ಗೆಲುವಿನ ತಂತ್ರ ಕಲಿಯಲು ಪ್ರವಾಸ?!

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಆಮಂತ್ರಣದ ಮೇರೆಗೆ ಡಿ.ಕೆ.ಶಿವಕುಮಾರ್ ಅವರು ಸಕುಟುಂಬ ಸಮೇತರಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಕಮಲಾ ಅವರ ಕುಟುಂಬಕ್ಕೆ ಸೇರಿದ ವಿಶ್ವಸ್ಥ ಮಂಡಳಿಗೆ ಶಿವಕುಮಾರ್ ದೇಣಿಗೆ ನೀಡಿರುವುದು ಈ ಆಮಂತ್ರಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಜೊತೆಗೆ ಬೇರೆ ಉದ್ದೇಶಗಳೂ ಇರಬಹುದು.

ತಮ್ಮವರನ್ನು ಗೆಲ್ಲಿಸುವಲ್ಲಿ ನಿಪುಣರಾಗಿರುವ ಶಿವಕುಮಾರ್ ಅಲ್ಲಿ ಕಮಲಾ ಅವರಿಗೆ ಗೆಲುವಿನ ತಂತ್ರಗಳನ್ನು ಹೇಳಿಕೊಡಲೂ ಹೋಗಿರಬಹುದು. ಉಪಾಧ್ಯಕ್ಷೆಯಾಗಿರುವ ಕಮಲಾ ಇದೀಗ ಅಧ್ಯಕ್ಷೆಯಾಗಲು ಹೊರಟಿರುವಾಗ, ತಾವು ಉಪಮುಖ್ಯಮಂತ್ರಿಗಿರಿಯಿಂದ ಮುಖ್ಯಮಂತ್ರಿ‘ಗಿರಿ’ಗೆ ಏರಲು ನೆರವಾಗುವ ಪಟ್ಟುಗಳನ್ನು ಆಕೆಯಿಂದ ಕಲಿಯುವ ಉದ್ದೇಶವೂ ಇದ್ದೀತು. ಕಮಲಾ ಹ್ಯಾರಿಸ್ ಗೆದ್ದರೆ, ಆ ಗೆಲುವಿನ ಶ್ರೇಯಸ್ಸಿನ ಒಂದು ಭಾಗ ಕರ್ನಾಟಕಕ್ಕೂ ಸಲ್ಲತಕ್ಕದ್ದು!

–ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಹೆಣ್ಣುಭ್ರೂಣ ಹತ್ಯೆ: ಬೇಕು ಆಯೋಗ

ಮಂಡ್ಯ ಜಿಲ್ಲೆಯ ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ದುಷ್ಟಜಾಲವನ್ನು ಭೇದಿಸಿ ಇದುವರೆಗೆ 30 ಆರೋಪಿಗಳನ್ನು ಪತ್ತೆ ಹಚ್ಚಿರುವ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯ. ಬರೀ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಷ್ಟು ಆರೋಪಿಗಳು ಇರುವುದಾದರೆ, ಇದುವರೆಗೆ ಸಾವಿರಾರು ಹೆಣ್ಣುಭ್ರೂಣ ಹತ್ಯೆ ನಡೆದಿರುವುದರಿಂದ ಇಂತಹ ಎಷ್ಟು ಜಾಲಗಳು, ಎಷ್ಟು ಮಂದಿ ದುಷ್ಕೃತ್ಯ ಎಸಗಿರಬಹುದೋ ಎಂದು ಆತಂಕವಾಗುತ್ತದೆ. ಅವರನ್ನೆಲ್ಲಾ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವ ತುರ್ತು ಅವಶ್ಯಕತೆ ಇದೆ. ಇವರೆಲ್ಲಾ ಭ್ರೂಣಕ್ಕೆ ನೇರವಾಗಿ ಸಂಬಂಧಿಸಿಲ್ಲದ ಹೊರಗಿನ ಆರೋಪಿಗಳು. ಹಾಗೇ ಈ ರೀತಿಯ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಗೆ ಮುಂದಾದ, ಭ್ರೂಣಕ್ಕೆ ನೇರವಾಗಿ ಸಂಬಂಧಿಸಿದ ವ್ಯಕ್ತಿಗಳು ಮತ್ತು ಕುಟುಂಬದವರನ್ನೂ ಪತ್ತೆ ಹಚ್ಚಬೇಕು ಮತ್ತು ಅವರ ವಿವರಗಳೂ ಬಹಿರಂಗವಾಗಬೇಕು.

ಇದು ಕೊಲೆಗೆ ಸಮಾನವಾದ ಅಪರಾಧವಾದ್ದರಿಂದ ಎಲ್ಲ ಅಪರಾಧಿಗಳನ್ನೂ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ, ಮುಂದೆ ಈ ರೀತಿಯ ಅಪರಾಧ ಎಸಗಲು ಮುಂದಾಗುವವರೆಲ್ಲರಿಗೂ ಎಚ್ಚರಿಕೆಯನ್ನು ನೀಡುವಂತೆ ಆಗಬೇಕು. ಈ ಬಗೆಯ ಅಪರಾಧವನ್ನು ಪತ್ತೆ ಹಚ್ಚುವ ಕಾರ್ಯವೇ ಕಷ್ಟ ಎನಿಸಿರುವುದರಿಂದ ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಅತ್ಯಂತ ಸಾಮಾನ್ಯ ಎಂಬಂತೆ ಎಲ್ಲೆಡೆ ಎಗ್ಗಿಲ್ಲದೇ ನಡೆಯುತ್ತಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳು ಜನಿಸುವ ಪ್ರಮಾಣದಲ್ಲಿ ಅಗಾಧ ಕುಸಿತ ಉಂಟಾಗಿ, ವಿವಿಧ ಬಗೆಯ ಸಾಮಾಜಿಕ ಅಸಮತೋಲನ, ಅಪಸವ್ಯಗಳಿಗೆ ಕಾರಣವಾಗುತ್ತಿದೆ. ಹೀಗಾಗಿ, ಸರ್ಕಾರ ಇನ್ನು ಮುಂದಾದರೂ ಇಂತಹ ಅಪರಾಧವನ್ನು ಆಮೂಲಾಗ್ರವಾಗಿ ತಡೆಯುವ ದಿಸೆಯಲ್ಲಿ ಪ್ರತ್ಯೇಕ ಆಯೋಗವನ್ನು ರಚಿಸಿ, ಸ್ವಯಂಪ್ರೇರಣೆಯಿಂದ ವ್ಯಾಪಕ ಹಾಗೂ ವಿಕೇಂದ್ರೀಕೃತ ಕಾರ್ಯಾಚರಣೆಗೆ ಮುಂದಾಗಬೇಕು.

–ರೂಪ ಹಾಸನ, ಹಾಸನ

ನೆರೆಯ ತಮಿಳುನಾಡೂ ಕೈ ಜೋಡಿಸಲಿ

‘ಮೇಕೆದಾಟು ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೇ ಹೆಚ್ಚು ಉಪಯೋಗ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ನಿಜವೇ ಆದರೆ, ನೆರೆ ರಾಜ್ಯದವರ ಉಪಯೋಗಕ್ಕಾಗಿ ನಮ್ಮ ಜಮೀನು, ನಮ್ಮ ಹಣ, ನಮ್ಮ ಶ್ರಮವನ್ನು ವ್ಯಯಿಸಬೇಕೇ? ಅಂತಹ ಯೋಜನೆಯಾದರೂ ನಮಗೆ ಯಾಕೆ ಬೇಕು? ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ನೆರೆ ನಾಡಿಗೆ ಉಪಯೋಗ ಆಗಲೆಂದು ಈ ಯೋಜನೆಯ ಪರವಾಗಿ ಪಾದಯಾತ್ರೆ ಮಾಡಿತ್ತೇ?

ಒಂದು ಯೋಜನೆಯಿಂದ ಎರಡು ರಾಜ್ಯಗಳಿಗೆ ಅನುಕೂಲ ಆಗುತ್ತದೆ ಎನ್ನುವುದಾದರೆ, ಆ ಯೋಜನೆಗೆ ಬೇಕಾದ ಶ್ರಮ, ಹಣದಂತಹ ಎಲ್ಲವನ್ನೂ ಎರಡೂ ರಾಜ್ಯಗಳು ಪ್ರಯೋಜನದ ಅನುಸಾರ ಹಂಚಿಕೊಳ್ಳಬೇಕು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಮಾತಿನಂತೆ, ನಮ್ಮ ಹಣದಿಂದ ಅವರಿಗೆ ಹೆಚ್ಚು ಉಪಯೋಗ ಎಂದರೆ ಅರ್ಥಹೀನ. ಈ ನೆರೆರಾಜ್ಯವೋ ಹಣ ಕೊಡುವುದಿರಲಿ ಕನಿಷ್ಠ ಬೆಂಬಲವನ್ನೂ ನೀಡುವುದಿಲ್ಲ. ಜೊತೆಗೆ ಯೋಜನೆಯ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕುತ್ತದೆ.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ವಾಯುಮಾಲಿನ್ಯ: ಸರ್ಕಾರದ ಪಾಲೇ ಹೆಚ್ಚು

ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಗಾಳಿಯು ಹೆಚ್ಚಾಗಿ ಕಲುಷಿತವಾಗಿದೆ ಎಂಬ ಗ್ರೀನ್ ಪೀಸ್ ಸಂಸ್ಥೆಯ ವರದಿಯನ್ನು (ಪ್ರ.ವಾ., ಸೆ. 7) ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನಾಡಿನ ಜನರ ಕ್ಷಮೆ ಕೇಳಬೇಕು ಹಾಗೂ ಮಾಲಿನ್ಯ ನಿಯಂತ್ರಿಸುವುದಕ್ಕೆ ಕಾರ್ಯಪ್ರವೃತ್ತವಾಗಬೇಕು. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅದರಿಂದ ನಗರಗಳನ್ನು ಪರಿಸರಸ್ನೇಹಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ ನಗರಗಳ ವಿಸ್ತೀರ್ಣ ಹಿಗ್ಗುತ್ತಿದೆ. ಉದ್ಯೋಗ ಸೃಷ್ಟಿ ಹೆಸರಿನಲ್ಲಿ ಕೃಷಿ ಪರಿಸರವನ್ನು ನಾಶ ಮಾಡಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತೇವೆ ಎಂಬ ಭರವಸೆ ನೀಡುತ್ತಾರೆ. ಒಮ್ಮೆ ಕೈಗಾರಿಕೆ ಸ್ಥಾಪನೆಯಾದ ಮೇಲೆ ಉದ್ದಿಮೆದಾರರಿಗೆ ಲಾಭದ ದೃಷ್ಟಿಕೋನ ಇರುತ್ತದೆಯೇ ವಿನಾ ಪರಿಸರ ರಕ್ಷಣೆ ಬರೀ ಕಾಟಾಚಾರವಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಕೂಡ ಲಭಿಸುವುದಿಲ್ಲ. ಸರ್ಕಾರವೂ ಕೈಗಾರಿಕೆಗಳಿಂದ ಬರುವ ಲಾಭವನ್ನು ಮಾತ್ರ ನಿರೀಕ್ಷಿಸುತ್ತದೆಯೇ ವಿನಾ ಸರ್ಕಾರಕ್ಕಾಗಲಿ ಉದ್ದಿಮೆದಾರರಿಗಾಗಲಿ ಪರಿಸರ ರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎನ್ನುವುದಕ್ಕೆ ಈ ವರದಿ ಒಂದು ನಿದರ್ಶನ!

ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡದಿದ್ದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಮೂರ್ಖತನದ ಮಾತುಗಳಿಂದ ಕೃಷಿ ಕ್ಷೇತ್ರ ಸೊರಗುತ್ತದೆ. ಅಷ್ಟೇ ಅಲ್ಲ, ನಗರಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ವಾತಾವರಣವಿಲ್ಲದೆ ಕೊಳಚೆ ನೀರಿನಲ್ಲಿ ಬೆಳೆಯುವ ಸೊಪ್ಪು, ತರಕಾರಿಗಳು ನಗರಕ್ಕೆ ಸರಬರಾಜು ಆಗುತ್ತಿವೆ. ಒಟ್ಟಿನಲ್ಲಿ ಪರಿಸರ ಮಾಲಿನ್ಯಕ್ಕೆ ಆಡಳಿತಯಂತ್ರದ ತಪ್ಪು ನಿಯಮ ಹಾಗೂ ನಿರ್ಧಾರಗಳೇ ಕಾರಣ.

–ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.