ಮೆಟ್ರೊ ಪ್ರಯಾಣ ದರ ಏರಿಕೆ ಸಮರ್ಥನೀಯವಲ್ಲ

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಮತ್ತೊಂದು ಆಘಾತ ನೀಡಿರುವ ಬೆಂಗಳೂರು ಮೆಟ್ರೊ, ಟಿಕೆಟ್ ಬೆಲೆಯನ್ನು ಶೇಕಡ 47ರಷ್ಟು ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಕೆಲವು ನಿಲ್ದಾಣಗಳಿಗೆ ಶೇಕಡ 100ರಷ್ಟು ಏರಿಕೆಯಾಗಿರುವುದು ಖಂಡಿತವಾಗಿಯೂ ಸಮರ್ಥನೀಯವಲ್ಲ. ಹಾಗೆ ನೋಡಿದರೆ, ಬೆಂಗಳೂರು ಮೆಟ್ರೊದಲ್ಲಿ ಇತ್ತೀಚೆಗೆ ಯಾವುದೇ ಹೆಚ್ಚಿನ ಸೌಲಭ್ಯ ಕಲ್ಪಿಸಿಲ್ಲ. ಬಹಳಷ್ಟು ಜನ ನಿಂತೇ ಪ್ರಯಾಣ ಮಾಡುತ್ತಾರೆ. ದೆಹಲಿ ಹಾಗೂ ಇನ್ನು ಕೆಲವು ಮೆಟ್ರೊಗಳಲ್ಲಿ ಕಲ್ಪಿಸಿರುವ ಹಲವು ಸೌಲಭ್ಯಗಳನ್ನು ನಮ್ಮ ಮೆಟ್ರೊದಲ್ಲಿ ಒದಗಿಸಿಲ್ಲ. ಇದೆಲ್ಲವನ್ನೂ ಪರಿಶೀಲಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮೆಟ್ರೊ ಟಿಕೆಟ್ ದರ ಏರಿಕೆ ಕುರಿತು ಪುನರ್ ಪರಿಶೀಲನೆ ನಡೆಸಿ, ಬೆಂಗಳೂರಿಗರ ಬದುಕನ್ನು ಸಹನೀಯಗೊಳಿಸಬೇಕು.

–ಜಿ.ಪಿ.ದಯಾನಂದ, ಬೆಂಗಳೂರು

ಅಜ್ಞಾನದಿಂದ ಅಪಘಾತ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಸೇತುವೆ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡ ಅಮರಣ್ಣ ಎಂಬುವರು ‘ಹರಕೆ ತೀರಿಸಲು ಹೋದ ನಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳ ಜೀವವನ್ನು ದೇವರೇ ಕಿತ್ತುಕೊಂಡಂತಾಯಿತು’ ಎಂದು ರೋದಿಸಿದ್ದು (ಪ್ರ.ವಾ., ಫೆ.7) ಎಲ್ಲರ ಮನವನ್ನು ಕಲಕುವಂತಿದೆ. ಆದರೂ ಮಗನ ಅಜ್ಞಾನಕ್ಕೆ ಮರುಕಪಡಬೇಕಾಗಿದೆ! ಏಕೆಂದರೆ, ಒಂದೇ ಬೈಕಿನ ಮೇಲೆ ಐದು ಜನ ಸವಾರಿ ಮಾಡಬಾರದೆಂಬ ಕನಿಷ್ಠ ಜ್ಞಾನವೂ ಇವರಿಗೆ ಇರಬಾರದೆ? ಹಾಗೆ ಮಾಡಲು ದೇವರು ಅವರಿಗೆ ಹೇಳಿದ್ದನೆ? ದೇವರು ನಮಗೆ ವಿವೇಕವನ್ನೂ ನೀಡಿದ್ದಾನಲ್ಲ. ಅದನ್ನು ಉಪಯೋಗಿಸಿಕೊಳ್ಳದೆ ಬರಿದೇ ದೇವರನ್ನು ಬೈದರೆ ಏನು ಬಂತು?

– ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಕನ್ನಡ ಲಿಪಿ: ಆರಂಭದಿಂದಲೇ ಬೇಕು ತರಬೇತಿ

‘ಕನ್ನಡದ ನೆಂಟಸ್ತನ, ಲಿಪಿಗೆ ಬಡತನ’ ಎಂಬ ಗೌರಿ ಚಂದ್ರಕೇಸರಿ ಅವರ ಲೇಖನ (ಸಂಗತ, ಫೆ. 7) ಗಂಭೀರ ವಿಚಾರಗಳಿಂದ ಕೂಡಿದೆ. ಇಂದಿನ ಕೃತಕ ಬುದ್ಧಿಮತ್ತೆಯ (ಎ.ಐ) ದಿನಗಳಲ್ಲಿ ಕನ್ನಡ ಲಿಪಿಯನ್ನು ಉಳಿಸಲು ಪ್ರಾಥಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಹಂತ ಹಂತವಾಗಿ ಕನ್ನಡ ಅಕ್ಷರಗಳು, ಕಾಗುಣಿತ, ಒತ್ತಕ್ಷರದ ಪರಿಚಯ, ಕಾಪಿ ಬರವಣಿಗೆ, ಉಕ್ತಲೇಖನ, ಸರಳ ಕನ್ನಡ ವ್ಯಾಕರಣ, ಸಣ್ಣ ಪ್ರಬಂಧ, ಲೇಖನ ಬರವಣಿಗೆಯಂತಹವುಗಳ ಮೂಲಕ ಕನ್ನಡವನ್ನು ಕಲಿಸಬೇಕು. ಕನ್ನಡ ಶಬ್ದಗಳನ್ನು ಸ್ಪಷ್ಟವಾಗಿ ಉಚ್ಚರಿಸುವ, ಬರೆಯುವ, ಓದುವ ವಿದ್ಯೆಯನ್ನು ಶಾಲೆಗಳಲ್ಲಿ ಹೇಳಿಕೊಡಬೇಕು. ಪೋಷಕರು ಸಹ ಮನೆಯಲ್ಲಿ ಮಕ್ಕಳ ಭಾಷಾ ಬೆಳವಣಿಗೆಗೆ ಬೇಕಾಗುವ ಎಲ್ಲ ಮಾರ್ಗ ದರ್ಶನವನ್ನೂ ಮಾಡಬೇಕು. ಶಿಕ್ಷಣ ಇಲಾಖೆ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಬೇಕು. ಆಗಮಾತ್ರ ಸುಂದರ ಕನ್ನಡ ಭಾಷೆ, ಕನ್ನಡ ಲಿಪಿ ಉಳಿದು ಬೆಳೆಯಲು ಸಾಧ್ಯ.

–ಡಿ.ಜಿ.ಮಂಜುನಾಥ, ತೀರ್ಥಹಳ್ಳಿ

ಮೈಕ್ರೊಫೈನಾನ್ಸ್: ನಡೆಯಲಿ ಆತ್ಮಾವಲೋಕನ

ಮೈಕ್ರೊಫೈನಾನ್ಸ್ ಕಂಪನಿಗಳ ವ್ಯವಹಾರಗಳು ತಂತು ಬೇರಿನ ರೂಪದಲ್ಲಿ ಮನೆಯಿಂದ ಮನೆಗೆ, ಊರಿಂದ ಊರಿಗೆ ಹಬ್ಬಿಕೊಂಡು ಬೃಹತ್ತಾಗಿ ಬೆಳೆದಿವೆ. ಈ ಮುಳ್ಳಿನ ಗಿಡಗಳನ್ನು ನೆಟ್ಟು ಬೆಳೆಸಿದವರಾರು ಅಥವಾ ಇವು ಬೆಳೆಯಲು ಸಂದರ್ಭಗಳು ಹೇಗೆ ಒದಗಿಬಂದವು ಎನ್ನುವ ಬಗ್ಗೆ ಅಧ್ಯಯನ ಆಗಬೇಕು. ಈ ಕಂಪನಿಗಳು ಆರ್ಬಿಐ ನಿಯಮಗಳಂತೆ ಕೆಲಸ ಮಾಡುತ್ತಿವೆ ಎನ್ನುತ್ತಿದ್ದಾರೆ. ಇವುಗಳ ಅಗತ್ಯ ಈ ಸಮಾಜಕ್ಕೆ ಎಷ್ಟರಮಟ್ಟಿಗಿದೆ? ರಾಜ್ಯದ
ಹೆಗ್ಗುರುತಾಗಿದ್ದ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕುಗಳನ್ನು ಇತರ ಬ್ಯಾಂಕುಗಳ ಜೊತೆಯಲ್ಲಿ ವಿಲೀನ ಮಾಡಲಾಯಿತು. ಹಳ್ಳಿಗಳಲ್ಲಿದ್ದ ರೈತ ಸೇವಾ ಸಹಕಾರ ಸಂಘ, ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘಗಳು ರೈತರಿಗೆ ಬೆಳೆ ಮತ್ತಿತರ ಸಾಲ ಕೊಡುತ್ತಿದ್ದವು. ಅವುಗಳ ಶಕ್ತಿಯನ್ನೂ ಕುಂದಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಸಿಗುತ್ತಿಲ್ಲ. ನರೇಗಾ ಯೋಜನೆಯ ಶಕ್ತಿಯೂ ಕುಂದಿದೆ.

ಮೊದಲು ಹೆಚ್ಚಿನ ರೈತರು ಜಾನುವಾರುಗಳನ್ನು ಸಾಕುತ್ತಿದ್ದರು. ಹಬ್ಬ ಹರಿದಿನದಂತಹ ಶುಭಕಾರ್ಯ ಇಲ್ಲವೇ ಕಷ್ಟದ ದಿನಗಳಲ್ಲಿ ಹಸುಗಳನ್ನು ಮಾರಾಟ ಮಾಡಿ ಖರ್ಚಿಗೆ ಹಣ ಮಾಡಿಕೊಳ್ಳುತ್ತಿದ್ದರು. ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಮೇಲೆ ಆ ವಹಿವಾಟಿಗೂ ತಡೆಯಾಯಿತು. ಊರುಗಳಲ್ಲಿನ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ನಿರ್ಜೀವವಾಗಿವೆ. ಸಾಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಸಾಲ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಕೋವಿಡ್ ಬಂದಾಗ ಹಳ್ಳಿಗರ ಮನೆಯಲ್ಲಿದ್ದ ಅಷ್ಟಿಷ್ಟು ಚಿನ್ನವನ್ನು ಆಧಾರವಾಗಿಟ್ಟು ಹಣಕಾಸಿನ ವಹಿವಾಟು ನಡೆಸಿದ್ದಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮೈಕ್ರೊಫೈನಾನ್ಸ್ ಸಂಸ್ಥೆಗಳು ಹಳ್ಳಿಗರಿಗೆ ಸಾಲ ಕೊಟ್ಟಿವೆ. ಈಗ ಮಾನ ಮರ್ಯಾದೆಗೆ ಅಂಜಿ, ಸಾಲಗಾರರ ಕಿರುಕುಳ ತಾಳಲಾರದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮಾಜವನ್ನು ಆಡಳಿತವೇ ಇಂತಹ ದುಃಸ್ಥಿತಿಗೆ ತಂದು ನಿಲ್ಲಿಸಿದೆ. ರಾಜಕಾರಣಿಗಳು ಅವರಿವರ ಮೇಲೆ ಕೆಸರು ಹಾಕದೆ ಆತ್ಮಾವಲೋಕನ ಮಾಡಿಕೊಳ್ಳಲಿ ಮತ್ತು ಪರಿಹಾರವನ್ನು ಅವರೇ ಸೂಚಿಸಲಿ.

–ತಾ.ಸಿ.ತಿಮ್ಮಯ್ಯ, ಬೆಂಗಳೂರು

ಮೂರು ದಶಕದ ಪ್ರಕರಣಕ್ಕೆ ಜೀವ!

ಬ್ಯಾಂಕೊಂದಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯವು ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ಹಾಗೂ ಇನ್ನಿತರ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸುಮಾರು 32 ವರ್ಷಗಳಿಂದಲೂ ನಡೆಯುತ್ತಿದ್ದ ಈ ಪ್ರಕರಣದ ವಿಚಾರಣೆ ಈಗ ಒಂದು ಘಟ್ಟಕ್ಕೆ ತಲುಪಿದ್ದರೂ ಆರೋಪಿಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ವರೆಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ, ಈ ಪ್ರಕರಣ ಮತ್ತಷ್ಟು ವರ್ಷಗಳ ಕಾಲ ನಡೆಯಬಹುದು. ಜನಮಾನಸದಲ್ಲೂ ಬಹುಶಃ ಮರೆತೇಹೋಗಿದ್ದ ಈ ಪ್ರಕರಣದ ಇತ್ಯರ್ಥಕ್ಕೆ ಇಷ್ಟೊಂದು ದೀರ್ಘ ಅವಧಿ ಏಕೆ ಬೇಕಾಯಿತು ಎಂಬುದು ಯಕ್ಷಪ್ರಶ್ನೆಯೇ ಸರಿ!

–ಕೆ.ವಿ.ವಾಸು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.