ಅನಪೇಕ್ಷಿತ ಸಂದೇಶ: ಸಂಸ್ಥೆಗಳ ಕಿವಿ ಹಿಂಡಬೇಕಿದೆ
ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಮಾರಾಟದ ಉದ್ದೇಶದಿಂದ ಮೊದಲೆಲ್ಲ ಬರುತ್ತಿದ್ದ ಹಲವು ಅನಪೇಕ್ಷಿತ ಕರೆಗಳು ಕಿರಿಕಿರಿ ಉಂಟುಮಾಡುತ್ತಿದ್ದವು. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕಠಿಣ ಕ್ರಮಗಳನ್ನು ಕೈಗೊಂಡ ಬಳಿಕ ಈ ಸಮಸ್ಯೆ ಬಹುತೇಕ ದೂರವಾಗಿದೆ. ಆದರೆ ಈಗ ಅವರೆಲ್ಲ ಹೊಸತೊಂದು ಕಳ್ಳಮಾರ್ಗವನ್ನು ಕಂಡುಹಿಡಿದಿದ್ದಾರೆ. ಅದು ವಾಟ್ಸ್‌ಆ್ಯಪ್ ಮೂಲಕ ಸಂದೇಶ ರವಾನೆ!
ಯಾವುದಾದರೂ ಮಾಲ್‌ನ ಮಳಿಗೆಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಿಗೆ ಹೋದಾಗ ಅಲ್ಲಿ ನಮ್ಮ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ವಾಟ್ಸ್‌ಆ್ಯಪ್ ಮುಖಾಂತರ ಇಂತಹ ಕಂಪನಿಗಳು ತಮ್ಮ ಮಾರಾಟದ ಸಂದೇಶಗಳನ್ನು ತಳ್ಳುತ್ತಲೇ ಇರುತ್ತವೆ. ಇಂತಹ ಅನಪೇಕ್ಷಿತ ಸಂದೇಶಗಳೇ ತುಂಬಿಕೊಂಡಾಗ, ನಮಗೆ ಅಗತ್ಯವಿರುವ ಕೆಲವು ಮುಖ್ಯ ಸಂದೇಶಗಳು ನಮ್ಮ ಕಣ್ತಪ್ಪುವ ಅಪಾಯ ಇರುತ್ತದೆ. ಹೀಗಾಗಿ, ಪ್ರಾಧಿಕಾರವು ಇಂತಹ ಸಂಸ್ಥೆಗಳ ಕಿವಿ ಹಿಂಡಿ, ಸಾರ್ವಜನಿಕರಿಗಾಗುವ ತೊಂದರೆಗಳನ್ನು ದೂರ ಮಾಡಬೇಕು.
–ಬಿ.ಎನ್.ಭರತ್, ಬೆಂಗಳೂರು
***
ಭ್ರೂಣಹತ್ಯೆ: ಆಯೋಗ ರಚಿಸಿ ಪ್ರಯೋಜನವೇನು?
ಹೆಣ್ಣು ಭ್ರೂಣಹತ್ಯೆ ತಡೆಯುವ ದಿಸೆಯಲ್ಲಿ ಪ್ರತ್ಯೇಕ ಆಯೋಗವನ್ನು ನೇಮಿಸಬೇಕು ಎಂದು ರೂಪ ಹಾಸನ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಸೆ. 9). ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡುವವರಿಗೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ, ₹ 50 ಸಾವಿರ ದಂಡ ಮತ್ತು ಅವರ ವೈದ್ಯಕೀಯ ಪರವಾನಗಿ ರದ್ದುಪಡಿಸುವುದು ಮಾತ್ರವಲ್ಲದೆ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ಕಾನೂನು ಜಾರಿಗೆ ಬಂದು ಹಲವಾರು ವರ್ಷಗಳೇ ಆಗಿವೆ. ಆದರೆ ಇದುವರೆಗೂ ಒಬ್ಬರಿಗೂ ಶಿಕ್ಷೆ ಆದಂತಿಲ್ಲ. ಇನ್ನು ಆಯೋಗ ರಚಿಸಿ ಪ್ರಯೋಜನವೇನು? ಇರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಸಾಕು.
ಆತಂಕದ ಸಂಗತಿ ಎಂದರೆ, 2011ರ ಜನಗಣತಿಯಂತೆ ರಾಜ್ಯದ 14 ಜಿಲ್ಲೆಗಳಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಸಂಖ್ಯೆ 1,000ಕ್ಕೆ 924 ಇರುವುದು. ಮತ್ತೊಂದು ಆತಂಕದ ವಿಷಯವೆಂದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರತಿ ಸಾವಿರ ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಸಂಖ್ಯೆ ಬರೀ 634ರಿಂದ 750 ಇರುವುದು. ಈಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮಾತ್ರ ಹೆಣ್ಣು ಭ್ರೂಣಹತ್ಯೆ ತಡೆಯಲು ಸಾಧ್ಯ.
–ಬೂಕನಕೆರೆ ವಿಜೇಂದ್ರ, ಮೈಸೂರು
***
ರಾಜಕೀಯ ಲೆಕ್ಕಾಚಾರದ ಲಾಭ ಮುಖ್ಯಮಂತ್ರಿಗೆ!
ಸಂವಿಧಾನ ಅತ್ಯಂತ ಪವಿತ್ರವೆಂದು ದಿನಬೆಳಗಾದರೆ ಗಂಟಲು ಹರಿದುಕೊಳ್ಳುತ್ತಿರುವವರಿಗೆ, ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಕೇಂದ್ರ ಸರ್ಕಾರಕ್ಕೆ, ಪರಮೋಚ್ಚ ನ್ಯಾಯಪೀಠವಾದ ಸುಪ್ರೀಂ ಕೋರ್ಟ್‌ಗೆ ಇವೆಲ್ಲಕ್ಕೂ ಸಡ್ಡು ಹೊಡೆದಂತಿರುವುದು ದೆಹಲಿಯ ಮುಖ್ಯಮಂತ್ರಿ ಪ್ರಕರಣ. ಅವರು ಜೈಲು ಸೇರಿ ಹಲವಾರು ತಿಂಗಳೇ ಕಳೆದುಹೋಗಿದ್ದರೂ ಅವರ ಜಾಗಕ್ಕೆ ಯಾರೂ ಇಲ್ಲದೆಯೇ ದೆಹಲಿ ಆಡಳಿತ ನಡೆಯುತ್ತಿರುವ ಪ್ರಸಂಗ. ಜನಪ್ರತಿನಿಧಿಯೆಂದರೆ ಯಾರೂ ಸ್ಪರ್ಶಿಸಲಾರದಷ್ಟು ಅವರು ವಜ್ರಕವಚಧಾರಿಯೇ? ಗುರುತರ ಅಪರಾಧದ ಆರೋಪಿಯಾಗಿ ಜೈಲು ಸೇರಿದ್ದರೂ ಅವರನ್ನು ಯಾವುದೂ ಕದಲಿಸಲು ಸಾಧ್ಯವಿಲ್ಲವೆಂದರೆ ಅದೆಂಥ ಕಾನೂನು? ಬೇರೆಯವರಿಗೆ ಅಧಿಕಾರ ವಹಿಸಿಕೊಡಿ ಎಂದು ಹೇಳಲು ಸಾಧ್ಯವಾಗುತ್ತಿಲ್ಲವೇಕೆ? ಈ ದೇಶದ ಒಬ್ಬ ಸಾಮಾನ್ಯ ಪ್ರಜೆಯನ್ನು ಕಾಡುವ ಪ್ರಶ್ನೆಗಳಿವು.
ಕೇಂದ್ರ ಸರ್ಕಾರ ತನ್ನದೇ ರಾಜಕೀಯ ಲೆಕ್ಕಾಚಾರದಿಂದ ರಾಷ್ಟ್ರಪತಿ ಆಡಳಿತ ಹೇರಲು ಹಿಂಜರಿಯುತ್ತಿದೆ. ಸರ್ಕಾರ ರಾಜಕೀಯವಾಗಿ ಪರಿಹರಿಸಬಹುದಾದ ಸಮಸ್ಯೆಯಲ್ಲಿ ತಾನೇಕೆ ತಲೆಹಾಕಬೇಕೆಂದು ಹೈಕೋರ್ಟ್ ಸುಮ್ಮನಿದೆ. ಇದರ ಲಾಭ ಜೈಲಲ್ಲಿರುವ ಮುಖ್ಯಮಂತ್ರಿಗೆ! ‘ಹಲಬರ ನಡುವಣ ಹಾವು ಸಾಯದು’ ಎಂಬ ಕನ್ನಡ ಗಾದೆಗೆ ಈ ಪ್ರಸಂಗ ಅತ್ಯುತ್ತಮ ನಿದರ್ಶನ. ವಿರೋಧ ಪಕ್ಷಗಳ ಕೆಂಗಣ್ಣು ಮತ್ತು ಕೆನ್ನಾಲಿಗೆಗೆ ಹೆದರಿ ಕುಳಿತಿರುವ ಕೇಂದ್ರ ಸರ್ಕಾರದ ದೌರ್ಬಲ್ಯಕ್ಕೂ ಇದೊಂದು ಜ್ವಲಂತ ನಿದರ್ಶನ. ಸ್ವಾತಂತ್ರ್ಯಾನಂತರದಲ್ಲಿ ಇಂತಹ ಒಗಟಿನಂಥ ಪ್ರಕರಣ ಇದೇ ಎನಿಸುತ್ತದೆ.
–ಆರ್.ಲಕ್ಷ್ಮೀನಾರಾಯಣ, ಬೆಂಗಳೂರು
***
ವಾಗ್ವಾದ ಸಾಕು, ತಾಂತ್ರಿಕ ವಿವರ ನೀಡಿ
ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಉದ್ಘಾಟನೆ ಬಗೆಗಿನ ಎರಡು ವರದಿಗಳು (ಪ್ರ.ವಾ., ಸೆ. 6) ಅದರ ಹಿನ್ನೆಲೆ, ಮುಂದಿನ ಕಾಮಗಾರಿಗಳ ಚಿತ್ರಣವನ್ನು ನೀಡಿವೆ. ಈ ನಡುವೆ ಮೂರು ಜಿಲ್ಲೆಗಳಿಗೆ (ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ) ಮೊದಲು ನೀರು ಕೊಡಿ ಎಂದು ಸಂಸದ ಸುಧಾಕರ್ ಹೇಳಿದ್ದಾರೆ. ಇದು ಕಾರ್ಯಸಾಧ್ಯವೆ? ಮೊದಲಿಗೆ ನೀರಿನ ಲಭ್ಯತೆ ಎಷ್ಟು ಎಂಬುದರ ಅರಿವು ಈಗಷ್ಟೇ ಆಗಲಿದೆ. ಅದು 24 ಟಿಎಂಸಿ ಅಡಿ ಆಗಲಾರದು, 10 ಟಿಎಂಸಿ ಅಡಿ ಒಳಗೇ ಎಂದು ಕೆಲವು ಅಧ್ಯಯನಗಳು ಹೇಳಿರುವುದನ್ನು ಉಲ್ಲೇಖಿಸಲಾಗುತ್ತಿದೆ.
ಕೊನೆಯ ಪ್ರದೇಶಗಳಿಗೆ (ಟೇಲ್ ಎಂಡ್) ನವೆಂಬರ್ 2026– ಮಾರ್ಚ್ 2027ರ ವೇಳೆಗೆ ನೀರು ಸಿಗುತ್ತದೆ ಎಂದು ರಾಜ್ಯ ಸರ್ಕಾರದಲ್ಲಿ ಇರುವವರು ಹೇಳಿದರೆ, ಡಿಸೆಂಬರ್ 2025– ಮಾರ್ಚ್ 2026ರ ವೇಳೆಗೆ ನೀರು ತುಂಬಿಸಿ ಎಂದು ಸುಧಾಕರ್ ಕೇಳಿದ್ದಾರೆ. ಗ್ರ್ಯಾವಿಟಿ ಕೆನಾಲ್ ಮತ್ತಿತರ ಹಲವು ಕೆಲಸಗಳು ಮುಗಿಯಬೇಕು ಎಂಬುದು ಅವರಿಗೆ ಗೊತ್ತಿರುತ್ತದೆ. ಒಟ್ಟಿನಲ್ಲಿ ಕರ್ನಾಟಕದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಎರಡೂ ತುದಿಗಳ ಪರಿಸರಾಸಕ್ತರು ಇದನ್ನು ಒಂದು ವಾಗ್ವಾದ, ಮಾತಿನ ಮೇಲಾಟ ಮಾಡುವುದನ್ನು ನಿಲ್ಲಿಸಬೇಕು. ತಾಂತ್ರಿಕ ವಿವರ, ತೊಂದರೆಗಳನ್ನು ಪರಿಣತಿ ಉಳ್ಳವರೇ ಸಾರ್ವಜನಿಕವಾಗಿ ಹೇಳಿದರೆ ಒಳಿತು.
–ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.