ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಗ್ಯಾರಂಟಿ ಹಣ; ದಿನ ನಿಗದಿಯಾಗಲಿ

Published 25 ನವೆಂಬರ್ 2023, 0:08 IST
Last Updated 25 ನವೆಂಬರ್ 2023, 0:08 IST
ಅಕ್ಷರ ಗಾತ್ರ

ಗ್ಯಾರಂಟಿ ಹಣ: ದಿನ ನಿಗದಿಯಾಗಲಿ

ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಹಾಗೂ ‘ಅನ್ನಭಾಗ್ಯ’ ಯೋಜನೆಗಳ ಹಣವನ್ನು ಅರ್ಹ ಬಿಪಿಎಲ್ ಕಾರ್ಡ್‌ದಾರರ ಖಾತೆಗೆ ಸರ್ಕಾರ ಜಮೆ ಮಾಡುವುದು ಸರಿಯಷ್ಟೆ. ಆದರೆ ಗ್ರಾಮೀಣ ಪ್ರದೇಶದ ತೋಟಪಟ್ಟಿಯ ವೃದ್ಧ ಮಹಿಳೆಯರು, ಕೂಲಿ ಮಾಡುವ ಮಹಿಳೆಯರು ನಿತ್ಯ ತಮ್ಮ ಕೆಲಸ ಕಾರ್ಯ ಬಿಟ್ಟು ಹಣ ಜಮಾವಣೆ ಬಗ್ಗೆ ತಿಳಿದುಕೊಳ್ಳಲು ಬ್ಯಾಂಕ್‌ನಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಆಗಿದೆ.

ಮನೆಯಿಂದ ಬ್ಯಾಂಕ್‌ಗೆ ಬ್ಯಾಂಕ್‌ನಿಂದ ಮನೆಗೆ ಹೋಗಿ ಬರುವ ಈ ಅಲೆದಾಟವನ್ನು ತಪ್ಪಿಸಲು ಪ್ರತಿ ತಿಂಗಳು ಈ ಯೋಜನೆಗಳ ಹಣ ಜಮಾವಣೆಯ ನಿರ್ದಿಷ್ಟ ದಿನಾಂಕವನ್ನು ತಿಳಿಸಿದರೆ ಬಹಳ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. 

 -ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ

ನಿಯಮ ಪಾಲನೆಗೆ ಇರಲಿ ಮಾನವೀಯ ಸ್ಪರ್ಶ

ಬೆಂಗಳೂರಿನ ‘ನಮ್ಮ ಮೆಟ್ರೊ’ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನೊಬ್ಬನಿಗೆ ಬಿಎಂಆರ್‌ಸಿಎಲ್
ಭದ್ರತಾ ಸಿಬ್ಬಂದಿ ₹ 500 ದಂಡ ಹಾಕಿರುವುದರ ಬಗ್ಗೆ ವರದಿಯಾಗಿದೆ (ಪ್ರ.ವಾ., ನ. 24). ಮೆಟ್ರೊ ರೈಲಿನಲ್ಲಿ ಯುವಕ ಭಿಕ್ಷೆ ಬೇಡಿದ್ದು ಎಷ್ಟು ತಪ್ಪೋ ಭದ್ರತಾ ಸಿಬ್ಬಂದಿ ಅವನಿಗೆ ದಂಡ ವಿಧಿಸಿರುವುದೂ ಅಷ್ಟೇ
ತಪ್ಪು. ನಿಮ್ಮ ಕಾನೂನು ಏನೇ ಹೇಳಲಿ, ಕಿವುಡ, ಮೂಗನಂತೆ ಸೋಗು ಹಾಕದ, ನಿಜವಾಗಿಯೂ ಕಿವುಡ
ಮತ್ತು ಮೂಗನಾಗಿರುವ ಈ ಯುವಕನಿಗೆ ಬರೋಬ್ಬರಿ ₹ 500 ದಂಡ ವಿಧಿಸಿರುವುದು ಅಕ್ಷಮ್ಯ ಮತ್ತು ಅಮಾನವೀಯ ನಡೆ.

ದಂಡ ವಿಧಿಸಬೇಕಿರುವುದು ಅಂಗವಿಕಲರಂತೆ ನಟಿಸುವ ದೃಢಕಾಯರಾದ ಭಿಕ್ಷುಕರಿಗೆ, ಸಿಗ್ನಲ್‌
ಗಳಲ್ಲಿ ನಿಂತು ವಾಹನ ಸವಾರರನ್ನು ಹಣಕ್ಕಾಗಿ ಪೀಡಿಸುವ ಮತ್ತು ಕಲ್ಯಾಣ ಮಂಟಪಗಳಿಗೆ ನುಗ್ಗಿ ಹಣಕ್ಕಾಗಿ ಬೇಡಿಕೆ ಇಟ್ಟು, ಕೊಡದಿದ್ದರೆ ನಾಲ್ಕು ಜನರೆದುರು ಮಾನ ಕಳೆಯಲು ಹೇಸದ ಲೈಂಗಿಕ ಅಲ್ಪಸಂಖ್ಯಾತರಿಗೆ. ಭಿಕ್ಷಾಟನೆಗೆ ಭಿಕ್ಷುಕ ಎಷ್ಟು ಜವಾಬ್ದಾರನೋ ಸರ್ಕಾರವೂ ಅಷ್ಟೇ ಜವಾಬ್ದಾರ ಎಂಬುದನ್ನು ತಣ್ಣಗೆ ಮರೆತು, ಭಿಕ್ಷುಕನನ್ನು ಮಾತ್ರ ಹೊಣೆಗಾರನನ್ನಾಗಿ ಮಾಡುವುದು ಸಮರ್ಥನೀಯವಲ್ಲ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಹೆಜ್ಜೇನು ಗೂಡು: ಸ್ಥಳಾಂತರ ಸೂಕ್ತ

ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ತೊಟ್ಟಿಲಮಡು ಜಾತ್ರೆಯಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ 80 ಮಂದಿ ಅಸ್ವಸ್ಥರಾಗಿರುವುದು ದುರದೃಷ್ಟಕರ. ಹೆಜ್ಜೇನುಗಳು ಮಧ್ಯಾಹ್ನದ ವೇಳೆಯಲ್ಲಿ
ಕ್ರಿಯಾಶೀಲವಾಗಿರುತ್ತವೆ. ಶಬ್ದ ಹಾಗೂ ಹೊಗೆಗೆ ಬಹುಬೇಗ ಉದ್ರೇಕಗೊಂಡು ಜನರನ್ನು ಬೆನ್ನಟ್ಟಿ ಹೋಗಿ ಮಾರಕವಾದ ರೀತಿಯಲ್ಲಿ ಅವು ದಾಳಿ ನಡೆಸುವುದು ಎಲ್ಲರಿಗೂ ತಿಳಿದ ವಿಚಾರ. ಉದ್ರೇಕಗೊಂಡ ಹೆಜ್ಜೇನು, ನೀರಲ್ಲಿ ಮುಳುಗಿದರೂ ಸೇಡು ತೀರಿಸಿಕೊಳ್ಳಲು ಕಾಯುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇನೆ. ನನ್ನ ಸಂಬಂಧಿಯೊಬ್ಬರನ್ನು ಹೆಜ್ಜೇನಿನ ಹಿಂಡು ಒಂದು ಕಿ.ಮೀ.ವರೆಗೂ ಹಿಂಬಾಲಿಸಿಕೊಂಡು ಹೋಗಿ ಕಚ್ಚಿದ್ದರಿಂದ ಅವರು ಮರಣ ಹೊಂದಿದರು.

ಒಮ್ಮೆ ಶವಸಂಸ್ಕಾರದ ವೇಳೆ ಊದಿನಕಡ್ಡಿಯ ವಾಸನೆಗೆ, ಸಮೀಪದ ತೆಂಗಿನ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ರೊಚ್ಚಿಗೆದ್ದು ಅಲ್ಲಿ ಸೇರಿದ್ದ ಜನರ ಮೇಲೆ ದಾಳಿ ನಡೆಸಿದ್ದನ್ನು ಕಂಡಿರುವೆ. ಹಾಗಾಗಿ, ಶಾಲಾ ಕಾಲೇಜು, ಕಚೇರಿಯ ಕಟ್ಟಡಗಳು, ದೇವಾಲಯ, ವಸತಿ ಸಂಕೀರ್ಣ, ಜಾತ್ರೆ, ಉರುಸ್‌ ನಡೆಯುವ ಸ್ಥಳಗಳ ಸಮೀಪದ ಕಟ್ಟಡ ಮತ್ತು ಮರಗಳಲ್ಲಿ ಕಟ್ಟಿರುವ ಹೆಜ್ಜೇನಿನ ಗೂಡುಗಳನ್ನು ಸುರಕ್ಷತೆಯ ದೃಷ್ಟಿಯಿಂದ ತೆರವುಗೊಳಿಸುವುದು ಒಳಿತು.

-ಎಂ.ಜಿ.ರಂಗಸ್ವಾಮಿ, ಹಿರಿಯೂರು 

ಕನ್ನಡದಲ್ಲೇಕೆ ಈ ಅಪಪ್ರಯೋಗ?

‘ಹಿಂದೂ ಎಂದು ಹೇಳಿಕೊಳ್ಳಲು ಗರ್ವ ಪಡಬೇಕು’ ಎಂಬ ಶೀರ್ಷಿಕೆಯನ್ನು ಒಳಗೊಂಡ ಸುದ್ದಿ
(ಪ್ರ.ವಾ., ನ. 22) ಪ್ರಕಟವಾಗಿದೆ. ಹಿಂದೂ ಎಂದು ಹೇಳಿಕೊಳ್ಳಲು ಯಾಕೆ ‘ಗರ್ವ’ ಪಡಬೇಕು ಎಂದು ನನಗೆ ತಕ್ಷಣ ಅರ್ಥವಾಗಲಿಲ್ಲ. ಗರ್ವ ಎಂದರೆ ಕನ್ನಡದಲ್ಲಿ ಜಂಬ, ಅಹಂಕಾರ, ಸೊಕ್ಕು ಎಂಬ ಅರ್ಥಗಳಿವೆ ಎಂಬುದು ನಮಗೆಲ್ಲಾ ತಿಳಿದಿದೆ. ಅದಕ್ಕೆ ಸಕಾರಾತ್ಮಕ ಅರ್ಥವಂತೂ ಇಲ್ಲವೇ ಇಲ್ಲ. ಹಾಗಾದರೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಹೀಗೇಕೆ ಹೇಳಿದರು ಎಂದು ತಲೆಕೆಡಿಸಿಕೊಂಡಾಗ ಹೊಳೆದದ್ದು, ಅವರು ಉತ್ತರದ ರಾಜ್ಯಗಳಲ್ಲಿ ಹೆಚ್ಚು ಸಂಚರಿಸುತ್ತಾರೆ ಮತ್ತು ಮೊದಲಿನಿಂದಲೂ ಹಿಂದಿಯವರ ಮಾತಿನ ಸಂಪರ್ಕ ಇರುವವರು. ಅದಕ್ಕಾಗಿ ಅವರು ಆ ಹಿಂದಿಯವರ ಧಾಟಿಯನ್ನೇ ಅನುಸರಿಸಿ ಈ ಶಬ್ದ ಬಳಸಿದ್ದಾರೆ ಎಂಬುದು ಅರ್ಥವಾಯಿತು. ನಾವು ಹೆಮ್ಮೆ ಎಂದು ಹೇಳುವುದಕ್ಕೆ ಅವರು ಸಂಸ್ಕೃತದ ‘ಗರ್ವ’ ಪದವನ್ನು ಬಳಸುತ್ತಾರೆ. ಹಾಗಾಗಿ, ಹಿಂದೂ ಎಂದು ಹೇಳಿಕೊಳ್ಳಲು ನಾವೆಂದೂ
ಗರ್ವಪಡಬೇಕಾದ್ದಿಲ್ಲ. ಹೆಮ್ಮೆಪಟ್ಟರೆ ಸಾಕು.

-ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

ಶಾಲೆಗಳಲ್ಲಿ ಶೌಚಾಲಯ: ತುರ್ತು ಆದ್ಯತೆಯಾಗಲಿ

ಕೊಪ್ಪಳ ಜಿಲ್ಲೆ ಅಳವಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರ ಶೌಚಕ್ಕೆ ಬಯಲೇ ಗತಿಯಾಗಿರುವ ಕುರಿತ ವರದಿಯು (ಪ್ರ.ವಾ., ನ. 23) ವ್ಯವಸ್ಥೆಯ ಕಣ್ತೆರೆಸುವಂತಿದೆ. ದೇಶವನ್ನು ಬಯಲು ಶೌಚಮುಕ್ತ ಎಂದು ಈಗಾಗಲೇ ಘೋಷಿಸಲಾಗಿದೆ. ಹೀಗಿದ್ದರೂ ಇಂತಹ ಸ್ಥಿತಿ ಇರುವುದು ಬೇಸರದ ಸಂಗತಿ. ಇಲ್ಲಷ್ಟೇ ಅಲ್ಲದೆ ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳು ಬಯಲನ್ನು ಅವಲಂಬಿಸುವುದು ಸಾಮಾನ್ಯವಾಗಿದೆ.

ಸರ್ಕಾರಿ ಶಾಲೆಗಳಿಗೆ ಶೌಚಾಲಯದಂತಹ ಅಗತ್ಯ ಮೂಲ ಸೌಲಭ್ಯ ಒದಗಿಸುವುದು ಆದ್ಯತೆಯ
ವಿಷಯವಾಗಿರುವುದರಿಂದ, ಸರ್ಕಾರ ಈ ಸಂಬಂಧ ತುರ್ತಾಗಿ ಅನುದಾನ ನೀಡಬೇಕು. ಇಲ್ಲವಾದಲ್ಲಿ ಸಾರ್ವಜನಿಕ ಸಹಭಾಗಿತ್ವ ಹಾಗೂ ದಾನಿಗಳ ನೆರವಿನಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು ಒತ್ತು ನೀಡಬೇಕು.

-ಪ್ರಸಾದ್‌ ಜಿ.ಎಂ., ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT