ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಯಾಂಗ್ ದಾವೊ ಗುಹೆ

ಥಾಯ್ಲೆಂಡ್‌ನಲ್ಲಿ ’ಯಾಣ’ದ ನೆನಪು
Last Updated 18 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಯಾಣ ಕನ್ನಡಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಚಾರಣಿಗರಿಗೆ, ಸಿನಿಮಾ ನಿರ್ಮಾಪಕರಿಗೆ ಮುದ ನೀಡುವ ನಿತ್ಯ ಹರಿದ್ವರ್ಣದ ಕಾಡು. ವಿಪುಲವಾಗಿ ಹರಿಯುವ ಸಣ್ಣ ಹಳ್ಳ, ತೊರೆಗಳು. ಆದರೆ ಯಾಣದ ಗುಹೆಯ ಹಾಗೆ, ಅದರ ಪ್ರತಿಲಿಪಿಯಂತಿರುವ ಒಂದು ತಾಣ ಥಾಯ್ಲೆಂಡ್‌ನ ಚಿಯಾಂಗ್ ದಾವೊ. ಅಂದರೆ ನಕ್ಷತ್ರಗಳ ನಗರ. ಈ ನಗರದ ಸಮೀಪದಲ್ಲಿ ಪ್ರಖ್ಯಾತ ಚಿಯಾಂಗ್ ದಾವೊ ಗುಹೆಗಳಿವೆ.

ಥಾಯ್ಲೆಂಡ್ ಎಂದಾಕ್ಷಣ ಭಾರತೀಯ ಪ್ರವಾಸಿಗರಿಗೆ ನೆನಪಾಗುವುದು ಅಲ್ಲಿನ ರಾಜಧಾನಿ ಬ್ಯಾಂಕಾಕ್, ಸಮುದ್ರ ತೀರದ ಪಟ್ಟಾಯಾ. ಆದರೆ ಈ ಐಷಾರಾಮಿ ಸ್ಥಳಗಳ ಆಚೆಗೂ ಆ ದೇಶದಲ್ಲಿ ನೋಡುವಂತಹ ಇತರ ಸ್ಥಳಗಳಿವೆ.ಆದರೆ ಅವುಗಳ ಬಗ್ಗೆ ಭಾರತೀಯ ಪ್ರವಾಸಿಗರಿಗೆ ಅಷ್ಟೇನೂ ಆಸಕ್ತಿ ಇಲ್ಲ. ಆದರೆ ಅಲ್ಲಿನ ಸಾಂಸ್ಕೃತಿಕ ನಗರಿ ಚಿಯಾಂಗ್ ಮೈ ದಾಟಿ ಎರಡು ತಾಸು ಪಯಣಿಸಿದರೆ ನಮ್ಮ ಮಲೆನಾಡನ್ನು ನೆನಪಿಸುವ ದಟ್ಟ ಹಸಿರು ಕಾನನ ಮತ್ತು ಗುಡ್ಡಗಳ ನಡುವೆ ಇರುವ ಚಿಕ್ಕ ಸುಂದರ ಪಟ್ಟಣ ಚಿಯಾಂಗ್ ದಾವೊ ಸಿಗುತ್ತದೆ. ಮ್ಯಾನ್ಮಾರ್ ದೇಶದ ಗಡಿಯಲ್ಲಿರುವ ಈ ಪಟ್ಟಣದಲ್ಲಿ ಹೆಚ್ಚಿನ ಜನ ಬುಡಕಟ್ಟು ಶಾನ್ ಜನಾಂಗಕ್ಕೆ ಸೇರಿದವರು.

ದೋಯಿ ಲುಆಂಗ್ ಗುಡ್ಡಗಳು ದೂರದಿಂದಲೇ ದಟ್ಟ ಕಾನನದ ದರ್ಶನ ನೀಡಿದರೆ, ಚಿಯಾಂಗ್ ದಾವೊ ವನ್ಯಜೀವಿ ತಾಣದ ದಡದಲ್ಲಿರುವ ಗುಹೆಗಳ ಹತ್ತಿರ ಇರುವ ಬೌದ್ಧ ದೇವಾಲಯಗಳ ಆಕರ್ಷಕ ವಿನ್ಯಾಸ ಪ್ರವಾಸಿಗರ ಗಮನ ಸೆಳೆಯುತ್ತದೆ. ಗುಹೆಗೆ ಹೋಗುವ ದಾರಿಯಲ್ಲಿ ತಾವರೆ ಹೂವುಗಳಿರುವ ಕೆರೆ, ಅದರ ಪಕ್ಕದಲ್ಲೇ ಇಂಗ್ಲಿಷ್‌ನಲ್ಲಿ ‘ಚಿಯಾಂಗ್ ದಾವೊ ಗುಹೆ’ ಎಂಬ ನಾಮಫಲಕವಿದೆ.

ಈ ಗುಹೆಗಳಲ್ಲಿ ನೂರಾರು ವರ್ಷಗಳಿಂದ ಶಾನ್ ಮತ್ತು ಥೈ ಬುಡಕಟ್ಟು ಜನಾಂಗದವರು ಪೂಜೆ ಮಾಡುತ್ತ ಬಂದಿದ್ದು, ಅವರಿಗೆ ಇದೊಂದು ಪವಿತ್ರ ಸ್ಥಳ. 12 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಗುಹೆಯಲ್ಲಿ ಹಲವು ಕಡೆ ಬೌದ್ಧ ಧರ್ಮದ ಅನುಯಾಯಿಗಳ, ಋಷಿಮುನಿಗಳ ಮೂರ್ತಿಗಳನ್ನು ಸ್ಥಾಪಿಸಿ, ಪೂಜೆ ಸಲ್ಲಿಸುವ ಪರಿಪಾಠವಿದೆ. ಕೆಲವು ಕಡೆ ಸೌರಶಕ್ತಿಯ ಸಹಾಯದಿಂದ ಉರಿಯುವ ವಿದ್ಯುತ್ ದೀಪವಿರುವುದರಿಂದ ಗುಹೆಗಳಲ್ಲಿರುವ ಪ್ರಕೃತಿದತ್ತ ಚಿತ್ತಾರಗಳನ್ನು ನೋಡಲು ಅನುಕೂಲವಾಗಿದೆ. ಯಾಣದಲ್ಲಿ ಶಿವನ ಪೂಜೆ ಮಾಡಿದ ಹಾಗೆ ಇಲ್ಲಿ ಬುದ್ಧನ ಪೂಜೆ ನಡೆಯುತ್ತದೆ. ಗುಹೆಗೆ ಬರುವವರಲ್ಲಿ ಹೆಚ್ಚಿನವರು ಯಾತ್ರಾರ್ಥಿಗಳು.

ನನ್ನ ಹಾಗೆ ಪ್ರವಾಸಿಗರಾಗಿ ಬಂದವರಿಗೆ ಗುಹೆಗಳ ಒಳಗಡೆ ನಡೆದು ವಿವಿಧ ಭಾಗಗಳನ್ನು ನೋಡಲು ಗೈಡ್ ಸಹಾಯ ಪಡೆಯುವುದು ಅನಿವಾರ್ಯ. ಏಕೆಂದರೆ ವಿಶಾಲವಾಗಿರುವ ಈ ಗುಹೆಗಳೊಳಗೆ ದಾರಿ ತಪ್ಪಿದರೆ ಮರಳಿ ಬರುವುದು ಕಠಿಣಸಾಧ್ಯ. ನಾನು ಮುಖ್ಯವಾಗಿರುವ ಸ್ಥಳಗಳನ್ನು, ಪ್ರಕೃತಿಯೇ ನಿರ್ಮಿಸಿದ ಅಗಾಧ ಕಲಾಕೃತಿಗಳನ್ನು ನೋಡಿ, ಅವುಗಳ ಸೌಂದರ್ಯವನ್ನು ಸವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ, ಈ ಸುಣ್ಣದ ಗುಹೆಗಳು ಮಾನವ ಜನಾಂಗದ ಸಂಸ್ಕೃತಿಯ ಅಂಗವಾಗಿದೆ.

ಯಾಣಕ್ಕೆ ಹೋಲಿಸಿದಾಗ ನನಗೆ ಅನಿಸಿದ್ದು, ಅಲ್ಲಿನ ಪ್ಲಾಸ್ಟಿಕ್ ಮತ್ತು ಇತರ ಕಸಗಳ ರಾಶಿಗೆ ಬದಲಾಗಿ ಇಲ್ಲಿಯ ಸ್ವಚ್ಛ ಪರಿಸರ. ಗುಹೆಯ ಒಳಗೆ ಮತ್ತು ಅಲ್ಲಿಗೆ ಹೋಗುವ ದಾರಿಯಲ್ಲಿ ಯಾವುದೇ ರೀತಿಯ ಕಸ, ಪ್ಲಾಸ್ಟಿಕ್ ಬಿಸಾಡಿರುವುದು ಕಂಡು ಬರಲಿಲ್ಲ! ಪವಿತ್ರ ಸ್ಥಳದ ಸ್ವಚ್ಛತೆ ಮನಸ್ಸಿಗೆ ಮುದ ನೀಡುವಂತಿದೆ.

ಥಾಯ್ಲೆಂಡ್‌ ಬಡ ದೇಶವಾದರೂ ಸಹ, ಅಲ್ಲಿನ ಜನ ಸ್ವಚ್ಛತೆಯ ಸಂಸ್ಕಾರವನ್ನು ಪಾಲಿಸುತ್ತಾರೆ. ಯಾಣದ ಪರಿಸರದಲ್ಲಿ ನಾವು ದಿನ ನಿತ್ಯ ಕಸ ತೆಗೆದರೂ ಪುನಃ ಮರುದಿನ ಪ್ರವಾಸಿಗರು ತಮ್ಮ ಹಕ್ಕು ಎನ್ನುವ ಹಾಗೆ ಕರಗದ ವಿವಿಧ ರೀತಿಯ ಕಸವನ್ನು, ಹೆಂಡದ ಬಾಟಲಿಗಳನ್ನು ಒಗೆದಿರುತ್ತಾರೆ. ‘ಯಾಕಾದರೂ ಯಾಣಕ್ಕೆ ಬಂದೆ’ ಅನ್ನಿಸುವ ಹಾಗೆ ಮಾಡುತ್ತಾರೆ. ಈ ವಿಷಯದಲ್ಲಿ ಥಾಯ್ಲೆಂಡ್‌ನವರಿಂದ ನಾವು ಕಲಿಯುವುದು ಬಹಳಷ್ಟು ಇದೆ, ಯಾಣವನ್ನು ಹೀಗೆ ಸುಂದರ, ಸ್ವಚ್ಛ ಪವಿತ್ರ ಸ್ಥಳವಾಗಿ ಮಾಡಲು ಸಾಧ್ಯವಿಲ್ಲವೇ?

ಪರಿಸರದ ಮಡಿಲ್ಲಿರುವ ಚಿಯಾಂಗ್ ದಾವೊ ಗುಹೆಗಳನ್ನು ನೋಡುವುದೇ ಒಂದು ರೀತಿಯ ಅವಿಸ್ಮರಣೀಯ ಅನುಭವ. ಅದರ ಹತ್ತಿರವೇ ಇರುವ ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ ಪ್ರವಾಸದ ಆಯಾಸವನ್ನು ಪರಿಹರಿಸಿಕೊಳ್ಳಬಹುದು.

ಹೋಗುವುದು ಹೇಗೆ?

ಬೆಂಗಳೂರಿನಿಂದ ಬ್ಯಾಂಕಾಕ್‍ಗೆ ನೇರವಾಗಿ ಹಲವಾರು ವಿಮಾನಗಳ ಸೇವೆ ಲಭ್ಯವಿದೆ. ಅದಲ್ಲದೇ ಭಾರತೀಯರಿಗೆ, ಅಲ್ಲಿ ಬಂದಾಗ ವಿಮಾನ ನಿಲ್ದಾಣದಲ್ಲಿಯೇ ಶುಲ್ಕರಹಿತ ವೀಸಾ ನೀಡುವ ಸೌಲಭ್ಯವನ್ನು ಥಾಯ್ಲೆಂಡ್ ಸರ್ಕಾರ ನೀಡಿರುವುದರಿಂದ ಮುಂಚಿತವಾಗಿ ವೀಸಾ ಪಡೆಯಲೇಬೇಕಾದ ಅನಿವಾರ್ಯತೆ ಇಲ್ಲ.

ಬ್ಯಾಂಕಾಕ್‍ನಿಂದ ಮೊದಲು ಚಿಯಾಂಗ್‌ಗೆ ಪಯಣ. ಬಸ್‌ನಲ್ಲಾದರೆ 8 ತಾಸು, ವಿಮಾನದಲ್ಲಿ ಒಂದು ತಾಸು. ನಂತರ ಅಲ್ಲಿಂದ ಚಿಯಾಂಗ್ ದಾವೊ ಪಟ್ಟಣಕ್ಕೆ 2 ತಾಸು ಬಸ್ ಪಯಣ. ಪ್ರತಿ ತಾಸಿಗೊಂದು ಬಸ್ ಇರುತ್ತದೆ. ಅಲ್ಲಿಂದ 10 ಕಿ.ಮೀ ದೂರದ ಗುಹೆ ತಲುಪಲು ಟ್ಯಾಕ್ಸಿ ಮಾಡಿಕೊಂಡು ಹೋಗಬೇಕು.

ಊಟ–ವಸತಿ ಹೇಗೆ?

ಉಳಿದುಕೊಳ್ಳಲು ಹಲವಾರು ರೀತಿಯ ಸೌಕರ್ಯಗಳಿವೆ, ರೆಸಾರ್ಟ್‌ಗಳಿಂದ ಹಿಡಿದು, ಹೋಮ್ ಸ್ಟೇವರೆಗೆ. ಭಾರತೀಯ ಊಟ ಸಿಗದೇ ಹೋದರೂ, ಸ್ಥಳೀಯ ಆಹಾರ, ಶಾಖಾಹಾರಿ ಮತ್ತು ಮಾಂಸಾಹಾರಿ ಲಭ್ಯವಿದೆ. ಅಲ್ಲದೇ ವಿವಿಧ ರೀತಿಯ ಹಣ್ಣುಗಳು ಸದಾ ಕಾಲ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT