ಗುರುವಾರ , ಡಿಸೆಂಬರ್ 3, 2020
18 °C

ವಾಚಕರ ವಾಣಿ: ಯುಜಿಸಿಯ ಏಕಪಕ್ಷೀಯ ಸುತ್ತೋಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಇದೇ 20ರಂದು ಸುತ್ತೋಲೆಯೊಂದನ್ನು ಹೊರಡಿಸಿದೆ. ಅದರಲ್ಲಿ, ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಉದ್ದೇಶಿಸಿ ‘ರಾಷ್ಟ್ರೀಯ ಶಿಕ್ಷಣ ನೀತಿ– 2020 (ಎನ್‌ಇಪಿ) ಅನ್ನು ಯಾವ ರೀತಿ ಜಾರಿಗೊಳಿಸಬೇಕು, ಅದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಕ್ರಮಗಳ ಸಿದ್ಧತೆ ಹೇಗೆ’ ಎಂಬುದನ್ನು ಸೂಚಿಸಿದೆ. ಇದು ಮೇಲ್ನೋಟಕ್ಕೆ ಕಾಣುವಂತೆ ಸಂವಿಧಾನದ ನೀತಿಸಂಹಿತೆಯ ಉಲ್ಲಂಘನೆಯಾಗಿದೆ.

ಸಂವಿಧಾನದ ಶೆಡ್ಯೂಲ್ 7ರ ಅನುಸಾರ, ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಶಿಕ್ಷಣ ಕುರಿತಾದ ಯಾವುದೇ ಬಗೆಯ ನೀತಿ, ನಿಯಮಾವಳಿ, ಕಾನೂನು, ಮಾರ್ಗಸೂಚಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಸಮಾನ ಅಧಿಕಾರವಿದೆ. ವಿಶ್ವವಿದ್ಯಾಲಯಗಳ ಆಡಳಿತವು ರಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಎನ್‌ಇಪಿ ಕುರಿತು ಸಂಸತ್ತಿನಲ್ಲಿ, ರಾಜ್ಯಗಳ ವಿಧಾನಮಂಡಲಗಳಲ್ಲಿ ಚರ್ಚೆಯಾಗಿಲ್ಲ. ರಾಜ್ಯ ಸರ್ಕಾರಗಳು ಶಿಕ್ಷಣ ಹಕ್ಕುದಾರರಾದ ಪೋಷಕ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಶಿಕ್ಷಕ ಸಂಘಟನೆ, ಎಸ್‌ಡಿಎಂಸಿ, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿಲ್ಲ.

ಇದೀಗ ಯುಜಿಸಿಯು ಚುನಾಯಿತ ರಾಜ್ಯ ಸರ್ಕಾರಗಳನ್ನು ಕಡೆಗಣಿಸಿ ನೇರವಾಗಿ ಕುಲಪತಿಗಳಿಗೆ ಏಕಪಕ್ಷೀಯವಾದ ಸುತ್ತೋಲೆ ಹೊರಡಿಸಿ ಆದೇಶಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಈ ಸರ್ವಾಧಿಕಾರಿ ನಡೆಯನ್ನು ನಾಗರಿಕರು ವಿರೋಧಿಸಬೇಕು. ಎಲ್ಲ ಪ್ರಜ್ಞಾವಂತರು, ಪ್ರಗತಿಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತು ನಿರಂತರ ಚರ್ಚೆ ನಡೆಸಬೇಕು. ಇದು ಸಣ್ಣ ಸಂಗತಿಯಲ್ಲ. ಸಂವಿಧಾನದ ನೀತಿಸಂಹಿತೆ ಉಲ್ಲಂಘಿಸುವುದನ್ನು ಮೌನವಾಗಿ ಸ್ವೀಕರಿಸಿದರೆ ಪ್ರಜಾಪ್ರಭುತ್ವವನ್ನು ನಾಶಪಡಿಸಿದಂತೆ.

-ಬಿ.ಶ್ರೀಪಾದ ಭಟ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.