ಕಲಾ ವಿಭಾಗದತ್ತ ಮೂಡಲಿ ಒಲವು

7

ಕಲಾ ವಿಭಾಗದತ್ತ ಮೂಡಲಿ ಒಲವು

Published:
Updated:

ಒಂದೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ಕಲಾ ವಿಭಾಗದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಬೇರೆ ಯಾವುದೇ ವಿಭಾಗಗಳಿಗೆ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಆ ವಿಭಾಗಕ್ಕೆ ಬೇಡಿಕೆ ನಿರ್ಮಾಣಗೊಂಡಿತ್ತು. ಆದರೆ, ಇಂದಿನ ಕಲಾ ವಿಭಾಗದ ತರಗತಿಗಳು ಬೇಸಿಗೆ ಕಾಲದ ಕೆರೆಗಳಂತೆ ವಿದ್ಯಾರ್ಥಿಗಳಿಲ್ಲದೆ ಬತ್ತಿಹೋಗಿವೆ. ಪಿಯುಸಿ ಹಾಗೂ ಪದವಿ ಕೋರ್ಸ್‌ಗಳ ಕಲಾ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಕೆಲವು ವಿಷಯಗಳ ವಿಭಾಗಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕ ವೃತ್ತಿಯಲ್ಲೇ ತಮ್ಮ ಜೀವನವನ್ನು ಕಟ್ಟಿಕೊಂಡಿರುವ ಕಲಾ ವಿಭಾಗದ ಉಪನ್ಯಾಸಕರು ನಿರುದ್ಯೋಗಿಗಳಾಗುವ ಆತಂಕದಿಂದ ಪರ್ಯಾಯ ವೃತ್ತಿ ಕಂಡುಕೊಳ್ಳುವ ಅನಿವಾರ್ಯ ಎದುರಿಸುತ್ತಿದ್ದಾರೆ.

ಇಂದಿನ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ತಮ್ಮ ಆಯ್ಕೆಯಾಗಿ ಪರಿಗಣಿಸದೆ, ಅನ್ಯ ವಿಧಿಯಿಲ್ಲದೆ ಅದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿರುವುದು ನೋವಿನ ಸಂಗತಿ. ಇದಕ್ಕೆ ಮುಖ್ಯ ಕಾರಣ, ಪೋಷಕರಲ್ಲಿ ಕಲಾ ವಿಭಾಗದೆಡೆ ಇರುವ ನಿರ್ಲಕ್ಷ್ಯ ಭಾವನೆ ಹಾಗೂ ವಾಣಿಜ್ಯ, ವಿಜ್ಞಾನ ವಿಭಾಗಗಳ ಕಡೆ ಹೆಚ್ಚಿದ ವ್ಯಾಮೋಹ. ಜೊತೆಗೆ

ಕಲಾ ವಿಭಾಗದಲ್ಲಿ ಓದಿದರೆ ಹೆಚ್ಚಿನ ಉದ್ಯೋಗ ಅವಕಾಶಗಳಿಲ್ಲ ಎಂಬ ತಪ್ಪು ಕಲ್ಪನೆ.

ಓದಿನ ನಂತರ ನಿರೀಕ್ಷಿತ ಉದ್ಯೋಗ ಅವಕಾಶಗಳು ಯಾವುವು ಎಂಬ ಬಗ್ಗೆ ಈ ವಿದ್ಯಾರ್ಥಿಗಳಲ್ಲಿರುವ ಗೊಂದಲವನ್ನು ಮೊದಲು ನಿವಾರಿಸಬೇಕಾಗಿದೆ. ಬೋಧನೆ, ಸಾಮಾಜಿಕ ಸೇವೆ, ಕಾನೂನು, ರಾಜಕೀಯ, ಪತ್ರಿಕೋದ್ಯಮ ಮುಂತಾದ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಮನಗಾಣಿಸಬೇಕಾಗಿದೆ. ಇದೇ ಪರಿಸ್ಥಿತಿ ಹಿಂದೊಮ್ಮೆ ಬಿ.ಇಡಿ ಕೋರ್ಸ್‌ಗಳಿಗೂ ಬಂದಿತ್ತು. ಬಹುತೇಕ ಬಿ.ಇಡಿ ಕಾಲೇಜುಗಳು ಮುಚ್ಚುವ ಪರಿಸ್ಥಿತಿಯಲ್ಲಿ ಇದ್ದಾಗ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ, ಪಿಯುಸಿ ಉಪನ್ಯಾಸಕರಿಗೆ ಬಿ.ಇಡಿ ಅರ್ಹತೆ ಕಡ್ಡಾಯಗೊಳಿಸಿತ್ತು. ಇದರಿಂದ ಆ ಕೋರ್ಸುಗಳಿಗೆ ತಕ್ಷಣ ಬೇಡಿಕೆ ಹೆಚ್ಚಾಯಿತು. ಅದೇ ರೀತಿ ಈಗಲೂ ಸರ್ಕಾರ ವಿಶೇಷ ಆಸಕ್ತಿ ವಹಿಸಿ, ಪಿಯುಸಿ ಹಾಗೂ ಪದವಿ ಕೋರ್ಸ್‌ಗಳಲ್ಲಿ ಕಲಾ ವಿಭಾಗವನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಇಂತಹ ನಿರ್ಲಕ್ಷ್ಯ ಭಾವನೆ ಬದಲಾಯಿಸುವಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು, ಶಿಕ್ಷಣ ಇಲಾಖೆ ಸಹ ಕಾರ್ಯೋನ್ಮುಖವಾಗಬೇಕು. 

-ವಿಶಾಂತ್ ಶೆಟ್ಟಿ ಪೊಸ್ರಾಲು,ಕಾರ್ಕಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !