ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಶಸ್ತಿ ಪಡೆಯುವವರಲ್ಲ, ನೀಡುವವರು

Published 6 ಫೆಬ್ರುವರಿ 2024, 0:11 IST
Last Updated 6 ಫೆಬ್ರುವರಿ 2024, 0:11 IST
ಅಕ್ಷರ ಗಾತ್ರ

ಪ್ರಶಸ್ತಿ ಪಡೆಯುವವರಲ್ಲ, ನೀಡುವವರು

ಉನ್ನತ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಪುರಸ್ಕರಿಸುವುದು ಸರಿಯಷ್ಟೆ. ಅವುಗಳನ್ನು ಕೊಡಲು ಬಳಸುವ ಮಾನದಂಡ ಹಾಗೂ ಆಯ್ಕೆಯ ಹಿಂದಿರುವ ರಾಜಕಾರಣದ ಒಳಪಟ್ಟುಗಳನ್ನು ಉಪೇಕ್ಷಿಸಿ ಹೇಳಬಹುದಾದ ಮಾತೆಂದರೆ, ಪ್ರಶಸ್ತಿ, ಪುರಸ್ಕಾರಗಳು ವಿರಕ್ತರಿಗೆ ಸಲ್ಲ. ವಿಶಿಷ್ಟ ಸಾಧನೆ ಮಾಡಿರುವ ಗೃಹಸ್ಥ ಹಾಗೂ ಜನ
ಸಾಮಾನ್ಯರಿಗೆ ವಿರಕ್ತರು ತಮ್ಮ ಜಂಗಮ ಹಸ್ತಗಳಿಂದ ಅವುಗಳನ್ನು ನೀಡಬೇಕೇ ವಿನಾ ತಾವೇ ಪಡೆಯುವುದಲ್ಲ. ಹಿಂದೆ ಶರಣಮಾರ್ಗದ ವಿರಕ್ತರೊಬ್ಬರು ರಾಷ್ಟ್ರಮಟ್ಟದ ಸೌಹಾರ್ದ, ಇತ್ತೀಚೆಗೆ ಮತ್ತೊಬ್ಬ ವಿರಕ್ತರು ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮಗದೊಬ್ಬರು ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇದು ಶರಣಪಥವಲ್ಲ.

ವಿರಕ್ತರು ಎನಿಸಿಕೊಳ್ಳುವವರು ಹಾಗೂ ಶರಣಮಾರ್ಗದವರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವುದೆಂದರೆ ಶರಣಸ್ಥಳದಿಂದ ಸೀದಾ ಭವಿಸ್ಥಳಕ್ಕೆ ಜಾರುವುದಾಗಿದೆ. ಬಸವಣ್ಣನವರಿಗೂ ಆಗ ಬಿರುದುಬಾವಲಿಗಳನ್ನು ಕೊಡಲು
ಪ್ರಯತ್ನಿಸಲಾಗಿತ್ತು. ಆಗ ಅವರ ಉತ್ತರ ಅತ್ಯಂತ ಮನೋಜ್ಞವಾಗಿತ್ತು. ಅದು, ‘ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರ ಪದವಿಯನೊಲ್ಲೆ, ನಾನು ಮತ್ತಾವ ಪದವಿಯನೊಲ್ಲೆನಯ್ಯಾ! ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ’ ಎಂಬ ಮಂತ್ರಸದೃಶ ವಚನವಾಗಿತ್ತು!

ಮಹಾಂತೇಶ ಗಂಗಯ್ಯ ಓಶಿಮಠ, ಕೈಗಾ ವಸತಿಗ್ರಾಮ

ಸಾಂಪ್ರದಾಯಿಕ ಅಡ್ಡಗಟ್ಟೆ: ನಡೆಯಲಿ ಸಮೀಕ್ಷೆ

ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಂಡಿರುವ ರೈತರಿಗೆ ಪ್ರೋತ್ಸಾಹಧನ ನೀಡುವ ‘ನೀರಿನ ಕ್ರೆಡಿಟ್’ ಪದ್ಧತಿ ಜಾರಿಗೆ ತಜ್ಞರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವುದು (ಪ್ರ.ವಾ., ಫೆ. 3) ಸಮಂಜಸವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬಹುತೇಕ ರೈತರು ಸಾಮೂಹಿಕವಾಗಿ ನದಿ ನೀರಿಗೆ ಅಡ್ಡಲಾಗಿ ಸಾಂಪ್ರದಾಯಿಕ ಅಡ್ಡಗಟ್ಟೆಯನ್ನು (ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಸ್ವತಃ ರೈತರೇ ಗುಂಪಾಗಿ ನಿರ್ಮಿಸುವ ತಾತ್ಕಾಲಿಕ ಚೆಕ್‌ಡ್ಯಾಮ್‌) ನಿರ್ಮಿಸಿ, ಆ ಮುಖಾಂತರ ಸುಮಾರು ನಾಲ್ಕೈದು ಕಿ.ಮೀ. ದೂರದವರೆಗಿನ ತಮ್ಮ ಜಮೀನುಗಳಿಗೆ ಕಾಲುವೆ ನೀರನ್ನು ಹರಿಸಿಕೊಂಡು ಕೃಷಿ ಮಾಡುತ್ತಿರುವ ಪರಿಪಾಟವು ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಇಂಥ ಕಾಲುವೆಯ ನೀರಿನ ಹರಿವಿನಿಂದಾಗಿ ಕೃಷಿ ಉಪಯೋಗಕ್ಕಷ್ಟೇ ಅಲ್ಲದೆ ಕಡು ಬೇಸಿಗೆಯಲ್ಲೂ ಆಸುಪಾಸಿನ ತೆರೆದ ಬಾವಿಗಳಲ್ಲಿ ಸಹಜವಾಗಿ ನೀರಿನ ಸಮೃದ್ಧಿ ಕಾಣುತ್ತಿದೆ. ಪರೋಕ್ಷವಾಗಿ ಅಂತರ್ಜಲ ವೃದ್ಧಿಗೆ ಕಾರಣವಾಗುವ ಇಂತಹ ಅಡ್ಡಗಟ್ಟೆಗಳು ಪ್ರತಿ ಮಳೆಗಾಲದ ನೆರೆ ನೀರಿಗೆ ಕೊಚ್ಚಿ ಹೋಗುತ್ತವೆ. ಮಣ್ಣು ಸವಕಳಿ ಅಥವಾ ಕೆಸರು ತುಂಬಿದ ಕಾಲುವೆಗಳ ದುರಸ್ತಿಗೆ ವೆಚ್ಚವಾಗುವ ಹಣದ ಮೊತ್ತವೂ ಕಾಲಕ್ರಮೇಣ ಹೆಚ್ಚುತ್ತಿದ್ದು, ಇದನ್ನು ಭರಿಸುವ ಸ್ಥಿತಿಯಲ್ಲಿ ಹೆಚ್ಚಿನ ಕೃಷಿಕರು ಇಲ್ಲ. ಹೀಗಾಗಿ, ಕೆಲವು ಕಡೆ ಇಂತಹ ಅಡ್ಡಗಟ್ಟೆಗಳ ನಿರ್ಮಾಣ ಬಹುತೇಕ ಸ್ಥಗಿತಗೊಂಡಿದೆ. ಅಲ್ಲದೆ ಅವೈಜ್ಞಾನಿಕವಾಗಿ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸುತ್ತಿರುವುದರಿಂದಾಗಿ  ಕೃಷಿಗೆ ಬೇಕಾದಷ್ಟು ನೀರಿನ ಸರಾಗ ಹರಿವು ಕಾಲುವೆಯಲ್ಲಿ ಇಲ್ಲದ ಕಾರಣ, ಸ್ವತಂತ್ರ ನೀರಾವರಿ ಸೌಲಭ್ಯದತ್ತ ಬಹುತೇಕ ರೈತರು ಯೋಚಿಸುತ್ತಿದ್ದಾರೆ.

ಸರ್ಕಾರವೇ ತುರ್ತಾಗಿ ಈ ಸಾಂಪ್ರದಾಯಿಕ ಅಡ್ಡಗಟ್ಟೆಗಳ ಸ್ಥಿತಿಗತಿಯ ಸಮೀಕ್ಷೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ
ಮಾಡಿಸಿ, ಇವುಗಳನ್ನು ಉಳಿಸುವಲ್ಲಿ ರೈತರನ್ನು ಪ್ರೇರೇಪಿಸಬೇಕು. ಅಡ್ಡಗಟ್ಟೆಯ ಜೊತೆಗೆ ಕಾಲುವೆ ಅಭಿವೃದ್ಧಿಗೆ ಹೆಚ್ಚಿನ
ಧನಸಹಾಯವನ್ನು ರೈತ ಸಮೂಹಕ್ಕೆ ನೀಡಿ ಪ್ರೋತ್ಸಾಹಿಸಬೇಕು. ಸಾಂಪ್ರದಾಯಿಕ ಅಡ್ಡಗಟ್ಟೆ ಹಾಗೂ ಇದಕ್ಕೆ ಸಂಬಂಧಿಸಿದ
ಕಾಲುವೆಯು ಹಾದುಹೋಗುವ ಜಮೀನನ್ನು ಇದಕ್ಕಾಗಿಯೇ ಅಧಿಕೃತವಾಗಿ ಕಾಯ್ದಿರಿಸಲು ಯೋಜನೆ ಸಿದ್ಧಪಡಿಸಬೇಕು.
ಹೀಗಾದರೆ ಮಾತ್ರ ‘ನೀರಿನ ಕ್ರೆಡಿಟ್’ ಯೋಜನೆ ಬಹುತೇಕ ಸಫಲಗೊಂಡಂತೆ.

 ⇒ಗೋಪು ಗೋಖಲೆ, ಶಿಶಿಲ

ಅನಗತ್ಯ ಹೊರೆ ತಪ್ಪಿಸಲು ಬೇಕು ಇಚ್ಛಾಶಕ್ತಿ

‘ಕಂದಾಯಕ್ಕೆ ಬೇಕು ಚಿಕಿತ್ಸೆ’ ಎಂಬ ವಿಶೇಷ ವರದಿಯು (ಪ್ರ.ವಾ., ಫೆ. 4) ತಾಲ್ಲೂಕು ಕಚೇರಿಗಳಲ್ಲಿ ರೈತರು ಪಡುತ್ತಿರುವ ಬವಣೆಯ ಒಂದು ಮುಖವನ್ನು, ದೂರದ ಊರುಗಳಿಂದ ಬಂದು, ಊಟ ಬಿಟ್ಟು ಕಚೇರಿಗಳ ಬಾಗಿಲು ಕಾಯುವ ರೈತಾಪಿ ವರ್ಗದ ಅಸಹಾಯಕತೆಯನ್ನು ಚಿತ್ರವತ್ತಾಗಿ ತೆರೆದಿಟ್ಟಿದೆ. ಆದರೆ ಇದಕ್ಕೆ ಕಾರಣವಾದ ಇನ್ನೊಂದು ಮಹತ್ವದ ಅಂಶವಿದೆ. ಇಂದಿನ ಕಂಪ್ಯೂಟರ್‌ ಯುಗದಲ್ಲೂ ಅಪ್ರಸ್ತುತವಾಗಿರುವ ಅನೇಕ ಕಾನೂನು ವಿಧಿಗಳನ್ನು ರೈತರ ಮೇಲೆ ಹೇರುತ್ತಿರುವುದು ಅನವಶ್ಯಕ ವಿಳಂಬಕ್ಕೆ, ರೈತರ ಬವಣೆಗೆ ಕಾರಣವಾಗುತ್ತಿದೆ. ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ (ಬೇರೆಡೆಯೂ ಇರಬಹುದು) ಜಮೀನು ಮಂಜೂರು ಮಾಡಿ ಅದನ್ನು ಫಲಾನುಭವಿಗೆ ಹಸ್ತಾಂತರಿಸುವಾಗ,
‘ಹದಿನೈದು ವರ್ಷಗಳ ಕಾಲ ಅದನ್ನು ಪರಭಾರೆ ಮಾಡುವಂತಿಲ್ಲ’ ಎಂಬ ಷರತ್ತನ್ನು ವಿಧಿಸಿರುತ್ತಾರೆ. ಸರಿಯೇ. ಆದರೆ ಸಾಮಾನ್ಯಜ್ಞಾನದಂತೆ, ಈ ಅವಧಿ ಮುಗಿದ ನಂತರ ಈ ಷರತ್ತು ತನ್ನಷ್ಟಕ್ಕೇ ಅನೂರ್ಜಿತವಾಗುವುದಷ್ಟೆ. ಆದರೆ ಈಗ ಹಾಗಾಗುವುದಿಲ್ಲ. ಸಂಬಂಧಪಟ್ಟ ರೈತ ಮತ್ತೆ ಅರ್ಜಿ ಕೊಟ್ಟು ಆ ಷರತ್ತನ್ನು ತೆಗೆದ ಅಪ್ಪಣೆಗಾಗಿ ಕಾಯಬೇಕು. ಇದು ರೈತನಿಗೆ ಹಾಗೆಯೇ ಕಚೇರಿ ಸಿಬ್ಬಂದಿಗೆ ವ್ಯರ್ಥ ಕಾರ್ಯಬಾಹುಳ್ಯ, ಹೊರೆ.

ಇದಕ್ಕೆ ಸರಳ ಪರಿಹಾರವೆಂದರೆ, ಅವಧಿ ಮುಗಿದ ನಂತರ ಈ ಷರತ್ತು ತನ್ನಷ್ಟಕ್ಕೇ ಅನೂರ್ಜಿತವಾಗುತ್ತದೆ ಎಂಬ ಒಂದು ವಾಕ್ಯವನ್ನು ಆ ಷರತ್ತಿನಲ್ಲಿಯೇ ನಮೂದಿಸಿದರಾಯಿತು. ಇದು ದೊಡ್ಡ ಕೆಲಸವೇನಲ್ಲ. ಆದರೆ ಅಂಥದ್ದೊಂದು ಆದೇಶ ನೀಡುವ ಇಚ್ಛಾಶಕ್ತಿ ಬೇಕಷ್ಟೆ. 

⇒ಜಿ.ಮೃತ್ಯುಂಜಯ, ಬೆಂಗಳೂರು

ಚಿಕಿತ್ಸೆಗೆ ನೆರವಾಗಿ

ನನ್ನ ನಾಲ್ಕು ತಿಂಗಳ ಅವಳಿ ಹೆಣ್ಣು ಶಿಶುಗಳು ಅಪರೂಪದ ಕಾಯಿಲೆಯಾದ ಆನುವಂಶಿಕ ನರದೌರ್ಬಲ್ಯದಿಂದ ಬಳಲುತ್ತಿದ್ದು, ಹುಟ್ಟಿದಾಗಿನಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿವೆ. ಜಾಗತಿಕವಾಗಿ ನಮಗೆ ತಿಳಿದುಬಂದಂತೆ, ಇದೇ ಬಗೆಯ ಕಾಯಿಲೆಯಿಂದ ಬಳಲುತ್ತಿರುವ ಹಲವು ಪೋಷಕರ ಅನುಭವ ಹಾಗೂ ವೈದ್ಯರ ಅಭಿಪ್ರಾಯದ ಪ್ರಕಾರ, ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಆದರೆ ಇದಕ್ಕೆ ಅಪಾರ ಹಣ ವ್ಯಯಿಸಬೇಕಿದ್ದು, ನಾವು ಈಗಾಗಲೇ ನಮ್ಮ ಶಕ್ತಿ ಮೀರಿ ಹಣವನ್ನು ವ್ಯಯಿಸಿದ್ದೇವೆ. ಚಿಕಿತ್ಸೆಗೆ ಇನ್ನೂ ₹ 70 ಲಕ್ಷದ ಅಗತ್ಯವಿದೆ. ಖಾಸಗಿ ಕಂಪನಿಯೊಂದರ ಉದ್ಯೋಗಿಯಾದ ನನಗೆ ಅಷ್ಟೊಂದು ಹಣವನ್ನು ಭರಿಸುವುದು ಅಸಾಧ್ಯ. ದಾನಿಗಳು ದಯಮಾಡಿ ನೆರವಾಗಿ. ಬ್ಯಾಂಕ್‌ ಮಾಹಿತಿ: ಖಾತೆ ಸಂಖ್ಯೆ 055201535825, ಐಸಿಐಸಿಐ ಬ್ಯಾಂಕ್‌, ಇನ್ಫೊಸಿಸ್‌ ಬ್ರ್ಯಾಂಚ್‌, IFSC- ICIC0000552, ಫೋನ್‌ ಪೇ/ ಗೂಗಲ್‌ ಪೇ ಸಂಖ್ಯೆ– 9036224651

ಅಮೀತ್‌ ಎಂ. ನಂದಿಹಾಳ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT