ಅತಿಥಿ ಉಪನ್ಯಾಸಕರ ನೇಮಕ ವಿಳಂಬ

2025–26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಯುಜಿಸಿ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಉಪನ್ಯಾಸಕರ ನೇಮಕ ವಿಳಂಬವಾಗಿದ್ದು, ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ರಾಜ್ಯ ಸರ್ಕಾರ ತ್ವರಿತವಾಗಿ ಈ ಸಮಸ್ಯೆ ಬಗೆಹರಿಸಬೇಕಿದೆ.

–ಸುರೇಶ ಎಂ. ಮುರುಮಕರ, ಗೋಕಾಕ

ಮೌಢ್ಯತೆಯ ಮಾರಿಯನು ಹೊರದೂಡಿ

‘ಗಂಗಾಮಾತೆ ತನ್ನ ಪುತ್ರರ ಪಾದಗಳನ್ನು ತೊಳೆಯುವುದಕ್ಕಾಗಿ ಬರುತ್ತಿದ್ದಾಳೆ. ಆಕೆಯ ದರ್ಶನದಿಂದ ಪುತ್ರರೆಲ್ಲಾ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ’ ಎಂದು ಉತ್ತರಪ್ರದೇಶದ ಸಚಿವ ಸಂಜಯ್ ನಿಶಾದ್, ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ಹೇಳಿದ್ದಾರೆ (ಪ್ರ.ವಾ., ಆಗಸ್ಟ್ 6). ಸಂತ್ರಸ್ತರಿಗೆ ಕೂಡಲೇ ರಕ್ಷಣಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬದಲು, ಅವರನ್ನು ಸ್ವರ್ಗಕ್ಕೆ ಹಾರಿಸುವ ಮಾತಾಡುವುದು ಬೇಜವಾಬ್ದಾರಿ ನಡವಳಿಕೆ ಹಾಗೂ ಅಮಾನವೀಯ.

ರಾಜಕಾರಣಿಗಳು ಸಮುದಾಯಗಳಲ್ಲಿ ಇಂಥ ಅವೈಚಾರಿಕ ಮೌಢ್ಯವನ್ನು ಬಿತ್ತಿ ಬೆಳೆದು ಅದರ ಫಸಲನ್ನು ಕೊಯ್ದು (ಓಟು) ತಾವಷ್ಟೇ ಭೂಸ್ವರ್ಗದಲ್ಲಿ ತೇಲಾಡುತ್ತಾರೆ. ಅವರನ್ನು ನಂಬಿದ ಜನರು ನಿತ್ಯವೂ ನರಕದಲ್ಲಿ
ಒದ್ದಾಡುತ್ತಿರುತ್ತಾರೆ.

–ಪ್ರೊ. ಆರ್. ಶಿವರಾಮಯ್ಯ, ಬೆಂಗಳೂರು

ಬಸ್ ಕಂಡಕ್ಟರ್ನ ಪ್ರಯಾಣಿಕ ಪ್ರೇಮ

ಮುಷ್ಕರವಿದ್ದರೂ ನಮ್ಮೂರಾದ ಕಲ್ಲುಗುಂಡಿಯಿಂದ ಸುಳ್ಯಕ್ಕೆ ಬಸ್ ಸಂಚಾರವಿತ್ತು. ನಾನು ಸುಳ್ಯಕ್ಕೆ ಹೋಗಬೇಕಿತ್ತು. ಬಸ್ ಹತ್ತಿದಾಗ ಮಳೆ ಜೋರಾಯಿತು. ಕಿಟಕಿ ಪಕ್ಕದ ಸೀಟುಗಳು ತೋಯ್ದು ಹೋಗಿದ್ದವು. ನಾನು ಕಿಟಕಿ ಪಕ್ಕದ ಸೀಟು ಬಿಟ್ಟು ಮಧ್ಯದ ಸೀಟಲ್ಲಿ ಕೂತೆ. ಕೊಡೆಯನ್ನು ಕಿಟಕಿ ಪಕ್ಕದ ಒದ್ದೆ ಸೀಟಿನ ಮೇಲಿಟ್ಟೆ. ನನ್ನ ಎದುರು ಸೀಟಿನ ಮಹಿಳೆಯೂ ಕೊಡೆಯನ್ನು ಸೀಟಿನ ಮೇಲಿಟ್ಟಳು.

ನಿರ್ವಾಹಕ ಬಂದು ನಮ್ಮಿಬ್ಬರಿಗೂ ಕೊಡೆ ತೆಗೆದು ಸೀಟಿನಿಂದ ಕೆಳಗಿಡುವಂತೆ ಹೇಳಿದ. ನಾನು ಕೊಡೆ ತೆಗೆಯುತ್ತಾ, ‘ಹೇಗೂ ಸೀಟಲ್ಲಿ ನೀರಿದೆ. ಅಲ್ಲಿ ಇಟ್ಟರೇನು ತೊಂದರೆ?’ ಎಂದು ಕೇಳಿದೆ. ‘ಕೊಡೆ ತೆಗೆದರೆ ಗಾಳಿಗೆ ಸೀಟಲ್ಲಿ ಇರುವ ನೀರು ಒಣಗುತ್ತೆ’ ಎಂದ. ಆಗ ಇನ್ನಷ್ಟು ಜನ ಬಸ್ಸಿಗೆ ಹತ್ತಿದರು. ಅವರೆಲ್ಲ ಸೀಟು ಒದ್ದೆಯಾಗಿದೆ ಎಂದು ನಿಂತುಕೊಂಡರು. ಕಂಡಕ್ಟರ್ ಕೂಡಲೇ ಹೋಗಿ ಡ್ರೈವರ್ ಪಕ್ಕದಿಂದ ಬಟ್ಟೆ ತಂದು ಕಿಟಕಿ ಪಕ್ಕದ ಎಲ್ಲ ಸೀಟುಗಳ ನೀರನ್ನೂ ಒರೆಸಿದ.

‘ಪಾಪ! ಸೀಟು ಒದ್ದೆ ಎಂದು ಪ್ರಯಾಣಿಕರೆಲ್ಲ ನಿಂತಿದ್ದಾರೆ’ ಎಂದು ನನ್ನ ಹತ್ತಿರ ಹೇಳಿದ. ಪ್ರಯಾಣಿಕರು ನಿಂತರೆ ನಿಲ್ಲಲಿ. ಅದು ಅವರ ಕರ್ಮ ಎಂದು ಭಾವಿಸುವವರೇ ಇರುವಾಗ ಇಂಥ ಕಂಡಕ್ಟರೂ ಇದ್ದಾರಲ್ಲ ಅನಿಸಿ
ಆತನ ಬಗ್ಗೆ ಹೆಮ್ಮೆಯಾಯಿತು.

–ಸಹನಾ ಕಾಂತಬೈಲು, ಮಡಿಕೇರಿ

ವನ್ಯಜೀವಿ ಹಾವಳಿಗೆ ಪರಿಹಾರ ರೂಪಿಸಿ

ಬರಪೀಡಿತ ಪ್ರದೇಶಗಳಲ್ಲಿ ನವಿಲು, ಜಿಂಕೆಗಳ ಸಂಖ್ಯೆ ಹೆಚ್ಚಾಗಿದೆ. ರೈತರು ಫಸಲನ್ನು ರಕ್ಷಿಸಿಕೊಳ್ಳಲು ಪ್ರತಿದಿನವೂ ಹರಸಾಹಸಪಡಬೇಕಿದೆ. ಕಾನೂನಿನ ಪ್ರಕಾರ ಇವುಗಳನ್ನು ಕೊಲ್ಲುವಂತಿಲ್ಲ. ರೈತ, ಕಾನೂನಿನ ಭೀತಿಗೆ ಹೆದರಿ ನಿವೇದಿಸಿಕೊಳ್ಳಲೂ ಆಗದ ಸ್ಥಿತಿಯಲ್ಲಿದ್ದಾನೆ. ದುಡಿಮೆಯ ಫಲ ಕೊಯ್ಲಿಗೆ ಬರುವಾಗಲೇ ಲಗ್ಗೆಯಿಟ್ಟು ನಾಶ ಮಾಡುವ ವನ್ಯಜೀವಿಗಳು ಸುರಕ್ಷಿತವಾಗಿ ಬದುಕಲು ಹಕ್ಕು ಹೊಂದಿವೆ ನಿಜ. ಹಾಗೆಂದು ರೈತನ ಶ್ರಮ ದೋಚುವ ಹಕ್ಕು ಅವುಗಳಿಗಿದೆಯೇ? ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರೋಪಾಯ ಅನ್ವೇಷಿಸುವುದು ಯಾರ ಹೊಣೆ?

–ಕೆ. ಪುರುಷೋತ್ತಮ ರೆಡ್ಡಿ, ಪಾವಗಡ

ಸಾರಿಗೆ ನೌಕರರ ಸಮಸ್ಯೆ ಪರಿಹರಿಸಿ

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಎರಡು ದಿನ ತಡೆ ನೀಡಿದೆ. ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ ತುರ್ತು ಅವಶ್ಯಕತೆಗಳಿಗೆ ಸ್ಪಂದಿಸಬೇಕಾದ ಪೊಲೀಸರು, ವೈದ್ಯರು, ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾದಾಗ ಜನಸಾಮಾನ್ಯರು ಹೆಚ್ಚಿನ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಇಂತಹ ಇಲಾಖೆಯ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರೋಪಾಯ ಹುಡುಕಬೇಕಿದೆ.

–ಸತ್ಯಮೂರ್ತಿ ಗೂಗಿ, ಬೆಂಗಳೂರು

ಅಪ್ಪನ ಪ್ರೀತಿ ಕೊಡಲು ಸಾಧ್ಯವೇ?

ರಾಜ್ಯ ಸರ್ಕಾರ ‘ಕರ್ನಾಟಕ ದೇವದಾಸಿ ಪದ್ಧತಿ ತಡೆ ಮಸೂದೆ–2025’ ಸಿದ್ಧಪಡಿಸಿದೆ. ಪಿತೃತ್ವದ ಹಕ್ಕಿನ ರೂಪದಲ್ಲಿ ಈ ಮಸೂದೆಯು ಹಿಂಬಾಗಿಲಿನಿಂದ ಅನಿಷ್ಟ ದೇವದಾಸಿ ಪದ್ಧತಿಯನ್ನು ಸಮರ್ಥಿಸುವಂತಿದೆ. ಈ ಪದ್ಧತಿಯ ನಿರ್ಮೂಲನೆಯ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಇಂಥ ತಾತ್ಕಾಲಿಕ ಪರಿಹಾರಗಳಿಂದ ಸಮಸ್ಯೆಗಳು ಮತ್ತಷ್ಟು
ಜಟಿಲಗೊಳ್ಳುತ್ತವೆ. ಪಿತೃತ್ವದ ಹಕ್ಕು ದೇವದಾಸಿ ಮಕ್ಕಳಿಗೆ ತಂದೆಯ ಪ್ರೀತಿ ಕೊಡಲು ಸಾಧ್ಯವೇ? ತಳಸಮುದಾಯದ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಾತನನ್ನು ಒಂದು ವೇಳೆ ತಂದೆ ಎಂದು ಕೋರ್ಟ್ ತೀರ್ಮಾನಿಸಿದರೆ, ಆತ ಆ ಹೆಣ್ಣಿಗೆ ಆಸರೆಯಾಗುವ ಬದಲು ಇನ್ನಷ್ಟು ಮಾನಸಿಕ ಕಿರುಕುಳ ನೀಡುತ್ತಾನೆ.

ಹೆಣ್ಣಿಗೆ ಗಂಡಸಿನ ಮೂಲಕ ಗುರುತಿಸಿಕೊಳ್ಳುವಿಕೆ ಅನಿವಾರ್ಯವೇನಲ್ಲ. ಈ ಬಗ್ಗೆ ದೇವದಾಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ, ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಪಿತೃತ್ವದ ಹಕ್ಕಿನಿಂದ ದೇವದಾಸಿ ಮಕ್ಕಳ ‘ಅಪ್ಪ ಯಾರು’ ಎನ್ನುವ ಪ್ರಶ್ನೆಗೆ ಉತ್ತರ ಸಿಗಬಹುದು. ಆದರೆ, ಅವರ ಸಮಸ್ಯೆಗೆ ಪರಿಹಾರ ಉಂಟೇ?

–ಮಹೇಂದ್ರ ಟಿ.ಎಂ., ಕೂಡ್ಲಿಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.