ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 20 ಮೇ 2024, 21:30 IST
Last Updated 20 ಮೇ 2024, 21:30 IST
ಅಕ್ಷರ ಗಾತ್ರ

ಎಲ್ಲಕ್ಕೂ ಶಿಕ್ಷಕರೇ ಹೊಣೆಯಲ್ಲ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎರಡನೇ ಬಾರಿ ಪರೀಕ್ಷೆ ಬರೆಯುವುದಕ್ಕೆ ಪೂರಕವಾಗಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕೆಂಬ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಆದೇಶಕ್ಕೆ, ಕೆಲವು ಶಿಕ್ಷಕರು ತಮ್ಮ ಬೇಸಿಗೆ ರಜೆ ಅವಧಿ ಕಡಿತವಾಯಿತು ಎಂದು ಆಕ್ಷೇಪಿಸಿರುವುದಾಗಿ ಸುರೇಂದ್ರ ಪೈ ಎಂಬುವರು ಹೇಳಿದ್ದಾರೆ (ವಾ.ವಾ., ಮೇ 18). ಈ ಸಂಬಂಧ ಕೆಲವು ಅಂಶಗಳನ್ನು ಚರ್ಚಿಸುವ ಅಗತ್ಯವಿದೆ ಅನ್ನಿಸುತ್ತದೆ. ಯಾರೇ ಆಗಲಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವುದರಲ್ಲಿ ಶಿಕ್ಷಕರು ಎಡೆಬಿಡದೆ ತೊಡಗಿರುವುದು ಕಾಣಸಿಗುತ್ತದೆ. ಶಿಕ್ಷಕರಿಗೆ ಬೇಸಿಗೆ ರಜೆ ಕೊಡುತ್ತಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದಾದರೂ ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ, ಚುನಾವಣಾ ಕೆಲಸ ದಂತಹವುಗಳ ನಡುವೆ ಅವರಿಗೆ ಬಿಡುವೆಂಬುದು ದೊರಕಿದೆಯೇ ಎಂಬುದನ್ನು ಪರಾಮರ್ಶಿಸಿ ನೋಡಬೇಕಾಗಿದೆ.

‌ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಕುಸಿದಿರುವುದರ ಹಿಂದೆ ಬಹಳಷ್ಟು ಕಾರಣಗಳಿವೆ. ಮಕ್ಕಳ ಮೊಬೈಲ್ ಗೀಳು, ಕ್ರಿಕೆಟ್ ಪ್ರಭಾವ, ಪೋಷಕರ ಅನಾಸಕ್ತಿ, ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕ್ಷೀಣಿಸಿರುವುದು ಎಲ್ಲವೂ ಇದರ ಹಿಂದೆ ಇವೆ. ಮಕ್ಕಳನ್ನು ಶೈಕ್ಷಣಿಕವಾಗಿ ಮನವೊಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಶೈಕ್ಷಣಿಕ ಬುನಾದಿ ಬಲಪಡಿಸುವ ಅಗತ್ಯವನ್ನು ಮನಗಂಡ ಶಿಕ್ಷಣ ಇಲಾಖೆಯು ಮಗುಸ್ನೇಹಿ ಶಿಕ್ಷಣ ವ್ಯವಸ್ಥೆಯತ್ತ ಗಮನ ಹರಿಸುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಎಂಟನೆಯ ತರಗತಿಯವರೆಗೆ ಅನುತ್ತೀರ್ಣಗೊಳಿಸಬಾರದೆಂಬ ನಿಯಮವಿದೆ. ಐದು ಮತ್ತು ಎಂಟನೆಯ ತರಗತಿಗಳಲ್ಲಿಯೂ ಪಬ್ಲಿಕ್ ಪರೀಕ್ಷೆಗಳು ನಡೆಯುವುದರಿಂದ, ಅಲ್ಲಿಯೂ ಕಠಿಣ ನಿಯಮಗಳನ್ನು ಅನುಸರಿಸುವ ಸಮಯ ಬಂದರೆ, ಶಿಕ್ಷಣದ ಗುಣಮಟ್ಟ ನಿಧಾನವಾಗಿ ಹೆಚ್ಚುತ್ತದೆ.

ಫಲಿತಾಂಶ ಹೆಚ್ಚಿಸಲು ಸಹಜವಾಗಿ ಜಿಲ್ಲೆ ಜಿಲ್ಲೆಗಳಲ್ಲಿ ಪರೋಕ್ಷ ಸ್ಪರ್ಧೆ ಏರ್ಪಡುತ್ತದೆ. ಉನ್ನತ ಅಧಿಕಾರಿಗಳು ತಾಲ್ಲೂಕು ಅಧಿಕಾರಿಗಳ ಮೇಲೆ, ಅವರು ಮುಖ್ಯ ಶಿಕ್ಷಕರ ಮೇಲೆ ತೀವ್ರ ಒತ್ತಡ ಹೇರುವುದು ಕಂಡುಬರುತ್ತದೆ. ಕೊನೆಗೆ ಅದು ಆತ್ಯಂತಿಕವಾಗಿ ವಿಷಯ ಶಿಕ್ಷಕರು ಮಕ್ಕಳ ಮೇಲೆ ನಿತ್ಯ ಒತ್ತಡ ಹೇರುವಂತೆ ಆಗುತ್ತದೆ. ಈ ಸ್ಥಿತಿಯು ಮಕ್ಕಳ ಮಾನಸಿಕ ತಲ್ಲಣಗಳಿಗೆ ಕಾರಣವಾಗುತ್ತದೆ. ಮಗು ಕಲಿತದ್ದನ್ನೂ ಮರೆಯುವ ಹಂತಕ್ಕೆ ಹೋಗುತ್ತದೆ. ಎಷ್ಟೋ ಮಕ್ಕಳು ಅರ್ಧಕ್ಕೇ ಶಾಲೆ ಬಿಡುವ ಪ್ರಮಾಣ ಹೆಚ್ಚಾಗುತ್ತದೆ. ಓದುವ ಹವ್ಯಾಸ, ನಿರಂತರ ಅಧ್ಯಯನ, ಶಿಕ್ಷಕರ ಮಾರ್ಗದರ್ಶನ ಅನುಸರಿಸುವ ಮಕ್ಕಳು ಖಂಡಿತವಾಗಿ ಯಶಸ್ಸನ್ನು ಪಡೆಯುತ್ತಾರೆ. ಅನುತ್ತೀರ್ಣವಾಗುವುದೇ ಮಗುವಿನ ಗುಣಮಟ್ಟ ಅಳೆಯುವ ಸಾಧನವಲ್ಲ. ಎಲ್ಲದಕ್ಕೂ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಿ ಕೈತೊಳೆದುಕೊಳ್ಳುವುದಕ್ಕಿಂತ, ಇಂತಹ ಪರಿಸ್ಥಿತಿಗೆ ಕಾರಣವಾದ ಇತರ ಅಂಶಗಳ ಬಗ್ಗೆ ಅಧ್ಯಯನ ನಡೆಯಲಿ.

– ತಿರುಪತಿ ನಾಯಕ್, ಹೊಸನಗರ

ಹೊಸ ಬಡಾವಣೆಗಳಿಗೆ ಕಡಿವಾಣ ಅಗತ್ಯ 

ಈಗ ಅಪಾರ್ಟ್‌ಮೆಂಟ್‌ಗಳು, ಗಗನಚುಂಬಿ ಕಟ್ಟಡಗಳು, ಒಂದು ನಿವೇಶನದಲ್ಲಿ ಆರರಿಂದ ಹತ್ತು ಮನೆಗಳು ನಿರ್ಮಾಣ ಆಗುತ್ತಿವೆ. ಹಾಗಾಗಿ, ಹೊಸ ಬಡಾವಣೆಗಳ ಅಗತ್ಯವೇ ಇಲ್ಲ ಎನಿಸುತ್ತದೆ. ಆದರೂ ಬಡಾವಣೆಗಳ ನಿರ್ಮಾಣವನ್ನೇ ದಂಧೆ ಮಾಡಿಕೊಂಡಿರುವ ಕೆಲವರು, ಮಾರಿದ ನಂತರ ಕೊಂಡವರ ಪಾಡು ಎನ್ನುವಂತೆ ಗಾಳಿ ಬಂದಾಗ ತೂರಿಕೊಂಡು ಹೋಗುತ್ತಾರೆ. ಕಂದಾಯ ಇಲಾಖೆಯು ಬೊಕ್ಕಸಕ್ಕೆ ಒಂದಷ್ಟು ವರಮಾನ ಬರಲಿ ಎಂಬ ಕಾರಣಕ್ಕೆ ಜಾಣ ಕುರುಡುತನ ಪ್ರದರ್ಶಿಸುತ್ತದೆ. ಹೀಗೆ ಅವಿರತವಾಗಿ ಹಸಿರು ಭೂಮಿಯನ್ನೆಲ್ಲ ಬಡಾವಣೆ ಮಾಡುತ್ತಾ ಹೋದರೆ ಉಸಿರಿಗೆ ಏನು ಮಾಡುವುದು?

ಅಗತ್ಯ ಇದ್ದವರಿಂದ ಮೊದಲೇ ಅರ್ಜಿ ಹಾಕಿಸಿಕೊಂಡು ನಂತರ ನಿವೇಶನಗಳನ್ನು ನೀಡುವ ನಿಯಮ ಜಾರಿಗೆ ಬರಬೇಕು. ತಪ್ಪಿದಲ್ಲಿ ಹಣ ಉಳ್ಳವರು ದುಡ್ಡು ಮಾಡುವ ದಂಧೆ ಮಾಡಿಕೊಂಡು ಎಗ್ಗಿಲ್ಲದೆ ನಿವೇಶನಗಳನ್ನು ರೂಪಿಸುತ್ತಾ ಹೋಗುತ್ತಾರೆ. ಬೆಂಗಳೂರಿನಂಥ ನಗರಗಳು ಈಗಾಗಲೇ ವಿಪರೀತ ಬೆಳೆದಿವೆ. ನೀರು ಪೂರೈಕೆ, ಮೂಲ ಸೌಕರ್ಯ ಕಲ್ಪಿಸುವುದು ಕಷ್ಟದ ಕೆಲಸವಾಗಿದೆ. ಆದಕಾರಣ, ಹೊಸ ಬಡಾವಣೆಗಳಿಗೆ ಕಡಿವಾಣ ಹಾಕುವುದು ಅಗತ್ಯ.  

– ಮಲ್ಲಿಕಾರ್ಜುನ, ಸುರಧೇನುಪುರ 

‘ಕಮಿಷನ್‌ ದಂಧೆ’ ಯಥಾವಿಧಿ ಎನ್ನುವುದಾದರೆ...

‘ಕೈ ಸರ್ಕಾರಕ್ಕೆ ವರ್ಷದ ಸಂಭ್ರಮ’ ಎಂಬ ವರದಿ (ಪ್ರ.ವಾ., ಮೇ 20) ಓದಿ ಇದೆಂಥಾ ವ್ಯಂಗ್ಯ ಅನ್ನಿಸಿತು. ಒಂದಲ್ಲ ಒಂದು ಕಾರಣಕ್ಕೆ ನಡೆದ ರಾಜಕೀಯ ಗುದ್ದಾಟಗಳ ಸದ್ದಿನಲ್ಲಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಲೇ ಒಂದು ವರ್ಷ ಪೂರೈಸಿದ್ದು ಗೊತ್ತೇ ಆಗಲಿಲ್ಲ. ಹೋದ ವರ್ಷ ಸದ್ದಿಲ್ಲದೇ ಅಧಿಕಾರ ಹಸ್ತಾಂತರಿಸಿದ ಕರ್ನಾಟಕ ಜನರ ಆ ನಡೆ ರಾಷ್ಟ್ರವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ದಿಟ. ಸರಿಯಾಗಿ ಐವತ್ತು ವರ್ಷಗಳ ಹಿಂದೆ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದುದರ ಬೆನ್ನ ಹಿಂದೆಯೇ ಸಾಮಾಜಿಕ ಹರಿಕಾರ, ದೂರದೃಷ್ಟಿಯ ರಾಜಕಾರಣಿ ಎಂದೇ ಹೆಸರಾಗಿದ್ದ ಡಿ.ದೇವರಾಜ ಅರಸು ಅವರು ತಂದ ಬದಲಾವಣೆಗಳಿಂದಾದ ಸಾಮಾಜಿಕ ನ್ಯಾಯದ ಕೂಸುಗಳು ನಾವು. ಈಗ ಅದೇ ಮೈಸೂರು ಭಾಗದಿಂದ ಎದ್ದು ಬಂದ ಸಿದ್ದರಾಮಯ್ಯ ಅವರಲ್ಲಿ ಅರಸು ಅವರ ವ್ಯಕ್ತಿತ್ವವನ್ನು ನಾವು ನಿರೀಕ್ಷಿಸಿದ್ದು ತಪ್ಪಲ್ಲ. ಆಗಿನದಕ್ಕಿಂತ ಈಗ ಪರಿಸ್ಥಿತಿ ಭಿನ್ನವಾಗಿದೆ, ಸವಾಲುಗಳೂ ಬಹಳಷ್ಟು. ಭ್ರಷ್ಟತೆಯನ್ನೇ ಮೈಗೂಡಿಸಿಕೊಂಡಿರುವ ರಾಜಕಾರಣಿಗಳ ಪಡೆಯೂ ಈಗ ದೊಡ್ಡದಾಗಿದೆ.

ಹಾಗಿದ್ದಾಗಲೂ ಪ್ರಜಾಪ್ರಭುತ್ವದ ಯಶಸ್ಸಿಗೆ ರಚನಾತ್ಮಕ ಸಲಹೆ ನೀಡಬಲ್ಲ ಪ್ರಬುದ್ಧ ರಾಜಕಾರಣಿಗಳನ್ನು ಒಳಗೊಂಡ ಸಮರ್ಥ ವಿರೋಧ ಪಕ್ಷವೂ ಒಂದು ಇರಬೇಕು. ಯಾವ ತರಬೇತಿಯಿಲ್ಲದೆ ವಿಧಾನಸೌಧ ಪ್ರವೇಶಿಸಿ ಅಪ್ರಬುದ್ಧತೆ ಮೆರೆಯುವವರನ್ನು ಚರ್ಚೆಯಲ್ಲಿ ತೊಡಗುವಂತೆ ಮಾಡುವುದರಲ್ಲೇ ಅಧಿವೇಶನದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸುವುದು ಹೇಗೆ? ರಾಜಕಾರಣ ಅನ್ನುವುದು ನಮ್ಮ ದೇಶದಲ್ಲಿ ಯಾವ ಅರ್ಹತೆಯನ್ನೂ ಬೇಡದ ಸಲೀಸಾದ ದಂಧೆಯಾಯಿತೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ಒಟ್ಟಾರೆ, ಹಿಂತಿರುಗಿ ನೋಡಿದಾಗ, ರಾಜ್ಯದ ಜನ ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ. ಸರ್ಕಾರಿ ಯಂತ್ರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಲೋಕಾಯುಕ್ತದ ಬಲೆಗೆ ಬೀಳುವವರ ಸುದ್ದಿ ಓದಿ ಈಗ ಯಾರೂ ಬೆಚ್ಚಿಬೀಳುವುದಿಲ್ಲ. ಹಿಂದಿನ ಸರ್ಕಾರದ ಅವಧಿಯ ‘ಕಮಿಷನ್‌ ದಂಧೆ’ ಈಗಲೂ ಯಥಾವಿಧಿ ಎನ್ನುವುದಾದರೆ ಮುಂದೇನು? ‘ಗ್ಯಾರಂಟಿ’ ಗಳನ್ನೇ ನೆಚ್ಚಿಕೊಂಡು ಹೋಗುವುದು ಎಲ್ಲಿಯವರೆಗೆ? ಒಟ್ಟಾರೆ, ನೆಚ್ಚಿದ ಎಮ್ಮೆ ಕೋಣವನ್ನು ಈಯಿತು ಎನ್ನುವಂತೆ ಆಗಬಾರದಷ್ಟೆ! 

–ಈರಪ್ಪ ಎಂ. ಕಂಬಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT