ಆಯಾ ಜಾತಿಯ ಭ್ರಷ್ಟ ಅಧಿಕಾರಿಗಳು ಮತ್ತು ದಲ್ಲಾಳಿಗಳು ಮಾತ್ರ. ಮಹಾಸಭೆ ಸ್ಥಾಪನೆಯಾಗಿರುವುದು ಲಿಂಗಾಯತ ಧರ್ಮದಲ್ಲಿರುವ ಕುಲಕಸುಬುದಾರರು ಮತ್ತು ಕಾಯಕಜೀವಿಗಳ ಏಳಿಗೆಗಾಗಿಯೇ ವಿನಾ ಅಧಿಕಾರಿಗಳ ಹಿತರಕ್ಷಣೆಗಾಗಿ ಅಲ್ಲ. ಲಿಂಗಾಯತರು ಎಂದರೆ ಅದೊಂದು ಒಕ್ಕೂಟ. ನೂರಕ್ಕೂ ಹೆಚ್ಚು ವಿವಿಧ ಉಪಪಂಗಡಗಳಿವೆ. ಲಿಂಗಾಯತ ಮಡಿವಾಳರು, ಲಿಂಗಾಯತ ಕುರುಬರು, ಲಿಂಗಾಯತ ಕುಂಬಾರರು, ಲಿಂಗಾಯತ ಹೂಗಾರರು, ಲಿಂಗಾಯತ ಮೇದರು, ಲಿಂಗಾಯತ ಕಮ್ಮಾರರು, ಲಿಂಗಾಯತ ಗಾಣಿಗರು, ಲಿಂಗಾಯತ ಕ್ಷೌರಿಕರು... ಹೀಗೆ ಒಂದು ದೊಡ್ಡ ಪಟ್ಟಿಯೇ ಇದೆ. ಅವರಲ್ಲಿ ಹೆಚ್ಚಿನವರ ಪರಿಸ್ಥಿತಿ ಹೀನಾಯವಾಗಿದೆ. ಅಂತಹವರ ಬಗ್ಗೆ ಮೊದಲು ಕಾಳಜಿ ವಹಿಸಬೇಕಾಗಿದೆ.

ಸಿ.ರುದ್ರಪ್ಪ, ಬೆಂಗಳೂರು

ಕಲಾವಿದರಿಂದ ನೈತಿಕ ಬೆಂಬಲ

ಕಾವೇರಿ ನೀರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ‘ಕರ್ನಾಟಕ ಬಂದ್‌’ಗೆ ಕನ್ನಡ ಚಿತ್ರರಂಗದವರು ಬೆಂಬಲ ನೀಡಿದ್ದು ಸರಿಯಷ್ಟೆ. ಈ ಸಾಂಕೇತಿಕ ಹೋರಾಟದ ನೇತೃತ್ವ ವಹಿಸಿದ್ದ ನಟ ಶಿವರಾಜ್‌ಕುಮಾರ್ ಅವರು ಮಾತನಾಡುತ್ತಾ, ‘ಕಲಾವಿದರು ಹೋರಾಟಕ್ಕೆ ಇಳಿದ ತಕ್ಷಣ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು ಹೇಳಿರುವುದು ಸರಿಯಲ್ಲ. ಭಾಷಾ ನೀತಿಗೆ ಸಂಬಂಧಿಸಿದಂತೆ ಎಂಬತ್ತರ ದಶಕದಲ್ಲಿ ನಡೆದ ಗೋಕಾಕ್‌ ಚಳವಳಿಯು ಬರೀ ಕೆಲವು ಸಾಹಿತಿಗಳಿಂದ ಶುರುವಾಯಿತು. ಯಾವಾಗ ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್‌ಕುಮಾರ್ ನೇತೃತ್ವ ವಹಿಸಿಕೊಂಡರೋ ಆಗ ಈ ಚಳವಳಿಯಲ್ಲಿ ಸಂಚಲನ ಮೂಡಿತಲ್ಲದೆ ಅದೊಂದು ಮಾದರಿ ಚಳವಳಿಯಾಗಿ ಇತಿಹಾಸವನ್ನೇ ನಿರ್ಮಿಸಿತು. ನೆಲ, ಜಲ, ಭಾಷೆಯಂತಹ ಭಾವನಾತ್ಮಕ ವಿಷಯಗಳಲ್ಲಿ ಕಲಾವಿದರ ಭಾಗವಹಿಸುವಿಕೆಯು ನಿಜಕ್ಕೂ ನೈತಿಕ ಬೆಂಬಲವನ್ನು ತಂದುಕೊಡುತ್ತದೆ.

ಎಂ.ಜೆ.ಅಭಿಷೇಕ್, ಬೆಂಗಳೂರು

ಆಹಾರವೇ ಕಲುಷಿತ ಆಗಿರುವಾಗ...

ದೇಶದಲ್ಲಿ ಐದು ವರ್ಷದವರೆಗಿನ 43 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಸ್ಥೂಲಕಾಯದವರು, ಇದರ ಜೊತೆಗೆ ತೀವ್ರ ಹಾಗೂ ಮಧ್ಯಮ ಪ್ರಮಾಣದ ಅಪೌಷ್ಟಿಕತೆ ಇರುವ ಮಕ್ಕಳೂ ಅಷ್ಟೇ ಪ್ರಮಾಣದಲ್ಲಿ ಇರುವುದನ್ನು ವಿವರಿಸಿರುವ ಡಾ. ಕೆ.ಎಸ್.ಚೈತ್ರಾ ಅವರ ಲೇಖನ (ಪ್ರ.ವಾ., ಸೆ. 30) ಓದಿ, ಮಕ್ಕಳ ಭವಿಷ್ಯದ ಬಗ್ಗೆ ಗಾಬರಿಯಾಯಿತು. ನಮ್ಮ ಬಾಲ್ಯದಲ್ಲಿ ಈಗಿನಂತೆ ಜಂಕ್‌ಫುಡ್‌ಗಳ ಹಾವಳಿ ಇರಲಿಲ್ಲ. ಸಂತೆಗೆ ಹೋದಾಗ ಗೆಣಸು ತಂದು ಬೇಯಿಸಿ ಕೊಡುತ್ತಿದ್ದರು. ಮನೆಯಲ್ಲಿ ರೊಟ್ಟಿ ಸೀಕಲು ಧಾರಾಳವಾಗಿ ಸಿಗುತ್ತಿತ್ತು. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸಹಜವಾಗಿ ಸಿಗುತ್ತಿದ್ದವು. ಬೆಳಗಿನ ಉಪಾಹಾರಕ್ಕೂ ಮಧ್ಯಾಹ್ನದ ಊಟಕ್ಕೂ ವ್ಯತ್ಯಾಸವೇನೂ ಇರುತ್ತಿರಲಿಲ್ಲ. ಅದೇ ಅನ್ನ, ಸಾರು, ಮುದ್ದೆ ತಿನ್ನಬೇಕಾಗಿತ್ತು. ಒಳಕಲ್ಲು, ಬೀಸುವ ಕಲ್ಲು, ಹಸೆಕಲ್ಲಿಗೆ ಬಿಡುವಿಲ್ಲದ ಕೆಲಸವಿತ್ತು. ಪ್ರತಿ ಊರಲ್ಲೂ ಎಣ್ಣೆ ತೆಗೆಯುವ ಗಾಣ, ಬೆಲ್ಲ ತೆಗೆಯುವ ಆಲೆಮನೆಗಳಿದ್ದವು. ರಾಗಿ, ಭತ್ತದ ಜೊತೆಗೆ ಆರಕ, ಸಜ್ಜೆ, ನವಣೆ, ಜೋಳದಂತಹ ಧಾನ್ಯಗಳೂ ಇರುತ್ತಿದ್ದವು.

ಈಗ ಎಲ್ಲವೂ ಬದಲಾಗಿವೆ. ಮನೆ, ಹೋಟೆಲ್, ಬೇಕರಿಗಳಲ್ಲಿ ಮೈದಾ, ಡಾಲ್ಡಾ, ಸೋಡ, ಸಕ್ಕರೆ, ರಿಫೈನ್ಡ್ ಆಯಿಲ್, ಮಸಾಲೆಯುಕ್ತ ಪದಾರ್ಥಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಆಹಾರಪದಾರ್ಥ ಕೆಡದಂತಿರಲು ಬಳಸುವ ರಾಸಾಯನಿಕಗಳು ಸಲೀಸಾಗಿ ದೇಹ ಸೇರುತ್ತಿವೆ. ಈ ಅನಾಹುತ ತಡೆಯಲು ಸರ್ಕಾರ ಇಲ್ಲವೇ ಯಾವುದೇ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ಊಟದಲ್ಲಿ ಏನಿದೆ, ಏನಿಲ್ಲ, ಏನಿರಬೇಕು ಎಂಬ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಎಲ್ಲಕ್ಕೂ ವೈದ್ಯರ ಸಲಹೆ ಪಡೆಯುವುದು ಮತ್ತು ಔಷಧ ಸೇವನೆಗಾಗಿ ಬದುಕನ್ನು ಒಗ್ಗಿಸಿಕೊಂಡಾಗಿದೆ. ಆದ್ದರಿಂದ ನಾವೀಗ ಪ್ರಜ್ಞಾಪೂರ್ವಕವಾಗಿ ಸೂಕ್ತ ನಿದ್ದೆ, ಪೌಷ್ಟಿಕ ಆಹಾರ, ಅಗತ್ಯ ಪ್ರಮಾಣದಲ್ಲಿ ನೀರು ಸೇವನೆಯ ಜೊತೆಗೆ ಒತ್ತಡ ನಿಯಂತ್ರಣ ಕ್ರಮಗಳನ್ನೂ ಅಭ್ಯಾಸ ಮಾಡಬೇಕಾಗಿದೆ.
ತಾ.ಸಿ.ತಿಮ್ಮಯ್ಯ, ಬೆಂಗಳೂರು

ಹೂಳು ತೆಗೆಯಲು ಬೇಕು ಇಚ್ಛಾಶಕ್ತಿ

ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿನ ಕೆಲವು ಜಲಾಶಯಗಳು, ಕಾಲುವೆಗಳು ಮತ್ತು ತೊರೆಗಳು ಹೂಳಿನಿಂದ ಮುಚ್ಚಿಹೋಗಿರುವುದನ್ನು ತಿಳಿದು (ಆಳ– ಅಗಲ, ಪ್ರ.ವಾ., ಸೆ. 29) ಮನಸ್ಸಿಗೆ ಖೇದ, ನಿರಾಸೆಯಾಯಿತು. ಜೊತೆಗೆ, ಇದುವರೆಗೂ ನಮ್ಮನ್ನು ಆಳುತ್ತಾ ಬರುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯವೈಖರಿ ಕಂಡು ಜುಗುಪ್ಸೆಯೂ ಆಯಿತು. ಮಳೆಗಾಲದಲ್ಲಿ ಜಲಾಶಯಗಳು ತುಂಬಿ ಸುತ್ತಮುತ್ತಲಿನ ಕಾಡುಮೇಡು, ಗ್ರಾಮ, ಪಟ್ಟಣಗಳಿಗೆ ಪ್ರವಾಹವಾಗಿ ಹರಿದಾಗ, ಆ ಪ್ರದೇಶಗಳನ್ನು ಸರ್ಕಾರವು ಅತಿವೃಷ್ಟಿಪೀಡಿತ ಎಂದು ಘೋಷಿಸಬಹುದು. ಹಾಗೆಯೇ ಮಳೆ ಬಾರದೆ ಆ ಜಲಾಶಯಗಳ ನೀರು ಖಾಲಿಯಾಗಿ ಬರಡಾದಾಗ, ಅನಾವೃಷ್ಟಿಪೀಡಿತ ಪ್ರದೇಶವೆಂದು ಘೋಷಿಸಿ ರಾಜಕೀಯವಾಗಿ, ಸಾಮಾಜಿಕವಾಗಿ ಲೆಕ್ಕಾಚಾರದ ಪರಿಹಾರ ಘೋಷಿಸಬಹುದು ಎಂಬ ಸರಳ ಆಲೋಚನೆ ಇದರ ಹಿಂದೆ ಇರುವಂತೆ ಕಾಣುತ್ತದೆ!

ಎಲ್ಲ ಜಲಾಶಯಗಳಲ್ಲಿ ಸ್ವಾಭಾವಿಕವಾಗಿ ಬಂದು ಸೇರುವ ಹೂಳನ್ನು ಆಗಾಗ ವೈಜ್ಞಾನಿಕ ರೀತಿಯಲ್ಲಿ ತೆಗೆಯಲು ಸರ್ಕಾರಗಳು ದೃಢ ಹಾಗೂ ಸಾಮಾಜಿಕ ಬದ್ಧತೆಯಿಂದ ಕಾರ್ಯರೂಪಿಸಬೇಕು. ಅಂತಹ ಇಚ್ಛಾಶಕ್ತಿ ಪ್ರದರ್ಶಿಸಿದರೆ ಕಾವೇರಿ ನೀರಿಗಾಗಿ ವರ್ಷವರ್ಷವೂ ಬಡಿದಾಡುವ ಸ್ಥಿತಿ ಬರುವುದೇ? ನಮ್ಮ ರಾಜ್ಯದಲ್ಲಿ ನೀರಾವರಿ ತಜ್ಞರು ಮತ್ತು ಪರಿಣತ ಸಂಸ್ಥೆಗಳಿಗೆ ಬರವಿಲ್ಲ. ಆದರೂ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂತಹವರ ಸಹಾಯ ಪಡೆದು ಜಲಾಶಯಗಳಲ್ಲಿನ ಹೂಳಿನ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಜನಸಾಮಾನ್ಯರು ಭಾವಿಸಬೇಕಾಗುತ್ತದೆ. ಈಗಲಾದರೂ ಸರ್ಕಾರ ಇತ್ತ ಕಾರ್ಯೋನ್ಮುಖವಾಗಲಿ.

ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT