ಮಂಗಳವಾರ, ನವೆಂಬರ್ 24, 2020
22 °C

ನಾವೂ ಅಮೆರಿಕನ್ನರಿಂದ ಕಲಿಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಮೆರಿಕವು ಭಾರತದಿಂದ ಪಾಠ ಕಲಿಯಬೇಕಾಗಿದೆ ಎಂದು ರಮಾನಂದ ಶರ್ಮಾ ಹೇಳಿದ್ದಾರೆ (ವಾ.ವಾ., ನ. 7). ಅಮೆರಿಕ ಒಂದು ಸಂಯುಕ್ತ ಸಂಸ್ಥಾನ. ಕೆಲವು ಪ್ರಮುಖ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲಿ ರಾಜ್ಯಗಳದ್ದೇ ಪರಮಾಧಿಕಾರ. ಹಾಗಾಗಿ ಅಲ್ಲಿನ ಚುನಾವಣಾ ಪ್ರಕ್ರಿಯೆ, ಎಣಿಕೆ ಕ್ರಮ, ಆಯ್ಕೆ ವಿಧಾನವು ನಮಗಿಂತ ಭಿನ್ನ. ಹೆಚ್ಚು ಕಡಿಮೆ ಏಕೀಕೃತ ವ್ಯವಸ್ಥೆಯತ್ತ ಧಾವಿಸುತ್ತಿರುವ ಭಾರತದ ಧೃಷ್ಟಿಯಿಂದ ನೋಡಿದರೆ ಇದು ಗೋಜಲಮಯವೆನಿಸುತ್ತದೆ. ಆದರೆ ಕೇವಲ ಎರಡು ಬಾರಿ (1876 ಮತ್ತು 2000) ಹೊರತುಪಡಿಸಿ, ಕಳೆದ ಇನ್ನೂರು ವರ್ಷಗಳಲ್ಲಿ ಅಮೇರಿಕ ಯಾವುದೇ ಗೊಂದಲವಿಲ್ಲದೆ ತನ್ನ ಅಧ್ಯಕ್ಷರನ್ನು ಚುನಾಯಿಸಿದೆ. ಸಾರ್ವತ್ರಿಕ ಮತದಾನದ ಹಕ್ಕನ್ನು ಪಡೆದುಕೊಳ್ಳಲು ಅಮೆರಿಕದಲ್ಲಿ ನಡೆದ ಐತಿಹಾಸಿಕ ನಾಗರಿಕ ಹಕ್ಕುಗಳ ಹೋರಾಟಗಳ ಬಗ್ಗೆ ಅರಿವಿದ್ದರೆ ಕಡ್ಡಾಯ ಗುರುತಿನ ಚೀಟಿಯ ಅಗತ್ಯವನ್ನು ಪ್ರಗತಿಪರ ಅಮೆರಿಕನ್ನರು ಏಕೆ ವಿರೋಧಿಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಮತ ಚಲಾಯಿಸಲು ಕಟ್ಟುನಿಟ್ಟಾದ ಗುರುತಿನ ಚೀಟಿಯ ಅಗತ್ಯವಿಲ್ಲದ ರಾಜ್ಯಗಳಲ್ಲೂ ಅಕ್ರಮ ಮತದಾನದ ಘಟನೆಗಳು ಅತಿ ವಿರಳವೆಂದು ಬಹುತೇಕ ಅಧ್ಯಯನಗಳು ಸ್ಪಷ್ಟಪಡಿಸಿವೆ.

ಪ್ರಸಕ್ತ ಚುನಾವಣೆಯ ವಿಜೇತರನ್ನು ನಿರ್ಧರಿಸಲು ವಿಳಂಬವಾಯಿತೆನ್ನುವುದು ನಿಜ. ಆದರೆ ಇದಕ್ಕಿಂತ ಪೂರ್ವದಲ್ಲಿ ನಡೆದ ನಾಲ್ಕು ಚುನಾವಣೆಗಳಲ್ಲಿ ಯಾರು ಜಯ ಗಳಿಸುವರೆನ್ನುವುದು ಚುನಾವಣಾ ದಿನದ ರಾತ್ರಿಯೇ ಸ್ಪಷ್ಟವಾಗಿತ್ತು. ಇಂದು ಭಾರತದಲ್ಲಿ ಎಣಿಕೆ ಪ್ರಕ್ರಿಯೆ ಶುರುವಾದ ಮೇಲೆ ಫಲಿತಾಂಶ ಹೊರಬೀಳಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಆದರೆ ಚುನಾವಣೆ ಪ್ರಕ್ರಿಯೆ ಶುರುವಾಗುವ ದಿನ ಮತ್ತು ಫಲಿತಾಂಶ ನಿರ್ಧಾರಗೊಳ್ಳುವ ದಿನ ಈ ಎರಡರ ನಡುವಿನ ಸಮಯದ ಅಂತರ ಗಮನಾರ್ಹ ಎಂಬುದನ್ನು ಮರೆಯಬಾರದು. ಅಷ್ಟಕ್ಕೂ ಅಮೆರಿಕದ ಪ್ರಸಕ್ತ ಚುನಾವಣೆಯ ಎಣಿಕೆ ವಿಳಂಬವಾಗಲು ಮುಖ್ಯ ಕಾರಣ, ಅಪಾರ ಸಂಖ್ಯೆಯಲ್ಲಿದ್ದ ಅಂಚೆ ಮತಪತ್ರಗಳು. ಸಾಂಕ್ರಾಮಿಕವೊಂದು ದೇಶವನ್ನೇ ಕಂಗೆಡಿಸಿರುವಾಗ, ಅಲ್ಲಿನ ರಾಜ್ಯ ಸರ್ಕಾರಗಳು ಕೋಟ್ಯಂತರ ಮಂದಿಗೆ ಅಂಚೆ ಇಲಾಖೆಯ ಜೊತೆ ಸೇರಿ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಒದಗಿಸಿದ್ದವು. ಅಂತಹ ಕಾಳಜಿ ನಮ್ಮ ಉಪಚುನಾವಣೆಯ ವೇಳೆಯಲ್ಲಾಗಲೀ ಬಿಹಾರದಲ್ಲಿ ಇತ್ತೀಚೆಗೆ ಪೂರ್ಣಗೊಂಡ ಚುನಾವಣೆಯಲ್ಲಾಗಲೀ ಕಾಣಸಿಗದಿದ್ದುದು ದುರದೃಷ್ಟಕರ. ಬಹುಶಃ ನಾವೂ ಅವರಿಂದ ಕಲಿಯಬೇಕು.

-ಸುನೀಲ ನಾಯಕ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು