ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕಾರ್ಮಿಕರ ಬವಣೆ ತೆರೆದಿಟ್ಟ ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣ

Published 29 ನವೆಂಬರ್ 2023, 23:06 IST
Last Updated 29 ನವೆಂಬರ್ 2023, 23:06 IST
ಅಕ್ಷರ ಗಾತ್ರ

ಕಾರ್ಮಿಕರ ಬವಣೆ ತೆರೆದಿಟ್ಟ ಪ್ರಕರಣ

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದ ಸುದ್ದಿ ತಿಳಿದು ಕೋಟ್ಯಂತರ ಭಾರತೀಯರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಈ ಕಾರ್ಮಿಕರು 17 ದಿನಗಳ ಕತ್ತಲವಾಸದಲ್ಲಿ ಜೀವನ್ಮರಣದ ನಡುವೆ ಹೋರಾಡಿದ್ದನ್ನು ನೋಡಿದರೆ, ಗಣಿ ಹಾಗೂ ಸುರಂಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತುತ್ತಿನ ಚೀಲ ತುಂಬಿಸುವ ಸಲುವಾಗಿ ಎಂತಹ ಅಪಾಯಕಾರಿ ಸ್ಥಳ ಹಾಗೂ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಸಾರ್ವಜನಿಕ ನೆನಪು ಕ್ಷಣಿಕ ಎಂಬ ಮಾತಿನಂತೆ, ಈ ಪ್ರಕರಣ ಕೆಲವೇ ದಿನಗಳಲ್ಲಿ ಜನರ ನೆನಪಿನಿಂದ ಮರೆಯಾಗಬಹುದು. ಆದರೆ ಈ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಅದು ಜೀವನಪರ್ಯಂತ ದುಃಸ್ವಪ್ನವಾಗಿ ಕಾಡುವುದಂತೂ ನಿಜ.

ಉತ್ತರಾಖಂಡವೂ ಸೇರಿದಂತೆ ಹಿಮಾಲಯದ ಬಹುತೇಕ ಕಡೆಗಳಲ್ಲಿ ಕಲ್ಲಿನ ರಚನೆಯು ಬಹಳ ಶಿಥಿಲವಾದ ಸ್ಥಿತಿಯಲ್ಲಿದೆ. ಅಲ್ಲಿ ನಮ್ಮ ಮಧುಗಿರಿ ಹಾಗೂ ಚಾಮುಂಡಿ ಬೆಟ್ಟದಲ್ಲಿ ರಚನೆಯಾಗಿರುವ ಶಿಲೆಗಳಂತೆ ಬಲವಾದ ಶಿಲಾರಚನೆ ಇಲ್ಲ. ಹಳೆಯ ಮನೆಯನ್ನು ಕೆಡವಿ ಗುಡ್ಡೆ ಹಾಕಿದ ಕಲ್ಲಿನ ರಾಶಿಯಂತಹ ವಾತಾವರಣ ಬಹುತೇಕ ಕಡೆ ಕಂಡುಬರುತ್ತದೆ. ಬಹುಶಃ ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ಭೇಟಿ ನೀಡಿದವರು, ಶಿಥಿಲಾವಸ್ಥೆ ಯಲ್ಲಿ ಕಂಡುಬರುವ ಅಲ್ಲಿನ ಶಿಲಾರಚನೆಯನ್ನು ನೋಡಿಯೇ ಇರುತ್ತಾರೆ. ಆ ಬಗೆಯ ಶಿಲಾರಚನೆಯ ಕಾರಣದಿಂದ ಅಲ್ಲಿ ಗುಡ್ಡ, ಬೆಟ್ಟ ಕುಸಿತ ಸಾಮಾನ್ಯ ಸಂಗತಿಯಾಗಿರುತ್ತದೆ. ಹಾಗೆ ಕುಸಿದ ಗುಡ್ಡದ ಮಣ್ಣು, ಕಲ್ಲನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ. 2022ರ ಅಕ್ಟೋಬರ್‌ನಲ್ಲಿ ನಾನು ಉತ್ತರಾಖಂಡದ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ, ನೂರಾರು ಕಡೆ ಗುಡ್ಡ, ಬೆಟ್ಟ ಕುಸಿತ ಹಾಗೂ ತೆರವು ಕಾರ್ಯಾಚರಣೆ ನಡೆಯುತ್ತಿದ್ದುದನ್ನು ಗಮನಿಸಿದ್ದೆ. ಇದೆಲ್ಲದರ ಆಚೆಗೆ, ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಚಿಕ್ಕವ ಎಂಬುದನ್ನು ಆಗಾಗ ಸಂಭವಿಸುವ ನೆರೆ, ಬರ, ಸುನಾಮಿ, ಭೂಕಂಪ, ಬೆಟ್ಟ, ಗುಡ್ಡ ಕುಸಿತದಂತಹ ಪ್ರಕರಣಗಳು ಸಾಬೀತು ಮಾಡುತ್ತಾ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತವೆ.

–ಎಂ.ಜಿ.ರಂಗಸ್ವಾಮಿ, ಹಿರಿಯೂರು 

________________________

ಎಚ್ಚರಿಕೆಯಷ್ಟೇ ಸಾಲದು...

‘ಸ್ಥಳೀಯ ಮಟ್ಟದಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬರಬಾರದು. ಬಂದರೆ ಅದು ನಿಮ್ಮ ವೈಫಲ್ಯ. ಇದನ್ನು ಸಹಿಸುವುದಿಲ್ಲ’ ಎಂಬ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಚ್ಚರಿಕೆಯ (ಪ್ರ.ವಾ., ನ. 28) ತೀವ್ರತೆಯು ಇನ್ನು ಮುಂದೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುವುದೇ ಅಥವಾ ಇದೂ ಇಂತಹ ಹಲವಾರು ಎಚ್ಚರಿಕೆಗಳಲ್ಲಿ ಒಂದಷ್ಟೇ ಎನ್ನುವ ಭಾವನೆಗೆ ಸೀಮಿತಗೊಳ್ಳುವುದೇ? ಈ ರೀತಿಯ ಅನುಮಾನ ಹಾಗೂ ಹತಾಶೆ ಜನಸಾಮಾನ್ಯರಲ್ಲಿ ಮೂಡುವುದು ಸಹಜ.

ಏಕೆಂದರೆ, ಅಧಿಕಾರಿಗಳಿಗೆ ಚಾಟಿ ಬೀಸಿದ ಜನಪ್ರತಿನಿಧಿಗಳಲ್ಲಿ ಸಿದ್ದರಾಮಯ್ಯ ಮೊದಲಿಗರೇನಲ್ಲ. ಸ್ಥಳೀಯ ಜನಪ್ರತಿನಿಧಿಗಳಿಂದ ಆರಂಭವಾಗಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ ಹೀಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆಯ ವೈಫಲ್ಯವನ್ನು ಪ್ರಶ್ನಿಸಿ ಚಾಟಿ ಬೀಸುವುದನ್ನು ಕೇಳುತ್ತಲೇ ಇರುತ್ತೇವೆ. ಆದರೂ ಜನರ ಸಮಸ್ಯೆಗಳು ಬಗೆಹರಿಯದಿರುವುದು ವಿಷಾದದ ಸಂಗತಿ. ಆದ್ದರಿಂದ, ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಚಾಟಿ ಬೀಸಿದ ನಂತರವೂ ಜನರ ಸಮಸ್ಯೆಗಳು ಬೆಳೆಯುತ್ತಲೇ ಇದ್ದರೆ ಅದನ್ನು ಜನಪ್ರತಿನಿಧಿಗಳ ವೈಫಲ್ಯ ಎಂದೇ
ತಿಳಿಯಬೇಕಾಗುತ್ತದೆ.

–ಜಿ.ಬೈರೇಗೌಡ, ಬೆಂಗಳೂರು

________________________

ಶುದ್ಧೀಕರಣ: ನಡೆಯಲಿ ಆತ್ಮವಿಮರ್ಶೆ

ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ದೇವಸ್ಥಾನವೊಂದಕ್ಕೆ ಮುಸ್ಲಿಂ ಶಾಸಕಿಯೊಬ್ಬರು ಭೇಟಿ ನೀಡಿದ್ದರಿಂದ ಅದು ಅಪವಿತ್ರವಾಯಿತು ಎಂದು ಆರೋಪಿಸಿ, ಬಿಜೆಪಿ ಹಾಗೂ ಹಿಂದೂ ಯುವ ವಾಹಿನಿಗೆ ಸೇರಿದ ಕಾರ್ಯಕರ್ತರು ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ ಕೈಗೊಂಡಿದ್ದು ಖಂಡನೀಯ. ಸ್ಥಳೀಯರ ಆಹ್ವಾನದ ಮೇರೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಶಾಸಕಿಯನ್ನು, ಬಳಿಕ ಶುದ್ಧೀಕರಣದ ಹೆಸರಿನಲ್ಲಿ ಅವಮಾನಿಸಿರುವುದು ಎಷ್ಟು ಸರಿ? ಈ ಬಗ್ಗೆ ಸಂಬಂಧಪಟ್ಟವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಹಿಂದೆ ಉಪಪ್ರಧಾನಿಯಾಗಿದ್ದ, ಪರಿಶಿಷ್ಟ ಜಾತಿಗೆ ಸೇರಿದ ಬಾಬು ಜಗಜೀವನರಾಮ್‌ ಅವರ ಒಡಿಶಾದ ಪುರಿ ಜಗನ್ನಾಥ ದೇವಾಲಯ ಭೇಟಿಯೂ ಇದೇ ರೀತಿ ವಿವಾದಕ್ಕೆ ಒಳಗಾಗಿತ್ತು. ಅಂತರಾತ್ಮದ ಶುದ್ಧಿಯ ಅಗತ್ಯ ಆಗಲೂ ಇತ್ತು ಈಗಲೂ ಅದು ಬೇಕಾಗಿದೆ ಎಂಬುದನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ.

–ಶಾಂತಕುಮಾರ್, ಸರ್ಜಾಪುರ

________________________


ಭ್ರೂಣಹತ್ಯೆ: ಕಠಿಣ ಶಿಕ್ಷೆಯಾಗಲಿ

ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತದ ಪ್ರಕರಣಗಳು ಕಂಡುಬಂದಿರುವುದು ಅತ್ಯಂತ ಆತಂಕದ ವಿಚಾರ. ಕೆಲವರು ಎಷ್ಟೇ ಸುಶಿಕ್ಷಿತರಾಗಿದ್ದರೂ ಭ್ರೂಣಲಿಂಗ ಪತ್ತೆ ಮಾಡಿ, ಹೆಣ್ಣಾಗಿದ್ದರೆ ಅದನ್ನು ಭ್ರೂಣಾವಸ್ಥೆಯಲ್ಲಿಯೇ ಹತ್ಯೆ ಮಾಡುವಂತಹ ಅಜ್ಞಾನದಿಂದ ಇನ್ನೂ ಹೊರ ಬಾರದಿರುವುದು ಖೇದಕರ. ಜನರ ಮೌಢ್ಯವನ್ನೇ ಬಂಡವಾಳವಾಗಿಸಿಕೊಂಡು ಅದನ್ನೇ ದಂಧೆಯಾಗಿಸಿ, ಸಮಾಜಬಾಹಿರ ಕೃತ್ಯಗಳನ್ನು ನಡೆಸುತ್ತಿರುವವರು ಪರೋಕ್ಷವಾಗಿ ನೈಸರ್ಗಿಕ ಅಸಮತೋಲನಕ್ಕೆ ಕಾರಣರಾಗುತ್ತಿದ್ದಾರೆ. ಇಂತಹವರ ವಿರುದ್ಧ ಗಂಭೀರವಾದ ತನಿಖೆ ನಡೆಯಬೇಕು.

ನಾಗರಿಕ ಸಮಾಜದ ಆರ್ಥಿಕ ಪ್ರಗತಿ, ಸಾಮಾಜಿಕ ಸ್ವಾಸ್ಥ್ಯ ಹಾಗೂ ನೈತಿಕ ವ್ಯವಸ್ಥೆಯ ಮೇಲೂ ಈ ಬಗೆಯ ಅನಾಗರಿಕ ಕೃತ್ಯಗಳು ದುಷ್ಪರಿಣಾಮ ಬೀರುವ ಅಪಾಯವನ್ನು ನಾವು ಅರಿಯಬೇಕಾಗಿದೆ. ಆರೋಪ ಸಾಬೀತಾದಲ್ಲಿ ಕಠಿಣ ಶಿಕ್ಷೆಯಾಗುವಂತೆ, ಯಾವುದೇ ಕಾರಣಕ್ಕೂ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸರ್ಕಾರ ಎಚ್ಚರ ವಹಿಸಬೇಕು.  ದಿನಮಣಿ ಬಿ.ಎಸ್., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT