ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಸಿಎಂ ಕುಮಾರಸ್ವಾಮಿ

Last Updated 25 ಏಪ್ರಿಲ್ 2019, 7:09 IST
ಅಕ್ಷರ ಗಾತ್ರ

‘ಕುಟುಂಬ ರಾಜಕಾರಣದಿಂದ ಯಾವ ಪಕ್ಷಗಳೂ ಹೊರತಾಗಿಲ್ಲ. ಅಷ್ಟೇ ಅಲ್ಲ, ಪ್ರಾದೇಶಿಕ ಪಕ್ಷಗಳು ಉಳಿದಿರುವುದೇ ಕುಟುಂಬ ರಾಜಕಾರಣದಿಂದ. .’

–‘ಜೆಡಿಎಸ್‌ ಪಕ್ಷ ತನ್ನ ಹರವನ್ನು ವಿಸ್ತರಿಸಿಕೊಳ್ಳುವ ಬದಲು ಕುಟುಂಬ ಕೇಂದ್ರಿತ ಆಗುತ್ತಿದೆಯಲ್ಲ’ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಂದಿನಿತೂ ಹಿಂದೆ–ಮುಂದೆ ನೋಡದೆ ಕೊಟ್ಟ ಉತ್ತರವಿದು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಶುಕ್ರವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ‘ಜೆಡಿಎಸ್‌ ಉಳಿದಿರುವುದೇ ನಮ್ಮ ಕುಟುಂಬದ ಹೋರಾಟದಿಂದ’ ಎಂದು ಹೇಳಲು ಮರೆಯಲಿಲ್ಲ. ಡಿಎಂಕೆ, ಕರುಣಾನಿಧಿ ಕುಟುಂಬ, ಎನ್‌ಸಿಪಿ, ಪವಾರ್‌ ಕುಟುಂಬ, ಎಸ್‌ಪಿ, ಯಾದವ ಕುಟುಂಬ ಹಾಗೂ ಆರ್‌ಜೆಡಿ, ಲಾಲು ಪ್ರಸಾದ್‌ ಅವರ ಕುಟುಂಬ ಕೇಂದ್ರಿತವಾ
ಗಿಲ್ಲವೇ’ ಎಂದು ಮರುಪ್ರಶ್ನೆ ಹಾಕಿದರು.

‘ಕಾಂಗ್ರೆಸ್‌, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳೂ ಕುಟುಂಬ ರಾಜಕೀಯದಿಂದ ಮುಕ್ತವಾಗಿಲ್ಲ’ ಎಂದು ವ್ಯಾಖ್ಯಾನಿಸಿದರು.

‘ಒಂದು ಕುಟಂಬದಿಂದ ಒಬ್ಬರೋ ಇಬ್ಬರೋ ರಾಜಕೀಯಕ್ಕೆ ಬಂದರೆ ಅಡ್ಡಿಯಲ್ಲ ಎಂದು ಹೇಳುತ್ತಿರುವ ಯಡಿಯೂರಪ್ಪ ಅವರ ಕುಟುಂಬದಿಂದ ಈಗ ಮೂರನೇ ವ್ಯಕ್ತಿ ರಾಜಕೀಯಕ್ಕೆ ಪ್ರವೇಶಿಸಿದ್ದು, ಮುಂಬೈಗೆ ಅವರೇ ದುಡ್ಡು ಒಯ್ಯುತ್ತಾರಲ್ಲ’ಎಂದೂ ಅವರು ಕುಟುಕಿದರು.

*ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಏಕೆ ಗೆಲ್ಲಿಸಬೇಕು?

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನ ಪ್ರಮಾಣ ಕಡಿಮೆ ಇದೆ. ಹಲವಾರು ಭಾಗದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಮ್ಮ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿದರೆ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ಕೇಂದ್ರದಲ್ಲಿ ಮೈತ್ರಿ ಸರ್ಕಾರದ ಅವಶ್ಯಕತೆ ಇದೆ.

*ರೈತರ ಸಾಲ ಮನ್ನಾ ಆಗಿದೆಯಾ?

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲು ಕಳೆದ ವರ್ಷ ₹6,500 ಕೋಟಿ ತೆಗೆದಿರಿಸಲಾಗಿತ್ತು. ಈ ವರ್ಷ ₹12,500 ಕೋಟಿ ಎತ್ತಿಟ್ಟಿದ್ದೇವೆ. ಈಗಾಗಲೇ 15.58 ಲಕ್ಷ ರೈತ ಕುಟುಂಬಗಳಿಗೆ ಸಾಲ ಮನ್ನಾದ ಲಾಭ ಸಿಕ್ಕಿದೆ. ನೀತಿಸಂಹಿತೆ ಜಾರಿಯಾಗಿರುವುದರಿಂದ ಸಾಲ ಮನ್ನಾ ಯೋಜನೆಯ ಸ್ಥಗಿತಕ್ಕೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಆದರೆ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತ ಕುಟುಂಬಕ್ಕೆ ₹2 ಸಾವಿರ ನೀಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ ನಮ್ಮ ರಾಜ್ಯದ 10 ಲಕ್ಷ ರೈತರು ಮಾಹಿತಿ ಕೊಟ್ಟಿದ್ದಾರೆ. ಅದನ್ನು ಪರಿಶೀಲನೆ ಮಾಡಿ 8 ಲಕ್ಷ ರೈತರ ಮಾಹಿತಿಗಳನ್ನು ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದವರು ಇಲ್ಲಿಯವರೆಗೆ 17 ಮಂದಿಯನ್ನು ಆಯ್ಕೆ ಮಾಡಿದ್ದಾರೆ. ಹಣ ಸಂದಾಯ ಆಗಿರುವುದು 6 ಜನರಿಗೆ. ಒಂದು ಖಾತೆಗೆ ₹950 ಬಂದಿದೆ ಅಷ್ಟೇ.

*₹46 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ನೀವು ಪ್ರಕಟಿಸಿದ್ದೀರಿ. ನೀವು ಒಡ್ಡಿದ ಷರತ್ತುಗಳಿಂದಾಗಿ ಈ ಮೊತ್ತ ₹18 ಸಾವಿರ ಕೋಟಿಗೆ ಇಳಿಕೆಯಾಗುತ್ತದೆ ಎಂದು ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರಲ್ಲ?

₹34 ಸಾವಿರ ಕೋಟಿ ಸಾಲ ಇದೆ ಎಂದು ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು ಮಾಹಿತಿ ನೀಡಿದ್ದರು. ಸಹಕಾರ ಬ್ಯಾಂಕ್‌ಗಳಲ್ಲಿ ₹9,800 ಕೋಟಿ ಸಾಲ ಇದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರತಿನಿಧಿಗಳ ಜತೆಗೆ ನಮ್ಮ ಅಧಿಕಾರಿಗಳು 8–10 ಸಲ ಸಭೆ ನಡೆಸಿದ್ದಾರೆ. ಮರು ಪಾವತಿ ಆಗದ ಸಾಲಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದೇವೆ. ರೈತರ ಹೆಸರಿನಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಾಲ ಪಡೆದಿದ್ದಾರೆ. ಇನ್ನೂ ಕೆಲವರು ರೈತರ ಹೆಸರಿನಲ್ಲಿ ಟೋಪಿ ಹಾಕಿದ್ದಾರೆ. ಅನರ್ಹರಿಗೆ ಯೋಜನೆ ಲಾಭ ದೊರಕದಂತೆ ಮಾಡಲು ಪ್ರತ್ಯೇಕ ಘಟಕ ಸ್ಥಾಪಿಸಿದ್ದೇವೆ. ಸಾಲ ಮನ್ನಾದ ಮೊತ್ತ ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿಗಳಷ್ಟು ಕಡಿಮೆಯಾಗಬಹುದು.

*ಲೋಕಸಭಾ ಚುನಾವಣೆಯ ಸೀಟು ಹೊಂದಾಣಿಕೆಯಲ್ಲಿ ನಿಮ್ಮ ಶಕ್ತಿಗಿಂತ ಹೆಚ್ಚು ಸೀಟು ಕೇಳಿದಿರಿ ಎಂದು ಅನಿಸುತ್ತಿಲ್ಲವೇ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ 4.5 ಲಕ್ಷ ಮತ ಪಡೆದಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನಷ್ಟೇ ಮತ ಪಡೆದಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ನಾನು ಅರ್ಜಿ ಹಾಕಿ ಬಂದು 3.5 ಲಕ್ಷ ಮತಗಳನ್ನು ಪಡೆದೆ. ಅಲ್ಲಿ ನಾನು ಪ್ರಚಾರ ಮಾಡಿರಲಿಲ್ಲ. ಒಂದು ವೇಳೆ ನಾನು ಸ್ಪರ್ಧಿಸದಿದ್ದರೆ ಅಲ್ಲಿ ಕಾಂಗ್ರೆಸ್‌ ಗೆಲ್ಲುತ್ತಿರಲಿಲ್ಲ.

ಮೈತ್ರಿ ಸಂಬಂಧ ಹಾಳಾಗಬಾರದು ಎಂಬ ಕಾರಣಕ್ಕೆ ಬಿಜೆಪಿ ನಾಲ್ಕೈದು ಸಲ ಗೆದ್ದ ಕ್ಷೇತ್ರಗಳನ್ನೇ ಬಿಟ್ಟುಕೊಡಿ ಎಂದು ಕಾಂಗ್ರೆಸ್‌ ನಾಯಕರಿಗೆ ನಾವು ಕೇಳಿದೆವು. ಸೀಟು ಹೊಂದಾಣಿಕೆಯಲ್ಲಿ ಸಮಸ್ಯೆ ಆಗುವುದು ಬೇಡ ಎಂಬ ಕಾರಣಕ್ಕೆ ನಾವೇ ಶರಣಾಗಿದ್ದೇವೆ.

*ಉಡುಪಿ– ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ಮುಖಂಡ ಪ್ರಮೋದ್‌ ಮ‌ಧ್ವರಾಜ್‌ ಅವರನ್ನು ಜೆಡಿಎಸ್ ಚಿಹ್ನೆ ಅಡಿ ಕಣಕ್ಕೆ ಇಳಿಸಿದ್ದು ಏಕೆ?

ಗೆಲ್ಲುವ ದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಪ್ರಮೋದ್‌ ಮಧ್ವರಾಜ್‌ ತೀರ್ಮಾನ ಮಾಡಿದ್ದರು. ನಾನು ಬಿಜೆಪಿ ನಾಯಕ ಕೆ.ಜಯಪ್ರಕಾಶ ಹೆಗ್ಡೆ ಅವರನ್ನು ಸಂಪರ್ಕಿಸಿದ್ದೆ. ಕಣಕ್ಕೆ ಇಳಿಯಲು ಅವರು ಒಪ್ಪಿದ್ದರು. ಸ್ಪರ್ಧೆ ಮಾಡುವುದು ಬೇಡ ಎಂದು ಕುಟುಂಬ ಸದಸ್ಯರು ವಿನಂತಿಸಿದ ಕಾರಣ ನಿರಾಕರಿಸಿದರು. ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಇಲ್ಲ. ಆದರೆ, ಚಿಕ್ಕಮಗಳೂರು ಭಾಗದಲ್ಲಿ ಶಕ್ತಿ ಇದೆ. ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಕರಾವಳಿ ಭಾಗದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆವು.

*ಎತ್ತಿನಹೊಳೆ ಯೋಜನೆ ಹಣದ ಹೊಳೆಯ ಯೋಜನೆ ಎಂದು ಹೇಳಿದ್ದೀರಿ. ಈಗಲೂ ಅದೇ ಹೇಳಿಕೆಗೆ ಬದ್ಧರಾಗಿದ್ದೀರಾ?

ಎತ್ತಿನಹೊಳೆ ಯೋಜನೆ ಬಗ್ಗೆ ಈ ಹಿಂದೆ ಹೇಳಿದ್ದು ನಿಜ. ಈಗ ಚರ್ಚೆ ಮಾಡಲು ಹೊರಟರೆ ನಾನಾ ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಒಟ್ಟಾರೆಯಾಗಿ, ಬಯಲುಸೀಮೆ ಭಾಗದ ಜನರಿಗೆ ನೀರು ಕೊಡಬೇಕಿದೆ. ಆದರೆ, ಕೆಲವು ಯೋಜನೆಗಳ ಹೆಸರಿನಲ್ಲಿ ಹಣ ಹೊಳೆ ಹರಿಯುತ್ತಿರುವುದು ನಿಜ. ಅದನ್ನು ತಡೆಯುವ ಯತ್ನ ಮಾಡುವೆ.

* ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿಸುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಇದೆಯಂಥಲ್ಲ?

ರಾಜಕಾರಣದಲ್ಲಿ ನಾವು ಯಾವಾಗಲೂ ಆಶಾಭಾವದಿಂದ ಹೋಗಬೇಕು. ವಿಶ್ಲೇಷಣೆಗಳು ವಾಸ್ತವವಾಗಿ ಕಲ್ಪನೆಯಿಂದ ರೂಪುಗೊಂಡಿರುತ್ತವೆ. ಆದರೆ, ನಾನು ಹೇಳುತ್ತೇನೆ, ಲೋಕಸಭೆ ಚುನಾವಣೆ ಬಳಿಕವೂ ಸರ್ಕಾರ ಸುಭದ್ರವಾಗಿಯೇ ಇರಲಿದೆ. ಸರ್ಕಾರ ಈಗ ಬಿತ್ತು, ಇನ್ನೊಂದು ಕ್ಷಣದಲ್ಲಿ ಬಿತ್ತು ಎಂದು ಹೇಳುತ್ತಲೇ ಬಂದಿದ್ದರು. ನಾನು ಬಜೆಟ್‌ ಮಂಡಿಸುವವರೆಗೆ ಅಧಿಕಾರದಲ್ಲಿ ಇರಲ್ಲ ಎಂದಿದ್ದರು. ಆದರೆ, ಮುಂದೆ ಏನಾಯಿತು? ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಅಂತ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ ಅವರ ಎದುರೇ ಲಿಖಿತ ಪತ್ರ ನೀಡಿದ್ದಾರೆ. ನನ್ನ ಸರ್ಕಾರ ಐದು ವರ್ಷ ಪೂರೈಸಲಿದೆ.

* ಆಡಿಯೊಗೇಟ್‌ ತನಿಖೆಗೆ ಏಕೆ ನಿರಾಸಕ್ತಿ ತೋರುತ್ತಿದ್ದೀರಿ?

ಸಭಾಧ್ಯಕ್ಷ ರಮೇಶಕುಮಾರ್‌ ಅವರ ಹೆಸರೂ ಆಡಿಯೊದಲ್ಲಿ ಕೇಳಿಬಂದಿದ್ದರಿಂದ ಸಂಶಯ ನಿವಾರಣೆಗೆ 15 ದಿನಗಳಲ್ಲೇ ತನಿಖೆ ಮಾಡಿಸಬೇಕು ಎಂದು ಅವರು ಸೂಚಿಸಿದ್ದು ನಿಜ. ನಾನು ಎಸ್‌ಐಟಿ ರಚನೆ ಮಾಡಿ, ಅದರಿಂದ ತನಿಖೆ ವೇಗ ಪಡೆದಿದ್ದರೆ ಬಿಜೆಪಿಯವರು ರಾಜಕೀಯ ಕಥೆ ಕಟ್ಟುತ್ತಿದ್ದರು.

ಯಡಿಯೂರಪ್ಪ ಅವರು ವೀರಶೈವರ ಬೆಂಬಲ ಕಟ್ಟಿಕೊಂಡು ಆ ಸಮುದಾಯದ ನಾಯಕನನ್ನು ದ್ವೇಷ ಸಾಧಿಸುವುದಕ್ಕಾಗಿ ಮುಗಿಸಲು ಹೊರಟಿದ್ದಾರೆ ಎನ್ನುತ್ತಿದ್ದರು. ವೀರಶೈವ ಸಮುದಾಯವನ್ನು ನಾನೇಕೆ ವಿನಾಕಾರಣ ಎದುರು ಹಾಕಿಕೊಳ್ಳಲಿ. ಪ್ರಕರಣದ ಸಾಕ್ಷ್ಯಗಳನ್ನು ಯಾರೂ ಹಾಳುಮಾಡಲು ಆಗುವುದಿಲ್ಲ. ತನಿಖೆ ಅದರ ಪಾಡಿಗೆ ಅದು ನಡೆಯುತ್ತದೆ. ಆತುರಾತುರವಾಗಿ ಹೋಗುವುದು ಬೇಡ ಎಂದು ತೀರ್ಮಾನಿಸಿದ್ದೇನೆ. ಸದ್ಯ ಚುನಾವಣೆ ಕಡೆಗೆ ಗಮನಹರಿಸಿದ್ದೇನೆ.

* ಪತ್ರಿಕೆಗಳಲ್ಲಿ ಮಂಡ್ಯದ ಸುದ್ದಿಯಿಲ್ಲದ ದಿನವೇ ಇಲ್ಲವಲ್ಲ?

ಕೆಲವು ನಾಯಕರು, ವ್ಯಕ್ತಿಗಳು ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮಂದಿ ಎಲ್ಲ ಸೇರಿಕೊಂಡು ಮಂಡ್ಯದಲ್ಲಿ ಮಾತ್ರ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂಬಂತೆ ವೈಭವೀಕರಿಸುತ್ತಿದ್ದಾರೆ. ಏಕೆ ಈ ರೀತಿ ಆಗುತ್ತಿದೆಯೋ ಗೊತ್ತಿಲ್ಲ. ಆದರೆ, ಅಲ್ಲಿನ ವಸ್ತುಸ್ಥಿತಿ ಬೇರೆಯೇ ಇದೆ. ಫಲಿತಾಂಶ ಏನು ಬರಲಿದೆ ಎನ್ನುವುದೂ ಗೊತ್ತಿದೆ.

* ನಿಖಿಲ್‌ಗೆ ಟಿಕೆಟ್‌ ನೀಡಿದ್ದರಿಂದ ಮಂಡ್ಯದ ಉಳಿದ ಮುಖಂಡರಿಗೆ ವಂಚನೆ ಮಾಡಿದಂತೆ ಆಗಲಿಲ್ಲವೇ?

ಯಾರಿಗೂ ವಂಚನೆ ಮಾಡಿಲ್ಲ. ಉಪಚುನಾವಣೆ ಸಂದರ್ಭದಲ್ಲೂ ನಿಖಿಲ್‌ನನ್ನೇ ನಿಲ್ಲಿಸಲು ಹಟ ಮಾಡಿದ್ದರು. ಆಗ ನಾನೇ ತಡೆದಿದ್ದೆ. ಈಗಲೂ ಆತನನ್ನು ನಿಲ್ಲಿಸುತ್ತಿರಲಿಲ್ಲ. ಮಂಡ್ಯದ ಎಲ್ಲ ಎಂಟೂ ಶಾಸಕರ ಒತ್ತಡ ಇತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿದ್ದ ನಿಖಿಲ್‌ ಮೇಲೆ ಅವರಿಗೆಲ್ಲ ಮಮಕಾರ ಇದೆ. ಶಿವರಾಮೇಗೌಡರು ಸಹ ನಿಖಿಲ್‌ ಸ್ಪರ್ಧಿಸಬೇಕು ಎಂದರು. ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮಂಡ್ಯ, ಮೈಸೂರು ಅಂತ ವದಂತಿ ಹಬ್ಬಿಸಿ ನಮ್ಮನ್ನು ಚುನಾವಣೆಗೆ ಎಳೆತಂದವು. ಚುನಾವಣೆಗೆ ನಿಲ್ಲಲು ನಾವು ಹೆದರುವುದಿಲ್ಲ. ಹೆದರಿ ಓಡಿ ಹೋಗುವುದಿಲ್ಲ. ಹಿಂದೆ ಮಧುಗಿರಿಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಯೇ ಇರಲಿಲ್ಲ. ಪಕ್ಷ ಉಳಿಸಲು ನನ್ನ ಹೆಂಡ್ತಿಯನ್ನು ತಗೊಂಡು ಹೋಗಿ ತಲೆ ಕೊಟ್ಟಿದ್ದೆ.

* ನಿಮ್ಮ ವಿರುದ್ಧ ಸ್ಪರ್ಧೆಗೆ ನಿಂತ ಮಹಿಳೆಯನ್ನು ಅಪಮಾನಿಸುವುದು ತರವೇ?

ಶ್ರೀಕಂಠೇಗೌಡರೋ ಯಾರೋ, ಸುಮಲತಾ ಅವರು ಗೌಡ್ತಿಯಲ್ಲ, ನಾಯ್ಡು ಅಂದರೋ ಆಂಧ್ರದವರು ಅಂದರೋ ಗೊತ್ತಿಲ್ಲ. ಅದೇನು ಅವಮಾನ ಮಾಡಿದ ಹಾಗಲ್ಲ. ಆದರೆ, ರೇವಣ್ಣನಿಗೆ ಎಲೆಕ್ಟ್ರಾನಿಕ್‌ ಮಾಧ್ಯಮದವರೇ ‘ಸುಮಲತಾ ಅವರಿಗೆ ಗಂಡ ಸತ್ತು ಇಷ್ಟು ಬೇಗ ರಾಜಕೀಯ ಬೇಕಿತ್ತೇ’ ಎಂಬ ಪ್ರಶ್ನೆ ಕೇಳಿದರು. ತಾನು ಟ್ರ್ಯಾಪ್‌ ಆಗ್ತಾ ಇದ್ದೀನಿ ಎನ್ನುವುದು ಗೊತ್ತಾಗದೆ ರೇವಣ್ಣ ಪ್ರತಿಕ್ರಿಯಿಸಿದ. ನಮ್ಮ ಸಂಸ್ಕೃತಿಯ ವಿಷಯವನ್ನು ಆತ ಹೇಳಿದರೆ ಅದನ್ನು ಬೇರೆ ರೀತಿ ತಿರುಚಲಾಯಿತು. ನಮ್ಮ ಕುಟುಂಬ ಎಂದಿಗೂ ಮಹಿಳೆಯರನ್ನು ಅಗೌರವದಿಂದ ನೋಡುವುದಿಲ್ಲ. ರೇವಣ್ಣನಾಡಿದ ಮಾತಿಗೆ ಈಗಾಗಲೇ ಕ್ಷಮೆ ಕೇಳಿದ್ದೇನೆ.

* ಕುಟುಂಬದಲ್ಲಿ ನಡೆದ ಶೀತಲ ಸಮರದಿಂದ ಮಂಡ್ಯಕ್ಕೆ ನಿಖಿಲ್‌, ಹಾಸನಕ್ಕೆ ಪ್ರಜ್ವಲ್‌ ಅಭ್ಯರ್ಥಿಯಾಗುವಂತೆ ಆಯಿತೇ?

ಯಾವುದೇ ಶೀತಲ ಸಮರ ನಮ್ಮ ಕುಟುಂಬದಲ್ಲಿಲ್ಲ. ಭಿನ್ನಾಭಿಪ್ರಾಯವೂ ಬರುವುದಿಲ್ಲ

* ಕುಮಾರಸ್ವಾಮಿ, ರೇವಣ್ಣ ಇಬ್ಬರೂ ಪುತ್ರರ ರಾಜಕೀಯ ಭವಿಷ್ಯಕ್ಕಾಗಿ ದೇವೇಗೌಡರನ್ನೇ ಏಕಾಂಗಿ ಮಾಡಿದರು ಎಂಬ ಅಭಿಪ್ರಾಯವಿದೆಯಲ್ಲ?

ಪ್ರಜ್ವಲ್‌ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ನಿರ್ಧರಿಸಿದ್ದು ದೇವೇಗೌಡರೇ. ಮೂರು ವರ್ಷದ ಹಿಂದೆಯೇ ಈ ತೀರ್ಮಾನವನ್ನು ಪ್ರಕಟಿಸಿದ್ದರು. ರೇವಣ್ಣ ಮತ್ತು ಪ್ರಜ್ವಲ್‌ ಹಾಸನದಿಂದ ನೀವೇ ಸ್ಪರ್ಧಿಸಬೇಕು ಎಂದು ದೇವೇಗೌಡರನ್ನು ಕೇಳಿಕೊಂಡಿದ್ದರು. ಈಗಾಗಲೇ ಪ್ರಜ್ವಲ್‌ ಹೆಸರು ಘೋಷಣೆ ಮಾಡಿದ್ದೇನೆ. ಮತ್ತೆ ಅಲ್ಲಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂಬ ನಿಲುವನ್ನು ಅವರು ತಳೆದಿದ್ದರು. ದೆಹಲಿಯಲ್ಲಿರುವ ದೇವೇಗೌಡರ ಸ್ನೇಹಿತರು ಪ್ರಸಕ್ತ ಸನ್ನಿವೇಶದಲ್ಲಿ ನಿಮ್ಮ ಅನಿವಾರ್ಯತೆ ಇದ್ದು, ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕೋರಿದರು. ಹೀಗಾಗಿ ಅವರು ತುಮಕೂರಿನಿಂದ ಸ್ಪರ್ಧಿಸಿದ್ದಾರೆ.

* ನಿಖಿಲ್‌, ಪ್ರಜ್ವಲ್‌ ಇವರಲ್ಲಿ ಪಕ್ಷದ ಉತ್ತರಾಧಿಕಾರಿ ಯಾರು?

ನಾಡಿನ ಜನತೆ ಅದನ್ನು ತೀರ್ಮಾನಿಸುತ್ತಾರೆ.

*ದಲಿತನನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಚುನಾವಣೆಗೆ ಮುಂಚಿತವಾಗಿ ಹೇಳಿದ್ದೀರಿ. ಸಿದ್ದರಾಮಯ್ಯ ಅವರನ್ನು ನಕಲಿ ಸಮಾಜವಾದಿ ಎಂದು ಟೀಕೆ ಮಾಡಿದ್ದೀರಿ. ಅವರು ಧರಿಸಿರುವ ಬಟ್ಟೆ, ಗಡಿಯಾರಗಳನ್ನು ಉಲ್ಲೇಖಿಸಿ ಅವರ ತನಿಖೆಯಾಗಬೇಕು ಎಂದು ಹೇಳಿದ್ದೀರಿ. ಅವೆಲ್ಲ ಏನಾಯಿತು?

ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬಂದರೆ ಅಲ್ಪಸಂಖ್ಯಾತರನ್ನು ಹಾಗೂ ದಲಿತ ಸಮುದಾಯಕ್ಕೆ ಸೇರಿದವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದೆ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ, ಈಗ ಅದು ನನ್ನ ಕೈಯಲ್ಲಿ ಇಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಸಭೆಯೊಂದರಲ್ಲಿ ಉಲ್ಲೇಖ ಮಾಡಿದ್ದೆ. ಸಮಾಜವಾದಿ ಅಲ್ಲ, ಮಜಾವಾದಿ ಎಂದು ಹೇಳಿದ್ದೆ. ಅವರ ವಿರುದ್ಧ ತನಿಖೆ ಮಾಡುತ್ತೇನೆ ಎಂದಿಲ್ಲ.

*ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಸಾಕಷ್ಟು ಶಕ್ತಿ ತುಂಬಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಮಂತ್ರಿ ಸ್ಥಾನ ಕೊಡದಿರಲು ಕಾರಣವೇನು?

ಅವರನ್ನು ಸಭಾಪತಿ ಮಾಡಬೇಕು ಎಂದು ಪ್ರಯತ್ನಿಸಿದೆವು. ಅದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ಉತ್ತರ ಕರ್ನಾಟಕ ಭಾಗದಿಂದ ಇಬ್ಬರನ್ನು ಸಚಿವರನ್ನಾಗಿ ಮಾಡಿದ್ದೇವೆ. ಕೆಲವು ರಾಜಕೀಯ ಕಾರಣಗಳಿಂದ ಹೊರಟ್ಟಿ ಅವರಿಗೆ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ನೀಡುತ್ತೇವೆ.

*ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ಸಿದ್ದರಾಮಯ್ಯ ಸೂತ್ರಧಾರಿ ಎಂಬ ಮಾತು ಪ್ರಚಲಿತದಲ್ಲಿದೆಯಲ್ಲ?

ಸಿದ್ದರಾಮಯ್ಯ ಅವರು ನಮ್ಮೆಲ್ಲರಿಗಿಂತ ಹಿರಿಯರು ಇದ್ದಾರೆ. ಅನುಭವಿಗಳಿದ್ದಾರೆ. ಅವರ ಅನುಭವವನ್ನು ತೆಗೆದುಕೊಳ್ಳಬೇಕಿದೆ. ಇಲ್ಲಿ ಸೂಪರ್‌ ಯಾರು ಎಂಬ ಪ್ರಶ್ನೆ ಅಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ ಉತ್ತಮ ಸರ್ಕಾರ ಕೊಡುತ್ತೇವೆ.

* ಅಮಿತ್‌ ಶಾ ಅವರ ಆಮಂತ್ರಣದಂತೆ ನೀವು ಬಿಜೆಪಿ ಜತೆ ಕೈಜೋಡಿಸದಿರುವುದೇ ಐ.ಟಿ ದಾಳಿಗೆ ಕಾರಣ ಎಂದು ದೇವೇಗೌಡರು ಹೇಳಿದ್ದಾರೆ. ಏನಿದರ ಹಿಂದಿನ ಮರ್ಮ?

ಕೆಲವು ವಿಷಯಗಳನ್ನು ಈಗ ಹೇಳಿಕೊಳ್ಳಲು ಆಗುವುದಿಲ್ಲ. ಅಕ್ರಮ ಹಣ ಸಂಪಾದನೆ ಮಾಡಿದವರ ಮೇಲೆ ದಾಳಿ ಮಾಡಿದರೆ ಯಾರೂ ಪ್ರಶ್ನೆ ಮಾಡಲ್ಲ. ಆದರೆ, ದಾಳಿಗೆ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ? 68 ಕಡೆ ಒಂದೇ ದಿನ ಯಾವ ಕಾರಣಕ್ಕೆ ದಾಳಿಗೆ ಹೋದರು? ದೇವೇಗೌಡರ ಕುಟುಂಬ ಮುಗಿಸಬೇಕು ಅಂತ ಅಲ್ಲವೇ? ನಾನು ಮೊದಲೇ ಹೇಳಿಕೆ ಕೊಡದಿದ್ದರೆ ನಮ್ಮ ಸಚಿವರು, ಶಾಸಕರ ಮನೆಯ ಮೇಲೂ ದಾಳಿ ಮಾಡುತ್ತಿದ್ದರು. ಹೋಗಲಿ, ದಾಳಿ ನಡೆಸಿದಾಗ ಅವರಿಗೆ ಸಿಕ್ಕಿದ್ದೇನು? ಇಲ್ಲಿಂದ ಬಿಜೆಪಿ ನಾಯಕರು ಕಳಿಸುವ ಪಟ್ಟಿಯನ್ನು ಅಮಿತ್‌ ಶಾ ಐ.ಟಿ ಇಲಾಖೆಗೆ ಕಳುಹಿಸುತ್ತಾರೆ. ಅವರು ದಾಳಿ ಮಾಡುತ್ತಾರೆ.

* ದಾಳಿಗೆ ಒಳಗಾದ ಗುತ್ತಿಗೆದಾರ ನಿಮ್ಮ ಕುಟುಂಬದವರ ಆಪ್ತರೇ?

ಯಾವ ಗುತ್ತಿಗೆದಾರನೂ ನನಗೆ ಆಪ್ತನಲ್ಲ. ಯಾರ ಹತ್ತಿರವೂ ನಾನು ಕಮಿಷನ್‌ ಕೇಳಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಏಜೆಂಟ್‌ಗಳು ಓಡಾಡುತ್ತಾರೆ ಎಂದು ಮುಖ್ಯಮಂತ್ರಿಯಾಗಿಯೇ ಹೇಳಿದ್ದೇನೆ. ಅವರನ್ನು ಮಟ್ಟ ಹಾಕಲು ಸಿಸಿಬಿಗೆ ಸೂಚಿಸಿದ್ದೇನೆ. ಲೋಕಾಯುಕ್ತ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆನ್ನುವುದು ನನ್ನ ಅಪೇಕ್ಷೆ. ಅದಕ್ಕೆ ಬೇಕಾದ ಅಧಿಕಾರ ಕೊಡಲು ಸಿದ್ಧನಿದ್ದೇನೆ.

* ಎನ್‌ಡಿಎ ಅಧಿಕಾರಕ್ಕೆ ಬರುತ್ತದೆಯೇ? ಮೋದಿ ಮತ್ತೆ ಪ್ರಧಾನಿ ಆಗುವರೇ?

ಬಿಜೆಪಿ 240 ಸ್ಥಾನ ಗಳಿಸಿದರೂ ಮಿಕ್ಕ ಸಂಖ್ಯಾಬಲ ನೀಡಲು ಸಣ್ಣ ಪಕ್ಷಗಳು ಸಿದ್ಧವಿಲ್ಲ. ಎನ್‌ಡಿಎ ಖಂಡಿತವಾಗಿಯೂ ಅಧಿಕಾರಕ್ಕೆ ಬರುವುದಿಲ್ಲ. ಅವರ ಪಕ್ಷದವರಿಗೇ ಈಗ ಮರಳಿ ಅಧಿಕಾರ ಗಿಟ್ಟಿಸುವ ವಿಶ್ವಾಸವಿಲ್ಲ. ಮೋದಿ ಅವರು ಮತ್ತೆ ಪ್ರಧಾನಿ ಆಗುವುದಿಲ್ಲ.

* ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೀರಾ?

ನಮ್ಮದು ಮೈತ್ರಿ ಸರ್ಕಾರ. ಸಮನ್ವಯ ಸಮಿತಿ ಒಪ್ಪಿದರೆ ವರದಿ ಜಾರಿಗೆ ನನ್ನ ಅಭ್ಯಂತರ ಇಲ್ಲ.

* ಎಲಿವೇಟೆಡ್‌ ಕಾರಿಡಾರ್‌ ಚುನಾವಣಾ ನಿಧಿಗಾಗಿ ಹಾಕಿಕೊಂಡ ಯೋಜನೆಯೇ?

ಮೆಟ್ರೊ ಯೋಜನೆ ಬಂತಲ್ಲ, ಹೇಗೆ ಮಾಡಿದೆವು? ಅದೂ ಎಲಿವೇಟೆಡ್‌ ಅಲ್ಲವೇ? ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗಿಲ್ಲವೇ? ಮೆಟ್ರೊ ಯೋಜನೆ ಸಂದರ್ಭದಲ್ಲಿ ಟನಲ್‌ ಪ್ರಸ್ತಾಪವೂ ಬಂತು. ಒಪ್ಪಿದ್ದರೆ ಅನುಷ್ಠಾನ ಇನ್ನೂ 20 ವರ್ಷ ವಿಳಂಬ ಆಗುತ್ತಿತ್ತು. ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಕುರಿತುಮುಕ್ತವಾಗಿ ಚರ್ಚಿಸಲು ಸಿದ್ಧ. ನನಗೆ ಬೇಕಾಗಿರುವುದು ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರವಷ್ಟೇ.

ಅಂಬಿ ಚಿತೆಯ ಬೆಂಕಿ ಆರುವ ಮುನ್ನವೇ ಷಡ್ಯಂತ್ರ’

‘ನಿಖಿಲ್‌ ಪರ ಪ್ರಚಾರಕ್ಕೆ ನಿಮ್ಮ ಹಳೆಯ ಸ್ನೇಹಿತರು ಬರುವುದಿಲ್ಲವಂತೆ’ ಎಂಬ ಪ್ರಶ್ನೆ ಎದುರಾಗಿದ್ದೇ ತಡ ಕುಮಾರಸ್ವಾಮಿ ಗಡುಸಾದರು. ‘ಅಂಬರೀಷ್‌ ಅವರ ಚಿತೆಯ ಬೆಂಕಿ ಇನ್ನೂ ಆರಿರಲಿಲ್ಲ. ಅವರು ಏನೇನು ಷಡ್ಯಂತ್ರ ಮಾಡಿದರು ಗೊತ್ತಿಲ್ಲವೇ? ಅಂಥವರನ್ನು ಕಟ್ಟಿಕೊಂಡು ನಾನೇನು ಮಾಡಲಿ’ ಎಂದು ಖಾರವಾಗಿಯೇ ಉತ್ತರಿಸಿದರು.

ಮಂಡ್ಯದ ರೈತರು ಪ್ರಾಣ ಕಳೆದುಕೊಂಡಾಗ ಅವರ ಪತ್ನಿಯರಿಗೆ ನಾನು ಸಹಾಯ ಮಾಡಿದರೆ, ‘ದುಡ್ಡು ಕೊಡ್ತಾರೆ, ಮಜಾ ಮಾಡಿ’ ಅಂತ ಅವರು (ಸುಮಲತಾ) ಹೇಳುತ್ತಾರೆ. ನಾನೇನು ಅವರ ನೋವು ನೋಡಿ ಸಹಾಯ ಮಾಡಿದೆನೋ, ಗಂಡಂದಿರು ಸತ್ತರೆಂದು ಮಜಾ ಮಾಡಲು ದುಡ್ಡು ಕೊಟ್ಟೆನೋ? ಅವರ ಮಾತು, ಅವರ ಸಂಸ್ಕೃತಿಯನ್ನುಹೇಳುತ್ತದೆ. ನಿರ್ಮಾಪಕ ದುಡ್ಡು ಸುರಿಯುತ್ತಾನೆ, ಉಳಿದವರು ಮಜಾ ಮಾಡುತ್ತಾರೆ. ಚಿತ್ರ ಸೋತಾಗ ಸಾಯುವವನು ನಿರ್ಮಾಪಕ ಮಾತ್ರ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT