ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಸಂದರ್ಭಕ್ಕೆ ಸಲ್ಲುವ ನಾಯಕ ಆಸ್ಕರ್‌ ಫರ್ನಾಂಡಿಸ್‌

Last Updated 13 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ಪಕ್ಷ ನೀಡಿದ ಹೊಣೆಯನ್ನು ಚಾಚೂ ತಪ್ಪದಂತೆ, ಯಶಸ್ವಿಯಾಗಿ ನಿಭಾಯಿಸುತ್ತಿದ್ದ ಆಸ್ಕರ್‌ ಫರ್ನಾಂಡಿಸ್‌ ಅವರು ಕಾಂಗ್ರೆಸ್‌ನಲ್ಲಿ ‘ಎಲ್ಲಾ ಸಂದರ್ಭಕ್ಕೂ ಸಲ್ಲುವ ವ್ಯಕ್ತಿ’ ಎನಿಸಿಕೊಂಡಿದ್ದರು. ಬಹುಶಃ ಆ ಕಾರಣಕ್ಕಾಗಿಯೇ ನೆಹರೂ–ಗಾಂಧಿ ಪರಿವಾರದ ಅತ್ಯಂತ ಆಪ್ತರಲ್ಲಿ ಒಬ್ಬರೆನಿಸಿಕೊಂಡಿದ್ದರು.

ಈಶಾನ್ಯ ರಾಜ್ಯಗಳಲ್ಲಿ ಪಕ್ಷದೊಳಗೆ ಬಿಕ್ಕಟ್ಟು ಎದುರಾಗಿದ್ದಾಗ ನಿವಾರಿಸುವ ಹೊಣೆಯನ್ನು ಪಕ್ಷವು ಆಸ್ಕರ್‌ ಅವರ ಹೆಗಲಿಗೇರಿಸಿತ್ತು. ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಆಸ್ಕರ್‌, ಆ ಗೊಂದಲ ನಿವಾರಿಸಿದ್ದರು. ಅದರಂತೆ, ಈಶಾನ್ಯದ ಬಂಡುಕೋರರ ಜತೆಗಿನ ಸಂಧಾನವನ್ನೂ ನೆರವೇರಿಸಿದ್ದರು.

80ರ ದಶಕದಲ್ಲಿ, ಲೋಕಸಭಾ ಚುನಾವಣೆಗೂ ಸ್ವಲ್ಪ ಕಾಲ ಮೊದಲು ಉಡುಪಿಯ ಕಾಂಗ್ರೆಸ್‌ ನಾಯಕಿ ಮನೋರಮಾ ಮಧ್ವರಾಜ್‌ ಅವರು ಆಸ್ಕರ್‌ ಅವರನ್ನು ಇಂದಿರಾಗಾಂಧಿ ಅವರಿಗೆ ಪರಿಚಯಿಸಿದ್ದರು. ಆಸ್ಕರ್‌ ಅವರನ್ನು ನೋಡಿದ ಇಂದಿರಾಗಾಂಧಿ ‘ಉಡುಪಿಯಲ್ಲಿ ಟಿ.ಎ. ಪೈ ಅವರನ್ನು ಸೋಲಿಸಬಲ್ಲಿರಾ’ ಎಂದು ಪ್ರಶ್ನಿಸಿದ್ದರು. ಅನಿರೀಕ್ಷಿತ ಪ್ರಶ್ನೆಗೆ ಆಸ್ಕರ್‌ ಅವರು ಕೇವಲ ಮುಗುಳುನಗೆಯ ಉತ್ತರ ನೀಡಿದ್ದರು. ಆದರೆ ಇಂದಿರಾ ಗಾಂಧಿ ಅವರು ಆಸ್ಕರ್‌ ಮನವೊಲಿಸಿ, ಅವರನ್ನು ಕಣಕ್ಕಿಳಿಸಿದ್ದರು. ದಿಗ್ಗಜ ಟಿ.ಎ. ಪೈ ಅವರನ್ನು ಸೂಲಿಸುವ ಮೂಲಕ ಆಸ್ಕರ್‌ ಅವರ ರಾಜಕೀಯ ಪ್ರಯಾಣ ಆರಂಭವಾಗಿತ್ತು. ಈ ವಿಚಾರಗಳನ್ನು ಆಸ್ಕರ್‌ ಅವರೇ ಬಳಿಕ ಮಾಧ್ಯಮ ಮಿತ್ರರ ಜತೆಗೆ ಹಂಚಿಕೊಂಡಿದ್ದರು.

ಉಡುಪಿಯಲ್ಲಿ ಕ್ರೈಸ್ತರ ಸಂಖ್ಯೆ ಕಡಿಮೆ ಇದ್ದರೂ, 1980ರಲ್ಲಿ ಇಲ್ಲಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಐದು ಅವಧಿಗೆ ಸಂಸದರಾಗಿದ್ದ ಅವರು 1998ರ ಚುನಾವಣೆಯಲ್ಲಿ ಪರಾಭವಗೊಂಡರು. ನಂತರ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿತ್ತು.

ರಾಜೀವ್‌ ಗಾಂಧಿ ಅವರ ಸಂಸದೀಯ ಕಾರ್ಯದರ್ಶಿಯಾಗಿದ್ದ ಆಸ್ಕರ್‌ ಅವರು, ರಾಜೀವ್‌ ನಿಧನಾನಂತರ ಸೋನಿಯಾ ಗಾಂಧಿ ಅವರಿಗೆ ಆತ್ಮೀಯ ಸಲಹೆಗಾರರಂತೆ ಕೆಲಸ ನಿರ್ವಹಿಸಿದ್ದರು. ಪಿ.ವಿ.ನರಸಿಂಹ ರಾವ್‌ ಅವರ ಕಾಲದಲ್ಲಿ ಸ್ವಲ್ಪ ಹಿನ್ನೆಲೆಗೆ ಸರಿದಿದ್ದ ಆಸ್ಕರ್‌, ಸೋನಿಯಾಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮತ್ತೆ ಮುಂಚೂಣಿಗೆ ಬಂದರು.

ಯುಪಿಎ–1 ಸರ್ಕಾರದಲ್ಲಿ ಸಚಿವರಾಗಿ ಸಾರಿಗೆ, ರಸ್ತೆ ಮತ್ತು ಹೆದ್ದಾರಿ, ಕಾರ್ಮಿಕ ಖಾತೆಗಳ ಹೊಣೆಯನ್ನು ನಿರ್ವಹಿಸಿದ್ದರು. ಕಾಂಗ್ರೆಸ್‌ ಪಕ್ಷದ ವಿವಿಧ ಸಮಿತಿಗಳ ಪ್ರಮುಖರಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜತೆಗೆ ನಿಕಟ ಸಂಪರ್ಕದಲ್ಲಿ ಇರುತ್ತಿದ್ದ ಆಸ್ಕರ್‌, ಕೆಪಿಸಿಸಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಜಾತಿ, ಧರ್ಮ ರಾಜಕಾರಣ ಮೀರಿದ ‘ಆಸ್ಕರ್‌’

ಉಡುಪಿ: ಉಡುಪಿಯ ಮುನ್ಸಿಪಲ್‌ ಕೌನ್ಸಿಲ್‌ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಆಸ್ಕರ್ ಫರ್ನಾಂಡಿಸ್ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನಪ್ರಭಾವಿ ನಾಯಕರಾದರು. ಧರ್ಮ, ಜಾತಿ ರಾಜಕಾರಣ ಮೀರಿ ಬೆಳೆದವರು. 1980 ರಿಂದ ಸತತ ಐದು ಅವಧಿಗೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು ಅವರ ಹೆಗ್ಗಳಿಕೆ.

ಚುನಾವಣಾ ಪ್ರಚಾರ ಭಾಷಣಗಳಲ್ಲಿ ಎಂದಿಗೂ ಮಾತಿನ ಎಲ್ಲೆ ಮೀರದ ಅವರ ವ್ಯಕ್ತಿತ್ವ, ವಿರೋಧ ಪಕ್ಷಗಳ ನಾಯಕರನ್ನೂ ಸೆಳೆದಿತ್ತು. ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಸಂಬಂಧಪಟ್ಟ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಆಸ್ಕರ್ ಶ್ರಮಿಸಿದ್ದರು. ಸಣ್ಣ ಉದ್ಯಮಿಗಳು, ಕೃಷಿಕರಿಗೆ ಬ್ಯಾಂಕ್‌ನಲ್ಲಿ ಸುಲಭವಾಗಿ ಸಾಲ ಸಿಗಬೇಕು ಎಂದು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು.

ಕೇಂದ್ರ ಭೂಸಾರಿಗೆ ಸಚಿವರಾಗಿದ್ದಾಗ ಕರಾವಳಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ದೊರೆಯಿತು. ಕೊಂಕಣ ರೈಲ್ವೆ ಯೋಜನೆಯ ಅನುಷ್ಠಾನ, ಶಾಲಾ, ಕಾಲೇಜುಗಳ ನಿರ್ಮಾಣ, ಸೇತುವೆ ಕಾಮಗಾರಿಗಳಿಗೆ ಆದ್ಯತೆ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆಸ್ಕರ್ ನೀಡಿದ ಕೊಡುಗೆ ದೊಡ್ಡದು.

ವೈಯಕ್ತಿಯ ಜೀವನ: ಮಾರ್ಚ್‌ 27, 1941ರಲ್ಲಿ ರೋಖಿ ಫರ್ನಾಂಡಿಸ್‌ ಹಾಗೂ ಲಿಯೊನಿಸಾ ದಂಪತಿಯ ಪುತ್ರನಾಗಿ ಆಸ್ಕರ್ ಫರ್ನಾಂಡಿಸ್‌ ಉಡುಪಿಯಲ್ಲಿ ಜನಿಸಿದರು. ಕ್ಯಾಥೊಲಿಕ್ ಪಂಗಡಕ್ಕೆ ಸೇರಿರುವ ಆಸ್ಕರ್, 1981ರಲ್ಲಿ ಬ್ಲಾಸಂ ಅವರನ್ನು ವಿವಾಹವಾಗಿದ್ದು, ದಂಪತಿಗೆ ಪುತ್ರ ರೋಶನ್‌ ಹಾಗೂ ಪುತ್ರಿ ರೋಶನಿ ಇದ್ದಾರೆ.

ಉಡುಪಿಯ ಸೇಂಟ್‌ ಸಿಸಿಲಿಸ್ ಶಾಲೆ ಹಾಗೂ ಬೋರ್ಡ್‌ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಎಂಜಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಆಸ್ಕರ್‌ ಅವರು ಯಾವುದೇ ಸಮಾರಂಭದಲ್ಲಿ ಭಾಗವಹಿಸಿದ್ದರೂ ಅವರ ಜತೆಗೆ ಪತ್ನಿ ಬ್ಲಾಸಂ ಇರುತ್ತಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ವೇದಿಕೆಯಲ್ಲೂ ಪತಿ, ಪತ್ನಿ ಒಟ್ಟಾಗಿ ಕಾಣಿಸಿಕೊಳ್ಳುವುದು ವಿಶೇಷವಾಗಿತ್ತು.

ಕಾಂಗ್ರೆಸ್‌ನ ‘ಆ್ಯಂಟನಿ’

ಒಂದು ಕಾಲದಲ್ಲಿ ಕಾಂಗ್ರೆಸ್‌ನ ‘ಅಮರ್‌, ಅಕ್ಬರ್‌, ಆ್ಯಂಟನಿ’ ತಂಡದಲ್ಲಿ ಆಸ್ಕರ್‌ ಅವರನ್ನು ಆ್ಯಂಟನಿ ಎಂದು ಗುರುತಿಸಲಾಗುತ್ತಿತ್ತು.

ಅರುಣ್‌ ಸಿಂಗ್‌ ಅವರನ್ನು ‘ಅಮರ್‌’ ಎಂದು, ಕಳೆದ ವರ್ಷ ನಿಧನ ಹೊಂದಿದ ಅಹ್ಮದ್‌ ಪಟೇಲ್‌ ಅವರನ್ನು ‘ಅಕ್ಬರ್‌’, ಆಸ್ಕರ್‌ ಅವರನ್ನು ಆ್ಯಂಟನಿ ಎಂದು ಪಕ್ಷದವರೇ ಕರೆಯುತ್ತಿದ್ದರು.

ಉಳಿದಿಬ್ಬರು ರಾಜಕೀಯದಲ್ಲಿ ಪರಿಣಿತರಾಗಿದ್ದರೆ, ಆಸ್ಕರ್‌ ಅವರಿಗೆ ಅಷ್ಟು ರಾಜಕೀಯ ಚಾಣಾಕ್ಷತೆಯಾಗಲಿ, ಸಂಘಟನಾ ಶಕ್ತಿಯಾಗಲಿ ಇರಲಿಲ್ಲ. ಆದರೆ, ಪಕ್ಷ ಹಾಗೂ ಗಾಂಧಿ ಕುಟುಂಬದ ಬಗ್ಗೆ ಅವರಿಗಿದ್ದ ನಿಷ್ಠೆ ಹಾಗೂ ಪಕ್ಷದ ರಹಸ್ಯಗಳನ್ನು ಕಾಯ್ದುಕೊಳ್ಳುವ ಅವರ ಗುಣವೇ ಅವರನ್ನು ಆ ಎತ್ತರಕ್ಕೆ ಏರಿಸಿತ್ತು ಎಂಬುದು ಕಾಂಗ್ರೆಸ್‌ ನಾಯಕರ ಅಭಿಪ್ರಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT