ಶನಿವಾರ, ಸೆಪ್ಟೆಂಬರ್ 19, 2020
22 °C

ಕಣಿವೆಗಳ ನಡುವಿನ ನಗರ ಹೈಡಲ್‌ಬರ್ಗ್‌

ಕೆ ಪಿ ಸತ್ಯನಾರಾಯಣ Updated:

ಅಕ್ಷರ ಗಾತ್ರ : | |

Prajavani

ನಮ್ಮಲ್ಲಿ ಜೂನ್‌ ಎಂದರೆ ಮುಂಗಾರು ಮಳೆಯ ಸಮಯ. ಆದರೆ, ಯೂರೋಪ್‌ನಲ್ಲಿ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಮಾಸ. ಹೀಗಾಗಿ ಹೆಚ್ಚು ಮಂದಿ ಜೂನ್‌ನಲ್ಲೇ ಆ ದೇಶಕ್ಕೆ ಪ್ರವಾಸಕ್ಕೆ ಹೋಗುತ್ತಾರೆ.

ನಾವು ಅದೇ ತಿಂಗಳಲ್ಲಿ ಪ್ರವಾಸ ಹೋಗುವ ನಿರ್ಧಾರ ಮಾಡಿದೆವು. ಅಲ್ಲಿ, ನೋಡಬೇಕಾದ ಪ್ರವಾಸಿ ತಾಣಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾಗ, ನಮ್ಮನ್ನು ಆಕರ್ಷಿಸಿದ್ದು ದಕ್ಷಿಣ ಜರ್ಮನಿಯಲ್ಲಿನ ನೆಕ್ಕರ್‌ (Neckar) ನದಿ ದಡದಲ್ಲಿರುವ ಸುಂದರ್ ನಗರ ಹೈಡಲ್‌ಬರ್ಗ್‌. ಆ ನಗರದ ಬಗ್ಗೆ ವಿವರ ಹುಡುಕುವ ವೇಳೆ, ಅದೊಂದು ಪಾರಂಪರಿಕ ನಗರ, ಜತೆಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ತಾಣ ಎಂಬ ಮಾಹಿತಿಯೂ ಸಿಕ್ಕಿತು. ಹೀಗಾಗಿ ಆ ನಗರಕ್ಕೆ ಭೇಟಿ ನೀಡಲು ನಿರ್ಧರಿಸಿದೆವು.

ನಗರದಲ್ಲಿ ಸುತ್ತಾಡುತ್ತಾ..

ಅಂದು ಸಂಜೆ ನಾಲ್ಕೂವರೆಗೆ ಹೈಡಲ್‌ಬರ್ಗ್‌ಗೆ ಬಂದು ಇಳಿದೆವು. ಪಟ್ಟಣದ ಒಳಗೆ ಬಸ್‌ಗಳಿಗೆ ಪ್ರವೇಶವಿರಲಿಲ್ಲ. ಹಾಗಾಗಿ ಇಡೀ ನಗರವನ್ನು ನಡೆದೇ ನೋಡಬೇಕಿತ್ತು. ಇದು ನಗರದ ಸೌಂದರ್ಯ, ಪರಿಸರ, ಪರಂಪರೆಯನ್ನು ಕಾಪಾಡುವುದಕ್ಕಾಗಿ ಯೂರೋಪಿಯನ್ನರು ಅನುಸರಿಸುವ ವಿಧಾನ. ಇದೇ ಕಾರಣಕ್ಕಾಗಿ ಈ ದೇಶದ ಹೆಚ್ಚಿನ ನಗರಗಳಲ್ಲಿ ಸಂಚಾರಕ್ಕಾಗಿ ಸೈಕಲ್‌ ಬಳಸುತ್ತಾರೆ.

ಮೊದಲಿಗೆ ನಾವು ನೋಡಲು ಹೊರಟಿದ್ದು 1788ರಲ್ಲಿ ನದಿಯ ಮೇಲೆ ನಿರ್ಮಿಸಲಾದ ಕಲ್ಲಿನ ಸೇತುವೆಯನ್ನು. ಇದು ಆಕರ್ಷಕ ಕಮಾನು ಹೊಂದಿದ್ದು, ಇದರ ಮೇಲೆ ನಡೆಯುತ್ತಾ ಹೋದಂತೆ ಎರಡೂ ಬದಿಯಲ್ಲಿ ಹರಿಯುವ ನದಿ, ಎಡದಂಡೆಯ ಬೆಟ್ಟದ ಮೇಲಿನ ಕೋಟೆ ಮತ್ತು ಅರಮನೆ, ಬಲ ದಂಡೆಯ ಮೇಲಿರುವ ಹೆಲಿಗೆನ್‌ಬರ್ಗ್ ಬೆಟ್ಟ ಕಾಣುತ್ತವೆ.

ಇಲ್ಲಿ ಸುತ್ತಾಡುತ್ತಾ, ಹಳೆಯ ಹೈಡಲ್‌ಬರ್ಗ್‌ ನಗರಕ್ಕೆ ಬಂದೆವು. ಅಲ್ಲಿ ಪಾದಚಾರಿಗಳಿಗಾಗಿಯೇ ಎರಡು ಕಿ.ಮೀ ಉದ್ದದ ರಸ್ತೆ ಮಾಡಿದ್ದಾರೆ. ಆ ರಸ್ತೆಯಲ್ಲಿ ವಿಹರಿಸುತ್ತಾ ಸಾಗಿದೆವು.

ಆ ರಸ್ತೆಯ ಪ್ರಾರಂಭದಲ್ಲಿಯೇ ಒಂದು ಸುಂದರ ಸಾರ್ವಜನಿಕ ಸ್ಥಳವಿತ್ತು. ಇಲ್ಲಿರುವ ನೀರಿನ ಕಾರಂಜಿ ಮನಸ್ಸಿಗೆ ಮುದ ನೀಡಿದು. ಈ ಚೌಕದ ಸನಿಹದಲ್ಲಿಯೇ ಮಾರುಕಟ್ಟೆ ಪ್ರದೇಶದಲ್ಲಿರುವ ಗೋಥಿಕ್ ಶೈಲಿಯ ಚರ್ಚ್‌ (The Church of the Holy Spirit)ಕಟ್ಟಡ ತನ್ನ ಆಕಾರದಿಂದ ಗಮನ ಸೆಳೆಯುತ್ತದೆ. ಮೊದಲು ನಿರ್ಮಾಣಗೊಂಡಿದ್ದ ಹಳೆಯ ಕಟ್ಟಡಕ್ಕೆ ಬೆಂಕಿಬಿದ್ದು ಸುಟ್ಟು ಹೋಗಿದ್ದರಿಂದ 1709ರಲ್ಲಿ ಆ ಕಟ್ಟಡ ಮರು ನಿರ್ಮಾಣಗೊಂಡಿದೆ.

ಆ ರಸ್ತೆಯಲ್ಲಿ ಸುತ್ತಾಡಿಕೊಂಡು, ಪುನಃ ಅದೇ ಚೌಕಕ್ಕೆ ವಾಪಸ್‌ ಬಂದೆವು. ನಂತರ ನಮ್ಮ ಗೈಡ್‌ ಬೊಟ್ಟು ಮಾಡಿ ತೋರಿಸಿ, ‘ನೋಡಿ, ಬೆಟ್ಟದ ಮೇಲೆ ಕೋಟೆ ಮತ್ತು ಅರಮನೆ ಇದೆ. ಆಸಕ್ತರು ನೋಡಿಬನ್ನಿ’ ಎಂದರು. ನಮ್ಮ ಸಹಪ್ರವಾಸಿಗರಲ್ಲಿ ಬಹಳ ಮಂದಿ ಮೇಲೇರಲು ಹಿಂದೇಟು ಹಾಕಿದರು. ಆದರೆ ನಾವು ಬಂದಿರುವುದೇ ಸಾಧ್ಯವಾದಷ್ಟು ಎಲ್ಲ ಸ್ಥಳಗಳನ್ನು ನೋಡಬೇಕೆಂದು. ಹಾಗಾಗಿ ಬೆಟ್ಟ ಏರಲು ಹೊರಟೇಬಿಟ್ಟೆವು.

ಕೋಟೆ, ಅರಮನೆ..

ಅಚ್ಚುಕಟ್ಟಾದ ಏರುಮುಖಿ ಹಾದಿ, ನಡು ನಡುವೆ ಕೆಲವು ಮೆಟ್ಟಿಲುಗಳು. ಆ ದಾರಿಯಲ್ಲಿ ಬೆಟ್ಟ ಹತ್ತುತ್ತಾ ಹೋದಂತೆ ಕೆಳಗಿನ ನದಿ ಮತ್ತು ನಗರದ ಸುಂದರ ದೃಶ್ಯಗಳು ನಮ್ಮ ಆಯಾಸವನ್ನು ಮರೆಸಿಬಿಟ್ಟವು. ಕೊನಿಂಗ್‌ಸ್ಟುಲ್ ಬೆಟ್ಟದ (Königstuhl hill) ಮೇಲೆ ತಲುಪಿದಾಗ ಕೆಂಪುಕಲ್ಲಿನ ಕೋಟೆ ಮತ್ತು ಹೈಡಲ್‌ಬರ್ಗ್‌ ಅರಮನೆಯ ಅವಶೇಷಗಳನ್ನು ಕಂಡು ‘ಬಂದಿದ್ದಕ್ಕೂ ಸಾರ್ಥಕವಾಯಿತು’ ಎನ್ನಿಸಿತು.

ಅನೇಕ ದಾಳಿಗಳಿಗೆ ಒಳಗಾಗಿ, ಆಗಾಗ್ಗೆ ಪುನರುಜ್ಜೀವನಗೊಂಡಿರುವ ಬೆಟ್ಟದ ಮೇಲಿನ ಕೋಟೆ ಮತ್ತು ಅರಮನೆಯ ಅವಶೇಷಗಳು ಪ್ರವಾಸಿಗರಿಗೆ ಇತಿಹಾಸವನ್ನೊಮ್ಮೆ ಹಿಂತಿರುಗಿ ನೋಡುವಂತೆ ಮಾಡುತ್ತವೆ. 1934ರಲ್ಲಿ ನಿರ್ಮಾಣವಾದ ರಾಜನ ಸಭಾಂಗಣ (King's Hall) ಈಗ ಹತ್ತು ಹಲವು ಸಮಾರಂಭಗಳು, ಸಂಗೀತ ನಾಟಕಗಳು ಮತ್ತು ಇತರ ಆಚರಣೆ ಗಳಿಗೆ ಬಳಕೆಯಾಗುತ್ತಿದೆ. ಕೋಟೆಯ ಸನಿಹವೇ ಸುಂದರ ಉದ್ಯಾನವನವೂ ಇದೆ. ಕೋಟೆ ಮೇಲಿನಿಂದ ಹೈಡಲ್‌ಬರ್ಗ್‌ ನಗರ ಹಾಗು ನೆಕ್ಕರ್ ನದಿಯ ಮನಮೋಹಕ ದೃಶ್ಯ ಕಂಡಿತು.

ಎಲ್ಲ ನೋಡಿದ ಮೇಲೆ ಬೆಟ್ಟದ ಇಳಿದು ಬಂದು ನಮ್ಮ ಸಹ ಪ್ರಯಾಣಿಕರನ್ನು ಕೂಡಿ ಕೊಂಡೆವು. ಬೆಟ್ಟದಲ್ಲಿ ಕಂಡ ವಿಶೇಷಗಳ ಬಗ್ಗೆ ಅವರಿಗೆ ವಿವರಿಸಿದಾಗ ಬಹಳ ಮಂದಿ ಪೇಚಾಡಿಕೊಂಡರು.

ಒಟ್ಟಿನಲ್ಲಿ ಹೈಡಲ್‌ಬರ್ಗ್‌ ಭೇಟಿ ಒಂದು ಅವಿಸ್ಮರಣೀಯ ಅನುಭವ ನೀಡಿತು.

ತಲುಪುವುದು ಹೇಗೆ

ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ ವಿಮಾನ ಸೌಲಭ್ಯವಿದೆ. ಹೈಡಲ್‌ಬರ್ಗ್‌, ಫ್ರಾಂಕ್‌ಫರ್ಟ್‌ನಿಂದ 78 ಕಿ.ಮೀ ದೂರವಿದೆ. ಇಲ್ಲಿನ ವಿಮಾನ ನಿಲ್ದಾಣದಿಂದ ಹೈಡಲ್‌ಬರ್ಗ್‌ಗೆ ಸಾಕಷ್ಟು ರೈಲು ಮತ್ತು ಬಸ್ಸುಗಳಿವೆ. ಖಾಸಗಿ ವಾಹನಗಳೂ ಸಿಗುತ್ತವೆ. ಹೈಡಲ್‌ಬರ್ಗ್‌ ನಗರ ಜನವರಿಯಲ್ಲಿ ಅತಿ ಕಡಿಮೆ ಮತ್ತು ಜುಲೈನಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುತ್ತದೆ. ಏಪ್ರಿಲ್‌ನಿಂದ ಜುಲೈ ಪ್ರವಾಸಕ್ಕೆ ಸೂಕ್ತ ಸಮಯ.

ಪಾರಂಪರಿಕ ತಾಣಗಳ ನಗರ

ದಕ್ಷಿಣ ಜರ್ಮನಿಯ ಕೊನಿಂಗ್‌ಸ್ಟುಲ್ ಮತ್ತು ಗೈಸ್‌ಬರ್ಗ್ ಪರ್ವತಗಳ ನಡುವಿರುವ ಕಣಿವೆಯಲ್ಲಿ ಹೈಡಲ್‌ಬರ್ಗ್‌ ನಗರವಿದೆ. ನೆಕ್ಕರ್ ನದಿಯ ಎರಡೂ ಬದಿಯಲ್ಲಿ ಬೆಳೆದಿರುವ ಈ ಪಟ್ಟಣ ತನ್ನ ಬಣ್ಣಬಣ್ಣದ ಪಾರಂಪರಿಕ ಕಟ್ಟಡಗಳಿಂದ ಗಮನ ಸೆಳೆಯುತ್ತದೆ. ಬಹುಶಃ ಇದೇ ಕಾರಣಕ್ಕೆ ಈ ನಗರ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿದೆ ಎನ್ನಿಸಿತು. ಇಲ್ಲಿ ಪೂರ್ವ - ಪಶ್ಚಿಮವಾಗಿ ಹರಿಯುವ ನೆಕ್ಕರ್ ನದಿ ಮುಂದೆ ರೈನ್ ನದಿಯನ್ನು ಸೇರುತ್ತದೆ.

ಕ್ರಿ.ಪೂ 5ನೆಯ ಶತಮಾನದಿಂದಲೇ ಇಲ್ಲಿ ಜನವಸತಿ ಇತ್ತೆಂದು 1907ರಲ್ಲಿ ಸಿಕ್ಕ ಮಾನವನ ಮೂಳೆಯೊಂದರಿಂದ ತಿಳಿದುಬರುತ್ತದೆ. ನವ ಹೈಡಲ್‍ಬರ್ಗ್‌ನ ಇತಿಹಾಸ 5ನೇ ಶತಮಾನದಿಂದ ಶುರುವಾಗುತ್ತದೆ.

1386 ರಷ್ಟು ಹಿಂದೆ ಇಲ್ಲಿ ವಿಶ್ವವಿದ್ಯಾಲಯ ಆರಂಭವಾಯಿತು. ಇದು ಜರ್ಮನಿಯ ಅತ್ಯಂತ ಹಳೆಯ ಮತ್ತು ಯುರೋಪಿನ ಗೌರವಾನ್ವಿತ ವಿಶ್ವವಿದ್ಯಾಲಯಗಳಲ್ಲೊಂದು. ‌ಇಲ್ಲಿ 1421ರಲ್ಲಿ ಪ್ರಾರಂಭವಾದ ಗ್ರಂಥಾಲಯ ಜರ್ಮನಿಯ ಅತ್ಯಂತ ಹಳೆಯ ಗ್ರಂಥಾಲಯ. 

ನದಿಯ ಉತ್ತರ ದಂಡೆಯಲ್ಲಿರುವ ಸಂತರ ಪರ್ವತ (Mountain of Saints) ಎಂದೇ ಹೆಸರಾದ ಹೆಲಿಗೆನ್‌ಬರ್ಗ್ ಬೆಟ್ಟದ ಮೇಲೆ ಹಳೆಯ ಕೋಟೆ ಮತ್ತು ಕೆಲವು ಚರ್ಚುಗಳ ಅವಶೇಷಗಳು ಇವೆ. ಈ ನಗರವನ್ನು ಸಾಹಿತ್ಯಕ ನಗರ (City of Literature) ಎಂದು ಯುನೆಸ್ಕೋ ಗುರುತಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು