ಸುಮಲತಾ ಬೆನ್ನಿಗೆ ನಾನು ನಿಂತಿಲ್ಲ, ಕಾರ್ಯಕರ್ತರು ನಿಂತಿದ್ದಾರೆ:ಚೆಲುವರಾಯಸ್ವಾಮಿ

ಶನಿವಾರ, ಏಪ್ರಿಲ್ 20, 2019
24 °C

ಸುಮಲತಾ ಬೆನ್ನಿಗೆ ನಾನು ನಿಂತಿಲ್ಲ, ಕಾರ್ಯಕರ್ತರು ನಿಂತಿದ್ದಾರೆ:ಚೆಲುವರಾಯಸ್ವಾಮಿ

Published:
Updated:

ಬೆಂಗಳೂರು: ‘ಸುಮಲತಾ ಬೆನ್ನಿಗೆ ನಾನು ‌ನಿಂತಿಲ್ಲ. ನಮ್ಮ ಕಾರ್ಯಕರ್ತರು ಸುಮಲತಾ ಪರ ಪ್ರಚಾರ ನಡೆಸುವುದು ಅವರ ವೈಯಕ್ತಿಕ. ಅವರ ಪ್ರಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ’  ಎಂದು ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಜೆಡಿಎಸ್‌ಗೆ ಮತ ಹಾಕಬೇಕಾ? ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಕಾ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. ನನ್ನ ಮತ ಯಾರಿಗೆ ಎಂದು ಹೇಳುವುದು ಸರಿಯಲ್ಲ. ಮತಗಟ್ಟೆಗೆ ಹೋದಾಗ ಮನಸ್ಸಿಗೆ ಬಂದಂತೆ ಮತ ಹಾಕುತ್ತೇನೆ' ಎಂದು ಅಡ್ಡಗೋಡೆಯಲ್ಲಿ ದೀಪ ಇಟ್ಟಂತೆ ಅವರು ಹೇಳಿದರು.

‘ನಾನಂತೂ ಸುಮಲತಾ ಪರ ಪ್ರಚಾರ ಮಾಡಿಲ್ಲ. ಹೀಗಿದ್ದೂ ಕುಮಾರಸ್ವಾಮಿ ಅವರು ಬೆನ್ನಿಗೆ ಚೂರಿ ಹಾಕಿದರು ಅಂತ ಹೇಳುತ್ತಾರೆ. ಯಾರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬುದನ್ನು ಅವರೇ ಹೇಳಲಿ’ ಎಂದರು.

‘ಕುಮಾರಸ್ವಾಮಿ ಈಗಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ಶಿವರಾಮೇಗೌಡ ಪರ ಕೆಲಸ ಮಾಡಿದ್ದೆವು. ಗೆಲುವಿನ ಬಳಿಕ  ಮಾತನಾಡಿಸಿಲ್ಲ. ನಿಖಿಲ್ ಅಭ್ಯರ್ಥಿ ಅಂತ ಘೋಷಿಸುವಾಗಲೂ ನಮ್ಮನ್ನು ಒಂದು ಮಾತೂ ಯಾರು ಕೇಳಿಲ್ಲ. ಅವರೇ ಎಲ್ಲವನ್ನೂ ನಿರ್ಧಾರ ಮಾಡಿದ್ದಾರೆ. ಎಲ್ಲವನ್ನೂ ಅವರೇ ಮಾಡುವಾಗ ನಾವೇನು ಮಾಡಲು ಸಾಧ್ಯ’ ಎಂದರು.
ಮಂಡ್ಯ ಜಿಲ್ಲೆಯ ಮತದಾರ ತೀರ್ಮಾನ ಇಟ್ಟುಕೊಂಡು ಮತ ಹಾಕುತ್ತಾರೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದು ಮತ ಚಲಾಯಿಸಿದ್ದರು. ನಮ್ಮ ವಿರುದ್ಧ ಮತ ಹಾಕಿ ನಮ್ಮನ್ನು ಸೋಲಿಸಿದ್ದರು. ಹತ್ತು ತಿಂಗಳಿಂದಲೂ ಜಿಲ್ಲೆಯಲ್ಲಿ ಘರ್ಷಣೆ ನಡೆಯುತ್ತಿದೆ. ಅಭಿಮಾನಿಗಳು ಸುಮಲತಾ ಅಭ್ಯರ್ಥಿ ಆಗಬೇಕು ಎಂದು ಆಸೆ ಪಟ್ಟರು. ಹೀಗಾಗಿ, ಅವರು ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ ಎಂದರು.

'ಸಚಿವ ಪುಟ್ಟರಾಜು ನನಗೆ ಬಹಿರಂಗವಾಗಿ ಅವಮಾನ ಮಾಡಿದ್ದರು. ಯೋಧ ಗುರು ಅಂತ್ಯ ಸಂಸ್ಕಾರದಲ್ಲಿ ನನಗೆ, ನರೇಂದ್ರ ಸ್ವಾಮಿಗೆ ಅಗೌರವ ತೋರಿಸಿದರು. ಇಷ್ಟಾದರೂ ನಾವು ಸುಮ್ಮನೆ ಇದ್ದೇವೆ. ಇದನ್ನು ಯಾರು ಕೇಳಲಿಲ್ಲ. ಅಷ್ಟಕ್ಕೂ ಜಿಲ್ಲೆಯ ಜನ ಯಾರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡುತ್ತಾರೆ. ಜನರು ನೀಡುವ ತೀರ್ಪಿಗೆ ನಾವು ಬದ್ಧ' ಎಂದೂ ಹೇಳಿದರು.

'ಈ ಹಿಂದೆ ದರ್ಶನ್ ಹಾಗೂ ಯಶ್ ಪಕ್ಷಗಳ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಗೀತಾ‌ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದಾಗ ಶಿವಮೊಗ್ಗಕ್ಕೆ ಹಲವು ನಟ-ನಟಿಯರು ಪ್ರಚಾರಕ್ಕೆ ಹೋಗಿದ್ದರು. ಆಗ ಈ ನಟರು ಪ್ರಚಾರ ನಡೆಸಿದ್ದು ಸರಿ. ಆದರೆ, ಈಗ ತಮ್ಮ ವಿರುದ್ದ ಹೋಗುತ್ತಾರೆ ಅನ್ನೋದು ಸರಿಯಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

‘ಅಂಬರೀಷ್ ಅವರನ್ನು ಯಶ್, ದರ್ಶನ್  ಅಪ್ಪಾಜಿ ಅಂತಲೇ ಕರೆಯುತ್ತಿದ್ದರು. ಅಂಬರೀಷ್ ಕೂಡ ತಮ್ಮ ಮಕ್ಕಳಂತೆ ಅವರನ್ನು ‌ನೋಡಿಕೊಂಡು ಬಂದಿದ್ದಾರೆ. ಇವರು ಅಂಬರೀಷ್ ಬದುಕಿದ್ದಾಗಲು ಪ್ರಚಾರಕ್ಕೆ ಹೋಗಿದ್ದಾರೆ. ವಿಷ್ಣುವರ್ಧನ್ ಕೂಡ ಅಂಬರೀಷ್ ಪರ ಪ್ರಚಾರ ಮಾಡಿದ್ದಾರೆ. ಈಗ ಅವರು ಸುಮಲತಾ ಪರ ಪ್ರಚಾರ ಮಾಡದಿದ್ದರೆ ಆತ್ಮದ್ರೋಹ ಮಾಡಿಕೊಂಡಂತೆ ಆಗುವುದಿಲ್ಲವೇ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದು ಯಾಕೆ’ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ. ಆದರೆ, ನನ್ನ ಅವಶ್ಯಕತೆ ಕುಮಾರಸ್ವಾಮಿಗೆ ಇಲ್ಲ ಬಿಡಿ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ಆದರೂ ಸಿದ್ದರಾಮಯ್ಯ ಜೊತೆ ಕುಮಾರಸ್ವಾಮಿ ಮಾತನಾಡಲೇಬೇಕು ಎಂದರು.

ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ನಮ್ಮ ಬಳಿ ಬರುವುದಿಲ್ಲ. ನನಗೆ ಅವರ ಗುಣ ಏನು ಎನ್ನುವುದು ಗೊತ್ತಿದೆ. ನಾವು ಒಟ್ಟಿಗೆ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಹೀಗಾಗಿ ಅವರ ಸ್ವಭಾವ ನನಗೆ‌ ಚೆನ್ನಾಗಿ ಗೊತ್ತಿದೆ. ಅವರು ನಮ್ಮನ್ನು ಮಾತಾನಾಡಿಸುವುದಿಲ್ಲವೆಂದು ಗೊತ್ತಿದೆ. ಅಷ್ಟಕ್ಕೂ ನಾವು ಅಂತಹ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ ಎಂದರು.

ನನ್ನ ಹಾಗೂ ಜಿಲ್ಲೆಯ ಮುಖಂಡರ ಅವಶ್ಯಕತೆ ಕುಮಾರಸ್ವಾಮಿಗೆ ಇಲ್ಲ ಅನಿಸುತ್ತದೆ. ನಾನು ದೇವೇಗೌಡರ ಬಗ್ಗೆ ‌ಮಾತಾಡುವುದಿಲ್ಲ ಎಂದರು.

ಸುಮಲತಾ ಹೆಸರಿನಲ್ಲಿ ಮೂವರ ನಾಮಪತ್ರ ಸಲ್ಲಿಸಿರುವ ಬಗ್ಗೆ ಚೆಲುವರಾಯಸ್ವಾಮಿ, ‘ಎಷ್ಟೇ ಹೆಸರುಗಳನ್ನು ಸೃಷ್ಟಿಸಿದರೂ ಮಂಡ್ಯದ ಜನರು ಯಾಮಾರುವುದಿಲ್ಲ. ನಿಖಿಲ್ ಹೆಸರಿನಲ್ಲೂ ಸೃಷ್ಟಿಸಿದರೂ ಅಷ್ಟೇ, ಸುಮಲತಾ ಹೆಸರಿನಲ್ಲಿ ಸೃಷ್ಟಿ ಮಾಡಿದರೂ ಅಷ್ಟೇ. ಜನ ಯಾರಿಗೆ ಮತ ಹಾಕಬೇಕೋ ಅವರಿಗೇ ಹಾಕುತ್ತಾರೆ’ ಎಂದರು.

ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ ನಿಂದ ಇಬ್ಬರ ಅಮಾನತು
ಬೆಂಗಳೂರು:
 ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದ ಬಂಡಾಯವೆದ್ದು ಕಣಕ್ಕಿಳಿದಿರುವ ಇಬ್ಬರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಆರು ವರ್ಷ ಅವಧಿಗೆ ಅಮಾನತುಗೊಳಿಸಲಾಗಿದೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಣಕ್ಕಿಳಿದಿರುವ  ಎಐಸಿಸಿ ಸಹ ಸದಸ್ಯ ಅಮೃತ್ ಶೆಣೈ ಮತ್ತು ಬೀದರ್ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಪಿಸಿಸಿ ಸದಸ್ಯ ಶಾನುಲ್ ಹಖ್ ಅಮಾನತುಗೊಂಡವರು.

ಈ ಇಬ್ಬರನ್ನೂ ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫೀ ಉಲ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ... 

*  ‘ಮೈತ್ರಿ’ ಮುನಿಸು ಬಯಲಿಗೆ: ಮಂಡ್ಯದಲ್ಲಿ ಬಿಜೆಪಿ–ಕಾಂಗ್ರೆಸ್ ಚಕ್ರವ್ಯೂಹ ಎಂದ ಸಿಎಂ

ಅಭಿವೃದ್ಧಿಗೆ ಮುಖ್ಯಮಂತ್ರಿ ಮಗನೇ ಸಂಸದನಾಗಬೇಕೆ? ಸುಮಲತಾ

ಸಾಲಮನ್ನಾ ಬೇಡವೆಂದು ಹಣಕಾಸು ಇಲಾಖೆ ಕಾರ್ಯದರ್ಶಿಯೇ ಹೇಳಿದ್ದರು: ಸುಮಲತಾ

ಹಿಂದಿನ ಬಾಗಿಲಲ್ಲಿ ಬಂದು ಅಧಿಕಾರ ಕೇಳುತ್ತಿಲ್ಲ

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 0

  Sad
 • 2

  Frustrated
 • 4

  Angry

Comments:

0 comments

Write the first review for this !