ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಮಳೆ ಅವಾಂತರ: ಕಂಡುಕೊಳ್ಳಬೇಕಿದೆ ಪರಿಹಾರ

Published 13 ಮೇ 2024, 19:39 IST
Last Updated 13 ಮೇ 2024, 19:39 IST
ಅಕ್ಷರ ಗಾತ್ರ

ಮಳೆ ಅವಾಂತರ: ಕಂಡುಕೊಳ್ಳಬೇಕಿದೆ ಪರಿಹಾರ

ರಾಜ್ಯದಲ್ಲಿ ಪೂರ್ವ ಮುಂಗಾರು ಆರಂಭವಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದ ಆಗುತ್ತಿರುವ ಸಣ್ಣ ಮಳೆಗೇ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ಮಳೆನೀರು ಸರಾಗವಾಗಿ ಹರಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಿಹಾರ ಕಂಡುಕೊಳ್ಳಬೇಕಿದೆ.

ಮಳೆನೀರು ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳಿಗೆ ಹರಿಯದೆ ರಸ್ತೆಯಲ್ಲೇ ಸಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಚರಂಡಿಗಳಿಗೆ ಕ್ರಮಬದ್ಧವಾಗಿ ನೀರು ಹರಿಯುವಂತೆ ಮಾಡಬೇಕಾಗಿದೆ. ತಗ್ಗುಪ್ರದೇಶಗಳನ್ನು
ಗುರುತಿಸಿ, ಇಂಗುಗುಂಡಿಗಳನ್ನು ನಿರ್ಮಿಸಿ, ಆಯಾ ರಸ್ತೆಯ ನೀರು ಅಲ್ಲಲ್ಲೇ ಭೂಮಿಗೆ ಇಂಗುವಂತೆ ಮಾಡಿದರೆ ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತದೆ, ನೀರು ಪೋಲಾಗಿ ತಗ್ಗುಪ್ರದೇಶಗಳಿಗೆ ನುಗ್ಗುವುದು ಕಡಿಮೆ ಆಗುತ್ತದೆ. ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಇಂತಹದೇ ಪರಿಸ್ಥಿತಿ ಇದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುವ ಮೊದಲೇ ಬಿಬಿಎಂಪಿ ಈ ಬಗ್ಗೆ ಗಂಭೀರ ಪರಿಹಾರ ಕ್ರಮಗಳನ್ನು ಕಂಡುಕೊಳ್ಳದೆ ನಿರ್ಲಕ್ಷ್ಯ ವಹಿಸಿದರೆ  ಅನಾಹುತಗಳು ತಪ್ಪಿದ್ದಲ್ಲ.

⇒ಪ್ರಭು ಇಸುವನಹಳ್ಳಿ, ಬೆಂಗಳೂರು

ಬ್ಯಾಂಕಿಂಗ್‌ ನೇಮಕಾತಿ: ತಾರತಮ್ಯ ಸಲ್ಲ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಹೊಸದಾಗಿ ನೇಮಕ ಮಾಡಿಕೊಳ್ಳಲಿರುವ ಸುಮಾರು 12 ಸಾವಿರ ಉದ್ಯೋಗಿಗಳ ಪೈಕಿ ಶೇ 85ರಷ್ಟು ಎಂಜಿನಿಯರಿಂಗ್ ಪದವೀಧರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ (ಪ್ರ.ವಾ., ಮೇ 13). ಈ ನಡೆ, ಸೇವಾ ನಿಯಮಗಳಿಗೆ ವಿರುದ್ಧವಾದುದು. ಇಷ್ಟು ದಿನ ಇಲ್ಲದ ಇಂತಹ ನಿಯಮ ಈಗೇಕೆ? ಬ್ಯಾಂಕಿಂಗ್ ನೇಮಕಾತಿಗಳಲ್ಲಿ ಇಲ್ಲಿಯವರೆಗೆ ವಾಣಿಜ್ಯಶಾಸ್ತ್ರ, ಕೃಷಿ, ತೋಟಗಾರಿಕೆ, ವಿಜ್ಞಾನ, ಕಲಾ ವಿಭಾಗಗಳಲ್ಲಿ ಓದಿದವರೆಲ್ಲರಿಗೂ ಅವಕಾಶ ನೀಡಲಾಗುತ್ತಿತ್ತು. ಈಗ ಇಂತಹ ತಾರತಮ್ಯವೇಕೆ?! ಬ್ಯಾಂಕುಗಳ ವ್ಯವಹಾರಕ್ಕೆ ಅಗತ್ಯವಾದ ಕಂಪ್ಯೂಟರ್‌ ತಂತ್ರಜ್ಞಾನದ ಜೊತೆಗೆ ಜನರೊಂದಿಗೆ ಒಡನಾಡುವ ಸಾಮಾನ್ಯ ಜ್ಞಾನವೂ ಸಿಬ್ಬಂದಿಗೆ ಇರಬೇಕಾಗುತ್ತದೆ. ಬ್ಯಾಂಕುಗಳು ನಡೆಸುವ ಪರೀಕ್ಷೆಗಳನ್ನು ಯಾವುದೇ ಒಂದು ವಿಭಾಗಕ್ಕೆ ಸೀಮಿತಗೊಳಿಸಿದರೆ, ವಿಶ್ವವಿದ್ಯಾಲಯಗಳು ನೀಡುವ ಪದವಿಗಳಿಗೆ ಕಿಮ್ಮತ್ತು ಇಲ್ಲದಂತೆ ಆಗುತ್ತದೆ. ಇಂತಹ ಕಠಿಣ ಆಲೋಚನೆಯು ಹಿರಿಯ ಅಧಿಕಾರಿಗಳ ಮನಸ್ಸಿಗೆ ಹೇಗೆ ಬಂತು ಎಂದು ಯೋಚಿಸುವಂತೆ ಆಗುತ್ತದೆ.

ಬ್ಯಾಂಕ್‌ ನಿಗದಿಪಡಿಸುವ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ ಎದುರಿಸಿ ಗೆಲ್ಲುವ ಯಾವುದೇ ಅಭ್ಯರ್ಥಿ ಉದ್ಯೋಗದ ಅವಕಾಶ ಪಡೆಯುವಂತೆ ಆಗಬೇಕು. ಎಂಜಿನಿಯರಿಂಗ್ ಓದಿದವರು ತಮ್ಮ ಕ್ಷೇತ್ರದಲ್ಲೇ ಉದ್ಯೋಗ ಅರಸಿಕೊಳ್ಳಲಿ ಎನ್ನಲಾಗದು. ಆದರೆ ‘ಪದವಿ’ ಎಂಬುದೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಮಾನದಂಡವಾಗಬೇಕು. ನಮಗೆಲ್ಲ ತಿಳಿದಿರುವಂತೆ, ರೈಲ್ವೆ, ಅಂಚೆ, ಬಿಎಸ್ಎನ್ಎಲ್, ಬ್ಯಾಂಕುಗಳಲ್ಲಿ ಹೊರರಾಜ್ಯದವರನ್ನು ರತ್ನಗಂಬಳಿ ಹಾಸಿ ಕರೆದಾಗಿದೆ. ಇನ್ನು ಈಗ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮತ್ತೊಂದು ಹೊಸ ಅವತಾರವೇ?

⇒ತಿರುಪತಿ ನಾಯಕ್, ಹೊಸನಗರ

ರಾಹುಕಾಲದಲ್ಲಿ ಗೃಹಪ್ರವೇಶ: ಸ್ತುತ್ಯರ್ಹ ನಡೆ

ಮೈಸೂರು ಜಿಲ್ಲೆಯ ಕೆ.ಆರ್‌.ನಗರದಲ್ಲಿ ಭಾನುವಾರ ಲೇಖಕ ಹಾಗೂ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ವಿಜ್ಞಾನ ವಿಭಾಗದ ಮುಖ್ಯಸ್ಥ ಎನ್‌.ಆರ್‌.ಶಿವರಾಂ ಅವರು ತಮ್ಮ ಮನೆಯ ಗೃಹಪ್ರವೇಶವನ್ನು ರಾಹುಕಾಲದಲ್ಲಿ ನೆರವೇರಿಸಿದ ಸುದ್ದಿ ಓದಿ (ಪ್ರ.ವಾ., ಮೇ 13) ಸ್ವಲ್ಪ ಆಶ್ಚರ್ಯವಾಯಿತು. ನಾವು ಎಷ್ಟೇ ಮೂಢನಂಬಿಕೆ ವಿರೋಧಿಗಳು ಎಂದುಕೊಂಡರೂ ಕೆಲವೊಮ್ಮೆ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ, ಅಮಾವಾಸ್ಯೆ, ಹುಣ್ಣಿಮೆಯಂತಹ ವಿಷಯಗಳಲ್ಲಿ ಸ್ವಲ್ಪ ಹುಷಾರಾಗಿ ನಡೆದುಕೊಳ್ಳುತ್ತೇವೆ. ಶುಭಕಾರ್ಯಗಳನ್ನು ಕೈಗೊಳ್ಳುವ ಸಮಯದಲ್ಲಂತೂ ಬಹುಪಾಲು ಇವುಗಳನ್ನೆಲ್ಲ ಪರಿಗಣಿಸುತ್ತೇವೆ.

ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ, ಆಕಸ್ಮಿಕವಾಗಿ ಏನಾದರೂ ಕೆಟ್ಟದ್ದು ಸಂಭವಿಸಿದರೂ ಶುಭ ಗಳಿಗೆಯಲ್ಲಿ ಶುಭಾರಂಭ ಮಾಡದಿದ್ದುದೇ ಇದಕ್ಕೆ ಕಾರಣ ಎಂಬ ಅಳುಕು ಬಂದುಬಿಡುತ್ತದೆ. ಅಂತಹುದರಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರ ಈ ಧೈರ್ಯದ ಹೆಜ್ಜೆಯನ್ನು ಮೆಚ್ಚಲೇಬೇಕು.

⇒ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ಇವರು ಯಾರಿಗೆ ಮಾದರಿ?

ಆಂಧ್ರಪ್ರದೇಶದಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ತಾವು ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತಗಟ್ಟೆಗೆ ತೆರಳಿದ್ದನ್ನು ಆಕ್ಷೇಪಿಸಿದ ಮತದಾರನೊಬ್ಬನಿಗೆ ಕಪಾಳಕ್ಕೆ ಹೊಡೆದಿರುವುದು ದುರದೃಷ್ಟಕರ. ಕ್ರಿಕೆಟ್ ತಾರೆ, ಸಿನಿಮಾ ತಾರೆಯರಾದಿಯಾಗಿ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ದ್ದನ್ನು ನಾವೆಲ್ಲ ಮಾಧ್ಯಮಗಳ ಮೂಲಕ ನೋಡಿದ್ದೇವೆ. ಇನ್ನು ಶಾಸಕರಾದವರಿಗೆ ಬೇರೆ ನಿಯಮ ಇರುತ್ತದೆಯೇ? ಜನಪ್ರತಿನಿಧಿಯಾದವರು ಈ ರೀತಿ ವರ್ತಿಸುವುದು ಒಳ್ಳೆಯದಲ್ಲ. ಇಂತಹ ಮನೋಭಾವ ಹೊಂದಿರುವವರು ಜನಸೇವೆಯನ್ನು ಹೇಗೆ ಮಾಡಬಲ್ಲರು?

⇒ಎಂ.ಪರಮೇಶ್ವರ ಮದ್ದಿಹಳ್ಳಿ, ಹಿರಿಯೂರು

ಕರುಳು ಮಿಡಿಯಲಿ, ಮಾನವತೆ ಗೆಲ್ಲಲಿ

ತಂದೆ– ತಾಯಿಯನ್ನು ಹೆತ್ತ ಮಕ್ಕಳೇ ಮನೆಯಿಂದ ಆಚೆ ಹಾಕುತ್ತಿದ್ದು, ವೃದ್ಧಾಶ್ರಮಗಳಿಗೆ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಇಂದಿನ ಆಧುನಿಕ ಮತ್ತು ಬದಲಾಗುತ್ತಿರುವ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಾನವೀಯ ಮೌಲ್ಯಗಳು ಮತ್ತು ಸಂವೇದನಾಶೀಲತೆಯ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿರುವುದು ತಿಳಿಯುತ್ತದೆ.

ಬರೀ ಅಂಕಗಳ ಅಳತೆಗೋಲಿನಲ್ಲಿ ಶಿಕ್ಷಣ ಇರುವುದು, ದುಡ್ಡನ್ನು ಸಂಪಾದನೆ ಮಾಡಬೇಕಾದ ಮನುಷ್ಯನನ್ನೇ ದುಡ್ಡು ಸಂಪಾದನೆ ಮಾಡುತ್ತಿರುವಂತಹ ಬೆಳವಣಿಗೆಗಳು, ಬಿಡುವಿಲ್ಲದ ಯಾಂತ್ರಿಕ ದುಡಿಮೆ, ಆಧುನೀಕರಣ, ಅವಿಭಕ್ತ ಕುಟುಂಬಗಳು ಮರೆಯಾಗಿರುವುದು, ಜನಜೀವನ ಸುಧಾರಣೆಗೆ ಪೂರಕವಾದ ಯೋಜನೆಗಳಲ್ಲಿ ಸರ್ಕಾರದ ನಿರ್ಲಕ್ಷ್ಯ... ಹೀಗೆ ಎಲ್ಲವುಗಳ ಪಾತ್ರವೂ ಇದರಲ್ಲಿ ಹಾಸುಹೊಕ್ಕಿದೆ. ಪೋಷಕರಾದರೇನು, ಮಕ್ಕಳಾದರೇನು ಕರುಳು ಮಿಡಿಯಲೇಬೇಕಲ್ಲವೇ? ಆದರೆ ಅದಕ್ಕೆ ಪೂರಕವಾದ ವಾತಾವರಣ ಇರಬೇಕಷ್ಟೆ.

⇒ರಾಜು ವೆಂಕಟಪ್ಪ, ಕುಣಿಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT