ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮನ್ನಣೆಯ ದಾಹಕ್ಕೆ ಕೊನೆಯಿಲ್ಲ

Last Updated 31 ಮೇ 2022, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಟಿ.ವಿ. ಚಾನೆಲ್ ಒಂದರಲ್ಲಿ ನಟಿ ಶ್ರುತಿ ಅವರ ತಂದೆ-ತಾಯಿಯ ಸಂದರ್ಶನವನ್ನು ನೋಡುವ ಸಂದರ್ಭ ಒದಗಿಬಂತು. ಶ್ರುತಿ ಅವರ ತಂದೆ ಕೃಷ್ಣ ಅವರು ಇತ್ತೀಚೆಗೆ ಬಿಡುಗಡೆಯಾಗಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕೆಜಿಎಫ್ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಅಂತಹದ್ದೊಂದು ದೊಡ್ಡ ಚಿತ್ರದಲ್ಲಿ ಅವರಿಗೆ ಆ ಪಾತ್ರ ದೊರಕಿದ ಬಗ್ಗೆ ಪತಿ-ಪತ್ನಿ ಇಬ್ಬರೂ ಬಹು ಧನ್ಯರಾದಂತಿದ್ದು, ಆ ಚಿತ್ರದ ನಾಯಕ, ನಿರ್ಮಾಪಕ, ನಿರ್ದೇಶ`ಕರೆಲ್ಲರಿಗೂ ಕಾರ್ಯಕ್ರಮದಲ್ಲಿ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತಿದ್ದರು. ಅದು ಸಹಜವೂ ಹೌದು. ಆದರೆ ಆ ಭರದಲ್ಲಿ ಅವರು ಹೇಳಿದ ಮಾತೊಂದನ್ನು ಕೇಳಿ ಪಿಚ್ಚೆನಿಸಿತು. ಅವರು ಹೇಳಿದ ಮಾತಿನ ಸಾರಾಂಶ ಇಷ್ಟು: ‘ಇದೊಂದು ಪಾತ್ರ ನನಗೆ ಇದುವರೆಗೂ ಸಿಗದ ಹೆಸರು, ಗೌರವ ಗಳಿಸಿಕೊಟ್ಟಿದೆ. ಈ ಪಾತ್ರದ ಮುಂದೆ ನಾನು 70 ವರ್ಷ ರಂಗಭೂಮಿಯಲ್ಲಿ ಪಾತ್ರ ಮಾಡಿ ಹೆಸರು ಗಳಿಸಿದ್ದು ಏನೇನೂ ಅಲ್ಲ. ನಾನು ಮುಂಚೆಯೇ ಚಿತ್ರರಂಗಕ್ಕೆ ಬರಬೇಕಿತ್ತು’.

ನಿಜ, ಖ್ಯಾತ ಚಿತ್ರವೊಂದರ ಭಾಗವಾಗುವುದು ಎಲ್ಲರಿಗೂ ಅಭಿಮಾನದ ವಿಷಯ. ಆದರೆ ಆ ಒಂದು ಪಾತ್ರಕ್ಕಾಗಿ ಇಷ್ಟು ವರ್ಷ ತಮ್ಮ ಜೀವನಕ್ಕೆ ಆಧಾರವಾಗಿದ್ದ, ತಮ್ಮನ್ನು, ತಮ್ಮ ಕುಟುಂಬನ್ನು ಸಲಹಿದ, ಪ್ರಾಯಶಃ ಈ ಚಲನಚಿತ್ರದ ಪಾತ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದ ರಂಗಭೂಮಿಯನ್ನು ತಿರಸ್ಕಾರದಿಂದ ಕಂಡಾಗ ಯಾಕೋ ಬೇಸರವಾಯಿತು. ಕೆಜಿಎಫ್ ಚಿತ್ರದ ತಂದೆಯ ಪಾತ್ರವೇನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ‘ನಾಗರಹಾವು’ ಚಲನಚಿತ್ರದ ಚಾಮಯ್ಯ ಮೇಷ್ಟ್ರು ಅಥವಾ ಒನಕೆ ಓಬವ್ವನ ಪಾತ್ರದಂತಹ ಸಕಾರಾತ್ಮಕ ಪಾತ್ರವಾಗಿರದೆ, ಕುಡುಕ ಗಂಡನ ಪಾತ್ರವಾಗಿದೆ. ಕೇವಲ ಅಂತಹದ್ದೊಂದು ಪಾತ್ರ ಮತ್ತು ಆ ಚಲನಚಿತ್ರದೊಂದಿಗೆ ಗುರುತಿಸಿಕೊಂಡು ಖ್ಯಾತರಾಗಲು ಅವರಾಡಿದ ಮಾತು ಡಿವಿಜಿ ಅವರ ‘ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣು-ಗಂಡೊಲವು, ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ...’ ಎಂಬ ಕಗ್ಗದ ಸಾಲುಗಳನ್ನು ನೆನಪಿಸಿತು. ಎಷ್ಟೊಂದು ನಿಜ

- ಮಂಜುನಾಥ ಎಸ್.ಎಸ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT