ಹೀಗಿದೆ ನಮ್ಮ ಮುಖ್ಯೋಪಾಧ್ಯಾಯರ ಸ್ಥಿತಿ...
‘ಮುಖ್ಯೋಪಾಧ್ಯಾಯ ಮತ್ತು ವೃತ್ತಿಗೌರವ’ ಎಂಬ ಪ.ರಾಮಕೃಷ್ಣ ಶಾಸ್ತ್ರಿ ಅವರ ಲೇಖನ (ಸಂಗತ, ನ. 9) ಮುಖ್ಯೋಪಾಧ್ಯಾಯರ ಪ್ರಸ್ತುತ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ. ನಮ್ಮೂರಿನ ಮುಖ್ಯೋಪಾಧ್ಯಾಯರು ಸುಮಾರು ಐದಾರು ವರ್ಷಗಳ ಹಿಂದೆ ಮಂಜೂರಾದ ಶಾಲಾ ಕೊಠಡಿಗಳನ್ನು ಕಟ್ಟಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಕೋರ್ಟ್, ಕಚೇರಿ ಸುತ್ತುತ್ತಿದ್ದಾರೆ. ಆದರೆ ಈವರೆಗೂ ಫಲಕಾರಿಯಾಗಿಲ್ಲ.
ಯಾವಾಗ ಬೇಕಾದರೂ ಬೀಳಬಹುದಾದ ಕೋಣೆಗಳಲ್ಲಿಯೇ ಮಕ್ಕಳನ್ನು ಕೂರಿಸಿಕೊಂಡು, ಬರೀ ಅತಿಥಿ ಶಿಕ್ಷಕರೊಂದಿಗೆ ಮಕ್ಕಳ ಏಳಿಗೆಗಾಗಿ ಹೆಣಗಾಡುತ್ತಿದ್ದಾರೆ. ಆದರೆ ಇದುವರೆಗೂ ಯಾವ ಅಧಿಕಾರಿಯೂ ಇತ್ತ ಚಿತ್ತ ಹರಿಸಿಲ್ಲ.
-ಆರ್.ಪಿ.ಮಂಜುನಾಥ್, ಬಿ.ಜಿ.ದಿನ್ನೆ, ಬಳ್ಳಾರಿ
**
ಪ್ರತ್ಯೇಕ ರೈಲು: ಇನ್ನೆಷ್ಟು ದಿನ ಕಾಯಬೇಕು?
ರೈಲ್ವೆ ಇಲಾಖೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿ, ಕೊನೆಗೂ ದೀಪಾವಳಿ ಹಬ್ಬಕ್ಕೆ ಕಲಬುರಗಿ ಮೂಲಕ ಬೀದರ್‌ಗೆ ಒಂದು ವಿಶೇಷ ರೈಲನ್ನು ಘೋಷಿಸಿದೆ. ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಮುಂಗಡ ಬುಕಿಂಗ್‌ನ ಎಲ್ಲ ಬರ್ತ್‌ಗಳೂ ಭರ್ತಿಯಾಗಿರುವುದು ಪ್ರಯಾಣಿಕರ ಸಾಂದ್ರತೆಯನ್ನು ಸಾಬೀತುಪಡಿಸುತ್ತದೆ. ಇಷ್ಟಾದರೂ, ಇಲಾಖೆಯು ಬೆಂಗಳೂರಿನಿಂದ ಕಲಬುರಗಿ, ಬೀದರ್‌ಗೆ ವಾರದ ಏಳು ದಿನವೂ ಸಂಚರಿಸುವ ರೈಲನ್ನು ಓಡಿಸಲು ಮನಸ್ಸು ಮಾಡುತ್ತಿಲ್ಲ. ನಮ್ಮ ರಾಜ್ಯದ ಸಂಸದರು ತುಟಿ ಬಿಚ್ಚುತ್ತಿಲ್ಲ. ಒಂದು ಪ್ರತ್ಯೇಕ ರೈಲಿಗಾಗಿ ಈ ಭಾಗದ ಜನ ಇನ್ನೆಷ್ಟು ದಿನ ಕಾಯಬೇಕು?
-ವೆಂಕಟೇಶ್ ಮುದಗಲ್, ಕಲಬುರಗಿ
**
ಕಳಕಳಿ ಮಾತಲ್ಲಷ್ಟೇ ಇದ್ದರೆ ಸಾಲದು
ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿಯ ಬಳಿ ಹನುಮಂತನಗರ ಎಂಬಲ್ಲಿ ಆತ್ಮಲಿಂಗೇಶ್ವರ ಧಾರ್ಮಿಕ ಕ್ಷೇತ್ರವಿದೆ. ಪ್ರೇಕ್ಷಣೀಯ ಸ್ಥಳವೂ ಆಗಿರುವ ಇಲ್ಲಿಗೆ ನಮ್ಮ ಮಹಿಳೆಯರ ತಂಡ ಇತ್ತೀಚೆಗೆ ಭೇಟಿ ನೀಡಿತ್ತು. ಆದರೆ ಬೆಳಿಗ್ಗೆ ಎಂಟು ಗಂಟೆಗೆ ಅಲ್ಲಿಗೆ ತಲುಪಿದ ನಮಗೆ, ಸುಸ್ಥಿತಿಯಲ್ಲಿ ಇಲ್ಲದ ಅಲ್ಲಿನ ಶೌಚಾಲಯವನ್ನು ಕಂಡು ಆಘಾತವಾಯಿತು. ನಮ್ಮ ಪರಿಸ್ಥಿತಿಯಂತೂ ಯಾವ ಶತ್ರುವಿಗೂ ಬೇಡ ಎಂಬಂತಾಗಿತ್ತು.
ದಿನವೂ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ಅಲ್ಲಿಗೆ ಬರುವ ವಾಹನಗಳಿಗೆ ನಿಲುಗಡೆ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ. ಆದರೆ ಉಪಯೋಗಿಸಲು ಅರ್ಹವಾಗಿರುವ ಶೌಚಾಲಯವಿಲ್ಲ. ಮಹಿಳೆಯರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕಳಕಳಿಯು ಬಾಯಿಮಾತಿನಲ್ಲಷ್ಟೇ ಇದ್ದರೆ ಸಾಲದು, ಕಾರ್ಯರೂಪಕ್ಕೆ ಬರಬೇಕು.
-ನಾಗಮಣಿ ಎಸ್.ಎನ್., ಬೆಂಗಳೂರು
**
ಪ್ರಯಾಣ ದರ: ಬೇಕು ಕಡಿವಾಣ
ಹಬ್ಬ ಹರಿದಿನಗಳ ಸಮಯದಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡು– ಮೂರು ಪಟ್ಟು ಹೆಚ್ಚಿಸುತ್ತಾರೆ. ಮಿತಿಮೀರಿ ಟಿಕೆಟ್ ದರವನ್ನು ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆಯು ಹಲವು ವರ್ಷಗಳಿಂದಲೂ ಸೂಚನೆ ನೀಡುತ್ತಲೇ ಬಂದಿದೆ. ಬೇಕಾಬಿಟ್ಟಿಯಾಗಿ ಪ್ರಯಾಣ ದರ ಏರಿಕೆ ಮಾಡುವವರ ವಿರುದ್ಧ ಪರ್ಮಿಟ್ ರದ್ದು ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ
ಎಚ್ಚರಿಸುತ್ತಿರುತ್ತದೆ. ಇದನ್ನು ಖಾಸಗಿ ಬಸ್ ಮಾಲೀಕರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ.
ಈ ವರ್ಷ ಸಹ ಎರಡನೇ ಶನಿವಾರ ಮತ್ತು ದೀಪಾವಳಿ ಹಬ್ಬದ ಕಾರಣದಿಂದ ಸಾಲುಸಾಲು ರಜೆಗಳಿವೆ. ಹೀಗಾಗಿ, ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣ ದರ ಹೆಚ್ಚಿಸಿರುವ ದೂರುಗಳು ಕೇಳಿಬರುತ್ತಿವೆ. ಇಲಾಖೆ ಯಾವ ರೀತಿ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
-ಜಿ.ನಾಗೇಂದ್ರ ಕಾವೂರು, ಸಂಡೂರು
**
ಕಲಿಕೆ ಭಾಗ್ಯ: ಅನುದಾನ ಕಡಿತ ಸಲ್ಲ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ‘ಕಲಿಕೆ ಭಾಗ್ಯ’ ಯೋಜನೆಯಡಿ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನದ ಮೊತ್ತವನ್ನು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಕಡಿತ ಮಾಡಿರುವುದು ಆಘಾತ ತಂದಿದೆ.
ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸಲು ದಶಕದಷ್ಟು ಕಾಲ ತಡಮಾಡಿದ್ದಲ್ಲದೆ, ಅನುಷ್ಠಾನದ ಹಂತದಲ್ಲಿರುವ ಸಹಾಯಧನದ ಮೊತ್ತವನ್ನು ಕಡಿತ ಮಾಡಿರುವುದು ಸಮರ್ಥನೀಯವಲ್ಲ. ಈ ಸೌಲಭ್ಯ ಒದಗಿಸಲು ಸಾವಿರಾರು ಕೋಟಿ ರೂಪಾಯಿಯ ನಿಧಿ ಲಭ್ಯವಿದ್ದರೂ ಕಡಿತ ಮಾಡಲು ಇರುವ ನೆಪಗಳು ಗೌಣ ಎಂಬಂತಿವೆ.
ಅರ್ಹರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದರೆ, ಅನುದಾನ ಹೆಚ್ಚಿಸುವ ಕಾಳಜಿ ಅಗತ್ಯ. ಅಲ್ಲದೆ ಅರ್ಹ
ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಆಸಂಘಟಿತ
ವಲಯದ ಕಾರ್ಮಿಕ ಕುಟುಂಬಗಳ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅತ್ಯಗತ್ಯವಾಗಿ
ಅನುಷ್ಠಾನಕ್ಕೆ ತರಬೇಕು.
-ಟಿ.ವಿ.ನಾಗರಾಜ, ಬೆಂಗಳೂರು
**
ಬಾ ದೀಪವೇ...
ಮನೆ ಮನಗಳಲಿ
ಅಡಗಿದ ಕೊಳೆಯ ತೊಳೆದು
ಗಾಢಾಂಧಕಾರವ ಕಳೆದು
ಸತ್ಯ, ಶುದ್ಧ ಕಾಯಕದ
ಹೆದ್ದಾರಿಗೆ ಬೆಳಕು ಚೆಲ್ಲಿ
ವಿಶ್ವಪ್ರೇಮ ಮೂಡಿಸುವ
ಅಭಿವೃದ್ಧಿಯ ಬದುಕಿಗೆ
ನಂದಾದೀಪವಾಗಿ
ಬಾ... ಓ ದೀಪವೇ...
-ಎಚ್.ಕೆ.ಕೊಟ್ರಪ್ಪ, ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.