ಮಾರ್ಗ ತೋರದ 2013ರ ಮಾರ್ಗಸೂಚಿ: ‘ಮಿನಿಟ್‌ ಮಿನಿಟ್‌’ಗೂ ವರ್ಗ

7
ಜಾತಿ, ಹಣ ಇದ್ದವರಿಗೆ ಮಾತ್ರ ವರ್ಗಾವಣೆ ಮಣೆ

ಮಾರ್ಗ ತೋರದ 2013ರ ಮಾರ್ಗಸೂಚಿ: ‘ಮಿನಿಟ್‌ ಮಿನಿಟ್‌’ಗೂ ವರ್ಗ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ ಆರು ವರ್ಷಗಳ ಬಳಿಕವೂ ಪ್ರಭಾವಿ ಸಚಿವರ ಹಾಗೂ ಶಾಸಕರ ಶ್ರೀರಕ್ಷೆ ಇರುವವರು ಆಯಕಟ್ಟಿನ ಜಾಗ ಬಿಟ್ಟು ಹೋಗಿಲ್ಲ. ದಕ್ಷ ಅಧಿಕಾರಿಗಳು ಫುಟ್‌ಬಾಲ್‌ಗಳಂತೆ ಆಗಿದ್ದಾರೆ. ರಾಜಕೀಯ ಒತ್ತಡ ತಂದು ಸಾವಿರಾರು ಮಂದಿ ವರ್ಗ ಮಾಡಿಸಿಕೊಂಡಿದ್ದಾರೆ.

ವರ್ಗಾವಣೆಯಲ್ಲಿ ಪಾರದರ್ಶಕ ವ್ಯವಸ್ಥೆ ತರುವ ಹಾಗೂ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ 2013ರ ಜೂನ್‌ 7ರಂದು ಮಾರ್ಗಸೂಚಿ ಹೊರಡಿಸಿತು. ಈ ಸುತ್ತೋಲೆಗೆ ಪೂರಕವಾಗಿ ಆರು ವರ್ಷಗಳಲ್ಲಿ ಹತ್ತಾರು ಸುತ್ತೋಲೆಗಳು ಬಂದಿವೆ. ಇಲ್ಲಿನ ಅಂಶಗಳು ಅನುಷ್ಠಾನ ಮಾಡಿದ್ದರೆ ರಾಜ್ಯದಲ್ಲಿ ಮಾದರಿ ವರ್ಗಾವಣೆ ರೂಪುಗೊಳ್ಳುತ್ತಿತ್ತು. ಆದರೆ, ನಡೆದಿದ್ದು ವ್ಯತಿರಿಕ್ತವಾಗಿ. ಈ ಸುತ್ತೋಲೆಯಲ್ಲಿನ ಅಂಶಗಳು ಆಡಳಿತ ನಡೆಸುವವರಿಗೆ ನೆನಪು ಇದ್ದಂತೆ ಇಲ್ಲ. ನೂರಾರು ‘ಪ್ರಭಾವಿ’ ನೌಕರರು ಬೇಡಿಕೆ ಸಲ್ಲಿಸಿಯೇ ಆಯಕಟ್ಟಿನ ನಿರ್ದಿಷ್ಟ ಹುದ್ದೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸಚಿವರ ಮರ್ಜಿಗೆ ತಕ್ಕಂತೆ ‘ಮುಖ್ಯಮಂತ್ರಿ ಅನುಮೋದನೆ’ ಹೆಸರಿನಲ್ಲಿ ವರ್ಷವಿಡಿ ವರ್ಗಾವಣೆ ನಡೆಯುತ್ತಲೇ ಇರುತ್ತದೆ.

ಯಾವುದೇ ನೌಕರ ನಿರ್ದಿಷ್ಟ ಹುದ್ದೆಗೆ ವರ್ಗಾಯಿಸುವಂತೆ ರಾಜಕೀಯ ಒತ್ತಡ ತಂದರೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತಹ ನೌಕರನನ್ನು ಕೋರಿದ ಸ್ಥಳಕ್ಕೆ ವರ್ಗಾವಣೆ ಮಾಡಲೇಬಾರದು ಎಂದು ಸುತ್ತೋಲೆಯಲ್ಲಿ ತಾಕೀತು ಮಾಡಲಾಗಿದೆ. ರಾಜಕೀಯ ಒತ್ತಡ ತಂದ ಒಬ್ಬನೇ ಒಬ್ಬ ಅಧಿಕಾರಿಯ ಮೇಲೆ ಕ್ರಮ ಕೈಗೊಂಡ ಉದಾಹರಣೆ ಇಲ್ಲ.

ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ಹಲವು ಶಿಫಾರಸು ಗಳನ್ನು ಮಾಡಿತ್ತು. ಅದರ ಆಧಾರದಲ್ಲಿ ರಾಜ್ಯ ಸರ್ಕಾರವು 2013ರ ಜೂನ್‌ 7ರಂದು ಮಾರ್ಗಸೂಚಿ ಹೊರಡಿಸಿತು. ಸಾರ್ವತ್ರಿಕ ವರ್ಗಾವಣೆಗಳನ್ನು ಪ್ರತಿವರ್ಷ ಮೇ ಹಾಗೂ ಜೂನ್‌ ತಿಂಗಳುಗಳಲ್ಲಿ ಮಾಡಬೇಕು. ಈ ಆದೇಶದಲ್ಲಿ ನಿಗದಿಪಡಿಸಿರುವ ಸಂದರ್ಭ ಹಾಗೂ ವಿಧಾನ ಹೊರತುಪಡಿಸಿ ಯಾವುದೇ ಸರ್ಕಾರಿ ನೌಕರರನ್ನು ವರ್ಗಾವಣೆ/ ನಿಯೋಜನೆಗೆ ಪರಿಗಣಿಸುವಂತಿಲ್ಲ. ವರ್ಗಾವಣೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಮಾಡಬೇಕು. ಕೋರಿಕೆ ಮೇರೆಗೆ ಮಾಡುವ ವರ್ಗಾವಣೆಗಳನ್ನು ಸಾಧ್ಯವಾದಷ್ಟು ಕೌನ್ಸೆಲಿಂಗ್‌ ಮೂಲಕ ಮಾಡಬೇಕು. ವರ್ಗಾವಣೆ ಹಾಗೂ ನಿಯೋಜನೆ ಸಾಧ್ಯವಾದಷ್ಟು ಕನಿಷ್ಠ ಮಟ್ಟದಲ್ಲಿರಬೇಕು. ಈ ಸಂಖ್ಯೆಯು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ 6 ದಾಟದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಮೇ ಹಾಗೂ ಜೂನ್‌ ತಿಂಗಳುಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಉದಾಹರಣೆಯೇ ಇಲ್ಲ. ಅದು ಅಕ್ಟೋಬರ್‌ ವರೆಗೂ ಜಗ್ಗಿದ್ದೂ ಉಂಟು. ಶೇ 6ರ ಮಿತಿಯನ್ನು ದಾಟಿ ಶೇ 20ರ ವರೆಗೂ ಪ್ರತಿವರ್ಷ ವರ್ಗಾವಣೆ ಮಾಡಲಾಗುತ್ತಿದೆ. ಇಲಾಖಾ ನೌಕರರ ಪೈಕಿ ಶೇ 6 ರಷ್ಟು ಮಂದಿಯನ್ನು ಮಾತ್ರ ವರ್ಗ ಮಾಡಬೇಕು ಎಂದಿದೆ. ಆದರೆ, ಆಡಳಿತಗಾರರು ಒಟ್ಟು ನೌಕರರ ಶೇ 6ರಷ್ಟು ಎಂಬುದನ್ನು ಅರ್ಥ ಮಾಡಿಕೊಂಡು ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ವರ್ಗಾವಣೆ ಮಾಡಿದ ಬಳಿಕವಷ್ಟೇ ‘ಮುಖ್ಯಮಂತ್ರಿಯ ಅನುಮೋದನೆ’ ಪಡೆಯಲಾಗುತ್ತದೆ. ಕೆಲವು ಸಂದರ್ಭಗಳಂತೂ ಅಧಿಕಾರಿ ಅಧಿಕಾರ ಸ್ವೀಕರಿಸಿದ ಬಳಿಕವೇ ಮುಖ್ಯಮಂತ್ರಿ ಬಳಿಗೆ ಕಡತ ಹೋಗುತ್ತದೆ.

ಯಾವುದಾದರೂ ಹುದ್ದೆಗೆ ಗರಿಷ್ಠ 5 ವರ್ಷ ನಿಯೋಜನೆ ಮಾಡಬಹುದು. ಒಬ್ಬ ನೌಕರನನ್ನು ಒಂದೇ ಹುದ್ದೆಗೆ ಪದೇ ಪದೇ ನಿಯೋಜಿಸುವುದನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ನಿಯೋಜನೆ ಮೇರೆಗೆ ಬಂದವರು ಹತ್ತಿಪ್ಪತ್ತು ವರ್ಷಗಳ ಬಳಿಕವೂ ವಾಪಸ್‌ ಹೋಗಿದ್ದು ಕಡಿಮೆ.

ನಾನಾ ಇಲಾಖೆಗಳನ್ನು ಅಭಿವೃದ್ಧಿ, ನಿಯಂತ್ರಣ, ಸೇವಾನಿರತ, ತಾಂತ್ರಿಕ ಹಾಗೂ ಪರಿಣತ ಇಲಾಖೆಗಳೆಂದು ನಾಲ್ಕು ವಿಭಾಗದಡಿ 2013ರ ಮಾರ್ಗಸೂಚಿಯಲ್ಲಿ ವಿಂಗಡಿಸಲಾಗಿದೆ. ಅದರಂತೆ, ಇಂಥ ಇಲಾಖೆಗಳ ಅಧಿಕಾರಿ ಹಾಗೂ ನೌಕರರು ನಿರ್ದಿಷ್ಟ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕನಿಷ್ಠ ಮತ್ತು ಗರಿಷ್ಠ ಸೇವಾವಧಿ (ತರಬೇತಿ ಅವಧಿ ಹೊರತುಪಡಿಸಿ) ನಿಗದಿಪಡಿಸಲಾಗಿದೆ. ಈ ಮಾರ್ಗಸೂಚಿ ಅನುಸಾರವೇ ವರ್ಗಾವಣೆಯಾಗಬೇಕು. ಯಾವುದೇ ಇಲಾಖೆಗೆ ನಿಯುಕ್ತರಾದವರು ಕೆಲಸದ ಪರಿಚಯ ಮಾಡಿಕೊಳ್ಳಲು ಮತ್ತು ಅದರಲ್ಲಿ ನೈಪುಣ್ಯ ಪಡೆಯಲು ಕಾಲಾವಕಾಶ ಅಗತ್ಯವೆಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿ ಸಲಾಗಿದೆ.

ಉದಾಹರಣೆಗೆ ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಅಭಿವೃದ್ಧಿ ವಿಭಾಗದಡಿ ಬರಲಿದ್ದು ಇಲ್ಲಿನ ಹೆಚ್ಚುವರಿ, ಜಂಟಿ ಹಾಗೂ ಉಪ ಕಾರ್ಯದರ್ಶಿಗಳನ್ನು ಕನಿಷ್ಠ 3 ವರ್ಷ ವರ್ಗಾಯಿಸುವಂತಿಲ್ಲ. ಅದೇ ರೀತಿ, ಅವರನ್ನು ಗರಿಷ್ಠ 6 ವರ್ಷದವರೆಗೆ ಇದೇ ಹುದ್ದೆಯಲ್ಲಿ ಮುಂದುವರಿಸಬಹುದು. ತಾಂತ್ರಿಕ ವಿಭಾಗದ ಇಲಾಖೆಯ ಇದೇ ದರ್ಜೆಯ ಅಧಿಕಾರಿಗಳನ್ನು ಕನಿಷ್ಠ 5 ವರ್ಷ ವರ್ಗಾಯಿಸುವಂತಿಲ್ಲ. ಇಲ್ಲಿ ಗರಿಷ್ಠ ಮಿತಿಯಿಲ್ಲ. ಆದರೆ, ಈ ಹೆಚ್ಚಿನ ಸಂದರ್ಭಗಳಲ್ಲಿ ಮಾನದಂಡಗಳನ್ನು ಗಾಳಿಗೆ ತೂರಿ ವರ್ಗಾವಣೆ ಮಾಡಲಾಗಿದೆ.

ದುಡ್ಡಿಲ್ಲದ ಇಲಾಖೆಗಳಲ್ಲಷ್ಟೇ ಕೌನ್ಸೆಲಿಂಗ್ ವ್ಯವಸ್ಥೆ

ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಮಾಡಿದರೆ ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅದು ಅನುಷ್ಠಾನಕ್ಕೆ ಬಂದಿಲ್ಲ.

ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ ಇಲಾಖೆಗಳಲ್ಲಷ್ಟೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ವ್ಯವಸ್ಥೆ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ವರ್ಗಾವಣೆಗೆ ಮಾತ್ರ ಈ ವ್ಯವಸ್ಥೆ ಇದೆ. ಈ ಸಿಬ್ಬಂದಿಯ ವರ್ಗಾವಣೆಯಿಂದ ಹೆಚ್ಚು ಗಿಟ್ಟುವುದಿಲ್ಲ. ಹೀಗಾಗಿ, ಇಲ್ಲಿ ಮಾತ್ರ ಕೌನ್ಸೆಲಿಂಗ್ ವ್ಯವಸ್ಥೆ ತರಲಾಗಿದೆ ಎಂಬ ಮಾತು ಇದೆ.

‘ಕಿರಿಯ ಎಂಜಿನಿಯರ್‌ ವರ್ಗಾವಣೆಯಾಗಲು ಕನಿಷ್ಠ ₹1.5 ಲಕ್ಷದವರೆಗೆ ಲಂಚ ಕೊಡಬೇಕು. ಮತ್ತೆ ಸಂಪಾದನೆಗೆ ಮಾರ್ಗ ಹುಡುಕಿಕೊಳ್ಳುತ್ತಾರೆ ಅವರು. ಆದರೆ, ಶಿಕ್ಷಕರಿಗೆ ಆ ರೀತಿ ಆಗುವುದಿಲ್ಲ. ಅವರು ವರ್ಗಾವಣೆಗೆ ಸಚಿವರ ಹಾಗೂ ಶಾಸಕರ ಬೆನ್ನು ಹತ್ತುತ್ತಾರೆ ಅಷ್ಟೇ. ಹೆಚ್ಚು ಪೀಡಿಸಿದರೆ ವರ್ಗಾವಣೆಗಾಗಿ ₹25 ಸಾವಿರ ಅಥವಾ ₹50 ಸಾವಿರ ಕೊಡುತ್ತಾರೆ. ಅದು ಸಹ ಜೀವನದಲ್ಲಿ ಒಮ್ಮೆ ಮಾತ್ರ. ಆದರೆ, ಎಂಜಿನಿಯರ್‌ಗಳು ಹಾಗಲ್ಲ. ಪ್ರತಿ ವರ್ಗಕ್ಕೂ ಅವರು ಕೈ ಬಿಸಿ ಮಾಡಲು ಸಿದ್ಧರಿರಬೇಕು’ ಎಂದು ನಿವೃತ್ತ ಎಂಜಿನಿಯರ್‌ ಒಬ್ಬರು ಒಳಗುಟ್ಟು ಬಿಚ್ಚಿಡುತ್ತಾರೆ.

ಇನ್ನಷ್ಟು ಸುದ್ದಿಗಳು

ವರ್ಗಾವಣೆ ಜಾಲ: ಹಣವೇ ‘ಹೈ’ಕಮಾಂಡ್‌ 

ವರ್ಗಾವಣೆ ಜಾಲ: ಮಂಡಳಿ ಎಂಬ ಬಡಾಯಿ

ವರ್ಗಾವಣೆ ಜಾಲ: ಸಜ್ಜನರಿಗಿದು ಕಾಲವಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !