ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸಂವಿಧಾನ ಪೀಠಿಕೆ ಓದು: ನಡೆಯಲಿ ಅಭಿಯಾನ

Published 25 ಜನವರಿ 2024, 18:25 IST
Last Updated 25 ಜನವರಿ 2024, 18:25 IST
ಅಕ್ಷರ ಗಾತ್ರ

ಸಂವಿಧಾನ ಪೀಠಿಕೆ ಓದು: ನಡೆಯಲಿ ಅಭಿಯಾನ

ಗಣರಾಜ್ಯೋತ್ಸವ ಆಚರಣೆಯು ಭಾರತೀಯರ ಪಾಲಿಗೆ ಬಹಳ ಮುಖ್ಯವಾದುದು. ದೇಶವು ಪ್ರಜಾಪ್ರಭುತ್ವ
ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರೂ ಅದರ ಮೌಲ್ಯಗಳು ಕ್ರಮೇಣ ಕಣ್ಮರೆಯಾಗುತ್ತಿರುವುದು ದುರ್ದೈವ.
ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಸಾಗಬೇಕೆಂಬುದನ್ನು ಸಂವಿಧಾನವು ಸ್ಪಷ್ಟವಾಗಿ ಹೇಳಿದೆ. ಸಂವಿಧಾನ ಈ ದೇಶದ ಆತ್ಮ ಇದ್ದ ಹಾಗೆ. ಸಂವಿಧಾನದ ಆಶಯಗಳು ನಿಜವಾದ ಅರ್ಥದಲ್ಲಿ ಈಡೇರಿವೆಯೇ ಎಂಬುದನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಂವಿಧಾನವು ದಿಕ್ಸೂಚಿ, ದಾರಿದೀಪ ಇದ್ದ ಹಾಗೆ.   ರಾಜಕೀಯದಲ್ಲಿ ಇಂದು ಮೌಲ್ಯಗಳು ಮರೆಯಾಗುತ್ತಿವೆ. ಪ್ರಜೆಗಳು ಮತ್ತು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆತಿದ್ದಾರೆ. ಇದರಿಂದ ಹೊರಬಂದು ಜನರು ಉತ್ತಮ ನಾಗರಿಕರಾಗಬೇಕು. ಉತ್ತಮ ಸಮಾಜ ನಿರ್ಮಾಣವಾಗಬೇಕು.

ಕೆಲ ದಿನಗಳ ಹಿಂದೆ ಸರ್ಕಾರ ಆಯೋಜಿಸಿದ್ದ ‘ಸಂವಿಧಾನ ಪೀಠಿಕೆ ಓದು’ ವಿಶೇಷ ಅಭಿಯಾನವು ಶಾಲಾ ಕಾಲೇಜುಗಳಲ್ಲಿ ನಿಯಮಿತವಾಗಿ ನಡೆಯಬೇಕಾದುದು ಒಂದು ರಾಷ್ಟ್ರೀಯ ಅಗತ್ಯ. ಶಾಲಾ ಹಂತದಲ್ಲೇ ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಿದ್ದೇ ಆದಲ್ಲಿ, ಅವರು ಉತ್ತಮ ನಾಗರಿಕರಾಗುತ್ತಾರೆ. 

–ಪ್ರಸಾದ್‌ ಜಿ.ಎಂ., ಮೈಸೂರು

***

ಜನರೇ ತಿರಸ್ಕರಿಸಿ ಬುದ್ಧಿ ಕಲಿಸಲಿ

ಈ ಬಾರಿಯ ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿಯಿಂದ ಬಿಜೆಪಿ ಟಿಕೆಟ್ ನಿರಾಕರಿಸಲಾಯಿತು ಎಂದು ಕೋಪಗೊಂಡ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದು ಮತ್ತು ಆ ಪಕ್ಷದಿಂದ ಸ್ಪರ್ಧಿಸಿ ಸೋತು ಅದೇ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಆ ಸಂದರ್ಭದಲ್ಲಿ, ಬಿಜೆಪಿಯಿಂದ ನಾನಾ ಸ್ಥಾನಗಳನ್ನು ಅಲಂಕರಿಸಿ, ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದುದನ್ನೂ ಮರೆತು ಆ ಪಕ್ಷವನ್ನು ವಾಚಾಮಗೋಚರವಾಗಿ ನಿಂದಿಸಿದ್ದರು. ತದನಂತರ ವೈಭವೋಪೇತವಾಗಿ ಶೆಟ್ಟರ್ ಅವರನ್ನು ಕಾಂಗ್ರೆಸ್ ಬರಮಾಡಿಕೊಂಡಿತ್ತು.

ಈಗ ಅದೇ ಶೆಟ್ಟರ್ ಅವರು ಅದಾವ ಕಾರಣದಿಂದಲೋ ಏನೋ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ವಾಪಸಾಗಿದ್ದಾರೆ. ಬಿಜೆಪಿಯಿಂದ ಬಂದ ಶೆಟ್ಟರ್ ಅವರು ಚುನಾವಣೆಯಲ್ಲಿ  ಸೋತರೂ ಕಾಂಗ್ರೆಸ್ ಪಕ್ಷ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿತ್ತು. ಆ ಋಣವಾದರೂ ಕಾಂಗ್ರೆಸ್ ವಿಚಾರದಲ್ಲಿ ಇರಬೇಕಿತ್ತು. ಆದರೆ ಆ ಕನಿಷ್ಠ ನಿಷ್ಠೆಯನ್ನೂ ತೋರದೆ ಅವರು ಪಕ್ಷಾಂತರ ಮಾಡಿದ್ದಾರೆ. ಇಂತಹ ಇಬ್ಬಗೆಯ ಜನಪ್ರತಿನಿಧಿಗಳನ್ನು ಪಕ್ಷಗಳು ಹೇಗೆ ನಂಬುತ್ತವೋ? ಬರೀ ಆರೆಂಟು ತಿಂಗಳಿಗೇ ಪಕ್ಷಗಳನ್ನು ಅಂಗಿಯಂತೆ ಬದಲಾಯಿಸುತ್ತಾ ಸಾಗುವ ಇಂತಹವರಿಗೆ ಪಕ್ಷದ ಸಿದ್ಧಾಂತದಂತೆ ಕೆಲಸ ಮಾಡಲು ಸಾಧ್ಯವೇ? ಬರೀ ಅಧಿಕಾರಕ್ಕಾಗಿ ಪಕ್ಷಾಂತರಗೊಳ್ಳುವ ಇಂತಹವರನ್ನು ಜನರೇ ತಿರಸ್ಕರಿಸಿ ಬುದ್ಧಿ ಕಲಿಸಬೇಕು ಅಷ್ಟೆ. ಮೇಲಾಗಿ, ಚುನಾವಣಾ ಆಯೋಗ ಕೂಡ, ಪಕ್ಷದ ಸದಸ್ಯತ್ವ ಪಡೆದ ಆರು ವರ್ಷಗಳ ನಂತರವಷ್ಟೇ ಆ ಪಕ್ಷದ ವತಿಯಿಂದ ಚುನಾವಣೆಗೆ ಸ್ಪರ್ಧಿಸಲು ಅನುವಾಗುವಂತೆ ನಿಯಮ ತಂದಲ್ಲಿ ಪಕ್ಷಾಂತರದ ಇಂತಹ ಅಪಸವ್ಯಗಳಿಗೆ ಕಡಿವಾಣ ಬೀಳಬಹುದು.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

***

ಶ್ರದ್ಧೆ ಇದ್ದರೆ ಉಪವಾಸ ಸುಲಭ

‘ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ವ್ರತ ನಡೆಸಿದ್ದರು ಎನ್ನಲಾಗುತ್ತದೆ. ಆದರೆ, ಇಷ್ಟು ದಿನ ಉಪವಾಸ ಮಾಡಿದರೆ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ’ ಎಂಬ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ ಅವರ ಮಾತು ಒಪ್ಪತಕ್ಕದ್ದಲ್ಲ. ನಮ್ಮ ದೇಶದ ಅನೇಕ ಧಾರ್ಮಿಕ ಆಚರಣೆಗಳನ್ನು ಉಪವಾಸ ಇದ್ದುಕೊಂಡೇ ಆಚರಿಸಲಾಗುತ್ತದೆ ಎಂಬ ವಿಷಯ ಮೊಯಿಲಿ ಅವರಿಗೆ ಗೊತ್ತಿಲ್ಲವೇ? ಜೈನ ಸಮುದಾಯದಲ್ಲಿ ಉಪವಾಸದ ಕಠಿಣ ನಿಯಮಗಳಿವೆ.

ದಿಗಂಬರ ಜೈನ ಮುನಿಗಳು ತಿಂಗಳು ಅಥವಾ ಎರಡು ತಿಂಗಳಿಗೆ ಒಂದು ಬಾರಿ ಮಾತ್ರ ಆಹಾರ ಸ್ವೀಕರಿಸಿದ ಉದಾಹರಣೆಗಳಿವೆ. ಭಾದ್ರಪದ ಮಾಸದಲ್ಲಿ ಜೈನರು ಆಚರಿಸುವ ಷೋಡಶಕಾರಣ ಹಾಗೂ ದಶಲಕ್ಷಣ ಪರ್ವಗಳೆಂಬ ಹಬ್ಬಗಳಲ್ಲಿ ವ್ರತಧಾರಿಗಳು 16 ಅಥವಾ 11 ದಿನಗಳ ಉಪವಾಸ ಕೈಗೊಳ್ಳುತ್ತಾರೆ. ಇವರಲ್ಲಿ ದಿಗಂಬರ ಸಂಪ್ರದಾಯದವರು ಉಪವಾಸದ ಅವಧಿಯಲ್ಲಿ ಒಂದೇ ಒಂದು ಹನಿ ನೀರನ್ನೂ ಸೇವಿಸುವುದಿಲ್ಲ, ಶ್ವೇತಾಂಬರರಲ್ಲಿ ನೀರು ಮಾತ್ರ  ಸೇವನೆ ಮಾಡುತ್ತಾರೆ. ಉಪವಾಸ ಮಾಡುವುದು ಶ್ರದ್ಧೆ ಇರುವವರಿಗೆ ಸುಲಭವೇ ಆಗಿರುತ್ತದೆ.

–ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ

***

ರೈತರ ವಿಷಯದಲ್ಲಿ ‘ಜಾಣತನ’ ಸಲ್ಲ

ಬರ ಪರಿಹಾರದ ನೆರವು ಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೆಸರಿನಲ್ಲಿ ಜಂಟಿಯಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜ. 25). ರಾಜ್ಯ ವಿಧಾನಮಂಡಲವು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಸಹಿ ಮಾಡುತ್ತಿಲ್ಲವೆಂದು ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾರಂಭವಾಗಿರುವ ತಿಕ್ಕಾಟದಂತೆ, ಜಂಟಿ ಖಾತೆ ತೆರೆಸಿ ಹಣ ಬಿಡುಗಡೆ ಮಾಡಬೇಕೆನ್ನುವ ತೀರ್ಮಾನವೂ ಪರಸ್ಪರ ಸಂಘರ್ಷಕ್ಕೆ ಕಾರಣವಾಗುತ್ತದೆ.

ಕೊಟ್ಟಂತೆಯೂ ಇರಬೇಕು, ಕೊಡದೆಯೂ ಇರಬೇಕು ಎನ್ನುವ ಜಾಣತನದ ಪ್ರದರ್ಶನದಿಂದ, ಸಂಕಷ್ಟ
ದಲ್ಲಿರುವ ಯಾವ ರೈತರಿಗೂ ಪ್ರಯೋಜನ ಆಗುವುದಿಲ್ಲ. ಜೇನುಹುಳುಗಳೇ ಸಂಗ್ರಹಿಸಿದ ತುಪ್ಪ, ಆ ಹುಳುಗಳು ಹಸಿದಾಗ ತಿನ್ನಲಾಗದೆ ಮನುಷ್ಯನ ದುರಾಸೆಯಿಂದ ಬಾಟಲಿ ಸೇರಿದಂತೆ ರೈತರ ಸ್ಥಿತಿ ಆಗಿರುವುದು ವಿಪರ್ಯಾಸ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಗದಿರಲಿ.

–ತಾ.ಸಿ.ತಿಮ್ಮಯ್ಯ, ಬೆಂಗಳೂರು

***

ರೈಲ್ವೆ ನಷ್ಟಕ್ಕೆ ಇಲ್ಲಿದೆ ಉತ್ತರ!

ಕೊಂಕಣ ರೈಲ್ವೆ ವಿಭಾಗವು ಟಿಕೆಟ್‌ರಹಿತ ಪ್ರಯಾಣಿಕರಿಂದ 2023ರ ಡಿಸೆಂಬರ್‌ ತಿಂಗಳೊಂದರಲ್ಲೇ ₹ 1.95 ಕೋಟಿ ದಂಡ ವಸೂಲು ಮಾಡಿದೆ. ಅದೇರೀತಿ, ನೈರುತ್ಯ ರೈಲ್ವೆ ವಿಭಾಗ ಮತ್ತು ಬೆಂಗಳೂರು ವಿಭಾಗಗಳಲ್ಲೂ ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ಕೋಟ್ಯಂತರ ರೂಪಾಯಿ ದಂಡ ವಸೂಲು ಮಾಡಿರುವುದಾಗಿ ವರದಿಯಾಗಿದೆ.

ಇದಕ್ಕೆ ಹೊರತಾಗಿ, ದಂಡ ಕೊಡದೆ ತಪ್ಪಿಸಿಕೊಂಡ ಮತ್ತು ಹೊಂದಾಣಿಕೆ ಮಾಡಿಕೊಂಡ ಪ್ರಕರಣಗಳಲ್ಲಿ ಇನ್ನೂ ಎಷ್ಟು ಮೊತ್ತದ ದಂಡ ವಸೂಲಾಗುತ್ತಿತ್ತೋ? ಇದು, ಭಾರತೀಯ ರೈಲ್ವೆಯು ಸರ್ಕಾರದ ನಿರೀಕ್ಷೆಯಷ್ಟು ಲಾಭವನ್ನು ಗಳಿಸುತ್ತಿಲ್ಲವೇಕೆ ಎನ್ನುವ ಪ್ರಶ್ನೆಗೆ ಉತ್ತರ ಇರಬಹುದು. ಇದರೊಂದಿಗೆ, ದೇಶದಲ್ಲಿ ಪ್ರಾಮಾಣಿಕತೆ ಪಾತಾಳಕ್ಕೆ ಇಳಿದಿರುವುದನ್ನು ಸಹ ತೋರಿಸುತ್ತದೆ.

–ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT