ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹಣವಿಲ್ಲದ ಎಟಿಎಂ: ಗ್ರಾಹಕರಿಗೆ ಸಿಗಲಿ ಪರಿಹಾರ

ಅಕ್ಷರ ಗಾತ್ರ

ಹಣವಿಲ್ಲದ ಎಟಿಎಂ: ಗ್ರಾಹಕರಿಗೆ ಸಿಗಲಿ ಪರಿಹಾರ

ಹಣ ತರಲು ಭಾನುವಾರ ಸಂಜೆ ನನ್ನ ಮನೆ ಸಮೀಪದ ಎಟಿಎಂಗೆ ಹೋಗಿದ್ದೆ. ಆದರೆ ಎಟಿಎಂನಲ್ಲಿ ಹಣ ಇರಲಿಲ್ಲ. ಇದೇ ರೀತಿ ಹಲವು ಮಂದಿ ಹಣ ಇಲ್ಲದ್ದನ್ನು ನೋಡಿ ಗೊಣಗುತ್ತಾ ಹೊರಹೋದರು. ತುರ್ತು ಅಗತ್ಯಕ್ಕಾಗಿ ಹಣ ಪಡೆಯಬೇಕಾಗಿದ್ದರೂ ಬೇಸರದಿಂದ ಮನೆಗೆ ವಾಪಸ್ ಬಂದೆ. ಇದು ನನ್ನೊಬ್ಬನ ಕತೆಯಲ್ಲ, ಪ್ರತಿದಿನ ಬಹಳಷ್ಟು ಮಂದಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂನಲ್ಲಿ ಹಣವಿಲ್ಲದೆ ಎಟಿಎಂನಿಂದ ಎಟಿಎಂಗೆ ಅಲೆಯುವ ಪರದಾಟ ದೇಶದಾದ್ಯಂತ ಸಾಮಾನ್ಯವಾಗಿದೆ.

ಗ್ರಾಹಕರ ಖಾತೆಯಲ್ಲಿ ಕನಿಷ್ಠ ಠೇವಣಿ ಮೊತ್ತ ಇಲ್ಲ ಎಂಬ ಕಾರಣಕ್ಕೆ ದಂಡ ವಿಧಿಸುವ ಬ್ಯಾಂಕ್‌ಗಳು, ಗ್ರಾಹಕ ಹಣ ಡ್ರಾ ಮಾಡಲು ಹೋದಾಗ ಎಟಿಎಂನಲ್ಲಿ ಹಣವಿಲ್ಲದ ಹೊಣೆಯನ್ನೂ ಹೊರಬೇಕಲ್ಲವೇ? ಎಟಿಎಂನಲ್ಲಿ ಹಣವಿಲ್ಲದೆ ಗ್ರಾಹಕ ಎಟಿಎಂನಿಂದ ಎಟಿಎಂಗೆ ಅಲೆಯುವಾಗ ಆಗುವ ವೆಚ್ಚ, ಸಮಯದ ನಷ್ಟ, ಮಾನಸಿಕ ಒತ್ತಡ, ಸಕಾಲದಲ್ಲಿ ಹಣ ದೊರೆಯದಿದ್ದಾಗ ಆಗುವ ಸಮಸ್ಯೆಗಳಿಗೆ ಬ್ಯಾಂಕ್‌ಗಳು ಕಾರಣವಾಗುತ್ತಿವೆ. ಆದ್ದರಿಂದ ಒಂದುವೇಳೆ ಬ್ಯಾಂಕ್ ಎಟಿಎಂನಲ್ಲಿ ಹಣ ಇಲ್ಲದಿದ್ದ ಪಕ್ಷದಲ್ಲಿ ಗ್ರಾಹಕರಿಗೆ ಪರಿಹಾರದ ರೂಪದಲ್ಲಿ ₹ 250 ನೀಡಲಿ. ಈ ಮೂಲಕ ಗ್ರಾಹಕನಿಗೆ ನ್ಯಾಯ ದೊರೆಯಲಿ. ಮುಳ್ಳೂರು ಪ್ರಕಾಶ್, ಮೈಸೂರು

ಆಗೊಂದು ಮಾತು, ಈಗೊಂದು ಮಾತು...

‘ಕೆಜೆಪಿ ಕಟ್ಟಿದ್ದು ಅಕ್ಷಮ್ಯ’ ಎಂದಿದ್ದಾರೆ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ (ಪ್ರ.ವಾ., ಏ. 17). ನಿಜವಿರಬಹುದು, ಆದರೆ ಹೀಗೆ ಹೇಳುತ್ತಾ ಹೋದರೆ ಅವರು ಆಡುವ ಮಾತಿಗೆ ಅರ್ಥವೇನು ಉಳಿಯುತ್ತದೆ?! ಆಗ ಮತ್ತು ಈಗಲೂ ಯಡಿಯೂರಪ್ಪ ಅವರು ಆಡುತ್ತಿರುವ ಮಾತುಗಳಲ್ಲಿ ಅವರ ಕುಟುಂಬದ ರಾಜಕೀಯ ಸ್ವಾರ್ಥವೂ ಇಲ್ಲವೇ? ಆಗೊಂದು ಮಾತು ಈಗೊಂದು ಮಾತು ಬದಲಿಸುತ್ತಾ ಹೋದರೆ ಮತದಾರರಿರಲಿ ಅವರ ಹತ್ತಿರದ ಸಹವರ್ತಿಗಳ ಗತಿ ಏನು?

ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅವರು ಸಹ ಆಗ ಅವರ ಸಹವರ್ತಿಗಳಾಗಿದ್ದವರೇ ಅಲ್ಲವೇ? ಆಗ ಇವರಿಬ್ಬರ ಮಾತಿಗೆ ಯಡಿಯೂರಪ್ಪ ಕವಡೆ ಕಾಸಿನ ಬೆಲೆಯನ್ನೂ ನೀಡಿರಲಿಲ್ಲ ಎಂಬುದನ್ನು ಜನರಿನ್ನೂ ಮರೆತಿಲ್ಲ ಅಲ್ಲವೇ?

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಕಠಿಣ ಕ್ರಮ ಕೈಗೊಳ್ಳಬೇಕು

ಕಾರಿನ ಬಾನೆಟ್ ಮೇಲೆ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರನ್ನು 20 ಕಿ.ಮೀ. ದೂರಕ್ಕೆ ಕೊಂಡೊಯ್ದ ಆಘಾತಕಾರಿ ಘಟನೆ ನವಿ ಮುಂಬೈ ಉಪನಗರದಲ್ಲಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ (ಪ್ರ.ವಾ., ಏ. 17). ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಅಲ್ಲಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇವೆ.

ಇಂತಹ ಅಪರಾಧ ಎಸಗುವ ಚಾಲಕರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದಲ್ಲದೆ ಅವರ ಚಾಲನಾ ಪರವಾನಗಿಯನ್ನು ಕೆಲವು ವರ್ಷಗಳ ಕಾಲ ರದ್ದುಪಡಿಸುವ ಕೆಲಸ ಆಗಬೇಕು. ಅತಿ ಮುಖ್ಯವಾಗಿ, ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಯ ಪ್ರಾಣ ರಕ್ಷಣೆಗೆ ಬೇಕಾದ ಉಪಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.

ಕೆ.ಪ್ರಭಾಕರ, ಬೆಂಗಳೂರು

ದುಡಿಯುವವರಿಗೆ ಸಿಗಲಿ ಫಲ

ಜಗದೀಶ ಶೆಟ್ಟರ್ ಅವರ ವಿಚಾರವಾಗಿ ಪ್ರೊ. ಎಂ.ಎಸ್.ರಘುನಾಥ್ ಅವರ ಅಭಿಪ್ರಾಯ (ವಾ.ವಾ., ಏ. 17) ಪೂರ್ವ
ಗ್ರಹದಿಂದ ಕೂಡಿದೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದ ಶೆಟ್ಟರ್ ಅವರು ಕೇಳಿದ್ದಾದರೂ ಏನು? ಬರೀ ಶಾಸಕ ಸ್ಥಾನಕ್ಕೆ ಟಿಕೆಟ್. ಅದು ತಪ್ಪೇ? ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಓಡಾಡಿ ಪಕ್ಷ ಕಟ್ಟಿದ ಲಾಲ್‌ಕೃಷ್ಣ ಅಡ್ವಾಣಿ ಇಂದು
ಅಂಗಳದಲ್ಲಿ ಆಕಾಶ ನೋಡುತ್ತಾ ಕೂತಿದ್ದಾರೆ. ಪಕ್ಷದಲ್ಲಿ ದುಡಿಯುವರು ದುಡಿಯುತ್ತಲೇ ಇರಬೇಕು, ಫಲ ಬೇರೆಯ
ವರಿಗೆ ಎನ್ನುವುದು ಯಾವ ನ್ಯಾಯ? ಪಕ್ಷಕ್ಕಾಗಿ ದುಡಿದವರು ಜೀತದಾಳುಗಳಲ್ಲ ಎಂಬುದನ್ನು ನಾಯಕರು ತಿಳಿಯಲಿ.

ಪಿ.ಎನ್.ಎಂ. ಗುಪ್ತ, ಬೆಂಗಳೂರು

ಮತದಾನ ನೆನಪಿಸುವ ಅಗತ್ಯವಿದೆಯೇ?

ಇತ್ತೀಚೆಗೆ ಒಂದು ಚೋದ್ಯವನ್ನು ಕಂಡೆ. ಶಿರಸಿ ಮುನಿಸಿಪಾಲಿಟಿಯ ಅಂಗಳದಿಂದ ಮೆರವಣಿಗೆಯೊಂದು ಹೊರಟ ದೃಶ್ಯ. ಅದು ಜನರಿಗೆ ಮತದಾನವನ್ನು ನೆನಪಿಸುವ ಸರ್ಕಾರದ ಕಾರ್ಯಕ್ರಮ! 70 ವರ್ಷಗಳಿಂದಲೂ ಇಲ್ಲಿನ ಜನ ಮತ ಹಾಕುತ್ತಲೇ ಬಂದಿದ್ದಾರೆ. ಎಂಟು– ಹತ್ತು ವರ್ಷದ ಹುಡುಗನಿಗೂ ಮತದಾನದ ಬಗೆಗೆ, ಚುನಾವಣೆಗಳ ಬಗೆಗೆ ಜ್ಞಾನ ಇದೆ. ಅದಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಕೈ ಹಾಕುವ ಅವಶ್ಯಕತೆ ಇರಲಿಲ್ಲ.

ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ಅಧಿಕಾರ– ಸೇವೆ ಪರಸ್ಪರ ಅವಲಂಬಿತವಲ್ಲ

‘ನಿಮ್ಮ ಸೇವೆ ಮಾಡಲು ನನ್ನನ್ನು ಗೆಲ್ಲಿಸಿ’ ಎಂದು ಜೆಡಿಎಸ್ ಅಭ್ಯರ್ಥಿಯೊಬ್ಬರು ಅಲವತ್ತುಕೊಂಡು, ಕಣ್ಣೀರು ಹಾಕುತ್ತ ಮತ ಯಾಚನೆ ಮಾಡಿದ ಸಂಗತಿ ವರದಿಯಾಗಿದೆ (ಪ್ರ.ವಾ., ಏ.17). ಅಧಿಕಾರಕ್ಕೂ ಸೇವೆಗೂ ಸಂಬಂಧವಿಲ್ಲ.
ಸೇವಾ ಮನೋಭಾವ ಇರುವ ಯಾರು ಬೇಕಾದರೂ ಸ್ವಯಂಪ್ರೇರಿತರಾಗಿ ಸಮಾಜಸೇವೆಗೆ ತೊಡಗಿಕೊಳ್ಳುತ್ತಾರೆ.

ಅಧಿಕಾರದ ಅವಕಾಶಗಳಿದ್ದರೂ ಗಾಂಧೀಜಿ ಅದಕ್ಕೆ ಆಸೆಪಡದೆ ಸೇವೆಯಲ್ಲಿ ತೊಡಗಿಕೊಂಡಿದ್ದನ್ನು ಕಾಣುತ್ತೇವೆ. ಹಾಗೆಯೇ ಶರಣರ ಸೇವಾ ಕೈಂಕರ್ಯದಲ್ಲಿಯೇ ಸಾರ್ಥಕತೆ ಕಂಡ ಬಸವಣ್ಣನವರಿಗೆ, ‘ದಲಿತರು ಓದು ಬರಹ ಕಲಿತು ದೊಡ್ಡ ಹುದ್ದೆಗೆ ಸೇರಿ ಕಾರಿನಲ್ಲಿ ಓಡಾಡಿದಾಗ ಕಾರಿನ ದೂಳು ನನ್ನ ತಲೆಗೆ ತಾಗಿದರೆ ಜನ್ಮ ಸಾರ್ಥಕ’ ಎಂದು ದಲಿತರ ಏಳಿಗೆಗಾಗಿ ದುಡಿದ ಕುದ್ಮುಲ್ ರಂಗರಾಯರಿಗೆ, ದಲಿತರು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟು ಅವರ ಸೇವೆ ಮಾಡಿದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಆದರೆ ಸೇವೆ ಮಾಡಬೇಕೆಂಬ ತುಡಿತವಿತ್ತು. ಇಂಥ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇರುವಾಗ ‘ಅಧಿಕಾರ ಕೊಡಿ, ನಿಮ್ಮ ಸೇವೆ ಮಾಡುತ್ತೇನೆ’ ಎಂಬ ಮಾತಿಗೆ ಅರ್ಥವಿಲ್ಲ ಎನಿಸುತ್ತದೆ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT