ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಸ್ಪರ್ಧೆ: ದೇವೇಗೌಡ ಅಸಮಾಧಾನ

ಗುರುವಾರ , ಏಪ್ರಿಲ್ 25, 2019
27 °C

ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಸ್ಪರ್ಧೆ: ದೇವೇಗೌಡ ಅಸಮಾಧಾನ

Published:
Updated:

ಬೆಂಗಳೂರು: ತುಮಕೂರು ಕ್ಷೇತ್ರದ ಹಾಲಿ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಚರ್ಚೆ ನಡೆಸಿದರು.

ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ ದಿನೇಶ್, ಸುಮಾರು 40 ನಿಮಿಷ ಮಾತುಕತೆ ನಡೆಸಿದರು.

ಮುದ್ದಹನುಮೇಗೌಡ ಬಂಡಾಯ ಎದ್ದಿರುವ ಬಗ್ಗೆ ದಿನೇಶ್ ಬಳಿ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡ, ‘ಬೆಂಗಳೂರು ಉತ್ತರದಲ್ಲಿ ನಿಮ್ಮದೇ ಪಕ್ಷದ ಶಾಸಕರು ಷರತ್ತುಗಳನ್ನು ಹಾಕಿ ಮುಜುಗರ ಉಂಟು ಮಾಡಿದರು. ಮೈತ್ರಿ ಧರ್ಮ ಪಾಲಿಸಬೇಕಾದವರೇ ಗೊಂದಲ ಮೂಡಿಸಿದರೆ ಹೇಗೆ’ ಎಂದು ಪ್ರಶ್ನಿದ್ದಾರೆ ಎನ್ನಲಾಗಿದೆ.

‘ಕ್ಷೇತ್ರ ಹಂಚಿಕೆ ಸೂತ್ರದಂತೆ ತುಮಕೂರು ಕ್ಷೇತ್ರವನ್ನು ನಮಗೆ ಕೊಟ್ಟಿದ್ದೀರಿ. ಈಗ ಅನಗತ್ಯವಾಗಿ ಕ್ಷೇತ್ರದಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಇದರಿಂದ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ’ ಎಂದೂ ಅತೃಪ್ತಿ ವ್ಯಕ್ತಪಡಿಸಿದರು.

‘ಮೊದಲು ಮುದ್ದಹನುಮೇಗೌಡ ಜೊತೆ ಚರ್ಚೆ ನಡೆಸಿ. ಇಲ್ಲದಿದ್ದಲ್ಲಿ ನೇರವಾಗಿ ನಿಮ್ಮ ಹೈಕಮಾಂಡ್ ಬಳಿಯೇ ಪ್ರಸ್ತಾಪಿಸಬೇಕಾಗುತ್ತದೆ. ಸೋಮವಾರ ನಾನು ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ನಾಯಕರು ಉಪಸ್ಥಿತರಿರಬೇಕು. ಇಲ್ಲದಿದ್ದಲ್ಲಿ ಬೇರೆ ಸಂದೇಶ ರವಾನೆಯಾಗಲಿದೆ’ ಎಂದೂ ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜೆ.ಪಿ. ನಗರದಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿದ ದಿನೇಶ್, ಮಂಡ್ಯದಲ್ಲೂ ಗೊಂದಲ ಮುಂದುವರೆದಿರುವ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಕುಮಾರಸ್ವಾಮಿ ಕೂಡಾ ಬೇಸರ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ‘ನಿಖಿಲ್ ಸೋಮವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಆದರೆ, ನಿಮ್ಮ ಪಕ್ಷದ ಸ್ಥಳೀಯ ನಾಯಕರ ಸಹಕಾರ ಇನ್ನೂ ಸಿಕ್ಕಿಲ್ಲ’ ಎಂದಿದ್ದಾರೆ.

ದೇವೇಗೌಡ- ಮೊಯಿಲಿ ಚರ್ಚೆ: ದೇವೇಗೌಡ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೊಯಿಲಿ ಭಾನುವಾರ ಬೆಳಿಗ್ಗೆ ಭೇಟಿ ಮಾಡಿದರು.

ಶನಿವಾರ ರಾತ್ರಿ ಕಾಂಗ್ರೆಸ್ 18 ಅಭ್ಯರ್ಥಿಗಳ ಪಟ್ಟಿ‌ ಪ್ರಕಟಿಸಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿಯಾಗಿ  ಮೊಯಿಲಿ ಕಣಕ್ಕಿಳಿಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 24

  Happy
 • 3

  Amused
 • 1

  Sad
 • 2

  Frustrated
 • 2

  Angry

Comments:

0 comments

Write the first review for this !