ಗಣತಿಗೆ ‘ಯುವನಿಧಿ’ ಬಳಗ ಬಳಸಿ

ಸುಮಾರು 1.65 ಲಕ್ಷ ಶಿಕ್ಷಕರನ್ನು ಬಳಸಿಕೊಂಡು ದಸರಾ ರಜೆಯಲ್ಲಿ ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಆ ಮೂಲಕ, ಈಗಾಗಲೇ ಕೆಲಸದ ಒತ್ತಡದಿಂದ ಬಳಲುತ್ತಿರುವ ಶಿಕ್ಷಕರನ್ನು ಮತ್ತೆ ದೈಹಿಕವಾಗಿ, ಮಾನಸಿಕವಾಗಿ ಶೋಷಿಸಲಾಗುತ್ತಿದೆ. ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಲ್ಲಿ ‘ಯುವನಿಧಿ’ಯೂ ಒಂದು. ‘ಯುವನಿಧಿ’ಯ ಫಲಾನುಭವಿಗಳನ್ನು ಸಮೀಕ್ಷಾ ಕಾರ್ಯಕ್ಕೆ ಏಕೆ ಬಳಸಬಾರದು?

–ಶ್ರೀಧರ ನಾಯಕ, ಬೇಲೇಕೇರಿ

ಬಡ್ತಿ: ‘ಸುಪ್ರೀಂ’ ಆದೇಶ ಉಲ್ಲಂಘನೆ

ರಾಜಕಾರಣಿಗಳು, ಸಚಿವರು ಸರ್ಕಾರಿ ನೌಕರರ ಸೇವಾ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಲ್ಲದೆ, ನೌಕರರು ಜಾತಿ ಸಂಘಟನೆಗಳ ಮೂಲಕ ಅಧಿಕಾರಸ್ಥರ ಮೇಲೆ ಒತ್ತಡ ಹೇರಿ ಬಡ್ತಿ ವಿಷಯದಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ. ಇದರಿಂದ ತೊಂದರೆಗೀಡಾದವರು ನ್ಯಾಯಾಲಯದ ಕದ ತಟ್ಟುತ್ತಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಇಲಾಖೆಗಳಲ್ಲಿ ಬಡ್ತಿಯನ್ನು ತಡೆಹಿಡಿಯಲಾಗುತ್ತಿದೆ. ಹೀಗಾಗಿ 25ರಿಂದ 30 ವರ್ಷ ಸೇವೆ ಸಲ್ಲಿಸಿದ ನೌಕರರು ಬಡ್ತಿ ಸಿಗದೆ ನೊಂದುಕೊಂಡು ನಿವೃತ್ತರಾಗುತ್ತಿರುವುದು ಖೇದಕರ. ಸರ್ಕಾರವು ನೌಕರರ ಸೇವಾ ಜೇಷ್ಠತೆ ಮತ್ತು ಬಡ್ತಿ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ, ‘ಪವಿತ್ರಾ ಪ್ರಕರಣ’ದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸಬೇಕಿದೆ.

–ಅನಿಲ್ ಕುಮಾರ್, ಶಿವಮೊಗ್ಗ

ಸರ್ಕಾರಿ ಅಧಿಕಾರಿಗಳ ಬಲಿ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಕುರಿತು ತನಿಖೆ ನಡೆಸಿರುವ ಆಯೋಗದ ವರದಿಯಲ್ಲಿನ ಲೋಪಗಳ ಬಗ್ಗೆ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ (ಪ್ರ.ವಾ., ಜುಲೈ 25). ಅಪಾರ ಜನ ಸೇರುವಂಥ ಕಾರ್ಯಕ್ರಮಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳುವ ಕಷ್ಟ– ಸಾಧ್ಯತೆ ಕುರಿತು ಪೊಲೀಸರ ಆಕ್ಷೇಪ ಇದ್ದಾಗಲೂ, ರಾಜಕೀಯವಾಗಿ ಲಾಭ ಗಿಟ್ಟಿಸಿಕೊಳ್ಳಲು ತರಾತುರಿಯಲ್ಲಿ ಆಯೋಜಿಸಲಾಗುವ ಇಂಥ ಸಮಾರಂಭಗಳಲ್ಲಿ ಅವಘಡ ಸಂಭವಿಸುವುದು ನಿರೀಕ್ಷಿತ. ಜನಸಾಗರವನ್ನು ಗಮನಿಸಿ ಸಿಬ್ಬಂದಿ ಮಾಡುವ ಗುಪ್ತಚರ ವರದಿಯನ್ನು ಆ ಸಂದರ್ಭದಲ್ಲಿ ಗಮನಿಸುವಷ್ಟು ಅಥವಾ ಆ ವರದಿ ಆಧರಿಸಿ ಕಾರ್ಯಕ್ರಮವನ್ನು ರದ್ದುಗೊಳಿಸುವ ಸಾಧ್ಯತೆಗಳಾದರೂ ಆಗ ಎಲ್ಲಿ ಇರುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಸಮಯ ಸಂದರ್ಭ ಅನುಸಾರ ಕೆಲವರ ಬಲಿದಾನ ಆಗಬೇಕಾಗುತ್ತದೆ. ಕಾಲ್ತುಳಿತ ಪ್ರಕರಣದಲ್ಲಿ ಕೆಲವು ಅಧಿಕಾರಿಗಳ ಬಲಿ ನೀಡಲಾಗಿದೆ, ಅಷ್ಟೇ.

–ವೆಂಕಟೇಶ ಮಾಚಕನೂರ, ಧಾರವಾಡ

ಜಾತಿವಾದಿ ಮನಸ್ಸಿಗೆಲ್ಲಿದೆ ಮದ್ದು?

ಸುಬ್ಬು ಹೊಲೆಯಾರ್ ಅವರ ‘ಅನ್ನ ನೀಡುವ ತಾಯಿಗೆ ಜಾತಿಯೇ?’ ಲೇಖನ
(ಪ್ರ.ವಾ., ಜುಲೈ 24) ಓದಿದಾಗ ಉಪ ರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ, ‘ನನಗೆ ನಾನೇ ಮಾದರಿ’ ಆತ್ಮಕಥೆಯಲ್ಲಿ ದಾಖಲಿಸಿರುವ ಪ್ರಸಂಗ ನೆನಪಾಯಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಜತ್ತಿ ಅವರು, ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಅವರ ಸಚಿವ ಸಂಪುಟದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಚಂದ್ರಪ್ಪ ಕಾಂಬಳೆ ಸಚಿವರಾಗಿದ್ದರು. ಶಂಕರ್ ರಾವ್ ಪಟವರ್ಧನ್ ಆಗಿನ ದೊರೆ. ಗಣೇಶ ಉತ್ಸವದ ವೇಳೆ ಸಂಪುಟದ ಸದಸ್ಯರನ್ನು ದೊರೆ, ತಮ್ಮ ಅರಮನೆಗೆ ಊಟಕ್ಕೆ ಆಮಂತ್ರಿಸುವ ಸಂಪ್ರದಾಯವಿತ್ತು. ದೊರೆಗೆ, ಕಾಂಬಳೆ ಅವರನ್ನು ಆಮಂತ್ರಿಸುವ ಮನಸ್ಸಿರಲಿಲ್ಲ. ಇದನ್ನು ಜತ್ತಿಗೆ ಹೇಳಿದರು. ಆಗ ಜತ್ತಿ ಅವರು, ಕಾಂಬಳೆಯನ್ನು ಅನ್ಯಕಾರ್ಯದ ನಿಮಿತ್ತ ಒಂದು ವಾರ ರಾಮದುರ್ಗಕ್ಕೆ ಕಳಿಸಿಕೊಟ್ಟರು. ಹೀಗೆ ದೊರೆಯ ಸಮಸ್ಯೆಯನ್ನು ಪರಿಹರಿಸಿದೆ ಎಂದು ಜತ್ತಿ ಅವರು ‘ಹೆಮ್ಮೆ’ಯಿಂದ ಹೇಳಿಕೊಂಡಿದ್ದಾರೆ. ತಾತ್ವಿಕ ನೆಲೆ ಬಿಟ್ಟು ತಂತ್ರಗಾರಿಕೆ ಅನುಸರಿಸುತ್ತಿರುವುದಲೇ ಸಮಾಜದಲ್ಲಿ ಇಂದಿಗೂ ಜಾತಿ ತಾರತಮ್ಯ ಉಳಿದುಕೊಂಡಿದೆ.

–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ಮಾನವರ ವಿನಿಮಯ ಸೂಕ್ತ

ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟದಿಂದ ನಾಲ್ಕು ಆನೆಗಳನ್ನು ಜಪಾನ್ಗೆ ಕಳುಹಿಸಲಾಗುತ್ತಿದೆ. ಮನುಷ್ಯನ ತಿಕ್ಕಲುತನಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಂದಿಳಿದ ಚೀತಾಗಳ ಸಾವು ಇಂಥ ಯೋಜನೆಗಳಿಗೆ ಪಾಠವಾಗಬೇಕಿದೆ.

ಒಂದು ಪ್ರದೇಶದಲ್ಲಿನ ಪರಿಸರ, ಋತುಮಾನಗಳಿಗೆ ಅನುಗುಣವಾಗಿ ಪ್ರಾಣಿಯೊಂದರ ಜೀವನ ಚಕ್ರ ರೂಪಿತವಾಗಿರುತ್ತದೆ. ನೂರು ಕಿಲೋಮೀಟರ್ ದೂರದ ನೀರಿನ ಸೆಲೆಯನ್ನು ಆನೆ ತಿಳಿಯಬಲ್ಲದು. ಇದಕ್ಕೆ ಅದರ ಪರಂಪರಾಗತ ಜ್ಞಾನ ನೆರವಾಗುತ್ತದೆ. ಕಾಡುಮೇಡುಗಳಲ್ಲಿ ಜೀವಿಸುವ ಆನೆಯನ್ನು ಪುಟ್ಟ ರಾಷ್ಟ್ರಕ್ಕೆ ಕಳುಹಿಸಿ ಅವುಗಳ ಸ್ವಾಭಾವಿಕ ಬದುಕಿಗೆ ನಾವು ಮಾರಕವಾಗಿದ್ದೇವೆ. ಈ ಸರಳ ಸತ್ಯವು ವನ್ಯಜೀವಿ ವಿಜ್ಞಾನಿಗಳು, ವನ್ಯಜೀವಿ ಸಂರಕ್ಷಕರು, ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಎರಡು ದಿನ ಮನೆ ಬಿಟ್ಟು ಪರ ಊರಿಗೆ ಹೋದಾಗ ಮತ್ತೆ ಯಾವಾಗ ಮನೆ ಸೇರುತ್ತೇವೋ ಎಂದು ಚಡಪಡಿಸುವ ನಾವು, ಪ್ರಾಣಿಗಳ ಬಗ್ಗೆ ಏಕಿಷ್ಟು ಅಸಡ್ಡೆ ತೋರುತ್ತಿದ್ದೇವೆ? ಭಾರೀ ಜನಸಂಖ್ಯೆಯ ಭಾರತದಲ್ಲಿರುವ ಕ್ರೂರ ಪ್ರಾಣಿಗಳಾದ ಮನುಷ್ಯರನ್ನೇ ವಿನಿಮಯ ಮಾಡಿಕೊಂಡರೆ ಸಮಾಜದ ಆರೋಗ್ಯಕ್ಕೆ ಒಳಿತಲ್ಲವೇ?

– ಸಿದ್ದೇಗೌಡ ಶಾಂತರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.