ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹಾಲಿ ಶಾಸಕರು ಹಿಂದೆ ಸರಿಯಲಿ

Published 17 ಜನವರಿ 2024, 18:58 IST
Last Updated 17 ಜನವರಿ 2024, 18:58 IST
ಅಕ್ಷರ ಗಾತ್ರ

ಹಾಲಿ ಶಾಸಕರು ಹಿಂದೆ ಸರಿಯಲಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿವೆ. ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕೆಲವು ಸದಸ್ಯರನ್ನು ಲೋಕಸಭಾ ಚುನಾವಣಾ ಅಭ್ಯರ್ಥಿಗಳನ್ನಾಗಿಸುವ ಚಿಂತನೆ ನಡೆದಿದೆ. ಇಂತಹವರು ಗೆಲುವು ಸಾಧಿಸಿದರೆ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹಾಗಾದಲ್ಲಿ ಅವರ ಸ್ಥಾನ ತುಂಬಲು ಮರು ಚುನಾವಣೆ ಅನಿವಾರ್ಯವಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾಗುವುದರಿಂದ, ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆಯಾದಂತೆ ಆಗುವುದಿಲ್ಲ.

ರಾಜಕೀಯ ಪಕ್ಷಗಳು ಈ ದಿಸೆಯಲ್ಲಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಹಾಲಿ ಶಾಸಕರನ್ನು  ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿಸದಂತೆ ಮತದಾರರ ಕಡೆಯಿಂದಲೂ ಪಕ್ಷಗಳ ಮೇಲೆ ಒತ್ತಡ ಬರಬೇಕು.

–ಬಸವರಾಜ ಹುಡೇದಗಡ್ಡಿ, ಬೆಂಗಳೂರು

ಈ ಸಿನಿಮಾದಲ್ಲಿ ಪಾತ್ರಧಾರಿಗಳು ಸಿಕ್ಕಿಬೀಳರು!

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮತ್ತು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಪರಸ್ಪರ ಆರೋಪಗಳನ್ನು ಮಾಡಿಕೊಂಡಿರುವುದು ವರದಿಯಾಗಿದೆ. ಈ ಆರೋಪಗಳು ನಿಜವೇ ಆಗಿದ್ದಲ್ಲಿ, ಇಬ್ಬರೂ ತಪ್ಪಿತಸ್ಥರೇ ಆಗುತ್ತಾರೆ. ಅದನ್ನೆಲ್ಲ ಮುಚ್ಚಿಹಾಕಲು ಜನರಲ್ಲಿ ಗುಂಪುಗಾರಿಕೆ ಉಂಟುಮಾಡಿ, ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಈ ಆರೋಪ, ಪ್ರತ್ಯಾರೋಪದ ಒಳಹುನ್ನಾರ ಇರಬಹುದು. ನಮ್ಮ ದೇಶದಲ್ಲಿ ಇಂತಹ ಹುನ್ನಾರಗಳು ನಡೆಯುತ್ತಲೇ ಇರುತ್ತವೆ. ಇದು ನಾಟಕವಲ್ಲ ಸಿನಿಮಾ. ನಾಟಕವಾಗಿದ್ದರೆ ಸಭ್ಯವೇಷದ ಕಪಟ ಪಾತ್ರಧಾರಿಗಳು ಪ್ರೇಕ್ಷಕರ ಕೈಗೆ ಸಿಕ್ಕಿಬೀಳುತ್ತಿದ್ದರು!

–ದಾಸೇಗೌಡ ಎಂ.ಆರ್., ಚಿತ್ರದುರ್ಗ

ಮಾತೇ ಮಾಣಿಕ್ಯ ಎಂದ ನಾಡಿನಲ್ಲಿ...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅವರು ಏಕವಚನದಲ್ಲಿ ಟೀಕೆ ಮಾಡಿರುವುದನ್ನು ನಾವು ಒಪ‍್ಪುವುದಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಹೇಳಿರುವುದು (ಪ್ರ.ವಾ., ಜ. 17) ನಿಜಕ್ಕೂ ಒಳ್ಳೆಯ ಬೆಳವಣಿಗೆ. ಏಕೆಂದರೆ ನಮ್ಮ ನಮ್ಮ ಮನೆಯ ಕಸವನ್ನು ನಾವೇ ಗುಡಿಸಿ ಹೊರಹಾಕಬೇಕು ಅಲ್ಲವೇ? ಬಿಜೆಪಿಯೊಂದೇ ಅಲ್ಲ ಎಲ್ಲ ಪಕ್ಷಗಳೂ ಇಂತಹ ಸಡಿಲ ನಾಲಿಗೆಯವರನ್ನು ನಿಯಂತ್ರಿಸಬೇಕು. ಮಾತೇ ಮಾಣಿಕ್ಯ ಎಂದ ನಾಡು ನಮ್ಮದು. ಆದ್ದರಿಂದ, ಮಾತು ದೇಶವನ್ನು ಕಟ್ಟುವುದಕ್ಕೆ ನೆರವಾಗಬೇಕೇ ವಿನಾ ಕ್ಷೋಭೆ ಸೃಷ್ಟಿಗಲ್ಲ. ಅದರಲ್ಲೂ ರಾಜಕಾರಣಿಗಳು ಮಾತನಾಡುವಾಗ ತುಂಬಾ ಎಚ್ಚರ ವಹಿಸಬೇಕು.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸಿ ಸ್ಟಡ್ ಫಾರಂ

ಕುಣಿಗಲ್‌ನಲ್ಲಿರುವ ಕುದುರೆ ತಳಿ ಸಂವರ್ಧನಾ ಕೇಂದ್ರವು (ಸ್ಟಡ್ ಫಾರಂ) ಟಿಪ್ಪು ಸುಲ್ತಾನ್ ಕಾಲದಿಂದಲೂ ಚಾಲನೆಯಲ್ಲಿದ್ದು, ಕುಣಿಗಲ್ ತಾಲ್ಲೂಕಿನ ಗೌರವವನ್ನು ಹೆಚ್ಚಿಸಿದೆ. ಈ ಪ್ರದೇಶದ ಸುಮಾರು 500 ಎಕರೆ ವಿಸ್ತೀರ್ಣವು ಬಸ್‌ನಿಲ್ದಾಣ, ಐ.ಬಿ, ಕಾಲೇಜು, ಸರ್ಕಾರಿ ಕಚೇರಿಗಳು ಬಂದು ಸ್ವಲ್ಪ ಮಟ್ಟಿಗೆ ಕಡಿಮೆ ಆಗಿರಬಹುದು. ಆದರೆ ಇನ್ನುಳಿದ ಅಷ್ಟೊಂದು ದೊಡ್ಡ ಬಯಲನ್ನು ಬಡಾವಣೆ ಮಾಡಿ ಶ್ರೀಮಂತರಿಗೆ ಪರಭಾರೆ ಮಾಡುವ ಕೆಲಸಕ್ಕೆ ಹುನ್ನಾರ ನಡೆಯುತ್ತಿರುವುದು ಖಂಡನೀಯ. ಈ ಕೇಂದ್ರದಲ್ಲಿ ಹಿಂದಿನಿಂದಲೂ ಅಮೆರಿಕ, ರಷ್ಯಾ, ಬ್ರಿಟನ್, ಜೋರ್ಡನ್‌ನಂತಹ ದೇಶಗಳಿಂದ ಬೇರೆ ಬೇರೆ ತಳಿಯ ಕುದುರೆಗಳನ್ನು ತರಿಸಿ, ಸಂವರ್ಧನೆ ಮಾಡಿ, ಬೆಳೆದ ಕುದುರೆಗಳನ್ನು ದೇಶ ವಿದೇಶಗಳಲ್ಲಿ ನಡೆಯುವ ಕುದುರೆ ಪಂದ್ಯಗಳು ಮತ್ತು ಸೇನೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಈಗ ಇಂತಹ ಐತಿಹಾಸಿಕ  ಕೇಂದ್ರವನ್ನು ಮುಚ್ಚಿ ಬಡಾವಣೆ ನಿರ್ಮಿಸಿದರೆ, ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಬೆಂಗಳೂರಿನ ಸುತ್ತಮುತ್ತ ಇರುವ ಯಾವ ತಾಲ್ಲೂಕಿನಲ್ಲೂ ಇಷ್ಟೊಂದು ದೊಡ್ಡ ಬಯಲಿಲ್ಲ. ಸ್ಟಡ್ ಫಾರಂ ಅನ್ನು ಈಗಿರುವಂತೆ ಉಳಿಸಿಕೊಂಡು ಅದರಲ್ಲೊಂದು ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಿ, ಪ್ರವಾಸಿ ಕೇಂದ್ರ ಮಾಡಬಹುದು. ಜೊತೆಗೆ ಜಿಲ್ಲೆಯ ಜನಪದ ಮತ್ತು ಜನಾಂಗೀಯ ಅಧ್ಯಯನಕ್ಕೆ ನೆರವಾಗುವಂತಹ ವಸ್ತುಸಂಗ್ರಹಾಲಯವನ್ನು ಮಾಡಬಹುದು. ಸರ್ಕಾರವು ಮುಂದಿನ ಪೀಳಿಗೆಗಾಗಿ ಇದನ್ನು ಉಳಿಸಿ, ಸದ್ವಿನಿಯೋಗ ಆಗುವಂತೆ ಮಾಡಲಿ.

–ತಾ.ಸಿ.ತಿಮ್ಮಯ್ಯ, ಬೆಂಗಳೂರು

ದಂಡವಷ್ಟೇ ಸಾಲದು...

ಅರ್ಜಿದಾರರೊಬ್ಬರ ವೇತನ ತಾರತಮ್ಯ ಸರಿಪಡಿಸುವಂತೆ ತಾನು ನೀಡಿದ್ದ ಆದೇಶವನ್ನು ಮೂರೂವರೆ ವರ್ಷಗಳಾದರೂ ಪಾಲಿಸದೇ ಇರುವ ಬಗ್ಗೆ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದಾಗಿ ವರದಿಯಾಗಿದೆ (ಪ್ರ.ವಾ., ಜ. 17). ಈ ಸಂಬಂಧ ನ್ಯಾಯಾಂಗ ನಿಂದನೆ ಎಸಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಆರು ಜನ ಆರೋಪಿಗಳಿಂದ ₹ 5 ಲಕ್ಷ ದಂಡ ವಸೂಲು ಮಾಡುವಂತೆ ನ್ಯಾಯಪೀಠ ಆದೇಶಿಸಿರುವುದು ಸೂಕ್ತ ಕ್ರಮವಾಗಿದೆ.

ಈ ಹಿಂದೆ, ತನ್ನ ಆದೇಶವನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಎಸಗಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬ
ರಿಗೆ ಸುಪ್ರೀಂ ಕೋರ್ಟ್‌ ಒಂದು ತಿಂಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಲ್ಲದೆ, ಅವರ ಕ್ಷಮಾಪಣೆ ಮತ್ತು ಶಿಕ್ಷೆ ಕಡಿತದ ಮನವಿಯನ್ನು ಪುರಸ್ಕರಿಸಿರಲಿಲ್ಲ. ಅದರಿಂದ ಸರ್ಕಾರಿ ಸಿಬ್ಬಂದಿ ಪಾಠವನ್ನೇನೂ ಕಲಿತಂತಿಲ್ಲ. ನ್ಯಾಯಾಂಗ ನಿಂದನೆಯ ಅರ್ಜಿ ಕೋರ್ಟ್ ಮುಂದೆ ಬರುವುದನ್ನು ಅರಿತಾದರೂ, ಅಧಿಕಾರಿಗಳು ಆ ದಿನಾಂಕದೊಳಗೆ ವೇತನ ತಾರತಮ್ಯ ಸರಿಪಡಿಸಿ, ನ್ಯಾಯಾಲಯದ ಗಮನಕ್ಕೆ ತರುವ ಕನಿಷ್ಠ ಮಾನವೀಯತೆ ಮತ್ತು ಸೂಕ್ಷ್ಮ ಮನೋಭಾವವನ್ನಾದರೂ
ಹೊಂದಬೇಕಿತ್ತು. ಅದನ್ನು ಮಾಡದೆ, ‘ಅರ್ಜಿಗೆ ಸಂಬಂಧಿಸಿದ ಪ್ರಸ್ತಾವ ಹಣಕಾಸು ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿದ್ದು, ಕೋರ್ಟ್‌ ಆದೇಶ ಪಾಲಿಸಲು ಆರು ವಾರಗಳ ಕಾಲಾವಕಾಶ ನೀಡಬೇಕು’ ಎಂದು ಸರ್ಕಾರಿ ವಕೀಲರು ಸಂಕೋಚವಿಲ್ಲದೆ, ಧೈರ್ಯವಾಗಿಯೇ ಮನವಿ ಮಾಡಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡದ ಸರ್ಕಾರಿ ಸಿಬ್ಬಂದಿಯ ವರ್ತನೆಯನ್ನು ಗಮನಿಸಿದರೆ, ದಂಡವನ್ನು ತೆರಲು ಅವರು ಸಮರ್ಥರಾಗಿದ್ದು ಅದಕ್ಕೆ ಸಿದ್ಧರಾಗಿಯೇ ಇರುವಂತೆ ತೋರುತ್ತದೆ. ಹೀಗಾಗಿ, ಅದೊಂದೇ ಶಿಕ್ಷೆ ಅವರ ಮೇಲೆ ಹೆಚ್ಚಿನ ಪರಿಣಾಮವೇನನ್ನೂ ಬೀರುವುದಿಲ್ಲವಾದ್ದರಿಂದ, ಅದರ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸಬೇಕು. ಆಗ ಅಂತಹ ಅಸೂಕ್ಷ್ಮ ಜೀವಿಗಳು ಸ್ವಲ್ಪವಾದರೂ ತಗ್ಗಬಹುದು, ಬಗ್ಗಬಹುದು. ಅದು ಇತರರಿಗೆ ಎಚ್ಚರಿಕೆಯ ಪಾಠವಾದರೂ ಆದೀತು!

–ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT