ಶುಕ್ರವಾರ, ಸೆಪ್ಟೆಂಬರ್ 17, 2021
31 °C

ವಾಚಕರವಾಣಿ | ಪರೀಕ್ಷೆಗೆ ಮುನ್ನ ಉತ್ತರ ಕಂಡುಕೊಳ್ಳಬೇಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ತರಗತಿಗಳಲ್ಲಿ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ಈ ವರ್ಷ ರದ್ದುಪಡಿಸಿರುವುದು ಸ್ವಾಗತಾರ್ಹ. ಆದರೆ ಅಂತಿಮ ಸೆಮಿಸ್ಟರ್‌ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

‘ಪರೀಕ್ಷೆಯಿಂದಲೇ ಭವಿಷ್ಯ’ ಎಂಬಂತೆ ಕಂಪನಿಗಳು ಉದ್ಯೋಗ ನೀಡಲು ವಿದ್ಯಾರ್ಥಿಗಳ ಪರೀಕ್ಷೆಯ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ ಎಂಬುದು ಸಚಿವರ ಮಾತು. ಆದರೆ ಲಾಕ್‌ಡೌನ್ ಆದಂತಹ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ತರಗತಿಗಳು ನಡೆದಿವೆ. ಈ ತರಗತಿಗಳು ಎಷ್ಟು ಮೌಲ್ಯಯುತವಾಗಿದ್ದವು ಹಾಗೂ ಪಾರದರ್ಶಕತೆಯಿಂದ ಕೂಡಿದ್ದವು, ಆನ್‌ಲೈನ್‌ನಲ್ಲಿ ಮಾಡಿದ ಪಾಠಗಳು ವಿದ್ಯಾರ್ಥಿಗಳಿಗೆ ನಿಜಕ್ಕೂ ಅರ್ಥವಾಗಿವೆಯೇ ಎಂಬಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಪರೀಕ್ಷೆಗೆ ಮೊದಲು ಕೆಲವು ದಿನ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸುವುದಾಗಿ ಹೇಳಲಾಗಿತ್ತು. ಆದರೆ ಈಗ ಅದನ್ನು ಕೈ ಬಿಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ, ಓದಲು ಸರಿಯಾದ ಪುಸ್ತಕಗಳಿಲ್ಲ. ಎಲ್ಲದಕ್ಕೂ ಇಂಟರ್ನೆಟ್ ಅನ್ನೇ ಅವಲಂಬಿಸಬೇಕು. ಹೀಗಾಗಿ ಯಾವ ಆಧಾರದ ಮೇಲೆ ಪರೀಕ್ಷೆ ಬರೆಯುವುದು? ಪರೀಕ್ಷೆ ಅಲ್ಲದೆ ಅಂತಿಮ ವರ್ಷದ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಾದ ಪ್ರಾಜೆಕ್ಟ್‌, ಅಸೈನ್‌ಮೆಂಟ್‌, ಡೆಸರ್ಟೇಷನ್‌ಗಳನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ಪ್ರೊಫೆಸರ್‌ಗಳು ಹೇಳಿದ್ದಾರೆ. ಕೊರೊನಾ ಸೋಂಕಿನ ಆತಂಕದ ಈ ದಿನಗಳಲ್ಲಿ ಇವನ್ನೆಲ್ಲಾ ಮಾಡುವುದು ಹೇಗೆ ಸಾಧ್ಯ?

ವಿದ್ಯಾರ್ಥಿಗಳ ಇಂತಹ ಸಮಸ್ಯೆಗಳನ್ನು ಅರಿತು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರಕ್ಕೆ ಬರುವುದು ಒಳಿತು.

-ನವೀನ್ ಕೊಡವತ್ತಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು