ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಭಿವೃದ್ಧಿ ಪದ ಬಳಕೆಗೆ ಮುನ್ನ...

ಅಕ್ಷರ ಗಾತ್ರ

ಅಭಿವೃದ್ಧಿ ಪದ ಬಳಕೆಗೆ ಮುನ್ನ...

ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಪ್ರತಿಯೊಬ್ಬರ ಬಾಯಲ್ಲೂ ಅಭಿವೃದ್ಧಿ, ಪ್ರಗತಿ, ವಿಕಾಸ ಎಂಬ ಪದಗಳನ್ನು ಕೇಳುತ್ತಿದ್ದೇವೆ. ಇದನ್ನು ನೋಡಿದರೆ, ನಿಜವಾಗಿಯೂ ಇವರಿಗೆ ಈ ಪದಗಳ ಅರ್ಥ ತಿಳಿದಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ತಿಳಿದಿದ್ದರೆ ಅವರವರ ಆಡಳಿತದ ಅವಧಿಯಲ್ಲಿ ಅವರು ಮಾಡಿದ್ದಾದರೂ ಏನು? ಅಭಿವೃದ್ಧಿ ಎಂಬುದು ಬರೀ ಆಶ್ವಾಸನೆಯೇ ಅಥವಾ ಚುನಾವಣೆ ಗೆಲ್ಲಲು ಇರುವ ಅಸ್ತ್ರವೇ? ನಮ್ಮ ಜನಪ್ರತಿನಿಧಿಗಳು ಚುನಾವಣೆ ವೇಳೆ ಅಭಿವೃದ್ಧಿ ಎಂಬ ಪದವನ್ನು ಬಳಸುವ ಮೊದಲು, ತಾವು ಅಭಿವೃದ್ಧಿಯ ಬಗ್ಗೆ ಮಾತನಾಡಲು ಅರ್ಹರೇ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ.

ದೇವರಾಜ ವನಗೇರಿ, ಬಾಗಲಕೋಟೆ

ಮತದಾನವನ್ನೇ ಮರೆಸುವ ಆಮಿಷ!

ನಾನು ಹಲವಾರು ಚುನಾವಣೆಗಳಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. 2004ರ ವಿಧಾನಸಭಾ ಚುನಾವಣೆಗಾಗಿ ಹಿಂದಿನ ದಿನ ಹಿರಿಯೂರು ತಾಲ್ಲೂಕಿನ ಒಂದು ಹಳ್ಳಿಗೆ ಸಿಬ್ಬಂದಿಯೊಂದಿಗೆ ತೆರಳಿದಾಗ ಊರಿನ ಜನ ತುಂಬಾ ಆತ್ಮೀಯವಾಗಿ ನಡೆಸಿಕೊಂಡರು. ನಮ್ಮ ಬೇಕು ಬೇಡಗಳನ್ನು ಪಕ್ಷಾತೀತವಾಗಿ ಅರಿತು ಸತ್ಕರಿಸಿದರು. ಒಬ್ಬ ವ್ಯಕ್ತಿಯಂತೂ ಬಹಳಷ್ಟು ಚಟುವಟಿಕೆಯಿಂದ ಓಡಾಡಿಕೊಂಡಿದ್ದ. ‘ಬೆಳಿಗ್ಗೆ ಬಂದು ನಿಮಗೆಲ್ಲ ಕಾಫಿ, ಟೀ ವ್ಯವಸ್ಥೆ ಮಾಡ್ತೇನೆ’ ಎಂದೆಲ್ಲಾ ಹೇಳುತ್ತಿದ್ದ. ಬೆಳಿಗ್ಗೆ ಮತದಾನ ಆರಂಭವಾದರೂ ಆತನ ಪತ್ತೆಯಿಲ್ಲ. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಹಳ್ಳಿಗರೊಬ್ಬರನ್ನು ಆ ವ್ಯಕ್ತಿಯ ಬಗ್ಗೆ ವಿಚಾರಿಸಿದೆ. ಅವರಿಂದ ಬಂದ ಉತ್ತರ ಕೇಳಿ ಆಶ್ಚರ್ಯವಾಯಿತು. ‘ಸಾರ್, ನಿನ್ನೆ ರಾತ್ರಿಯಿಂದ ಕುಡಿಯುವುದಕ್ಕೆ ಶುರು ಮಾಡಿದವ ಬೆಳಿಗ್ಗೆವರೆಗೂ ಕುಡಿದು, ಮೈಮೇಲೆ ಪ್ರಜ್ಞೆಯಿಲ್ಲದೆ ಹೊಲದಲ್ಲಿ ಬಿದ್ದಿದ್ದಾನೆ. ವೋಟ್ ಮಾಡಕ್ಕೆ ಬರಲೂ ಅವನಿಂದಾಗದು’ ಎಂದು
ಹೇಳಿದರು.

ಎಲ್ಲ ಪಕ್ಷಗಳವರೂ ಒಬ್ಬರಾದ ಮೇಲೆ ಒಬ್ಬರು ಬಂದು ಆತನಿಗೆ ಕುಡಿಸಿದ್ದರು. ಅಷ್ಟೇ ಅಲ್ಲ, ಆ ಊರಿನ ಕೆಲವರು ಗಂಡು- ಹೆಣ್ಣು ಎಂಬ ಭೇದವಿಲ್ಲದೆ ಕುಡಿದು ಮತಗಟ್ಟೆಗೆ ಮತ ಚಲಾಯಿಸಲು ಬಂದು, ಯಾವ ಪಕ್ಷಕ್ಕೆ ಮತ ಹಾಕಬೇಕೆಂಬುದನ್ನೇ ಮರೆಯುತ್ತಿದ್ದರು. ‘ಚುನಾವಣೆ: ಸಾತ್ವಿಕ ಮಾರ್ಗಕ್ಕೆ ಸೂತ್ರ’ ಎಂಬ ಡಾ. ಜ್ಯೋತಿ ಅವರ ಲೇಖನವನ್ನು (ಪ್ರ.ವಾ., ಫೆ. 15) ಓದಿದಾಗ ಈ ಪ್ರಕರಣ
ನೆನಪಾಯಿತು.

ಡಿ.ಬಿ.ನಾಗರಾಜ, ಬೆಂಗಳೂರು

ಹೆಮ್ಮೆಯೋ ನಾಚಿಕೆಗೇಡೋ?

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿದ ದಂಡದ ಹಣ ಪಾವತಿಗೆ ಶೇ 50ರಷ್ಟು ರಿಯಾಯಿತಿ ನೀಡಿದ್ದರಿಂದ ಸಂಗ್ರಹವಾದ ದಂಡದ ಮೊತ್ತ ₹ 120 ಕೋಟಿ ಮೀರಿದೆ ಎಂದು ಸಂಚಾರ ಪೊಲೀಸರು ಬೀಗಿದ್ದಾರೆ. ಇದು ಹೆಮ್ಮೆಪಡಬೇಕಾದ ವಿಷಯವೋ ಅಥವಾ ನಾಚಿಕೆಗೇಡಿನದೋ? ಇಷ್ಟೊಂದು ಪ್ರಮಾಣದ ದಂಡ
ವಸೂಲಾಗಿದೆಯೆಂದರೆ ಸಂಚಾರ ನಿಯಮಗಳು ಯಾವ ಪರಿ ಉಲ್ಲಂಘನೆಯಾಗಿವೆ ಮತ್ತು ಅವುಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದರ್ಥವಲ್ಲವೇ? ಶೇ 50ರಷ್ಟು ರಿಯಾಯಿತಿಯ ಆಫರ್ ನೀಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಉತ್ತೇಜನ ನೀಡಿದಂತಾಗಲಿಲ್ಲವೇ? ಹೀಗೆ ಶೇ 50 ರಿಯಾಯಿತಿ ನೀಡುವುದೂ ಒಂದೇ ಸಂಚಾರ ನಿಯಮವನ್ನು ಶೇ 50ರಷ್ಟು ಉಲ್ಲಂಘಿಸಲು ಅನುಮತಿ ನೀಡುವುದೂ ಒಂದೇ ಅಲ್ಲವೆ?

ಹೀಗೆ ಮಾಡುವ ಬದಲು, ಸಂಚಾರ ಪೊಲೀಸರು ರಸ್ತೆಗಿಳಿದು ಸೂಕ್ತ ರೀತಿಯಲ್ಲಿ ಸಂಚಾರ ನಿಯಂತ್ರಣ ಮಾಡಿದ್ದರೆ ದಂಡ ವಿಧಿಸುವ, ರಿಯಾಯಿತಿ ನೀಡುವ, ಕೋಟಿ ವಸೂಲು ಮಾಡಿ ಬೀಗುವ ಪ್ರಸಂಗವೇ
ಎದುರಾಗುತ್ತಿರಲಿಲ್ಲ. ದಂಡ ಮತ್ತು ಮದ್ಯದ ಹಣದಿಂದ ಬಂದ ಮೊತ್ತವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಿದರೆ ರಾಜ್ಯವೂ ಉದ್ಧಾರ ಆಗದು ಜನರೂ ಉದ್ಧಾರವಾಗರು ಎಂಬ ಜ್ಞಾನೋದಯ ಸರ್ಕಾರಕ್ಕೆ ಆಗುವುದೆಂದು?

ಪಿ.ಜೆ.ರಾಘವೇಂದ್ರ, ಮೈಸೂರು

ಕಾಡುತ್ತಿದೆ ಅಂದು ಜಾತಿ, ಇಂದು ಭಾಷೆ

ಗತಕಾಲದ ಶ್ರೇಣೀಕೃತ ಸಮಾಜದಲ್ಲಿ ಪ್ರಬಲ ಜಾತಿಯವರ ಮನೆಯ ದನಕರುಗಳು ಸತ್ತಾಗ ಅವುಗಳನ್ನು ಹೊತ್ತುತರಲು, ಶೌಚ ಸ್ವಚ್ಛ ಮಾಡಲು ಮತ್ತು ಪಾದರಕ್ಷೆಗಳನ್ನು ಕೊಟ್ಟುಬರುವಂತಹ ಸಂದರ್ಭಗಳಲ್ಲಿ ಮಾತ್ರ ಅಂತಹವರ ಮನೆಗೆ ಶೂದ್ರರು ಹೋಗಲು ಅವಕಾಶವಿತ್ತು. ಹೋಗುವಾಗ ಉಗುಳಲು ಸಣ್ಣ ಮಣ್ಣಿನ
ಮಡಕೆ ಮತ್ತು ಹೆಜ್ಜೆ ಕೆಡಿಸಲು ಸೊಂಟಕ್ಕೆ ಹಿಂದೊಂದು ಬಾರಿಗೆ ಕಟ್ಟಿಕೊಂಡು ಹೋಗಬೇಕಿತ್ತು. ಒಯ್ದ ಮಡಕೆಯಲ್ಲಲ್ಲದೆ ಹೊರಗೆ ಉಗುಳಿದರೆ, ಹಿಂದೆ ಕಟ್ಟಿಕೊಂಡ ಬಾರಿನಿಂದ ತಮ್ಮ ಹೆಜ್ಜೆಗಳನ್ನು ಕೆಡಿಸದಿದ್ದರೆ ಪ್ರಬಲ ಜಾತಿಯವರ ಓಣಿ ಮೈಲಿಗೆಯಾಯಿತೆಂದು ಶೂದ್ರರಿಗೆ ಉಗ್ರ ಶಿಕ್ಷೆ ಕಾದಿರುತ್ತಿತ್ತು. ಏಕೆ ಈ ಶಿಕ್ಷೆ ಎಂದು
ಪ್ರಶ್ನಿಸುವಂತಿರಲಿಲ್ಲ.

ಅದೇ ರೀತಿ ಈಗಲೂ ಎಷ್ಟೋ ಕಡುಬಡವರು ಉಚಿತವಾಗಿ ದೊರೆಯುವ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ಪಡೆಯಲಾಗದೆ ಬಾಲಕಾರ್ಮಿಕರಾಗಿ ಮುಂದುವರಿಯುತ್ತಿರುವಾಗ, ‘ಇಂಗ್ಲಿಷ್ ಬಡವರಿಗಷ್ಟೇ ಪೆಡಂಭೂತವಾಗಿದೆ’ ಎಂಬ ಹನಮಂತಪ್ಪ ಬಿ. ದಾಸರ ಅವರ ಪತ್ರ (ವಾ.ವಾ., ಫೆ. 16) ಸಮಯೋಚಿತವಾಗಿದೆ ಎನಿಸಿತು. ಅಂದು ಜಾತಿ ಸಮಸ್ಯೆ ಇತ್ತು, ಇಂದು ಭಾಷಾ ಸಮಸ್ಯೆ ಇದೆ. ಒಟ್ಟಿನಲ್ಲಿ ಪಕ್ಷಪಾತ ತಪ್ಪುವಂತಿಲ್ಲ.

ವೀರಭದ್ರಪ್ಪ ಪಗಡದಿನ್ನಿ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT