ಆಟೊ ಚಾಲಕರ ಅಮಾನುಷ ನಡೆ
ಬೆಂಗಳೂರಿನಲ್ಲಿ ಸೋಮವಾರ ನಡೆದ ಬಂದ್ ಸಂದರ್ಭದಲ್ಲಿ ಕೆಲವು ಆಟೊ ಚಾಲಕರು ನಡೆಸಿದ ಅಟಾಟೋಪವನ್ನು ಖಂಡಿಸಬೇಕಿದೆ. ರ್‍ಯಾಪಿಡೊ ಚಾಲಕರು ಸಹ ಎಲ್ಲರ ಹಾಗೆ ಬದುಕು ಕಟ್ಟಿಕೊಳ್ಳಲು ರಾಜಧಾನಿಗೆ ಬಂದ ಯುವಕರೇ ಆಗಿದ್ದಾರೆ. ತಮಗೆ ಆಗಿದೆ ಎನ್ನಲಾದ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಹಕ್ಕು ಆಟೊ ಚಾಲಕರಿಗೆ ನಿಸ್ಸಂದೇಹವಾಗಿಯೂ ಇದೆ. ಆದರೆ ಇವರಂತೆಯೇ ದುಡಿದು ತಿನ್ನಲು ಬಂದ ಯುವಕರ ಮೇಲೆ ಕೈಮಾಡುವ ಅಮಾನುಷ ನಡೆಯು ಆಟೊ ಚಾಲಕರ ಬಗೆಗಿನ ಸಾರ್ವಜನಿಕ ಅಭಿಪ್ರಾಯವನ್ನು ಇನ್ನಷ್ಟು ಕುಂಠಿತಗೊಳಿಸಿದೆ.
ಕಡಿಮೆ ಖರ್ಚಿನಲ್ಲಿ ಪ್ರಯಾಣ ಬಯಸುವ ಜನರಿಗೆ ಅನುಕೂಲಕರವಾಗಿರುವ ರ್‍ಯಾಪಿಡೊ ಸೇವೆಯನ್ನು ತಡೆಯುವ ಹಕ್ಕನ್ನು ಇವರಿಗೆ ಕೊಟ್ಟವರು ಯಾರು? ಇಂತಹ ಗೂಂಡಾ ನಡೆ ನಿಲ್ಲಲೇಬೇಕು.
-ಕೆ.ಪುರುಷೋತ್ತಮ ರೆಡ್ಡಿ, ಪಾವಗಡ
***
ಬಾಲಕನಿಂದ ವಾಹನ ಚಾಲನೆ ಖಂಡನೀಯ
ಚಾಲನಾ ಪರವಾನಗಿ (ಡಿ.ಎಲ್) ಇಲ್ಲದೆ ಓಮ್ನಿ ವಾಹನ ಚಲಾಯಿಸುತ್ತಿದ್ದ ಬಾಲಕನ ತಂದೆಗೆ ಶಿವಮೊಗ್ಗದ ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹ 25 ಸಾವಿರ ದಂಡ ವಿಧಿಸಿರುವುದು (ಪ್ರ.ವಾ., ಸೆ. 12) ಸ್ವಾಗತಾರ್ಹ ಕ್ರಮವಾಗಿದೆ. ಇಂದು ರಾಜ್ಯದೆಲ್ಲೆಡೆ ಡಿ.ಎಲ್. ಇಲ್ಲದೇ ಎರಡು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ವೇಗವಾಗಿ ಓಡಿಸುವವರ ಸಂಖ್ಯೆ ಅಧಿಕವಾಗಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ವಾಹನಗಳನ್ನು ಹೊಂದಿರುವ ಎಲ್ಲಾ ಪೋಷಕರು ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಪರವಾನಗಿ ಇಲ್ಲದ ಮಕ್ಕಳ ಕೈಯಲ್ಲಿ ವಾಹನ ಚಲಾಯಿಸಲು ಕೊಡಬಾರದು.
-ಮಲ್ಲನಗೌಡ ಪಾಟೀಲ, ರಂಕಲಕೊಪ್ಪ, ರಾಮದುರ್ಗ
***
ಸ್ವಾಮೀಜಿಯಿಂದ ಬೆದರಿಕೆ ತರವೇ?
ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಮುಂದುವರಿಸಬೇಕು ಎಂದು ಶ್ರೀ ಕೃಷ್ಣಧಾಮ ಚಾತುರ್ಮಾಸ್ಯ ಸಮಿತಿ, ವಿಶ್ವ ಹಿಂದೂ ಪರಿಷತ್ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಪೇಜಾವರ ಮಠಾಧೀಶರ ನೇತೃತ್ವದಲ್ಲಿ ನಿರ್ಣಯಗಳನ್ನು ತೆಗೆದುಕೊಂಡಿರುವುದು (ಪ್ರ.ವಾ., ಸೆ.11) ಅವೈಚಾರಿಕ ನಿಲುವಾಗಿದೆ.
‘ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸುವ ಪ್ರಯತ್ನ ಆಗಬೇಕೆ ವಿನಾ ಧರ್ಮವನ್ನೇ ಕಿತ್ತು ಹೊರಹಾಕುತ್ತೇವೆ ಎನ್ನುವುದಲ್ಲ. ದೇಶದ ತುಂಬ ಸನಾತನ ಧರ್ಮೀಯರಿದ್ದಾರೆ’ ಎಂದಿರುವುದು ಮೇಲ್ನೋಟಕ್ಕೆ ಒಂದರ್ಧದಷ್ಟು ಸರಿಯೆನಿಸುತ್ತದೆ. ಆದರೆ ವಾಸ್ತವದಲ್ಲಿ ಬಹುಪಾಲು ಯಾವ ಸ್ವಾಮೀಜಿಗಳೂ ಸನಾತನ ಎಂದು ರೂಢಿಗತವಾಗಿ ಕರೆಯುತ್ತಿರುವ ಧರ್ಮದಲ್ಲಿನ ದೋಷಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಲೇ ಇಲ್ಲ. ಬದಲಿಗೆ ಆ ದೋಷಗಳು ವಿಜೃಂಭಿಸುವುದಕ್ಕೆ ಕಾರಣರಾಗಿರುವುದು ಕಂಡುಬರುತ್ತಿದೆ.
‘ಕಿರುತೆರೆ, ಒಟಿಟಿ, ಸಾಮಾಜಿಕ ಮಾಧ್ಯಮಕ್ಕೂ ಸೆನ್ಸಾರ್ ತರಬೇಕು’ ಎಂಬ ಅವರ ಆಗ್ರಹ, ಸಂವಿಧಾನದತ್ತವಾದ ವ್ಯಕ್ತಿಯ ವಾಕ್ ಸ್ವಾತಂತ್ರ್ಯವನ್ನು ಕಸಿಯುವ ನಿರಂಕುಶಾಧಿಕಾರದ ಅಭೀಪ್ಸೆಯನ್ನು ವ್ಯಕ್ತಪಡಿಸುತ್ತದೆ. ಮಣಿಪುರದ ಬೆಂಕಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವುದು ಪ್ರಶಂಸಾರ್ಹವಾದರೂ ಕಿಡಿ ಹೊತ್ತಿಸಿದವರ ಬಗೆಗೆ ಮತ್ತು ಆ ಕಾಳ್ಗಿಚ್ಚನ್ನು ಆರಿಸಲು ಪ್ರಯತ್ನ ಮಾಡದೇ ಇರುವವರ ಬಗ್ಗೆ ಜಾಣಮೌನ ತಳೆದದ್ದು ಯಾಕೆ ಎಂಬ ಪ್ರಶ್ನೆ ಉಳಿಯುತ್ತದೆ. ಮಹಿಷಾಸುರ ಉತ್ಸವದ ಆಕಾಂಕ್ಷಿಗಳ ತರ್ಕಬದ್ಧವಾದ ಅಭಿಮತವನ್ನು ಗ್ರಹಿಸಲಾಗದೆ, ‘ಶಕುನಿ, ದುಶ್ಶಾಸನರ ದಸರಾ’ ಎಂದು ಗೇಲಿ ಮಾಡಿರುವುದು ಪಟ್ಟಭದ್ರಹಿತಾಸಕ್ತಿಯ ಸೂಚಕವಾಗಿದೆ. ಇದು ಎಂತಹ ಧಾರ್ಮಿಕತೆ ಅಥವಾ ಸಂಸ್ಕೃತಿ ಎಂದು ವಿಚಾರವಂತ ಸಾರ್ವಜನಿಕರು ಪ್ರಶ್ನಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ‘... ಶ್ರೀಗಳು ಧ್ವನಿ ಎತ್ತಿದರೆ ಮಹದೇವ, ಪರಮೇಶ್ವರರೆಲ್ಲರೂ ಮುದುಡಿಕೊಳ್ಳಬೇಕಾಗುತ್ತದೆ’ ಎಂದು ಬೆದರಿಕೆಯನ್ನು ಒಡ್ಡಿರುವುದು ವಿಷಾದನೀಯ ಹಾಗೂ ಖಂಡನೀಯವಾದುದಾಗಿದೆ.
-ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು
***
ರಾಜಕೀಯ ಹೊಟ್ಟೆಪಾಡಿಗಾಗಿ ಅಲ್ಲ
ಎಲ್ಲಾ ಪಕ್ಷಗಳು ಮಾಡುವುದು ತಮ್ಮ ಉಳಿವಿಗಾಗಿ ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಉದ್ದೇಶಿಸಿ ಕೆ.ವಿ.ವಾಸು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಸೆ. 12). ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯಾರ ಉಳಿವಿಗಾಗಿ, ಯಾರ ಅಸ್ತಿತ್ವಕ್ಕಾಗಿ ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಪ್ರಶ್ನೆಗೆ ಉತ್ತರ, ಅದು ದೇಶದ ಉಳಿವಿಗಾಗಿ ಎಂಬ ಉತ್ತರವಾಗದೆ ‘ಅಪ್ಪ ಮಕ್ಕಳ ಪಕ್ಷ’ಕ್ಕಾಗಿ (ಕುಟುಂಬ ಪಕ್ಷ) ಎಂಬ ಉತ್ತರವಾಗುತ್ತದೆ. ಏಕೆಂದರೆ ಈ ಹಿಂದೆ ಜೆಡಿಎಸ್ ಅನ್ನು ಕಟ್ಟಿ ಬೆಳೆಸಿದ ಎಂ.ಪಿ.ಪ್ರಕಾಶ್, ಸಿಂಧ್ಯಾ, ಸಿದ್ದರಾಮಯ್ಯನವರಂತಹ ಅನೇಕ ಹಿರಿಯರನ್ನು ಬದಿಗೆ ಸರಿಸಿ, ಜಾತ್ಯತೀತ ಮೌಲ್ಯವನ್ನೂ ಕಡೆಗಣಿಸಿ ಒಮ್ಮೆ ಬಿಜೆಪಿಯೊಂದಿಗೆ ಮತ್ತೊಮ್ಮೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಆ ಮೂಲಕ ಅದು ಸಾರ್ವಜನಿಕ ಪಕ್ಷವಾಗದೆ ಕುಟುಂಬದ ಪಕ್ಷವಾಗಿಬಿಟ್ಟಿತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಹ ಜೆಡಿಎಸ್ ಇದೇ ಬಿಜೆಪಿ ಕುರಿತು ಆಡಿದ ಮಾತುಗಳನ್ನು ಗಮನಿಸಿದರೆ ಸಾಕು, ಅದರ ಸೈದ್ಧಾಂತಿಕ ಬದ್ಧತೆ ಎಷ್ಟು ಗೌಣ ಎಂಬುದು ಅರ್ಥವಾಗುತ್ತದೆ. ಮತದಾರರು ಸಹ ಇದನ್ನು ಮರೆತಿಲ್ಲ ಅಲ್ಲವೇ?
ಇಲ್ಲಿ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ...’ ಎಂಬ ಮಾತು ಕೇಳಿಬರುತ್ತಿರುವುದು ಸಹ ಸರಿಯಲ್ಲ. ಏಕೆಂದರೆ ಹೊಟ್ಟೆಪಾಡಿಗಾಗಿ ಮಾಡಲು ಬೇಕಾದಷ್ಟು ಬೇರೆ ಬೇರೆ ಅವಕಾಶಗಳಿವೆ. ಆದರೆ ರಾಜಕೀಯ ಅದಕ್ಕಾಗಿ ಅಲ್ಲ. ರಾಜಕೀಯ ಇರುವುದು ದೇಶದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ದೇಶದ ಆರ್ಥಿಕ ಅಭಿವೃದ್ಧಿಗಾಗಿಯೇ ವಿನಾ ಹೊಟ್ಟೆಪಾಡಿನ ರಾಜಕೀಯಕ್ಕಾಗಿ ಅಲ್ಲ. ರೈತರ ಸಂಕಷ್ಟ, ನಿರುದ್ಯೋಗದಂತಹ ಅನೇಕ ಸಮಸ್ಯೆಗಳು ದೇಶವನ್ನು ಕಾಡುತ್ತಿರುವಾಗ ಅವುಗಳ ಪರಿಹಾರಕ್ಕಾಗಿ ಹೋರಾಟ ಮಾಡಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬಹುದಿತ್ತು.
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
***
ಹೆಣ ಹೋಗುವುದೆಲ್ಲಿಗೆ?!
‘ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ’
ಸಿದ್ದರಾಮಯ್ಯ ಹೇಳಿಕೆ (ಪ್ರ.ವಾ., ಸೆ.12).
ಹೌದು ಸ್ವಾಮಿ! ಜೀವಂತ
ಇರುವವರು ಮಾತ್ರ ಪಕ್ಷಗಳಿಗೆ
ವಲಸೆ ಹೋಗುವುದು,
ಹೆಣ ಖಂಡಿತಾ ಪಕ್ಷಕ್ಕೆ ಹೋಗಲಾರದು,
ಅದೇನಿದ್ದರೂ ಸ್ಮಶಾನಕ್ಕೆ
ಹೋಗುವುದು ತಾನೇ?!
-ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.