ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಹಾವಿನ ಸ್ನೇಹಕ್ಕೆ 15 ವರ್ಷ!

Last Updated 1 ಅಕ್ಟೋಬರ್ 2020, 7:41 IST
ಅಕ್ಷರ ಗಾತ್ರ

ಹಾವೇರಿ: ‘ಹಾವಿನ ದ್ವೇಷ 12 ವರುಷ, ನನ್ನ ರೋಷ ನೂರು ವರುಷ...’ ಖ್ಯಾತ ಹಿನ್ನೆಲೆಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ‘ನಾಗರಹಾವು’ ಚಿತ್ರದ ಈ ಟ್ರೆಂಡ್‌ ಸೆಟ್ಟಿಂಗ್‌ ಹಾಡನ್ನು ಮರೆಯಲು ಸಾಧ್ಯವೇ..!?

ಇಲ್ಲಿ ನಾನು ಹೇಳಲು ಹೊರಟಿರುವುದು ದ್ವೇಷದ ಕತೆಯನ್ನಲ್ಲ, ಹಾವಿನೊಂದಿಗೆ 15 ವರ್ಷಗಳಿಂದ ಸ್ನೇಹ ಬೆಳೆಸಿಕೊಂಡಿರುವ ಹಾವೇರಿಯ ರಾಮಪ್ಪ ಡಮ್ಮಳ್ಳಿ ಅವರ ಕತೆಯನ್ನು. ಬಹುಶಃ ರಾಮಪ್ಪ ಡಮ್ಮಳ್ಳಿ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ‘ಸ್ನೇಕ್‌ ರಮೇಶ್‌’ ಎಂದರೆ ಹಾವೇರಿಯ ಬಹುತೇಕರಿಗೆ ಚಿರಪರಿಚಿತ ಹೆಸರು.

5300 ಹಾವುಗಳ ರಕ್ಷಣೆ!

ಹೌದು, ಸ್ನೇಕ್‌ ರಮೇಶ್‌ ಅವರುಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಜತೆಯಲ್ಲೇ ಹಾವುಗಳನ್ನು ರಕ್ಷಿಸುವ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ನಾಗರಹಾವು, ಕಟ್ಟಾವು, ಕೊಳಕ ಮಂಡಲ, ಹಸಿರು ಹಾವು, ನೀರಹಾವು, ಆಭರಣ ಹಾವು, ತೋಳ ತಲೆ ಹಾವು, ಮಣ್ಣುಮುಕ್ಕ ಹಾವು ಸೇರಿದಂತೆ 15 ವರ್ಷಗಳಲ್ಲಿ ಬರೋಬ್ಬರಿ 5300 ಹಾವುಗಳನ್ನು ರಕ್ಷಿಸಿದ್ದಾರೆ.

ಬಾಲ್ಯದಿಂದಲೇ ಒಡನಾಟ:

ರಮೇಶ್‌ ಅವರು ಮೂಲತಃ ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿ ಗ್ರಾಮದವರು. ಹನುಮಂತಪ್ಪ ಮತ್ತು ನೀಲಮ್ಮ ದಂಪತಿಯ ಪುತ್ರನಾದ ರಮೇಶ್‌ ಚಿಕ್ಕಂದಿನಿಂದಲೂ ಅಪ್ಪನೊಂದಿಗೆ ಕೆರೆ, ಬಾವಿ, ಹೊಂಡಗಳಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ಮೀನು ಹಿಡಿಯಲು ಹಾಕಿದ ಬಲೆಗೆ ಒಮ್ಮೊಮ್ಮೆ ನೀರಹಾವು ಸಿಲುಕಿಕೊಳ್ಳುತ್ತಿತ್ತು. ಆ ಹಾವನ್ನು ತಂದೆ ತೆಗೆದು ನೀರಿಗೆ ಬಿಸಾಕುತ್ತಿದ್ದರು. ಈ ದೃಶ್ಯ ರಮೇಶ್ ಅವರ ಮೇಲೆ ಪ್ರಭಾವ ಬೀರಿತು.

ಸಂತೆ, ಜಾತ್ರೆಗಳಲ್ಲಿ ಹಾವಾಡಿಗರ ಪ್ರದರ್ಶನವನ್ನು ತದೇಕಚಿತ್ತದಿಂದ ಗಂಟೆಗಟ್ಟಲೇ ನೋಡುತ್ತಾ ನಿಲ್ಲುತ್ತಿದ್ದ ರಮೇಶ್‌ ಅವರಿಗೆ ಈ ಹಾವುಗಳನ್ನು ನಾನು ಏಕೆ ಪಳಗಿಸಿಕೊಳ್ಳಬಾರದು ಎನಿಸಿತು. ನಿಧನವಾಗಿ ಹಾವುಗಳ ಲೋಕದ ಬಗ್ಗೆ ವಿಚಿತ್ರ ಕುತೂಹಲ ಬೆಳೆಯಿತು. ಮೀನಿನ ಬಲೆಗೆ ಸಿಲುಕಿದ ಹಾವನ್ನು ರಮೇಶ್‌ ಕೂಡ ಬರಿಗೈಯಲ್ಲಿ ಹಿಡಿದು ನೀರಿಗೆ ಎಸೆಯುವುದನ್ನು ರೂಢಿ ಮಾಡಿಕೊಂಡರು.

‘ಗ್ರಾಮದಲ್ಲಿ ಎಲ್ಲೇ ಹಾವು ಕಾಣಿಸಿದರೂ ಹುಂಬ ಧೈರ್ಯದಿಂದ ಹೋಗಿ ಹಾವು ಹಿಡಿಯುತ್ತಿದ್ದೆ. ಮನೆಯಲ್ಲಿ ಅಪ್ಪ–ಅವ್ವ ಹೆಚ್ಚು ಕಮ್ಮಿಯಾದ್ರೆ ಗತಿಯೇನು ಎಂದು ಬೈಯುತ್ತಿದ್ದರು. ನಂತರ ಪೊಲೀಸ್‌ ವೃತ್ತಿಗೆ ಸೇರಿದೆ. ಒಮ್ಮೆ ಎಸ್ಪಿ ಚೇತನ್‌ ಸಿಂಗ್‌ ರಾಥೋಡ್‌ ಅವರ ಮನೆಯ ಆವರಣದಲ್ಲಿ ಹಾವು ಬಂದಿತ್ತು. ತಕ್ಷಣ ನನಗೆ ಕರೆ ಬಂತು. ಹೋಗಿ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು, ಕಾಡಿನಲ್ಲಿ ಬಿಟ್ಟೆ. ಇದನ್ನು ಗಮನಿಸಿದ ಎಸ್ಪಿ ಚೇತನ್‌ ಅವರು, ಸ್ವಂತ ಹಣ ನೀಡಿ ನೀವು ಹಾವಿನ ಬಗ್ಗೆ ಸಮಗ್ರ ತರಬೇತಿ ಪಡೆಯಿರಿ ಎಂದು ಮೈಸೂರಿನ ಸ್ನೇಕ್‌ ಶ್ಯಾಮ್‌ ಅವರ ಬಳಿ ಕಳುಹಿಸಿಕೊಟ್ಟರು’ ಎಂದು ರಮೇಶ್‌ ಹೇಳಿದರು.

ಸ್ನೇಕ್‌ ಶ್ಯಾಮ್‌ ಪಾಠ

‘ಮೈಸೂರಿನಲ್ಲಿ ಒಂದು ವಾರ ಸ್ನೇಕ್‌ ಶ್ಯಾಮ್‌ ಅವರಿಂದ ತರಬೇತಿ ಪಡೆದೆ. ಮೊದಲಿಗೆ ನಾನು ಹಾವುಗಳ ತಲೆಯ ಮೇಲೆ ಕಟ್ಟಿಗೆಯನ್ನಿಟ್ಟು ಹಿಡಿಯುತ್ತಿದ್ದೆ. ಅದು ತಪ್ಪು, ಹಾವುಗಳಿಗೆ ಹಿಂಸೆಯಾಗದಂತೆ ‘ಸ್ನೇಕ್‌ ಸ್ಟಿಕ್‌’ ಮೂಲಕ ಸುರಕ್ಷಿತವಾಗಿ ಹೇಗೆ ಹಿಡಿಯಬೇಕು ಎಂಬ ಕಲೆ ಕಲಿಸಿದರು. ಹಾವು ಹಿಡಿಯುವ ಸಂದರ್ಭ ಮದ್ಯಪಾನ ಮಾಡಿರಬಾರದು. ಹಾವು ಹಿಡಿದು ‘ಶೋ ಆಫ್‌’ ಕೊಡಬಾರದು. ಅತಿಯಾದ ಆತ್ಮವಿಶ್ವಾಸ ಇರಬಾರದು. ಮೈಯೆಲ್ಲ ಕಣ್ಣಾಗಿರಬೇಕು. ಜನ ಹೆದರುವುದಕ್ಕಿಂತ ಹತ್ತು ಪಟ್ಟು ಭಯ ನಮಗಿರಬೇಕು’ ಎಂದು ಪ್ರಾಯೋಗಿಕ ತರಬೇತಿ ಮತ್ತು ಹಾವುಗಳ ಲೋಕದ ಬಗ್ಗೆ ಬೆಳಕು ಚೆಲ್ಲಿದರು ಎಂದು ರಮೇಶ್‌ ಅವರು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.

ಹಾವುಗಳ ಕಣಜ

‘ಮೂರ್ನಾಲ್ಕು ವರ್ಷದ ಹಿಂದೆ ಚೌಡಯ್ಯದಾನಪುರದಲ್ಲಿ ಹಾಳುಬಿದ್ದಿದ್ದ ಜೋಳದ ಕಣಜದಲ್ಲಿ ಸುಮಾರು ಹಾವುಗಳು ಸೇರಿಕೊಂಡಿದ್ದವು. ಇಲ್ಲಿ ನಿಧಿಯಿದೆ ಎಂದೇ ಗ್ರಾಮಸ್ಥರು ನಂಬಿದ್ದರು. ಗ್ರಾಮಸ್ಥರೊಬ್ಬರ ಕರೆಯ ಮೇರೆಗೆ ಅಲ್ಲಿಗೆ ಹಾವು ಹಿಡಿಯಲು ಹೋಗಿದ್ದೆ. ಅಲ್ಲಿನ ಮಠಾಧೀಶರು ಬೇಡ ಎಂದರು. ನಂತರ ಗ್ರಾಮಸ್ಥರು ಮತ್ತು ಮಠಾಧೀಶರ ಮನವೊಲಿಸಿ, ಕಣಜದೊಳಕ್ಕೆ ಏಣಿ ನೆರವಿನಿಂದ ಇಳಿದೆ. ನಾಗರಾಹವು, ಕೆರೆ ಹಾವು, ಕೊಳಕು ಮಂಡಲ ಮೂರು ಹಾವುಗಳನ್ನು ಹಿಡಿದು ಮೇಲಕ್ಕೆ ತಂದೆ. ಅದರಲ್ಲಿ ಇನ್ನೂ ಹಾವುಗಳಿದ್ದವು. ಗ್ರಾಮಸ್ಥರ ಅಸಹಕಾರದಿಂದ ಕಾರ್ಯಾಚರಣೆ ಮೊಟಕುಗೊಳಿಸಿದೆ. ಆದರೆ, ಅದು ರೋಚಕ ಸಂದರ್ಭವಾಗಿತ್ತು’ ಎಂದು ರಮೇಶ್‌ ನೆನಪಿನಾಳಕ್ಕೆ ಇಳಿದರು.

ಮುಖ್ಯಮಂತ್ರಿ ಪದಕ

‘ಶಾಲಾ–ಕಾಲೇಜು, ಸಂಘ ಸಂಸ್ಥೆ, ಮಠ–ಮಂದಿರ.. ಹೀಗೆ ಅನೇಕ ಕಡೆ ಜೀವಂತ ಹಾವುಗಳನ್ನು ತೆಗೆದುಕೊಂಡು ಹೋಗಿ, ಹಾವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದೇನೆ. ಪ್ರಕೃತಿಗೆ ಹಾವುಗಳ ಕೊಡುಗೆ, ಅವುಗಳ ಗುಣಲಕ್ಷಣ, ವೈವಿಧ್ಯತೆ, ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸುತ್ತಿದ್ದೇನೆ. ನನ್ನ ಸಾಧನೆಯನ್ನು ನೋಡಿ ಎಸ್ಪಿ ಶಶಿಕುಮಾರ್‌ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. 2015–16ರಲ್ಲಿ ‘ಮುಖ್ಯಮಂತ್ರಿ ಪದಕ’ ದೊರೆಯಿತು’ ಎಂದು ಖುಷಿಯನ್ನು ಹಂಚಿಕೊಂಡರು.

ಧೈರ್ಯಗೆಡಬೇಡಿ

ಹಾವು ಕಚ್ಚಿದಾಗ ಧೈರ್ಯಗೆಡಬೇಡಿ, ಕಚ್ಚಿದ ಭಾಗದಿಂದ ಒಂದು ಅಡಿ ಮೇಲ್ಭಾಗದಲ್ಲಿ ಬಿಗಿಯಾದ ಕಟ್ಟು ಹಾಕಬೇಕು. ಕಚ್ಚಿದ ಭಾಗವನ್ನು ಅಲುಗಾಡಿಸದಂತೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ಚಿಕಿತ್ಸೆ ಪಡೆದು ಗುಣಮುಖರಾಗಿ ಬರುತ್ತೇವೆ ಎಂಬ ಆತ್ಮವಿಶ್ವಾಸ ತುಂಬಾ ಮುಖ್ಯ. ಹಾವು ಕಚ್ಚಿ ತೀರಿಕೊಂಡವರ ಮನೆಯೂ ಸೇರಿದಂತೆ ಹಲವಾರು ಮನೆಗಳು, ದೇವರ ಕೋಣೆ, ದೇವಸ್ಥಾನದ ಗರ್ಭಗುಡಿ, ಮಠ ಹೀಗೆ ಹಲವಾರು ಸ್ಥಳಗಳಿಗೆ ಹೋಗಿ ಹಾವು ಹಿಡಿದಿದ್ದೇನೆ. ಯಾರಿಂದಲೂ ದುಡ್ಡು ಕೇಳುವುದಿಲ್ಲ. ಕೆಲವರು ಅವರೇ ಪೆಟ್ರೋಲ್‌ ಖರ್ಚಿಗಾದರೂ ತೆಗೆದುಕೊಳ್ಳಿ ಎಂದು ಹಣ ನೀಡುತ್ತಾರೆ ಎನ್ನುತ್ತಾರೆ ಸ್ನೇಕ್‌ ರಮೇಶ್.

ಗದಗ, ಹರಿಹರ, ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ ಮುಂತಾದ ಕಡೆಗೂ ಹೋಗಿ ಹಾವು ರಕ್ಷಣೆ ಮಾಡಿದ್ದೇನೆ. ಹಿಡಿದ ಹಾವುಗಳನ್ನು ಅರಣ್ಯಗಳಿಗೆ ಬಿಡುತ್ತೇನೆ. ಲಾಕ್‌ಡೌನ್ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದೇನೆ. ನನ್ನ ಸಾಧನೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಪ್ರೋತ್ಸಾಹ ಮತ್ತು ಪತ್ನಿ ವಿನೋದಾ ರಮೇಶ್‌ ಅವರ ಬೆಂಬಲ ಕಾರಣ.ಹಾವೇರಿ ಜಿಲ್ಲೆಯೊಳಗೆ ಹಾವು ಕಂಡು, ಸಮಸ್ಯೆ ಉಂಟಾದರೆ ಮೊ: 97425 63214 ಕರೆ ಮಾಡಿ ಎನ್ನುವುದು ರಮೇಶ್ ವಿನಮ್ರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT