ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Prajavani @75 | ಪ್ರಜಾವಾಣಿ ಕನ್ನಡನಾಡಿನ ಕ್ರೀಡಾ ಕಲ್ಪವೃಕ್ಷ

Last Updated 27 ಫೆಬ್ರವರಿ 2023, 0:00 IST
ಅಕ್ಷರ ಗಾತ್ರ

ಪ್ರಜಾವಾಣಿ ಪತ್ರಿಕಾ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದೆ. ಕರ್ನಾಟಕ ಏಕೀಕರಣದ ನಂತರ ಹಾಗೂ ಅದಕ್ಕೂ ಮುನ್ನ ನಾಡಿನ ಬಹಳಷ್ಟು ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ ಶ್ರೇಯ ಈ ಸಂಸ್ಥೆಯದ್ದು. ಅದರಲ್ಲೂ ಕ್ರೀಡಾರಂಗಕ್ಕೆ ನೀಡಿದ ಕೊಡುಗೆಗಳು ಅನನ್ಯವಾಗಿವೆ.

ಕನ್ನಡ ಭಾಷೆಯಲ್ಲಿ ಕ್ರೀಡಾ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿ ಭವ್ಯ ಸೌಧ ನಿರ್ಮಿಸಿದ ಶ್ರೇಯವೂ ‘ಪ್ರಜಾವಾಣಿ’ಗೆ ಸಲ್ಲಬೇಕು. ಪ್ರಜಾವಾಣಿಯಲ್ಲಿ 50ರ ದಶಕದಿಂದಲೇ ಕ್ರೀಡಾ ಚಟುವಟಿಕೆಗಳ ಸುದ್ದಿಗಳ ಪ್ರಕಟಣೆಗೆ ಆದ್ಯತೆ ನೀಡಲಾಗಿದೆ. 1960ರ ದಶಕದಲ್ಲಿ ಕ್ರೀಡೆಗಾಗಿಯೇ ಒಂದು ಪುಟ ಆರಂಭಿಸಿದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಪ್ರಜಾವಾಣಿಗೆ ಸಲ್ಲುತ್ತದೆ.

ಇದಲ್ಲದೇ ವಿವಿಧ ಕ್ರೀಡೆಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಳು ಕಲ್ಪವೃಕ್ಷಗಳಾಗಿವೆ. ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಂಸ್ಥಾಪಕರಾದ ಕೆ.ಎನ್. ಗುರುಸ್ವಾಮಿ ಹಾಗೂ ಕಾರ್ಯನಿರ್ವಾಹಕ ವ್ಯವಸ್ಥಾಪಕರಾಗಿದ್ದ ಕೆ.ಎ. ನೆಟ್ಟಕಲ್ಲಪ್ಪ ಅವರ ಕ್ರೀಡಾಪ್ರೇಮ ಅಪಾರವಾದದ್ದು. ಕ್ರೀಡೆಗಳ ಆಯೋಜನೆ, ಕ್ರೀಡಾ ಸಂಸ್ಥೆಗಳ ಸ್ಥಾಪನೆ ಹಾಗೂ ಬೆಳವಣಿಗೆ, ಕ್ರೀಡಾಪ್ರತಿಭೆಗಳ ಪೋಷಣೆಗೆ ಅವರು ತೋರಿದ ಆಸಕ್ತಿಯು ನಾಡಿನ ಆಸ್ತಿಯಾಗಿ ಉಳಿದಿವೆ. ಹತ್ತು ಹಲವು ಪ್ರಥಮಗಳ ದಾಖಲೆಗಳೂ ಇದರಲ್ಲಿ ಸೇರಿವೆ.

ಒಲಿಂಪಿಕ್ ಆಂದೋಲನಕ್ಕೆ ಅಡಿಪಾಯ

ಮನುಕುಲದ ಸೌಹಾರ್ದದ ಪ್ರತೀಕ ಒಲಿಂಪಿಕ್ ಕೂಟ. ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಕ್ರೀಡಾಕೂಟ. ಇಂತಹದೊಂದು ಆಂದೋಲನಕ್ಕೆ ಕರ್ನಾಟಕದ ಪಾಲೂ ದೊಡ್ಡದು. ಅದಕ್ಕೆ ಕಾರಣಕರ್ತರಲ್ಲಿ ಕೆ.ಎ. ನೆಟ್ಟಕಲ್ಲಪ್ಪನವರು ಪ್ರಮುಖರು.

ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಹುಟ್ಟು ಪಡೆದಿದ್ದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪ್ರಜಾವಾಣಿ ಕಚೇರಿಯಲ್ಲಿ.

1960ರ ದಶಕದಲ್ಲಿ ಕ್ರೀಡಾ ಪ್ರೋತ್ಸಾಹಕರಾಗಿ ಅಪಾರ ಜನಮನ್ನಣೆ ಪಡೆದಿದ್ದ ನೆಟ್ಟಕಲ್ಲಪ್ಪ ಅವರನ್ನು ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಮಹಾರಾಜ ಯದವೇಂದ್ರ ಸಿಂಗ್‌ ಅವರು ಸಂಪರ್ಕಿಸಿ ಅಧಿಕೃತವಾಗಿ ಒಲಿಂಪಿಕ್ ಸಂಸ್ಥೆಯನ್ನು ಸ್ಥಾಪಿಸಲು ಸಲಹೆ ನೀಡಿದರು.

1958ರ ಫೆಬ್ರುವರಿ 23ರಂದು ಸಭೆ ನಡೆಯಿತು. ಅದರಲ್ಲಿ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಪಿ.ಐ.ಜೋಸೆಫ್‌, ವಾಲಿಬಾಲ್‌ ಸಂಸ್ಥೆಯ ಆರ್‌.ಕೃಷ್ಣಪ್ಪ, ಕೊಕ್ಕೊ ಸಂಸ್ಥೆಯ ಜಯರಾಮ ರೆಡ್ಡಿ, ಕಬಡ್ಡಿ ಸಂಸ್ಥೆಯ ಸಿ.ಎಂ.ರಾಮಕೃಷ್ಣ ರಾವ್‌, ವೇಟ್‌ಲಿಫ್ಟಿಂಗ್‌ ಸಂಸ್ಥೆಯ ಪಿ.ಎಂ.ನಾರಾಯಣ ಸ್ವಾಮಿ, ಅಥ್ಲೆಟಿಕ್‌ ಸಂಸ್ಥೆಯ ಎ.ಆರ್‌.ಚಿಕ್ಕಪಾಪಯ್ಯ, ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಎನ್‌.ಗಂಗಯ್ಯ, ಕುಸ್ತಿ ಸಂಸ್ಥೆಯ ಎಂ.ವಿ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ಆ ಸಭೆಯಲ್ಲಿಯೇ ಮೈಸೂರು ರಾಜ್ಯ ಒಲಿಂಪಿಕ್‌ ಸಂಸ್ಥೆ ಹುಟ್ಟು ಪಡೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್‌. ಶ್ರೀನಿವಾಸನ್‌ ಅಧ್ಯಕ್ಷ ರಾಗಿಯೂ, ಮೇಯರ್‌ ಜೀನಾಬಾಯ್‌ ದೇವಿದಾಸ್‌ ಉಪಾಧ್ಯಕ್ಷರಾಗಿಯೂ, ಚಿಕ್ಕಪಾಪಯ್ಯ ಮಹಾ ಕಾರ್ಯದರ್ಶಿಯಾಗಿಯೂ, ವಿ.ಬೈರಪ್ಪ ಖಜಾಂಚಿ ಯಾಗಿಯೂ ನೇಮಕಗೊಂಡರು. ಮೈಸೂರು ಪ್ರಾಂತ್ಯದ ಕೊನೆಯ ಮಹಾರಾಜರೂ, ಆ ಕಾಲದಲ್ಲಿ ಮೈಸೂರು ರಾಜ್ಯದ ರಾಜ್ಯಪಾಲರೂ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರು ಈ ಸಂಸ್ಥೆಗೆ ಮಹಾಪೋಷಕರಾಗಿರಲು ಒಪ್ಪಿಕೊಂಡರು.

ಅದೇ ಸಂದರ್ಭದಲ್ಲಿ ರಾಜ್ಯ ಒಲಿಂಪಿಕ್‌ ಸಂಸ್ಥೆಯ ನೀತಿ ನಿಯಮಾವಳಿ ರಚನಾ ಸಮಿತಿಯಲ್ಲಿದ್ದ ನೆಟ್ಟಕಲ್ಲಪ್ಪ, ಪಿ.ಶಿವಶಂಕರ್‌, ಕ್ಯಾಪ್ಟನ್‌ ಎಂ.ಜಿ.ವಿಜಯಸಾರಥಿ ಮತ್ತು ಪಿ.ಐ.ಜೋಸೆಫ್‌ ರಾಜ್ಯದಲ್ಲಿ ಈ ಸಂಘಟನೆಗೆ ಭದ್ರ ಅಡಿಪಾಯ ಹಾಕಿದರು. ನೆಟ್ಟಕಲ್ಲಪ್ಪನವರು ‘ಪ್ರಜಾವಾಣಿ’ಯ ಕಟ್ಟಡದಲ್ಲೇ ನೂತನ ಒಲಿಂಪಿಕ್‌ ಸಂಸ್ಥೆಯ ಕಚೇರಿಗಾಗಿ ಒಂದು ಕೊಠಡಿಯನ್ನು ನೀಡಿದರು.

ರಾಜ್ಯ ಒಲಿಂಪಿಕ್‌ ಸಂಸ್ಥೆ ಬಹುಕಾಲ ‘ಪ್ರಜಾವಾಣಿ’ಯ ಕಟ್ಟಡದಲ್ಲೇ ತನ್ನ ಚಟುವಟಿಕೆಗಳನ್ನು ನಡೆಸಿತು. ನಂತರ ಅದರ ಕಚೇರಿ ಮೇಯೊಹಾಲ್‌ನಲ್ಲಿ, ಹಲಸೂರಿನಲ್ಲಿದ್ದ ಜೀನಾಬಾಯ್‌ ದೇವಿದಾಸ್‌ ಅವರ ಮಾಲೀಕತ್ವದ ಕಟ್ಟಡದಲ್ಲಿ ಕೆಲಕಾಲ ಇತ್ತು. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕಂಠೀರವ ಕ್ರೀಡಾಂಗಣದಲ್ಲಿ ಕೆಒಎ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಒಲಿಂಪಿಕ್ ಭವನ ಕೂಡ ನಿರ್ಮಾಣಗೊಂಡಿತು.

ನೆಟ್ಟಕಲ್ಲಪ್ಪ ಅವರು ರಾಜ್ಯ ಒಲಿಂಪಿಕ್‌ ಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದರಲ್ಲದೆ, ಭಾರತ ಒಲಿಂಪಿಕ್‌ ಸಂಸ್ಥೆಯ ಉಪಾಧ್ಯಕ್ಷರೂ ಆಗಿದ್ದರು. ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ, ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ, ರಾಜ್ಯ ಮೌಂಟನೇರಿಂಗ್‌ ಸಂಸ್ಥೆಗಳಿಗೆ ಅಧ್ಯಕ್ಷರಾಗಿದ್ದರಲ್ಲದೆ, ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಡೆಕ್ಕನ್‌ ಅಥ್ಲೆಟಿಕ್ ಕ್ಲಬ್‌ನ ಅಧ್ಯಕ್ಷರಾಗಿದ್ದರು.

ಇದಲ್ಲದೆ ಹಣಕಾಸಿನ ತೊಂದರೆಯಲ್ಲಿ ಸಿಲುಕಿದ್ದ ಇತರ ಕ್ರೀಡಾ ಸಂಸ್ಥೆಗಳಿಗೂ ಅವರು ನೆರವಿನಹಸ್ತ ಚಾಚಿದ್ದಕ್ಕೆ ಹಲವಾರು ನಿದರ್ಶನಗಳಿವೆ

‘ನಾನು ಆಗಿನ್ನೂ ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದೆ. ನೆಟ್ಟಕಲ್ಲಪ್ಪನವರು ನನಗೆ ಹಲವು ಬಾರಿ ಸಹಾಯ ಮಾಡಿದ್ದಾರೆ. ಪ್ರಜಾವಾಣಿ ಕಚೇರಿಗೆ ಬಂದು ಅವರನ್ನು ಭೇಟಿಯಾದಾಗಲೆಲ್ಲ ಸಲಹೆ, ಸಹಾಯಗಳನ್ನು ನೀಡಿ ಬೆನ್ನುತಟ್ಟುತ್ತಿದ್ದರು’ ಎಂದು ಪ್ರಸ್ತುತ ಥ್ರೋಬಾಲ್ ಸಂಸ್ಥೆ ಅಧ್ಯಕ್ಷರಾಗಿರುವ ರಾಮಣ್ಣ ಸ್ಮರಿಸುತ್ತಾರೆ.

ಈಜುಕೇಂದ್ರ: ಬೆಂಗಳೂರಿನಲ್ಲಿ ಕಳೆದ ಹತ್ತುವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೆಟ್ಟಕಲ್ಲಪ್ಪ ಈಜುಕೇಂದ್ರವು ಹಲವು ಅಂತರಾಷ್ಟ್ರೀಯ ಈಜುಪಟುಗಳ ಬೆಳವಣಿಗೆಗೆ ವೇದಿಕೆ ಆಗಿದೆ.

ಡಿಎಸಿ ಸ್ಥಾಪನೆ

ನೆಟ್ಟಕಲ್ಲಪ್ಪನವರ ದೂರದೃಷ್ಟಿ ಮತ್ತು ಕ್ರೀಡಾಪ್ರೇಮದ ಪ್ರತೀಕವಾಗಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ 1972ರಲ್ಲಿ ಆರಂಭವಾಯಿತು. ಒಲಿಂಪಿಯನ್ ಕೆನೆತ್ ಪೋವೆಲ್, ಅಥ್ಲೀಟ್ ಲಿಂಗಪ್ಪ, ಉದಯ ಕೆ ಪ್ರಭು, ಸುನೀಲ್ ಅಬ್ರಹಾಂ, ಡೇವಿಡ್ ಪ್ರೇಮನಾಥ್ ಅವರಂತಹ ಪ್ರಮುಖರು ಈ ಕ್ಲಬ್‌ನಲ್ಲಿದ್ದವರು.

ಕಂಠೀರವ ಕ್ರೀಡಾಂಗಣದಲ್ಲಿ ಪ್ರಮುಖ ಅಥ್ಲೆಟಿಕ್ಸ್‌ ಕೂಟಗಳನ್ನು ಆಯೋಜಿಸಲಾಯಿತು. ಅಲ್ಲದೇ ಶಾಲೆಯ ಮಕ್ಕಳಿಗೆ ವಾರಾಂತ್ಯದ ಅಥ್ಲೆಟಿಕ್ಸ್‌ ಕೂಡ ನಡೆಯುತ್ತಿತ್ತು.

‘ನಾನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವನು. ಆಗ ಬೆಂಗಳೂರಿಗೆ 18 ರೂಪಾಯಿ ಬಸ್‌ ಚಾರ್ಜ್ ಇತ್ತು. 80ರ ದಶಕದಲ್ಲಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ನಡೆಸುತ್ತಿದ್ದ ಕೂಟಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿಂದಲೇ ನಾನು ಬೆಳಕಿಗೆ ಬಂದಿದ್ದು. ಪ್ರತಿ ಬಾರಿ ಕೂಟ ಮುಗಿದ ನಂತರ ನೆಟ್ಟಕಲ್ಲಪ್ಪನವರ ಮನೆಗೆ ಭೇಟಿ ನೀಡುವುದು ನಮ್ಮ ರೂಢಿಯಾಗಿತ್ತು. ಅವರು ನಮ್ಮನ್ನು ಆತ್ಮೀಯವಾಗಿ ಮಾತನಾಡಿಸಿ ಅಗತ್ಯ ಹಣಸಹಾಯ ಮಾಡುತ್ತಿದ್ದರು. ಓಟದ ಕುರಿತು ಮಾರ್ಗದರ್ಶನ ಕೂಡ ನೀಡುತ್ತಿದ್ದರು’ ಎಂದು ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್ ಉದಯ ಕೆ. ಪ್ರಭು ನೆನಪಿಸಿಕೊಳ್ಳುತ್ತಾರೆ.

ಶಟಲ್ ಬ್ಯಾಡ್ಮಿಂಟನ್‌ಗೆ ಬುನಾದಿ

ಪ್ರಸ್ತುತ ಭಾರತದ ಬ್ಯಾಡ್ಮಿಂಟನ್ ಆಟಗಾರರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾರೆ. ಒಲಿಂಪಿಕ್‌ ಕೂಟಗಳಲ್ಲಿಯೂ ಪದಕಗಳನ್ನು ಜಯಿಸಿದ್ದಾರೆ. ಆದರೆ, 1960ರ ದಶಕದಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಬಾಲ್‌ ಬ್ಯಾಡ್ಮಿಂಟನ್ ಮಾತ್ರ ಜನಪ್ರಿಯವಾಗಿತ್ತು. ಶಟಲ್‌ ಬ್ಯಾಡ್ಮಿಂಟನ್ ಅಷ್ಟಾಗಿ ಇರಲಿಲ್ಲ.

ಮೈಸೂರು ಬ್ಯಾಡ್ಮಿಂಟನ್ ಸಂಸ್ಥೆಯನ್ನು ಕೆ.ಎ. ನೆಟ್ಟಕಲ್ಲಪ್ಪನವರು ಹಾಗೂ ರಮೇಶ್ ಪಡುಕೋಣೆ ಆರಂಭಿಸಿದರು. ನೆಟ್ಟಕಲ್ಲಪ್ಪನವರು ಅಧ್ಯಕ್ಷರಾಗಿ ರಾಜ್ಯದ ಪ್ರತಿಭೆಗಳಿಗೆ ಪ್ರೋತ್ಸಾಹದ ಧಾರೆಯನ್ನೇ ಎರೆದರು. ಅವರಲ್ಲಿ ದಿಗ್ಗಜ ಪ್ರಕಾಶ್ ಪಡುಕೋಣೆ ಕೂಡ ಒಬ್ಬರು.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಪ್ರಕಾಶ್ ಪಡುಕೋಣೆ ಅವರು,‘1962ರಲ್ಲಿ ನಾನು ಬ್ಯಾಡ್ಮಿಂಟನ್ ಆಡಲು ಆರಂಭಿಸಿದೆ. ಮದುವೆ ಸಭಾಂಗಣವೊಂದರಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದೆ. ಆಗ ಮೈಸೂರು ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಗೆ ನೆಟ್ಟಕಲ್ಪಪ್ಪನವರು ಅಧ್ಯಕ್ಷರು ಹಾಗೂ ನನ್ನ ತಂದೆ ರಮೇಶ್ ಕಾರ್ಯದರ್ಶಿಯಾಗಿದ್ದರು. ಇವರಿಬ್ಬರೇ ರಾಜ್ಯದಲ್ಲಿ ಬ್ಯಾಡ್ಮಿಂಟನ್ ಸಂಸ್ಥೆ ಆರಂಭಿಸಿದವರು. 19 ವರ್ಷದೊಳಗಿನವರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಲು ಮೊದಲ ಬಾರಿ ಆಯ್ಕೆಯಾಗಿದ್ದೆ. ಆಗ ನನಗೆ 12 ವರ್ಷ. ಚೆನ್ನೈನಲ್ಲಿ ನಡೆದ ಆ ಟೂರ್ನಿಗೆ ಸ್ವಂತ ಖರ್ಚಿನಲ್ಲಿ ಹೋಗಬೇಕಿತ್ತು. ಅಷ್ಟೊಂದು ವೆಚ್ಚ ಭರಿಸುವ ಶಕ್ತಿ ತಮಗಿಲ್ಲ ಎಂದು ತಂದೆ ಹೇಳಿದ್ದರು. ಆಗ ನೆಟ್ಟಕಲ್ಲಪ್ಪನವರು ‘ನೀನು ಆಡಲು ಹೋಗುತ್ತಿದ್ದಿ’ ಎಂದು ಹೇಳಿ ಪ್ರಾಯೋಜಕತ್ವ ನೀಡಿದರು. ನನಗೆ ನೆನಪಿರುವಂತೆ ₹ 150 ಅಥವಾ ₹200 ಕೊಟ್ಟರು. ಅದರಲ್ಲಿ ನನ್ನ ಹಾಗೂ ಸಹೋದರನ ಎಲ್ಲ ವೆಚ್ಚಗಳನ್ನು ಭರಿಸಲು ಸಾಧ್ಯವಾಗಿತ್ತು’ ಎಂದು ಸ್ಮರಿಸಿದರು.

ಇವತ್ತು ಕರ್ನಾಟಕದ ಪ್ರಕಾಶ್ ಅವರ ಪ್ರೇರಣೆಯಿಂದಾಗಿ ದೇಶದಾದ್ಯಂತ ಹಲವಾರು ಬ್ಯಾಡ್ಮಿಂಟನ್ ಆಟಗಾರರು ಮತ್ತು ಆಟಗಾರ್ತಿಯರು ಸಾಧನೆ ಮಾಡಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಪ್ರಮುಖ ಆಟಗಾರರ ಬೆಳವಣಿಗೆಗೆ ಕಾರಣವಾಗಿದೆ.

ಕರ್ನಾಟಕ ಬಿಲಿಯರ್ಡ್ಸ್‌ ಸಂಸ್ಥೆಗೂ ನೆಟ್ಟಕಲ್ಲಪ್ಪನವರು ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸಂಸ್ಥೆಯ ಬೆಳವಣಿಗೆಗೆ ಮಾರ್ಗದರ್ಶನ ನೀಡಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಕೋರ್‌ಬೋರ್ಡ್

ಬೇರೆ ಕ್ರೀಡೆಗಳ ಜೊತೆಗೆ ಕ್ರಿಕೆಟ್‌ ಬೆಳವಣಿಗೆಯಲ್ಲಿಯೂ ‘ಪ್ರಜಾವಾಣಿ’ ಬಳಗದ ಕೊಡುಗೆ ಇದೆ. 60–70ರ ದಶಕದಲ್ಲಿ ದೇಶದಲ್ಲಿ ಕ್ರಿಕೆಟ್‌ ಈಗಿನಷ್ಟು ಜನಪ್ರಿಯವಾಗಿರಲಿಲ್ಲ. 70ರ ದಶಕದಲ್ಲಿ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣವಾಯಿತು.

ಅಲ್ಲಿ 1973ರಲ್ಲಿ ಈ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಎಂ.ಸಿ.ಸಿ ಹಾಗೂ ಭಾರತದ ದಕ್ಷಿಣ ವಲಯ ತಂಡಗಳ ನಡುವಣ ಪಂದ್ಯ ನಡೆಯಿತು. ಈ ಸಂದರ್ಭದಲ್ಲಿ ಪ್ರಜಾವಾಣಿ ಬಳಗದಿಂದ ದೊಡ್ಡ ಸ್ಕೋರ್‌ಬೋರ್ಡ್‌ ಕೊಡುಗೆ ನೀಡಲಾಯಿತು. ಅದನ್ನು ಪ್ರಜಾವಾಣಿ ಮಾಲೀಕರಾದ ಕೆ.ಎನ್. ಗುರುಸ್ವಾಮಿ ಅವರು ಉದ್ಘಾಟಿಸಿದರು.

ಆಗ ದಕ್ಷಿಣ ವಲಯ ತಂಡದಲ್ಲಿ ಜಿ.ಆರ್. ವಿಶ್ವನಾಥ್, ಮನ್ಸೂರ್ ಅಲಿ ಖಾನ್ ಪಟೌಡಿ, ಅಬಿದ್ ಅಲಿ, ಸೈಯದ್ ಕಿರ್ಮಾನಿ, ಎಸ್. ವೆಂಕಟರಾಘವನ್ ಮತ್ತು ಬಿ.ಎಸ್‌. ಚಂದ್ರಶೇಖರ್ ಅವರು ಆಡಿದ್ದರು. ಮೈದಾನದ ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಲಾಗಿರುವ ಈ ಸ್ಕೋರ್ ಬೋರ್ಡ್‌ ಇವತ್ತಿಗೂ ಕಾರ್ಯನಿರ್ವಹಣೆಯಲ್ಲಿದೆ. 1974ರಲ್ಲಿ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್ ಆಯೋಜನೆಗೆ
ಮಾನ್ಯತೆ ಲಭಿಸಿತ್ತು. ಮೊದಲ ಟೆಸ್ಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾಗಿದ್ದವು. ವಿಂಡೀಸ್ ತಂಡದ ಗಾರ್ಡನ್ ಗ್ರಿನೀಜ್, ವಿವಿಯನ್ ರಿಚರ್ಡ್ಸ್ ಮತ್ತು ಭಾರತ ತಂಡದ ಹೇಮಂತ್ ಕಾನಿಟ್ಕರ್ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಹಲವಾರು ತಾರಾ ಕ್ರಿಕೆಟಿಗರ ಹೆಸರು ಮತ್ತು ಸ್ಕೋರ್‌ಗಳನ್ನು ಈ ಫಲಕದ ಮೂಲಕ ಅಭಿಮಾನಿಗಳ ಕಣ್ಮನಗಳಿಗೆ ಉಣಬಡಿಸಲಾಗಿದೆ.

2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಬೃಹತ್ ಕ್ಯಾನ್ವಾಸ್ ಮೇಲೆ ಒಂದು ಲಕ್ಷ ಅಭಿಮಾನಿಗಳ ಶುಭಹಾರೈಕೆ ಹಾಗೂ ಹಸ್ತಾಕ್ಷರಗಳನ್ನು ದಾಖಲಿಸುವ ಅಭಿಯಾನವನ್ನು ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್ ಬಳಗವು ಮಾಡಿತ್ತು. ನಂತರ ಆ ಕ್ಯಾನ್ವಾಸ್ ಅನ್ನು ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಯವರಿಗೆ ಉಡುಗೊರೆಯಾಗಿ ನೀಡಲಾಗಿತ್ತು.

ಬಿಟಿಸಿಗೆ ಆಧಾರಸ್ತಂಭ

ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಬೆಳವಣಿಗೆಯಲ್ಲಿ ಕೆ.ಎನ್. ಗುರುಸ್ವಾಮಿಯವರ ಪಾತ್ರ ಬಹಳ ದೊಡ್ಡದು. ರೇಸ್ ಚಟುವಟಿಕೆಗಳ ಬಗ್ಗೆ ಅವರಿಗೆ ಅಪಾರವಾದ ಅಕ್ಕರೆ ಇತ್ತು. ಸುಮಾರು ಮೂರು ದಶಕ ಅವರು ಬಿಟಿಸಿಯಲ್ಲಿ ಸಕ್ರಿಯರಾಗಿದ್ದರು. ಸ್ಟುವರ್ಡ್ ಆಗಿದ್ದರು. ಎಂಟು ವರ್ಷಗಳ ಕಾಲ ಚೇರ್ಮನ್ ಮತ್ತು ಸೀನಿಯರ್ ಸ್ಟುವರ್ಡ್ ಆಗಿದ್ದರು. ಅವರ ಕಾರ್ಯನಿರ್ವಹಣೆಯ ಸಂದರ್ಭದಲ್ಲಿಯೇ ಬೆಂಗಳೂರು ರೇಸ್‌ ಕ್ಲಬ್‌ ಲಿಮಿಟಿಡ್‌, ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್ ಆಯಿತು. ಇದರಿಂದಾಗಿ ದೇಶದ ಪ್ರತಿಷ್ಠಿತ ರೇಸಿಂಗ್ ಕ್ಲಬ್‌ಗಳ ಸಾಲಿಗೆ ಸೇರಿತು. ಗುರುಸ್ವಾಮಿಯವರ ದೂರದೃಷ್ಟಿ ಮತ್ತು ರೇಸಿಂಗ್ ಪ್ರೀತಿ ಅಸಾಧಾರಣವಾದದ್ದು.

ಅದರಲ್ಲೂ ಬೆಂಗಳೂರು ಅಮೆಚೂರ್ ರೈಡಿಂಗ್ ಕ್ಲಬ್‌ ಪ್ರವರ್ಧಮಾನಕ್ಕೆ ಬರಲು ಅವರು ಕಾರಣ. ಯುವ ರೈಡರ್‌ಗಳನ್ನು ಪ್ರೋತ್ಸಾಹಿಸಲು ತಮ್ಮ ಸ್ವಂತ ಹಣವನ್ನು ಬಹಳಷ್ಟು ಖರ್ಚು ಮಾಡಿದ್ದಾರೆ. ಎಷ್ಟೋ ಬಾರಿ ತಮ್ಮ ಕ್ಯಾಡಿಲಾಕ್ ಕಾರ್‌ನಲ್ಲಿ ಮನೆಯಿಂದ ಊಟ, ತಿಂಡಿ ತಂದು ಎಲ್ಲರಿಗೂ ಉಣಬಡಿಸುತ್ತಿದ್ದರು. ಎಲ್ಲರಿಗೂ ನೆರವಿನ ಹಸ್ತ ಚಾಚುತ್ತಿದ್ದ ಉದಾರ ಹೃದಯಿ ಅವರಾಗಿದ್ದರು. ತಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿದ್ದವರ ಮೇಲೆ ಸಂಪೂರ್ಣ ಭರವಸೆ ಇಡುತ್ತಿದ್ದರು. ಅಪಾರ ಶಿಸ್ತಿನ ವ್ಯಕ್ತಿತ್ವದವರಾಗಿದ್ದರು.

ಪಿ.ಜಿ. ಬೆಳ್ಳಿಯಪ್ಪ, ಮಾಜಿ ಚೇರ್ಮನ್, ಬಿಟಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT