ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಉದ್ಯೋಗದತ್ತ ಇರಲಿ ಯುವಜನರ ಚಿತ್ತ

Last Updated 29 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಮೊನ್ನೆ ನೋಟ್ ಪುಸ್ತಕ ಖರೀದಿಸಲೆಂದು ಅಂಗಡಿಗೆ ಹೋಗಿದ್ದೆ. ಅದೊಂದು ಫ್ಯಾನ್ಸಿ ಸ್ಟೋರ್ ಸಹ ಆಗಿತ್ತು. ಅಂಗಡಿಯಾತ ಗ್ರಾಹಕರೊಬ್ಬರಿಗೆ ಒಂದು ವಸ್ತುವನ್ನು ತೋರಿಸುತ್ತಾ, ಫೋನಿನಲ್ಲಿ ಮಾತನಾಡುತ್ತಿದ್ದ. ನಂತರ ತನ್ನ ಸಹಾಯಕನನ್ನು ಬೇರೊಂದು ಅಂಗಡಿಗೆ ಕಳುಹಿಸಿ, ಐದು ರೂಪಾಯಿಯ ಬಣ್ಣದ ಪೇಪರ್ ತರಿಸಿ, ಆ ಗ್ರಾಹಕರಿಗೆ ಕೊಟ್ಟ. ತನ್ನ ಗ್ರಾಹಕರಿಗೆ ಸೇವೆ ಒದಗಿಸಲು ಆತ ಕೇವಲ ಐದು ರೂಪಾಯಿಯ ವಸ್ತುವಿಗೆ ಅಷ್ಟೊಂದು ಕಾಳಜಿ ವಹಿಸಿದ್ದು ನೋಡಿ ನನಗೆ ಅಚ್ಚರಿಯಾದರೂ, ಇದು ಸರಿ ಎಂದೆನಿಸಿತು.

ಹೌದು, ಈ ರೀತಿ ವ್ಯಾಪಾರದಲ್ಲಿ ಚಾಕಚಕ್ಯತೆ ಮತ್ತು ಸೇವಾ ಮನೋಭಾವ ಇದ್ದರೆ ಮಾತ್ರ ದುಡಿಮೆಯಲ್ಲಿ ಪ್ರಗತಿ ಸಾಧ್ಯ. ಆತ ದೂರದ ರಾಜಸ್ಥಾನದಿಂದ ಬಂದು, ಮಲೆನಾಡಿನಲ್ಲಿ ಯಶಸ್ಸು ಕಂಡಿದ್ದ. ನಮ್ಮ ಕರ್ನಾಟಕದ ಯಾವುದೇ ಪಟ್ಟಣ, ನಗರಗಳಲ್ಲಿ ಪರಭಾಷಿಕರ ಅನೇಕ ಅಂಗಡಿಗಳು ಕಾಣಸಿಗುತ್ತವೆ. ಅವರು ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯನ್ನು ಕಲಿತು, ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಯಶಸ್ವಿಯಾಗುತ್ತಿದ್ದಾರೆ. ಇಲ್ಲಿಯೇ ಬದುಕುಕಟ್ಟಿಕೊಂಡಿದ್ದಾರೆ. ಅಲ್ಲದೆ ಸಂಬಳದ ನಿರೀಕ್ಷೆ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ತಮ್ಮ ಅಂಗಡಿಗಳಿಗೆ ಸಹಾಯಕರನ್ನಾಗಿ ಬಹುತೇಕ ತಮ್ಮದೇ ಊರಿನವರನ್ನು ಕರೆತರುತ್ತಾರೆ.

ನಮ್ಮೂರಿನ ಯುವಕರು, ‘ವ್ಯಾಪಾರ ವ್ಯವಹಾರ ಮಾಡಿ ಕೈ ಸುಟ್ಟುಕೊಳ್ಳುವುದು ಏಕೆ?’ ಎಂದು ನಗರಗಳತ್ತ ವಲಸೆ ಹೋಗುತ್ತಿರುವಾಗ, ಹೊರ ರಾಜ್ಯದವರು ನಮ್ಮ ನಡುವೆಯೇ ಹೇಗೆ ವ್ಯಾಪಾರದಲ್ಲಿ ಪ್ರಾವೀಣ್ಯ ಮೆರೆಯುತ್ತಿದ್ದಾರೆ? ನಮ್ಮೂರಿನ ಜನರಿಗೆ ನಮ್ಮೂರಿನ ಗ್ರಾಹಕರನ್ನೇ ಸೆಳೆಯುವ ಶಕ್ತಿ‌ ಇಲ್ಲವೇ?! ಅಥವಾ ತನ್ನೂರಿನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಬಗ್ಗೆ ಅಸಡ್ಡೆಯೇ? ನಮ್ಮ ಯುವಕರು ಮಹಾನಗರಗಳತ್ತ ಉದ್ಯೋಗ ಹುಡುಕಿಕೊಂಡು ಹೋಗಿ, ಅಲ್ಲಿನ ಸ್ಪರ್ಧಾತ್ಮಕತೆಯಲ್ಲಿ ಕಡಿಮೆ ಸಂಬಳಕ್ಕೆ ಜೀವನವನ್ನು ಹೊಂದಾಣಿಕೆ ಮಾಡಿಕೊಳ್ಳುವ ಬದಲು, ತಮ್ಮದೇ ಊರಿನಲ್ಲಿ ಪ್ರಸ್ತುತ ಸಮಾಜಕ್ಕೆ, ಕಾಲಮಾನಕ್ಕೆ ತಕ್ಕಂತಹ ವ್ಯಾಪಾರ ವ್ಯವಹಾರಗಳನ್ನು ನಡೆಸುವಂತೆ ಸಜ್ಜಾಗಬೇಕಿದೆ. ಯಾವ ಉದ್ಯೋಗವೂ ಕೀಳಲ್ಲ. ಆತ್ಮವಿಶ್ವಾಸ, ಪರಿಶ್ರಮ, ಸೌಜನ್ಯಯುತ ವೃತ್ತಿಧರ್ಮದಿಂದ ಯಶಸ್ಸು ನಮ್ಮದಾಗುತ್ತದೆ ಎಂಬುದನ್ನು ಯುವಜನರಿಗೆ ಮನದಟ್ಟು ಮಾಡಬೇಕಿದೆ.

–ಭಾರತಿ ಎ., ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT