ಭಾನುವಾರ, ಅಕ್ಟೋಬರ್ 24, 2021
23 °C

ಹೆದ್ದಾರಿ ಕಿರಿಕಿರಿ: ಸಮೀಕ್ಷೆ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸಭೆಯ ಅಧಿವೇಶನದಲ್ಲಿ ಸದಸ್ಯರು ರಸ್ತೆ ಉಬ್ಬುಗಳ ಬಗ್ಗೆ ಇತ್ತೀಚೆಗೆ ಅತ್ಯಂತ ಭಾವಾವೇಶದಿಂದ ಚರ್ಚಿಸಿದ್ದಾರೆ. ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು, ವಾಹನಗಳನ್ನು ವೇಗವಾಗಿ ಓಡಿಸುವವರಿಗೆ ರಸ್ತೆ ಉಬ್ಬುಗಳು ತುಂಬಾ ಕಿರಿಕಿರಿ ಅನ್ನಿಸಬಹುದು. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಮುಖ್ಯ ರಸ್ತೆಗಳಲ್ಲಿ ಓಡಿಸುವವರಿಗೆ ಇಂತಹ ಅನುಭವವಾಗಬಹುದು. ಆದರೆ ಇಂದು ಆ ಹೆದ್ದಾರಿಗಳು ಹಾಗೂ ಇತರ ರಸ್ತೆಗಳು, ನೂರಾರು ವರ್ಷಗಳಿಂದ ಆರಾಮವಾಗಿ ಉಸಿರಾಡುತ್ತಿದ್ದ ಸಾವಿರಾರು ಹಳ್ಳಿಗಳ ಹೃದಯ ಭಾಗಗಳನ್ನು ಸೀಳಿ, ಅವರು ಬಾಳಿ ಬದುಕುತ್ತಿದ್ದ ನೆಲವನ್ನು ಕಿತ್ತುಕೊಂಡು ಅನಾಥರನ್ನಾಗಿ ಮಾಡಿಟ್ಟಿವೆ. ಇದರ ಜೊತೆಗೆ ಸದಾ ವಾಹನಗಳ ಗದ್ದಲ, ಕರ್ಕಶ ಶಬ್ದಮಾಲಿನ್ಯ ಬೇರೆ. ಹಾಗೆಯೇ ಅವರು ತಮ್ಮದೇ ನೆಲ, ಗದ್ದೆ, ತೋಟಗಳಿಗೆ ಓಡಾಡಬೇಕಾದರೆ ರಸ್ತೆ ದಾಟಲು ಎಂತೆಂಥ ಹಿಂಸೆಯನ್ನು ಅನುಭವಿಸಬೇಕಾಗಿದೆ. ಆಯಾ ಹಳ್ಳಿಗಳ ಅನನ್ಯ ಭಾಗವಾಗಿರುವ ಲೆಕ್ಕವಿಲ್ಲದಷ್ಟು ನಾಯಿಗಳು ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾಯುತ್ತಿರುತ್ತವೆ. ಕೆಲವೊಮ್ಮೆ ಬಡಪಾಯಿ ಮನುಷ್ಯರು ಕೂಡ.

ಈ ಬಗ್ಗೆ ಸರ್ಕಾರದ ಬಳಿ ನಿರ್ದಿಷ್ಟ ಅಂಕಿ ಅಂಶವಿದೆಯೇ? ಈ ಕುರಿತು ವಿಧಾನಮಂಡಲದ ಯಾವುದೇ
ಅಧಿವೇಶನದಲ್ಲಿ ಇಲ್ಲಿಯವರೆಗೆ ಚರ್ಚೆಯಾಗಿಲ್ಲ. ಯಾವುದೇ ಅಧಿಕಾರಿ ತನ್ನ ಇಚ್ಛೆಗೆ ಅನುಸಾರವಾಗಿ ರಸ್ತೆ ಉಬ್ಬುಗಳನ್ನು ಹಾಕಿಸಲು ಸಾಧ್ಯವಿಲ್ಲ. ಅವರನ್ನು ಆ ಕಡೆ ಈ ಕಡೆ ಜಗ್ಗಾಡುವ ಎಂತೆಂಥ ತರಾವರಿ ನಾಯಕರಿದ್ದಾರೆ. ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ರಸ್ತೆ ಉಬ್ಬುಗಳಿಂದಾಗಿ ಆರಾಮವಾಗಿ ಓಡಾಡಲು ಆಗುತ್ತಿಲ್ಲ. ತಮ್ಮ ಮನೆಗಳ ಮುಂದೆಯೇ ಮಕ್ಕಳು ಆಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. ಈ ಸ್ವಾತಂತ್ರ್ಯ ದಿನೇ ದಿನೇ ಮತ್ತಷ್ಟು ಕಷ್ಟದಾಯಕವಾಗುತ್ತಿದೆ. ಇದಕ್ಕೆ ಮೀರಿದ ಕಿರಿಕಿರಿಯ ಹಾರ್ನ್‌ಗಳು. ಬಹಳಷ್ಟು ಬಾರಿ ಈ ಹಾರ್ನ್‌ಗಳ ಅಗತ್ಯವೇ ಇರುವುದಿಲ್ಲ. ಆದರೂ ಫ್ಯಾನ್ಸಿಗೆ ಎಂಬಂತೆ ಬಾರಿಸುತ್ತಲೇ ಇರುತ್ತಾರೆ. ದಯವಿಟ್ಟು ಸದಸ್ಯರು ಇಂಥದ್ದನ್ನೆಲ್ಲ ಸಮೀಕ್ಷೆ ಮಾಡಿಸಬೇಕು.

– ಶೂದ್ರ ಶ್ರೀನಿವಾಸ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.