ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಿ-ಸಂಧಾನದಂತೆ ದೃಢತೆಯೂ ಅಗತ್ಯ

Last Updated 21 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಚರ್ಚೆ, ಕೊಡು–ಕೊಳ್ಳುವಿಕೆಯು ಪ್ರಜಾಪ್ರಭುತ್ವದ ಜೀವಾಳ. ಆದರೆ ಕೆಲವೊಮ್ಮೆಯಾದರೂ ಸರ್ಕಾರವು ವಿವಾದಗ್ರಸ್ತ ವಿಷಯಗಳಲ್ಲಿ ದೃಢವಾಗಿ ಇರಬೇಕಾಗುತ್ತದೆ ಎಂಬುದನ್ನು ಕರ್ನಾಟಕ ಒಮ್ಮೆ ತೋರಿಸಿಕೊಟ್ಟಿದೆ. 1996-97ರಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರ ಒಂದು ವರ್ಗವು ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗುವುದನ್ನು ಬಹಿಷ್ಕರಿಸಿತು. ತಮ್ಮ ಸಂಭಾವನೆ ಹೆಚ್ಚಿಸಬೇಕೆಂಬುದು ಅವರ ಆಗ್ರಹವಾಗಿತ್ತು. ಆಗ ಬಿ.ಸೋಮಶೇಖರ್ ಅವರು ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದರು. ದೃಢ ನಿರ್ಧಾರ, ಬಿಗಿತನಕ್ಕೆ ಹೆಸರಾದವರು. ಮೊದಲು ಉಪನ್ಯಾಸಕರು ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಲಿ, ತದನಂತರ ಮಾತುಕತೆ ಎಂದ ಅವರು, ಅಲ್ಲಿಯವರೆಗೆ ಪ್ರತಿಭಟನಕಾರರನ್ನು ಭೇಟಿಯಾಗಲೂ ನಿರಾಕರಿಸಿದರು. ಪರೀಕ್ಷೆಗಳು ನಡೆಯುತ್ತವೆಯೋ ಇಲ್ಲವೋ ಎಂಬ ಆತಂಕಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಒಳಗಾಗಿದ್ದರು. ಆದರೆ ಅವರ ಭವಿಷ್ಯ ಸುರಕ್ಷಿತ ಎಂದು ಸಚಿವರು ಆಶ್ವಾಸನೆ ಕೊಟ್ಟರು. ಸೋಮಶೇಖರ್ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂಬುದು ಮುಷ್ಕರನಿರತರ ಪಟ್ಟಾಗಿತ್ತು. ಆದರೆ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಂಡಿದ್ದ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌, ಪರಿಸ್ಥಿತಿಯನ್ನು ನಿಭಾಯಿಸಲು ಸಚಿವರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು.

ಬೆಂಗಳೂರು ವಿಶ್ವವಿದ್ಯಾಲಯ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸರ್ಕಾರವು ಜಿಲ್ಲಾಧಿಕಾರಿ ಆದಿಯಾಗಿ ತನ್ನ ಸಿಬ್ಬಂದಿಯ ಸಹಕಾರದಿಂದ ಪರೀಕ್ಷೆಗಳನ್ನು ಯಶಸ್ವಿಯಾಗಿ ಕೈಗೊಂಡಿತು. ತದನಂತರ ಮುಷ್ಕರನಿರತರು ಮುಖ್ಯಮಂತ್ರಿಯನ್ನು ಕಂಡು, ಬಹಿಷ್ಕಾರ ನಿರ್ಧಾರವನ್ನು ತಾವಾಗಿಯೇವಾಪಸ್‌ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ನಡೆಸಿಕೊಟ್ಟರು. ಹೀಗೆ ಒಳ್ಳೆಯ ಕೆಲಸದಲ್ಲಿ ಸರ್ಕಾರದ ದಿಟ್ಟ ಕ್ರಮ ಮೇಲುಗೈ ಪಡೆದಿತ್ತು.

1996-97ರವರೆಗೂ ಪರೀಕ್ಷೆಗಳಿಗೆ ಮುಂಚೆ ಕೆಲ ಬೇಡಿಕೆಗಳನ್ನು ಸರ್ಕಾರದ ಮುಂದಿಡುವುದು, ಮಾತುಕತೆ ನಡೆದು ಬೇಡಿಕೆಗಳಲ್ಲಿ ಕೆಲವನ್ನು ಎರಡೂ ಕಡೆಯವರು ಒಪ್ಪಿಕೊಳ್ಳುವುದು, ಆನಂತರ ಪರೀಕ್ಷೆಗಳು ನಡೆಯುವುದು ಪರಿಪಾಟವಾಗಿತ್ತು. ಮೊದಲ ಬಾರಿಗೆ 1996-97ರಲ್ಲಿ ಪರೀಕ್ಷೆಗಳು ಅನಿರ್ಬಂಧವಾಗಿ ನಡೆದವು. ಆದರೆ ಇಂದು ಇಕ್ಕಟ್ಟಿನ ವಿಷಯಗಳಿಗೆ ಶಾಶ್ವತ, ಪರಿಣಾಮಕಾರಿ ಪರಿಹಾರ ಕಂಡುಹಿಡಿಯುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿಲ್ಲ. ತತ್‌ಕ್ಷಣಕ್ಕೆ ಸಮಾಧಾನ ಸಿಕ್ಕರೆ ಆಯಿತು ಎಂಬಂಥ ಸ್ಥಿತಿ ಇದೆ. ಇದು ಬದಲಾಗಬೇಕು. ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಪ್ರಯತ್ನಗಳು ನಡೆಯಬೇಕು.

- ಸಿ.ಟಿ.ಜೋಷಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT