ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ಸ್ವಚ್ಛತೆ ಪಾಠ ಆರಂಭವಾಗಲಿ

ಪ್ರಾಂಶುಪಾಲರ ಸಭೆ: ಬೀರೂರು ಪುರಸಭಾಧ್ಯಕ್ಷೆ ಸವಿತಾ ರಮೇಶ್ ಸಲಹೆ
Last Updated 19 ಜೂನ್ 2018, 12:03 IST
ಅಕ್ಷರ ಗಾತ್ರ

ಬೀರೂರು: ಸ್ವಚ್ಛಭಾರತ ಯೋಜನೆಯ ಯಶಸ್ಸು ನಾಗರಿಕರ ಸಹಕಾರದ ಮೇಲೆ ಅವಲಂಬಿತವಾಗಿದೆ. ಶಾಲಾ ಕಾಲೇಜುಗಳು ಪರಿಸರ ಸ್ವಚ್ಛತೆಯ ಅರಿವು ಮೂಡಿಸುವ ಮೊದಲ ಕೇಂದ್ರಗಳಾಗಬೇಕು ಎಂದು ಪುರಸಭಾಧ್ಯಕ್ಷೆ ಸವಿತಾ ರಮೇಶ್ ಸಲಹೆ ನೀಡಿದರು.

ಪುರಸಭೆ ಸಭಾಂಗಣದಲ್ಲಿ ಸೋಮವಾರ ಸ್ವಚ್ಛತೆ ಮತ್ತು ನೀರು ಸರಬರಾಜು ಕುರಿತು ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರ ಸಭೆ ನಡೆಸಿ ಮಾತನಾಡಿದರು.

ದೇಶ ಸ್ವಚ್ಛ ಮತ್ತು ಸ್ವಸ್ಥವಾಗಿರಲು ಆರೋಗ್ಯಕರ ಸಮಾಜದ ಅಗತ್ಯವಿದೆ. ಇಂದು ಶಿಕ್ಷಣದ ಮೂಲಕ ಪರಿವರ್ತನೆ ಸಾಧ್ಯವಿದ್ದು, ಶಾಲೆಗಳಲ್ಲಿ ಶಿಕ್ಷಕರು, ಅಧ್ಯಾಪಕರು ಮಕ್ಕಳ ಆರೋಗ್ಯ ಕಾಪಾಡುವ ಜತೆಗೆ ಪರಿಸರ ಮಾಲಿನ್ಯದ ಪರಿಣಾಮಗಳ ಅರಿವು ಮೂಡಿಸುವ ಮೂಲಕ ಬದಲಾವಣೆಗೆ ಕೈಜೋಡಿಸಬೇಕು ಎಂದರು.

ಶಾಲೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಂಡು ಮಕ್ಕಳು ಕುಡಿಯುವ ನೀರು ಮತ್ತು ನೀಡುವ ಆಹಾರದಲ್ಲಿ ಶುಚಿತ್ವ ಕಾಪಾಡಿದಾಗ ಮಾತ್ರ ಮಕ್ಕಳ ಆರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ. ಶಾಲೆ ಇರುವ ಬೀದಿಗಳಲ್ಲಿನ ಸಾರ್ವಜನಿಕರು ಶಾಲೆಯ ಪರಿಸರವನ್ನು ಕಾಪಾಡಲು ಸಹಕರಿಸುವಂತೆ ಮನ ಒಲಿಸಬೇಕು. ಹಲವೆಡೆ ಶಾಲೆಗಳ ಸುತ್ತಮುತ್ತಲಿನ ನಿವಾಸಿಗಳು ಎಲ್ಲೆಂದರಲ್ಲಿ ಕಸ ಹಾಕುವುದರ ಮೂಲಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಶಿಕ್ಷಕರಾದ ನೀವು ಮಕ್ಕಳ ಜೊತೆಯಲ್ಲಿ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿ
ಸುವುದು ಅಗತ್ಯವಾಗಿದೆ ಎಂದರು.

ಹಲವು ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು ಮಾತನಾಡಿ, ‘ಶಾಲೆಯ ಆವರಣದಲ್ಲಿ ಸುತ್ತಮುತ್ತಲಿನ ಜನ ಸ್ವಚ್ಛತೆಗೆ ಸಹಕರಿಸುತ್ತಿಲ್ಲ. ಅದರ ಜತೆ ಚರಂಡಿಗಳನ್ನು ಸ್ವಚ್ಛ ಮಾಡಲು ಬರುವ ಪೌರ ಕಾರ್ಮಿಕರ ದಿನಚರಿ ಸರಿಯಾಗಿಲ್ಲ, ಭದ್ರಾ ಕುಡಿಯುವ ನೀರು ಸಂಪರ್ಕವಿಲ್ಲದೆ ಶಾಲೆಗಳಲ್ಲಿ ನೀರಿನ ಸಮಸ್ಯೆಯೂ ಎದುರಾಗಿದೆ. ಪುರಸಭೆ ಈ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಮಾತನಾಡಿ, ‘ಮೊದಲೇ ಹೇಳಿದಂತೆ ಸ್ವಚ್ಛತೆಯನ್ನು ಒಬ್ಬರಿಂದ ಕಾಪಾಡಲು ಸಾಧ್ಯವಿಲ್ಲ. ಪುರಸಭೆಗೆ ಸಹಕರಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಚರಂಡಿ ಸ್ವಚ್ಛತೆಗೆಂದು ಪೌರಕಾರ್ಮಿಕರಿಂದ ಗುಂಪು ಕೆಲಸವನ್ನು ಮಾಡಿಸುತ್ತಿದ್ದೇವೆ ಹಾಗೂ ಕಸ ವಿಲೇವಾರಿಗೆಂದು ಆಟೋ ಟಿಪ್ಪರ್‍ಗಳು ಮನೆಬಾಗಿಲಿಗೆ ಬರುತ್ತಿವೆ. ಜನತೆ ಆ ಕಸದ ಗಾಡಿಗಳಿಗೆ ಕಸ ನೀಡಿ ಪರಿಸರ ರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದೆ’ ಎಂದರು.

ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್ ನೀರಿನ ಸಮಸ್ಯೆಯಿರುವ ಪ್ರತಿಯೊಂದು ಶಾಲೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನೀರು ಸರಬರಾಜು ನಿರ್ವಾಹಕರಿಗೆ ಸೂಚಿಸಿದರು.

ಮುಖ್ಯಾಧಿಕಾರಿ ಮಂಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್, ವ್ಯವಸ್ಥಾಪಕ ನಂಜುಂಡ ಶೆಟ್ಟಿ ಇದ್ದರು.

ಶೌಚಾಲಯದ ಸ್ವಚ್ಛತೆ: ಚರ್ಚೆ

ಉಪ್ಪಾರ ಕ್ಯಾಂಪ್ ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ, ‘ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸುವುದು ಅಪರಾಧ. ಆದರೆ, ಶಾಲೆಯಲ್ಲಿ ಶೌಚಾಲಯ ಶುದ್ಧ ಮಾಡಲೇಬೇಕು. ‘ಡಿ’ದರ್ಜೆ ನೌಕರರಿಲ್ಲದ ಕಾರಣ ಶಾಲೆಗಳಲ್ಲಿ ಶುಚಿತ್ವವನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪುರಸಭೆಯಿಂದ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸಿದರೆ ಶಾಲೆಗಳ ಶೌಚಾಲಯ ಸ್ವಚ್ಛ ಮಾಡಲು ಅನುಕೂಲವಾಗುತ್ತದೆ. ಅಂತಹ ಕಾರ್ಮಿಕರಿಗೆ ಶಾಲೆಗಳ ಪರವಾಗಿಯೇ ಹಣ ಸಂದಾಯ ಮಾಡುತ್ತೇವೆ’ ಎಂದರು.

ಪರಿಸರ ಎಂಜಿನಿಯರ್‌ ನೂರುದ್ದೀನ್ ಮಾತನಾಡಿ, ಮಕ್ಕಳು ಮಾತ್ರವಲ್ಲ ಪೌರಕಾರ್ಮಿಕರಿಂದ ಶೌಚಾಲಯ ಶುಚಿ ಮಾಡಿಸಿದರೂ ಕೂಡ ಅಪರಾಧ. ಆದರೆ, ಶೌಚಾಲಯ ಶುಚಿ ಮಾಡಲು ಇಚ್ಛೆಯಿರುವ ನಿವೃತ್ತ ಪೌರಕಾರ್ಮಿಕರನ್ನು ವಿಚಾರಿಸಿ ಶಾಲೆಯ ಶೌಚಾಲಯದ ಸ್ವಚ್ಛತೆಗೆ ಕಳಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT