ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮೇ 30 ಗುರುವಾರ 2024

Published 3 ಜೂನ್ 2024, 14:20 IST
Last Updated 3 ಜೂನ್ 2024, 14:20 IST
ಅಕ್ಷರ ಗಾತ್ರ

ಕೋರ್ಟ್ ಆದೇಶ: ಎಲ್ಲ ರಾಜ್ಯಗಳಿಗೂ ಎಚ್ಚರಿಕೆಯಾಗಲಿ

ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಟಿಆರ್‌ಪಿ ಗೇಮ್‌ ಜೋನ್‌ನಲ್ಲಿ ಇತ್ತೀಚೆಗೆ 27 ಜನರನ್ನು ಬಲಿ ತೆಗೆದುಕೊಂಡ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಅಲ್ಲಿನ ಹೈಕೋರ್ಟ್‌ ನಡೆ ಸ್ವಾಗತಾರ್ಹ. ರಾಜ್‌ಕೋಟ್‌ ಮಹಾನಗರಪಾಲಿಕೆ‌ಯು ತನ್ನ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ಅಷ್ಟು ದೊಡ್ಡ ಕಟ್ಟಡವನ್ನು ನಿರ್ಮಿಸಲಾಗಿದ್ದರೂ ತನಗೆ ಏನೂ ಸಂಬಂಧ ಇಲ್ಲ ಎಂಬಂತೆ ಕಣ್ಣು ಮುಚ್ಚಿ ಕುಳಿತಿದ್ದುದೇ ಇಂತಹ ದುರಂತಕ್ಕೆ ಕಾರಣ ಎಂದು ಕೋರ್ಟ್‌ ಹೇಳಿರುವ ಮಾತು ಗುಜರಾತ್‌ಗೆ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತಿದೆ. ಅಕ್ರಮವಾಗಿ ಕಟ್ಟಡಗಳನ್ನು ಕಟ್ಟುವುದರ ಜತೆಗೆ ಪರವಾನಗಿ ಪಡೆದುಕೊಂಡಿದ್ದಕ್ಕಿಂತಲೂ ಹೆಚ್ಚು ಮಹಡಿಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಬಹುಮಹಡಿ ಕಟ್ಟಡದಲ್ಲೂ ಬೆಂಕಿ‌ನಿರೋಧಕವನ್ನು ಅಳವಡಿಸ ಬೇಕೆಂಬ ನಿಯಮವಿದೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ ಎಂಬುದೇ ಪ್ರಶ್ನೆ. ಇಂತಹ ಸಂಗತಿಗಳ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅದುಬಿಟ್ಟು, ಮೊದಲು ನಿರ್ಲಕ್ಷ್ಯ ವಹಿಸಿ, ದುರ್ಘಟನೆ ಸಂಭವಿಸಿದ ಬಳಿಕ ಮೃತರ ಕುಟುಂಬಗಳಿಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುವುದು ಒಪ್ಪತಕ್ಕದ್ದಲ್ಲ.

–ಸುರೇಂದ್ರ ಪೈ, ಭಟ್ಕಳ

ಹಗರಣವೋ ನಿಯಮ ಉಲ್ಲಂಘನೆಯೋ?

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ದಿಂದಾಗಿ ನಿಗಮದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಮಾಧ್ಯಮಗಳಲ್ಲಿ ವರದಿಯಾಗಿರುವ ಮಾಹಿತಿಯನ್ನು ಗಮನಿಸಿದಾಗ ಕಂಡುಬರುವ ವಿಷಯವೆಂದರೆ, ನಿಗಮದ ಮುಖ್ಯ ಖಾತೆಯಲ್ಲಿದ್ದ  ₹ 187 ಕೋಟಿ ಮೊತ್ತದಲ್ಲಿ ₹ 87 ಕೋಟಿಯನ್ನು ಯೂನಿಯನ್‌ ಬ್ಯಾಂಕ್‌ನ ಬೆಂಗಳೂರಿನ ಎಂ.ಜಿ. ರಸ್ತೆಯ ಶಾಖೆಯ ಖಾತೆಯೊಂದಕ್ಕೆ ವರ್ಗಾವಣೆ ಮಾಡಲಾಗಿದೆ. ಅದೂ ಮಾರ್ಚ್ ತಿಂಗಳಲ್ಲಿ.

ನಿವೃತ್ತ ಬ್ಯಾಂಕ್ ಅಧಿಕಾರಿಯಾದ ನಾನು ಇದನ್ನು ಬೇರೆ ದೃಷ್ಟಿಕೋನದಿಂದ ನೋಡುತ್ತೇನೆ. ಇದು, ಬ್ಯಾಂಕುಗಳು ವರ್ಷಾಂತ್ಯದಲ್ಲಿ ತಮ್ಮ ಗುರಿ ಸಾಧನೆಗಾಗಿ ಕೈಗೊಳ್ಳುವ ಒಂದು ಕ್ರಮ ಅಥವಾ ಅಕ್ರಮ. ಇಂತಹ ಭಾರಿ ಮೊತ್ತದ ಹಣ ಒಂದು ಶಾಖೆಯಲ್ಲಿ ಇರುವುದಕ್ಕಿಂತ ಬೇರೆ ಬೇರೆ ಚಿಕ್ಕ ಚಿಕ್ಕ ಶಾಖೆಗಳಲ್ಲಿದ್ದರೆ, ಹಲವಾರು ಶಾಖೆಗಳು ಗುರಿ ಸಾಧಿಸಿದ ಶಾಖೆಗಳ ಪಟ್ಟಿಯಲ್ಲಿ ಬಂದು, ಮೇಲಧಿಕಾರಿಗಳಿಂದ ಶಹಭಾಸ್‌ಗಿರಿ ಪಡೆಯುವ ಉದ್ದೇಶ ಇರುತ್ತದೆ. ಯಾವ ಖಾತೆಯಲ್ಲಿದ್ದರೂ ಆ ಹಣಕ್ಕೆ ಬಡ್ಡಿ ಅಂತೂ ಸಿಕ್ಕೇ ಸಿಗುತ್ತದೆ. ಈ ಉದ್ದೇಶಗಳಿಗಾಗಿ ಡಮ್ಮಿ ಖಾತೆಗಳನ್ನು ಸಹ ತೆರೆಯಲಾಗುತ್ತದೆ. ಆದ್ದರಿಂದ ಇದನ್ನು ಹಣಕಾಸಿನ ದುರುಪಯೋಗದ ಪ್ರಕರಣ ಎನ್ನುವುದಕ್ಕಿಂತಲೂ ನಿಯಮಾವಳಿಗಳ ಉಲ್ಲಂಘನೆ ಎಂದು ಹೇಳಬಹುದು. ಇಂತಹ ಸಂದರ್ಭಗಳಲ್ಲಿ ಹಣದ ದುರುಪಯೋಗ ಆಗಿರುವುದಿಲ್ಲ ಮತ್ತು ಆ ಹಣವನ್ನು ಹಿಂಪಡೆಯಲು ಯಾವುದೇ ಅಡಚಣೆ ಇರುವುದಿಲ್ಲ. ಇಲ್ಲಿ ಉಲ್ಲೇಖಿಸಿರುವ ಐ.ಟಿ ಕಂಪನಿಯ ಖಾತೆಯೂ ಡಮ್ಮಿ ಖಾತೆ ಆಗಿರಬಹುದು. ಆದ್ದರಿಂದ ಕೂಲಂಕಷ ಪರಿಶೀಲನೆಯಿಂದ ಸತ್ಯವನ್ನು ಹೊರತರಬೇಕಾದುದು ಅವಶ್ಯ. ಬ್ಯಾಂಕುಗಳೂ ಗುರಿ ಸಾಧನೆಗಾಗಿ ಯಾವುದೇ ರೀತಿಯಲ್ಲಿ ಅಡ್ಡದಾರಿ ಹಿಡಿಯುವುದು ಖಂಡನಾರ್ಹ.

–ಟಿ.ವಿ.ಬಿ. ರಾಜನ್, ಬೆಂಗಳೂರು

ಇಬ್ಬರ ಜಗಳದಲ್ಲಿ ಮಕ್ಕಳಿಗೆ ಅನ್ಯಾಯ!

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು 2016ರಿಂದ ‘ಪ್ರಾಥಮಿಕ ಶಾಲಾ ಶಿಕ್ಷಕರು’ (ಪಿಎಸ್‌ಟಿ- ಪ್ರೈಮರಿ ಸ್ಕೂಲ್‌ ಟೀಚರ್‌) ಮತ್ತು ‘ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು’ (ಜಿಪಿಟಿ- ಗ್ರ್ಯಾಜುಯೇಟ್‌ ಪ್ರೈಮರಿ ಟೀಚರ್‌) ಎಂದು ವಿಭಜಿಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ 1ರಿಂದ 5ನೇ ತರಗತಿವರೆಗೆ ಬೋಧಿಸುವವರು ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ 6ರಿಂದ 8ನೇ ತರಗತಿವರೆಗೆ ಬೋಧಿಸುವವರು. ಇವರ ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ ಬೇರೆ ಬೇರೆಯಾಗಿರುತ್ತದೆ. ಆದರೆ ಶಾಲಾ ಆಡಳಿತ (1ರಿಂದ 5 ಮತ್ತು 6ರಿಂದ 8) ಬೇರೆ ಬೇರೆಯಾಗಿಲ್ಲ. ಒಬ್ಬರೇ ಮುಖ್ಯ ಶಿಕ್ಷಕರಿರುವ ಪ್ರಾಥಮಿಕ ಶಾಲೆಯಲ್ಲಿಯೇ ಎರಡೂ ಬಗೆಯ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರ ಸಂಖ್ಯೆ ಇಲ್ಲದ ಸಂದರ್ಭದಲ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರು ತಾವು 1ರಿಂದ 5ನೇ ತರಗತಿವರೆಗೆ ಮಾತ್ರ ಪಾಠ ಹೇಳುವುದಾಗಿಯೂ 6ರಿಂದ 8ನೇ ತರಗತಿಗಳಿಗೆ ತಾವು ಜವಾಬ್ದಾರರಲ್ಲವೆಂದೂ ಅಧಿಕಾರಿಗಳಿಗೆ, ಮುಖ್ಯ ಶಿಕ್ಷಕರಿಗೆ ಪತ್ರ ಬರೆಯುತ್ತಾರೆ. ಅದೇ ರೀತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ನಿಯಮದ ಪ್ರಕಾರ ತಾವು 6ರಿಂದ 8ನೇ ತರಗತಿವರೆಗೆ ಮಾತ್ರ ಬೋಧಿಸುವುದಾಗಿಯೂ ಹೇಳುತ್ತಾರೆ.

ಶಿಕ್ಷಕರ ಕೊರತೆ ಇರುವಾಗ ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟದಲ್ಲಿ ಮಕ್ಕಳು ಪಾಠವಿಲ್ಲದೇ ತೊಂದರೆ ಅನುಭವಿಸುವಂತೆ ಆಗಿರುವುದು ಕಟುಸತ್ಯ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಏಕೆಂದರೆ, ಮಕ್ಕಳು ಬಲಿಪಶುಗಳಾಗಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಕುಸಿತಕ್ಕೆ ಇದೂ ಒಂದು ಕಾರಣವಾಗಿದೆ. ಶಾಲೆಗಳ ಆಡಳಿತ ಬೇರೆ ಬೇರೆಯಾಗುವುದು ಸಮಸ್ಯೆಗೆ ಪರಿಹಾರವಾಗಬಹುದೇ?

–ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ರಾಜೀನಾಮೆ ಅನಗತ್ಯ: ಸಮಗ್ರ ತನಿಖೆ ಅಗತ್ಯ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಒಪ್ಪಿಕೊಂಡಿದ್ದಾರೆ. ‘ಈ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಹಾಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಸಚಿವರು ಹೇಳಿದ್ದಾರೆ. ಬಹಳ ವರ್ಷಗಳ ಹಿಂದೆ, ಒಂದೆಡೆ ರೈಲು ಅಪಘಾತವಾದಾಗ, ರೈಲ್ವೆ ಸಚಿವರಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಅದರ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದುದು ಇಲ್ಲಿ ನೆನಪಾಗುತ್ತದೆ. ಆದರೆ ಈ ಕಾಲದಲ್ಲಿ, ಕೆಳ ಹಂತದ ಯಾರೋ ಒಬ್ಬರ ತಪ್ಪಿಗಾಗಿ ಸಚಿವರಿಂದ ರಾಜೀನಾಮೆಯನ್ನು ನಿರೀಕ್ಷಿಸುವುದು ತರವಲ್ಲ. ಯಾರೋ ಮಾಡಿದ ತಪ್ಪಿಗೆ ರಾಜೀನಾಮೆ ಕೊಡುತ್ತಾ ಹೋದರೆ ಸಚಿವ ಸಂಪುಟದಲ್ಲಿ ಯಾರೂ ಇರಲು ಸಾಧ್ಯವಿಲ್ಲ. 

ಆದರೆ, ಸಂಬಂಧಿಸಿದ ಸಚಿವರು ಇದರಲ್ಲಿ ತಮ್ಮ ತಪ್ಪಿಲ್ಲ ಎಂದು ಸುಮ್ಮನೆ ಕೂರದೇ ಪ್ರಕರಣದ ಸಮಗ್ರ ತನಿಖೆಗೆ ಆದೇಶ ನೀಡಬೇಕು. ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ಆಗುವಂತೆ ಮಾಡಬೇಕು. ಆಗ ಮಿಕ್ಕವರು ಎಚ್ಚೆತ್ತುಕೊಳ್ಳುತ್ತಾರೆ. 

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT