ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಸ್ವಚ್ಛತೆಗೆ ಸಿಗಲಿ ಸಾಮೂಹಿಕ ಸ್ಪರ್ಶ

ಸ್ವಚ್ಛತೆಯು ಆಂದೋಲನವಾಗಬೇಕು ಎಂದು ಎಚ್.ಬಿ.ಚಂದ್ರಶೇಖರ್‌ ಅವರು ಅಭಿಪ್ರಾಯಪಟ್ಟಿರುವುದು
(ಸಂಗತ, ಜ. 31) ಸರಿಯಾಗಿದೆ. ಗ್ರಾಮಗಳನ್ನು ಬಯಲು ಬಹಿರ್ದೆಸೆಮುಕ್ತ ಮಾಡುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗುವ ಕೆಲವು ಶೌಚಾಲಯಗಳು ಸರ್ಕಾರದ ಸಹಾಯಧನ ಪಡೆಯುವುದಕ್ಕಷ್ಟೇ ಸೀಮಿತವಾಗಿರುವುದು ದುರ್ದೈವ. ಅವು ಕುರಿ, ಕೋಳಿ, ನಾಯಿಯ ಗೂಡುಗಳಾಗಿ, ಸೌದೆ, ಕೃಷಿ ಯಂತ್ರೋಪಕರಣ ಇಡುವ ತಾಣಗಳಾಗಿ ಪರಿವರ್ತನೆಯಾಗುತ್ತಿವೆ. ಶಾಲಾ ಸ್ವಚ್ಛತಾ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಬಗ್ಗೆ ಪರ, ವಿರೋಧದ ಚರ್ಚೆ ಏನೇ ಇದ್ದರೂ 90ರ ದಶಕದವರೆಗೂ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಾಲಾ ಆವರಣದ ಸ್ವಚ್ಛತೆ ಮಕ್ಕಳಿಂದಲೇ ನಡೆಯುತ್ತಿತ್ತು. ಅಲ್ಲದೆ ಅದೊಂದು ಸಾಮಾನ್ಯ ವಿಷಯವಾಗಿತ್ತು. ಪೋಷಕರು ಸಹ ಅದನ್ನು ಪ್ರಶ್ನಿಸುತ್ತಿರಲಿಲ್ಲ.

ಗ್ರಾಮದ ಜನರೆಲ್ಲರೂ ಸೇರಿ ವಾರದಲ್ಲಿ ಒಂದು ದಿನ ಗ್ರಾಮವನ್ನು ಸ್ವಚ್ಛ ಮಾಡುವಂತಹ ಪರಿಪಾಟ ಕೆಲವು ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ರೂಢಿಯಲ್ಲಿತ್ತು. ಅಂದು ಸ್ವಚ್ಛತೆಗೆ ಸಿಗುತ್ತಿದ್ದ ಸಾಮೂಹಿಕ ಸ್ಪರ್ಶ ಇಂದು ಕಾಣದಂತಾಗಿದೆ. ನಮ್ಮ ಮನೆಯ ಮುಂದೆ ನಾವೇ ಸೃಷ್ಟಿಸಿದ ಅನೈರ್ಮಲ್ಯವನ್ನು ಪೌರಕಾರ್ಮಿಕರು ಬಂದು ಸ್ವಚ್ಛಗೊಳಿಸಲಿ ಎಂಬ ಮನೋಭಾವ ಹೆಚ್ಚಾಗುತ್ತಿದೆ. ಇದನ್ನು ಹೋಗಲಾಡಿಸಿ, ನೈರ್ಮಲ್ಯದ ಬಗ್ಗೆ ಸರ್ವರಲ್ಲೂ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಶಿಕ್ಷಣದ ಗುರಿಯಾಗಬೇಕು. ಆಗ ಮಾತ್ರ ಸ್ವಚ್ಛತೆಯು ಆಂದೋಲನವಾಗಿ ರೂಪುಗೊಳ್ಳಲು ಸಾಧ್ಯ.

-ಸಿ.ಎಸ್.ಸುರೇಶ್, ಚನ್ನರಾಯಪಟ್ಟಣ

**

ಸಾಂವಿಧಾನಿಕ ಮುಖ್ಯಸ್ಥರಿಂದಲೇ ಪ್ರತಿಭಟನೆ!

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಎಸ್‌ಎಫ್‌ಐ ಕಾರ್ಯಕರ್ತರು ತಮ್ಮ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ್ದನ್ನು ಖಂಡಿಸಿ, ರಸ್ತೆಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು ವರದಿಯಾಗಿದೆ. ಹೀಗೆ ರಾಜ್ಯಪಾಲರು ಸ್ವಯಂ ಪ್ರತಿಭಟನೆಗೆ ಮುಂದಾಗಿದ್ದು ಸರಿಯಲ್ಲ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರು ಪ್ರತಿಭಟನೆಗೆ ಇಳಿಯುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಹೆಚ್ಚೆಂದರೆ ಅವರು ಈ ವಿಚಾರವವನ್ನು ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಗಮನಕ್ಕೆ ತಂದು, ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಬಹುದಿತ್ತು. ಭಾರತದ ರಾಜಕೀಯದ ಇತಿಹಾಸದಲ್ಲಿ ರಾಜ್ಯಪಾಲರು ತಾವೇ ಪ್ರತಿಭಟನೆಗೆ ಇಳಿದಿದ್ದು ಬಹುಶಃ ಇದೇ ಮೊದಲು ಇರಬೇಕು!

-ಕೆ.ವಿ.ವಾಸು, ಮೈಸೂರು

**

ವೈಯಕ್ತಿಕ ದ್ವೇಷ ಈ ಮಟ್ಟಕ್ಕೂ ಇಳಿಸುತ್ತದೆ!

ಬೀದರ್ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಹಾಲಿ ಸಂಸದ ಭಗವಂತ ಖೂಬಾ ಅವರ ಬದಲು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಔರಾದ್ ಶಾಸಕ ಪ್ರಭು ಚವಾಣ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಎರಗಿರುವುದು ಅವರ ಆಷಾಢಭೂತಿತನವನ್ನು ತೋರಿಸುತ್ತದೆ. ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಸಾವಿರಾರು ಜನರ ಮುಂದೆ ಕಾಲಿಗೆ ಬೀಳುವುದು ಅವರ ಬಲಹೀನತೆಯನ್ನು ಜಗಜ್ಜಾಹೀರು ಮಾಡಿದೆ. ಇಂತಹ ನಡೆಯು ಹಿಂದಿನ ರಾಜರ ಆಡಳಿತವನ್ನು ನೆನಪಿಸುತ್ತದೆ. ವೈಯಕ್ತಿಕ ದ್ವೇಷ ಯಾವ ಮಟ್ಟಕ್ಕೆ ತನ್ನ ಸ್ವಾಭಿಮಾನವನ್ನು ಮರೆಸುತ್ತದೆ ಎಂಬುದು ತಿಳಿಯುತ್ತದೆ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ತಂದೆ, ತಾಯಿ, ಗುರು, ಹಿರಿಯರಿಗೆ ಪಾದ ಸ್ಪರ್ಶಿಸಿ ನಮಸ್ಕರಿಸುವುದು ಸಂಪ್ರದಾಯ. ಆದರೆ ಶಾಸಕರ ಈ ನಡೆಯು ನೋಡುವವರಲ್ಲಿ ಅಸಹ್ಯ ಹುಟ್ಟಿಸುವಂತಿತ್ತು. 

-ಮಲ್ಲತಹಳ್ಳಿ ಎಚ್. ತುಕಾರಾಂ, ಬೆಂಗಳೂರು

**

ಸಹನೆಗೆ ಸವಾಲೊಡ್ಡುತ್ತಿದೆ ತ್ಯಾಜ್ಯ ಪರ್ವತ

ಸಂಘಟನೆಯೊಂದು ತುಮಕೂರಿನಿಂದ ಬೆಂಗಳೂರಿನವರೆಗೆ ಇತ್ತೀಚೆಗೆ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೆ. ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ನಾವು ಹೊಗಳಿಕೊಳ್ಳುವ ಬೆಂಗಳೂರಿಗೆ ಪ್ರವೇಶಿಸುವ ಹಂತದಲ್ಲಿ ಸಿಗುವ ಊರುಗಳನ್ನು ನೋಡಿ ಗಾಬರಿಯಾಯಿತು. ರಸ್ತೆಯ ಆಚೀಚೆ, ಚರಂಡಿಗಳಲ್ಲಿ ಪ್ಲಾಸ್ಟಿಕ್ಕಿನ ರಾಶಿ. ಮುಖ್ಯವಾಗಿ, ನೆಲಮಂಗಲ ಪಟ್ಟಣದ ಮುಖ್ಯರಸ್ತೆಯ ಆಚೀಚೆ ಕಸದ ಪರ್ವತಗಳನ್ನು ನೋಡಿ ದಿಗ್ಭ್ರಮೆ ಆಯಿತು. ಅದರಲ್ಲೂ ಇವು ದೇವಸ್ಥಾನ, ಮಸೀದಿಯಂತಹ ಧಾರ್ಮಿಕ ಸ್ಥಳಗಳ ಮುಂದೆ ಇರುವುದನ್ನು ಕಂಡು ಅಚ್ಚರಿಯಾಯಿತು.

ಇಂತಹ ಕಸದ ರಾಶಿಗಳ ಆಚೀಚೆ ಬದುಕುವ, ಇವು ಹೊರಸೂಸುವ ದುರ್ಗಂಧ, ತರುವ ರೋಗರುಜಿನಗಳನ್ನು ಸಹಿಸಿಕೊಳ್ಳುತ್ತಿರುವ ನಾಗರಿಕರ ಅಪಾರ ತಾಳ್ಮೆ, ಸಹನೆ ನೋಡಿ ಸೋಜಿಗವೆನಿಸಿತು. ಇಂತಹ ವಾತಾವರಣ ನಿರ್ಮಾಣದಲ್ಲಿ ನಾಗರಿಕರ ಪಾಲೂ ದೊಡ್ಡದಿದೆ. ರಾಜ್ಯದ ನಗರಾಭಿವೃದ್ಧಿ ಸಚಿವರು ಮತ್ತು ಆರೋಗ್ಯ ಸಚಿವರು ಪಾದಯಾತ್ರೆ ಕೈಗೊಳ್ಳುವ ಮೂಲಕ ವಸ್ತುಸ್ಥಿತಿಯನ್ನು ಅರಿತು, ನಗರ, ಪಟ್ಟಣಗಳನ್ನು ಸ್ವಚ್ಛವಾಗಿಡಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

-ಸರ್ಜಾಶಂಕರ್ ಹರಳಿಮಠ, ಶಿವಮೊಗ್ಗ

**

ಗ್ಯಾರಂಟಿಗೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ

ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚು ಸ್ಥಾನಗಳನ್ನು ಪಡೆಯದಿದ್ದರೆ, ಈಗ ಜಾರಿಯಲ್ಲಿರುವ ಐದು ಗ್ಯಾರಂಟಿಗಳನ್ನು ರದ್ದು ಮಾಡುವುದು ಸೂಕ್ತ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದು ಸರಿಯಲ್ಲ. ಏಕೆಂದರೆ, ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ತನ್ನ ಕಾರ್ಯಸೂಚಿಯಲ್ಲಿ ಅಳವಡಿಸಿ, ಪಕ್ಷ ಅಧಿಕಾರಕ್ಕೆ ಬಂದರೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗ ಗ್ಯಾರಂಟಿಗಳು ಜಾರಿಯಲ್ಲಿವೆ. ಇದಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಜನರ ಮುಂದಿರುವ ಸವಾಲು, ಸಮಸ್ಯೆಗಳೇ ಬೇರೆ. ಪ್ರಸ್ತುತ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಗೆಲ್ಲುವ ರಣತಂತ್ರ ರೂಪಿಸಬೇಕು. ಅದುಬಿಟ್ಟು ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸಿದರೆ ಅದು ಜನರಿಗೆ ಮಾಡುವ ವಂಚನೆ ಎಂದೇ ಪರಿಗಣಿಸಬೇಕಾಗುತ್ತದೆ.

-ಆರ್.ವೆಂಕಟರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT